ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮ್ಯಾಗ್ಡಲೇನಿಯನ್ ಸಂಸ್ಕೃತಿ
ಮ್ಯಾಗ್ಡಲೇನಿಯನ್ ಸಂಸ್ಕøತಿ
ಫ್ರೌನ್ಸಿನ ನೈಋತ್ಯಕ್ಕೆ ಲಾ ಮ್ಯಾಡೆಲೈನ್ ಎಂಬಲ್ಲಿಯ ಗುಹಾಮುಖಿವೊಂದರಲ್ಲಿ ಮೊದಲ ಬಾರಿಗೆ ಕಂಡುಬಂದ ಅಂತ್ಯಪೂರ್ವ ಶಿಲಾಯುಗದ (ಅಪ್ಪರ್ ಪೇಲಿಯೊಲಿತಿಕ್) ಒಂದು ಸಂಸ್ಕøತಿ, ಯೂರೋಪಿನಲ್ಲಿ ಬಲುಮಟ್ಟಿಗೆ ಪ್ರವರ್ಧಮಾನ ಸ್ಥಿತಿಯಲ್ಲಿ ಕಂಡುಬಂದಿರುವ ಅಂತ್ಯಪೂರ್ವ ಶಿಲಾಯುಗದ ಸಂಸ್ಕøತಿಗಳಲ್ಲಿ ಈ ಸಂಸ್ಕøತಿ ಅಗ್ರಸ್ಥಾನ ಪಡೆದಿದೆ. ಅಂತ್ಯಪೂರ್ವ ಶಿಲಾಯುಗದ ಸಂಸ್ಕøತಿಗಳನ್ನು ಅಲಗುಆಯುಧ (ಬ್ಲೇಡ್‍ಟೂಲ್) ಸಂಸ್ಕøತಿ ಎಂದು ಕರೆಯಲಾಗಿದ್ದು ಕೊನೆಯ ಹಿಮಯುಗದ ಅಂತ್ಯಭಾಗ ಈ ಸಂಸ್ಕøತಿಗಳ ಕಾಲವೆಂದು ಪರಿಗಣಿಸಲಾಗಿದೆ. ನೈಋತ್ಯ ಏಷ್ಯ (ಇರಾನಿ ಪ್ರಸ್ಥಭೂಮಿ) ಈ ಸಂಸ್ಕøತಿಯ ಕೇಂದ್ರಭಾಗವಾಗಿದ್ದು, ಪೂರ್ವದಲ್ಲಿ ಚೀನದವರೆಗೂ ಪಶ್ಚಿಮದಲ್ಲಿ ಮೆಡಿಟರೇನಿಯನ್ ಮತ್ತು ಅಟ್ಲಾಂಟಿಕ್ ಸಾಗರದವರೆಗೂ ಇದು ವ್ಯಾಪಿಸಿತ್ತು. ಉತ್ತರ ಭಾಗವೆಲ್ಲ ಹಿಮಾವೃತವಾಗಿದ್ದುದರಿಂದ ಅಲ್ಲಿ ಇದರ ವ್ಯಾಪ್ತಿ ಇರಲಿಲ್ಲ. ಅಂತ್ಯಪೂರ್ವ ಶಿಲಾಯುಗದ ಮಾನವ ತನ್ನ ಪೂರ್ವಜರಿಗಿಂತ ಹೆಚ್ಚು ಬುದ್ಧಿಶಾಲಿಯೂ ಚತುರನೂ ಆಗಿದ್ದ. ಈಗ ದೊರೆತಿರುವ ವಿವಿಧ ರೀತಿಯ ಕಲ್ಲಿನ ಮತ್ತು ಮೂಳೆಯ ಉಪಕರಣಗಳು ಇವನ ಬುದ್ಧಿಮತ್ತೆಗೆ ಸಾಕ್ಷಿಯಾಗಿವೆ. ಈ ಉಪಕರಣಗಳಲ್ಲಿ ಕೆಲವು ಕೌಶಲಪೂರಿತವಾಗಿದ್ದು ಸುಂದರವಾದ ಕೆತ್ತನೆಗಳನ್ನೂ ಒಳಗೊಂಡಿವೆ. ಈ ಸಂಸ್ಕøತಿಯ ಜನ ತಮ್ಮ ದೇಹವನ್ನು ನಾನಾ ರೀತಿಯಲ್ಲಿ ಅಲಂಕರಿಸಿಕೊಳ್ಳುತ್ತಿದ್ದರು. ಸತ್ತವರನ್ನು ವಿಧಿವತ್ತಾಗಿ ಹೂಳುತ್ತಿದ್ದರು. ಆದರೆ ಒಂದೇ ಕಡೆ ನೆಲೆನಿಂತು ಪಶುಪಾಲನೆ, ವ್ಯವಸಾಯ ನಿರ್ವಹಣೆ ಇವರಿಗೆ ಸಿದ್ಧಿಸಿರಲಿಲ್ಲ.
ಅಂತ್ಯಪೂರ್ವ ಶಿಲಾಯುಗದ ಸಂಸ್ಕøತಿಗಳನ್ನು ಕಾಲಾಕ್ರಮವಾಗಿ ಮಾಸ್ಟೀರಿಯನ್, ಔರಿಗ್ನೇಷಿಯನ್, ಸೊಲ್ಯೂಟ್ರಿಯನ್ ಮತ್ತು ಮ್ಯಾಗ್ಡಲೇನಿಯನ್- ಎಂದು ವಿಭಾಗಿಸಲಾಗುತ್ತದೆ. ಸೊಲ್ಯೂಟ್ರಿಯನ್ ಸಂಸ್ಕøತಿಯ ಜೊತೆಯಲ್ಲಿಯೇ ಪ್ರಾರಂಭವಾಯಿತೆನ್ನಲಾದ ಮ್ಯಾಗ್ಡಲೇನಿಯನ್ ಸಂಸ್ಕøತಿಯ ಜೊತೆಯಲ್ಲಿಯೇ ಪ್ರಾರಂಭವಾಯಿತೆನ್ನಲಾದ ಮ್ಯಾಗ್ಡಲೇನಿಯನ್ ಸಂಸ್ಕøತಿ ಆ ಸಂಸ್ಕøತಿಯ ಅನಂತರ ಪ್ರವರ್ಧಮಾನಕ್ಕೆ ಬಂತು. ನೈಋತ್ಯ ಫ್ರಾನ್ಸ್ ಈ ಸಂಸ್ಕøತಿಯ ಕೇಂದ್ರವಾಗಿದ್ದು ಯೂರೋಪಿನ ಮಿಕ್ಕೆಲ್ಲ ಭಾಗಗಳಿಗೂ ಇದು ಹರಡಿತು. ಈಗ ದೊರೆತಿರುವ ಆಧಾರಗಳಂತೆ ಈ ಸಂಸ್ಕøತಿಯ ಜೀವನಕ್ರಮ ಇತ್ಯಾದಿಗಳು ಎಸ್ಕಿಮೋಗಳ ಜೀವನಕ್ರಮವನ್ನು ಹೆಚ್ಚಾಗಿ ಹೋಲುತ್ತದೆ. ಈ ಜನರ ಶಿಲಾಯುಧಗಳು ನಾಜೂಕಿನಿಂದ ತಯಾರಿಸಿರುವ ಅಲಗುಆಯುಧಗಳು. ಮೂಳೆಯ ಆಯುಧ ಮತ್ತು ಇತರ ಉಪಕರಣಗಳಲ್ಲಿ ವೈವಿಧ್ಯ ಮತ್ತು ಕುಶಲತೆ ಕಾಣಬಹುದಾಗಿದೆ. ಮೂಳೆ, ದಂತ, ಕೊಂಬು ಇತ್ಯಾದಿಗಳಿಂದ ಮೊನೆ, ಮುಳ್ಳಿನ ಶೂಲ, ಈಟಿ, ಗಾಳ, ಮೀನು ಗಾಳ, ಸೂಜಿ, ಸುತ್ತಿಗೆ, ಉಳಿ, ಕೊಡಲಿ ಮೊದಲಾದ ಉಪಕರಣಗಳನ್ನೂ ಆಯುಧಗಳನ್ನೂ ಈ ಸಂಸ್ಕøತಿಯ ಜನ ತಯಾರಿಸುತ್ತಿದ್ದರು. ಇವುಗಳಲ್ಲಿ ಕೆಲವು ಬಗೆಯ ಉಪಕರಣಗಳು ಈಗಲೂ ಎಸ್ಕಿಮೋಗಳಲ್ಲಿ ಬಳಕೆಯಲ್ಲಿವೆ. ಮೇಲೆ ಹೇಳಿದ ಉಪಕರಣಗಳಲ್ಲದೆ ಇನ್ನೂ ಅನೇಕ ರೀತಿಯ ಉಪಕರಣಗಳು ಈ ಸಂಸ್ಕøತಿಯಲ್ಲಿ ಉಪಯೋಗದಲ್ಲಿದ್ದುದು ಪತ್ತೆಯಾಗಿವೆ. ಬೇಟನ್-ಡಿ-ಕಮ್ಯಾಂಡ ಮೆಂಟ್ ಎಂಬುದು ಇವುಗಳಲ್ಲಿ ಮುಖ್ಯವಾದುದು. ಇದು ಪ್ರಾಯಶಃ ಮರದ ಹಿಡಿಗಳನ್ನೂ ಈಟಿಗಳನ್ನೂ ನೇರ ಮಾಡುವುದಕ್ಕಾಗಿ ಉಪಯೋಗಿಸುತ್ತಿದ್ದಂಥ ಮೂಳೆಯ ಉಪಕರಣವಿರಬಹುದು. ಸಾರಂಗದ ದೊಡ್ಡ ಕೊಂಬಿನಿಂದ ಇದನ್ನು ತಯಾರಿಸಲಾಗಿದೆ. ಇಂಥ ಉಪಕರಣ ಔರಿಗ್ನೇಷಿಯನ್ ಸಂಸ್ಕøತಿಯಲ್ಲೇ ಕಂಡು ಬಂದಿದ್ದರೂ ಮ್ಯಾಗ್ಡಲೇನಿಯನ್ ಕಾಲದಲ್ಲಿ ಇದಕ್ಕೆ ಹೆಚ್ಚು ಪ್ರಾಶಸ್ತ್ಯ ಸಂದಿದೆ. ಈ ಉಪಕರಣದ ಮೇಲೆ ವಿವಿಧ ಪ್ರಾಣಿಗಳ ಸುಂದರ ರೇಖಾಚಿತ್ರಗಳನ್ನು ಬಿಡಿಸಲಾಗಿದೆ. ಮ್ಯಾಗ್ಡಲೇನಿಯನ್ ಮಾನವ ಕಲಾಪ್ರೇಮಿಯಾಗಿದ್ದ; ಚಿತ್ರಕಲೆಯಲ್ಲಿ ಅತ್ಯಂತ ನಿಪುಣನಾಗಿದ್ದ. ಫ್ರಾನ್ಸಿನ ಅನೇಕ ಸುಣ್ಣ ಕಲ್ಲಿನ ಗುಹೆಗಳಲ್ಲಿ ಈ ಸಂಸ್ಕøತಿಯ ವರ್ಣ ಚಿತ್ರಗಳು ಪತ್ತೆಯಾಗಿವೆ. ಔರಿಗ್ನೇಷಿಯನ್ ಸಂಸ್ಕøತಿಯ ಕಾಲದಿಂದಲೇ ಬೆಳೆದು ಬಂದ ಈ ರೇಖಾಚಿತ್ರ ಮತ್ತು ವರ್ಣಚಿತ್ರ ಕಲೆಯನ್ನು ಮ್ಯಾಗ್ಡಲೇನಿಯನ್ ಮಾನವ ಚೆನ್ನಾಗಿ ರೂಢಿಸಿ ಬೆಳೆಸಿದ. ಈ ಸಂಸ್ಕøತಿಯ ಆರಂಭದ ಚಿತ್ರಗಳು ಔರಿಗ್ನೇಷಿಯನ್ ಸಂಸ್ಕøತಿಯ ಚಿತ್ರಗಳನ್ನು ಹೋಲುತ್ತವೆ. ಲ್ಯಾಸೆಕ್ಸ್‍ನಲ್ಲಿ ಕಂಡು ಬಂದಿರುವ ಈ ಕಾಲದ ಚಿತ್ರಗಳು ದಟ್ಟವಾದ ಹೊರರೇಖೆಯನ್ನು ಹೊಂದಿವೆ. ಈ ಕಾಲದ ಮಾನವ ಕೆಲವು ಛಾಯಾರೂಪದ ಅಥವಾ ಛಾಯಾಕೃತಿಯ ಚಿತ್ರಗಳನ್ನೂ ರಚಿಸಿದ್ದ. ಬಣ್ಣಕ್ಕಾಗಿ ಮ್ಯಾಂಗನೀಸಿನ ಕಪ್ಪು ಆಕ್ಸೈಡ್ ಹಾಗೂ ಕಬ್ಬಿಣದ ಕೆಂಪು ಮತ್ತು ಹಳದಿ ಆಕ್ಸೈಡ್ ಬಳಸಿದ. ಈ ಬಣ್ಣಗಳ ಉಂಡೆಗಳನ್ನೂ ಬಳಪಗಳನ್ನೂ ಕೆಲವು ಸಲ ಕೊಬ್ಬಿನೊಂದಿಗೆ ಮಿಶ್ರಮಾಡಿ ಅರೆದ ಇಂಥ ಬಣ್ಣದ ಮುದ್ದೆಗಳನ್ನೂ ಈತ ಉಪಯೋಗಿಸುತ್ತಿದ್ದ
ಮ್ಯಾಗ್ಡಲೇನಿಯನ್ ಸಂಸ್ಕøತಿಯ ಮಧ್ಯ ಮತ್ತು ಅಂತ್ಯಕಾಲಗಳಲ್ಲಿ ಚಿತ್ರಕಲೆ ಫ್ರೌಢಾವಸ್ಥೆ ಮುಟ್ಟಿತು. ಆ ಕಾಲದ ಚಿತ್ರಗಳು ವಿವಿಧ ರಿತಿಯ ಬಣ್ಣಗಳಲ್ಲಿ, ವಿವಿಧ ಛಾಯೆಗಳಲ್ಲಿ ಅತಿ ಕುಶಲತೆಯಿಂದ ಚಿತ್ರಿತವಾಗಿವೆ. ಫಾಂಟ್‍ದ-ಡಿ-ಗಾಮೆ ಎಂಬಲ್ಲಿ ಕಂಡುಬಂದಿರುವ ಸಾರಂಗಗಳ ಚಿತ್ರಣ, ಸ್ಪೇನಿನ ಅಲ್ಟಾಮೀರಾದಲ್ಲಿಯ ಕೋಣಗಳು ಇತ್ಯಾದಿ ಚಿತ್ರಗಳು ಮ್ಯಾಗ್ಡಲೇನಿಯನ್ ಸಂಸ್ಕøತಿಯ ಇತಿಹಾಸ ಪೂರ್ವ ಚಿತ್ರಕಲೆಯ ಅತ್ಯುತ್ತಮ ವರ್ಣಚಿತ್ರಗಳೆಂದು ಪ್ರಸಿದ್ಧಿ ಪಡೆದಿವೆ. ಸಾರಂಗಗಳು, ಕೋಣಗಳು, ಆನೆಗಳು, ಮೀನು, ಹಾವು, ಸಿಂಹ, ಕರಡಿ, ಮೊದಲಾದ ಪ್ರಾಣಿಚಿತ್ರಗಳೇ ಹೆಚ್ಚಾಗಿ ದೊರೆತಿದ್ದು ಮಾನವ ಆಕೃತಿಗಳು ತೀರ ಕಡಿಮೆ ಸಂಖ್ಯೆಯಲ್ಲಿ ದೊರೆತಿವೆ. ಇವು ಹೆಚ್ಚಾಗಿ ರೇಖಾಚಿತ್ರಗಳಾಗಿದ್ದು ಇಲ್ಲಿ ಕೆಲವೊಮ್ಮೆ ಪ್ರಾಣಿವೇಷದಲ್ಲಿರುವ ಮಾನವನನ್ನು ಚಿತ್ರಿಸಲಾಗಿದೆ. ಗುಹೆಗಳ ಗೊಡೆ, ಛಾವಣಿಗಳ ಮೇಲೆ ಬಿಡಿಸಲಾಗಿರುವ ಈ ಚಿತ್ರಗಳು ಕೆಲವೊಮ್ಮೆ ಒಂದರ ಮೇಲೊಂದು ಬಿಡಿಸಲ್ಪಟ್ಟಿದೆ. ಗುಹೆಯ ಮುಂಭಾಗದಲ್ಲಿ ಮಾತ್ರವಲ್ಲದೆ ಗುಹೆಯ ತೀರ ಒಳಗೂ ಚಿತ್ರಿಸಿರುವ ನಿದರ್ಶನಗಳುಂಟು.
ಮ್ಯಾಗ್ಡಲೇನಿಯನ್ ಜನಾಂಗವನ್ನು ಅಲೆಮಾರಿ ಜನಾಂಗವೆಂದು ಪರಿಗಣಿಸಿದ್ದರೂ ಇತರ ಅಂತ್ಯಪೂರ್ವಶಿಲಾಯುಗದ ಸಂಸ್ಕøತಿಗಳ ಜನಾಂಗಗಳಂತೆ ಈ ಜನ ಸ್ವಲ್ಪಕಾಲ ಅಲೆಮಾರಿಗಳಾಗಿಯೂ ಸ್ವಲ್ಪಕಾಲ ಒಂದೇ ಸ್ಥಳದಲ್ಲಿಯೂ ನೆಲೆಸುತ್ತಿದ್ದ ಜನಾಂಗವಾಗಿಯೂ ಇದ್ದಿರಬೇಕೆಂದು ಹೇಳಬಹುದು. ಇವರು ಚಳಿಗಾಲದಲ್ಲಿ ಗುಹಾಮುಖಗಳಲ್ಲಿ ವಾಸಿಸಿ, ಬೇಸಗೆಯಲ್ಲಿ ಮೃಗಗಳನ್ನು ಹಿಂಬಾಲಿಸಿ ಬೇಟೆಯಾಡುತ್ತ ವಲಸೆ ಹೋಗುತ್ತಿದ್ದರು. ಬಯಲು ಪ್ರದೇಶಗಳಲ್ಲಿ (ದಕ್ಷಿಣ ರಷ್ಯ ಭಾಗಗಲ್ಲಿ) ನೆಲಮಾಳಿಗೆಗಳನ್ನು ನಿರ್ಮಿಸಿಕೊಂಡು ಅಲ್ಲಿ ವಾಸಿಸುತ್ತಿದ್ದರು. ಈ ಕಾಲದ ಚಿತ್ರಗಳಲ್ಲಿ ನಿರೂಪಿಸಲಾಗಿರುವ ಸಣ್ಣ ಸಣ್ಣ ಗುಡಿಸಲುಗಳ ಆಧಾರದಿಂದ ಇವರು ಬೇಸಗೆಯಲ್ಲಿ ಪ್ರಾಯಶಃ ಸಣ್ಣ ಸಣ್ಣ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರೆಂದು ಹೇಳಲಾಗಿದೆ. ಬೇಟೆಗಾಗಿ ಇವರು ಈಟಿ, ಭರ್ಜಿ, ಮುಳ್ಳಿನ ಈಟಿ ಇತ್ಯಾದಿ ಬಳಸುತ್ತಿದ್ದರು. ಕೆಲವೊಮ್ಮೆ ಇವರು ಉರುಲು ಮತ್ತು ಬೋನುಗಳನ್ನು ಉಪಯೋಗಿಸುತ್ತಿದ್ದ ನಿದರ್ಶನಗಳೂ ಕಂಡುಬಂದಿವೆ. (ಎಂ.ಎಸ್.ಕೆ.ಎಂ)