ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮ್ಯಾಮೋಪ್ಲಾಸ್ಟಿ - ಮೊಲೆಸುರೂಪಿಕೆ

ವಿಕಿಸೋರ್ಸ್ದಿಂದ

ಮ್ಯಾಮೋಪ್ಲಾಸ್ಟಿ - ಮೊಲೆಸುರೂಪಿಕೆ


ಸ್ತ್ರೀಗೆ ಸೌಂದರ್ಯವನ್ನು ತಂದು ಕೊಡುವ ಸ್ತನ(ಮೊಲೆ) ಚರ್ಮದ ಅನುಬಂಧದಂತಿರುವ ಸ್ರವಿಕೆಗ್ರಂಥಿಯಾಗಿದೆ. ಅದರಲ್ಲಿ ಹರಡಿರುವ ಸಂವೇದನಾನರತಂತುಗಳ ಹರಕೆಯಿಂದ ಅದು ಕಾಮೋತ್ತೇಜಕ ಅಂಗವೂ ಹೌದು. ಜನ್ಮ ನೀಡಿದ ಹಸುಳೆಗೆ ಜೀವಾಳ ಅಮೃತ ಹಾಲೂಣಿಸುವ ಗ್ರಂಥಿಯದು.

ಸ್ತನದಲ್ಲಿ ಯಾವುದೇ ಸ್ನಾಯು, ಕೀಲು, ಅಸ್ತಿಬಂಧಕಗಳಿಲ್ಲದ ಕೊಬ್ಬಿನಗೂಡು. ಅದನ್ನು ಚರ್ಮ ಕಂಚುಕದಂತೆ ಬಿಗಿಯಾಗಿ ಹಿಡಿದಿರಿಸಿದೆ. ವಯಸ್ಸಾದಂತೆ ಬಿಗುಡಿನಿಂದಿದ್ದ ಸ್ತನ ತನ್ನ ನೈಸರ್ಗಿಕ ಸ್ಥಿತಿಸ್ಥಾಪಕ ಶಕ್ತಿಯನ್ನು ಕಳೆದುಕೊಂಡು ಕೆಳಕ್ಕಿಳಿಯುತ್ತದೆ. ಇಂದು ಬಳಕೆಗೆ ಬಂದಿರುವ ಶಸ್ತ್ರಕ್ರಿಯೆಯಿಂದ ಅದಕ್ಕೆ ಯೌವನದ ರೂಪವನ್ನು ಮರಳಿ ದೊರಕಿಸಿಕೊಡಬಹುದು. ಕ್ಯಾನ್ಸರ್ ಇರುವ ಸ್ತನವನ್ನು ತೆಗೆದಮೇಲೆ ಖಾಲಿಯಾದ ಸ್ಥಳವನ್ನು ಭರ್ತಿ ಮಾಡಿ ಸುರೂಪಿಕೆಯನ್ನುಂಟು ಮಾಡಬಹುದು. ಚಿಕ್ಕದಾಗಿರುವ ಸ್ತನಗಳು ದಪ್ಪನಾಗುವಂತೆ ಮಾಡಬಹುದು. ಸುರೂಪಿಕೆ ಚಿಕಿತ್ಸೆಯಲ್ಲಿ ಮೂರು ಬಗೆ: 1) ಸ್ತನ ದೊಡ್ಡದಾಗುವಂತೆ ಮಾಡುವುದು. 2) ಸ್ತನವನ್ನು ಎತ್ತಿ ಕಟ್ಟುವುದು. 3) ಸ್ತನವನ್ನು ಚಿಕ್ಕದು ಮಾಡುವುದು.

1) ಸ್ತನ ದೊಡ್ಡದಾಗುವಂತೆ ಮಾಡುವುದು (ಅಗ್ಮೆಂಟೇಶನ್):

ಈ ಬಗೆಯ ಶಸ್ತ್ರಕ್ರಿಯೆಯಲ್ಲಿ ವಿಜಾತಿಯ ವಸ್ತುವನ್ನು ಸ್ತನದೊಳಗೆ ಸೇರಿಸಿ, ಅದು ದೊಡ್ಡದಾಗಿ ಬಿಗುಪಿನಿಂದ ಕೂಡಿರುವಂತೆ ಮಾಡಲಾಗುತ್ತದೆ. ಸಿಲಿಕಾನ್ ಹೊದಿಕೆಯಿರುವ ಬೇರೆ ಬೇರೆ ಬಗೆಯ ವಸ್ತುಗಳನ್ನು ಇರಿಸಲಾಗುತ್ತದೆ. ಅವುಗಳಲ್ಲಿ ಸಿಲಿಕಾನ್ ನಾಟಿಯನ್ನು ಸಾಮಾನ್ಯವಾಗಿ ಕೈಕೊಳ್ಳಲಾಗುತ್ತದೆ. ಅದಕ್ಕೆ ಕಾರಣ ಅದು ಪರಕೀಯ ವಸ್ತುವಾದರೂ ದೇಹ ಹೆಚ್ಚು ಪ್ರತಿರೋಧ ತೋರಿಸಬರುವುದಾಗಿದೆ. ಅಪರೂಪವಾಗಿ ಅದು ತನ್ನ ಹೊದಿಕೆಯ ಸಣ್ಣ ತೂತುಗಳ ಮೂಲಕ ಒಸರಿ ತನ್ನ ಅಕಾರವನ್ನು ಕಳೆದುಕೊಳ್ಳಬಹುದು. ಸಿಲಿಕಾನ್ ಇರಿಸಿದಾಗ ಅಡಿಯ ಸ್ತನದಲ್ಲಿ ಕ್ಯಾನ್ಸರ್ ಏನಾದರೂ ಬೆಳೆಯುತ್ತಿದ್ದರೆ ಅದನ್ನು ಸ್ತನ ಚಿತ್ರದಿಂದ ಗುರುತಿಸುವುದು ಕಷ್ಟಕರ.

ಸಿಲಿಕಾನ್‍ನ ಮೇಲುಹೊದಿಕೆ ಹೊಂದಿದ ಪಾಲಿಯುರೆಥೇನ್ ಮತ್ತೊಂದು ನಾಟಿ ವಸ್ತು. ಅದರಲ್ಲಿನ ರಸಾಯನಿಕ ಗಂತಿ (ಕ್ಯಾನ್ಸರ್) ಪ್ರಚೋದಕವಾಗಬಹುದೆಂಬ ಹೆದರಿಕೆಯಿದೆ. ಸಿಲಿಕಾನ್ ಹೊದಿಕೆಯೊಳಗೆ ಸಲಾಯಿನ್ (ಉಪ್ಪಿನ ನೀರು) ತುಂಬಿ ಅಂತಹ ನಾಟಿಯನ್ನು ಕೂಡಾ ಮಾಡಿ ಸ್ತನ ಸುರೂಪಿಕೆಯನ್ನು ಮಾಡಬಹುದು. ಅದು ಎಕ್ಸ್-ಕಿರಣಕ್ಕೆ ಪಾರದರ್ಶಕ. ಅಪರೂಪವಾಗಿ ಅದು ಒರೆದು ಚಪ್ಪಟೆಯಾಗಿ ಮುಜಗರವನ್ನುಂಟುಮಾಡಬಹುದು.

ಈ ದುಂಡನೆಯ ವಸ್ತುಗಳನ್ನು ಇರಿಸಲು ಸ್ತನದ ಕೆಳಗೆ ಗೀರುಗಾಯ ಮಾಡಲಾಗುತ್ತದೆ. ಅದರಿಂದ ಉಂಟಾಗುವ ಕಲೆ ಸ್ತನದ ಮಡಿಕೆ ಮುಚ್ಚಿಹಾಕುತ್ತದೆ. ಕೆಲವೊಮ್ಮೆ ಮೊಲೆತೊಟ್ಟು ಕಲೆಯ ಮೇಲೆ ಅರ್ಧಚಂದ್ರಾಕೃತಿ ಗೀರುಗಾಯಮಾಡಿ ಅದರ ಮೂಲಕ, ಇಲ್ಲವೆ ಹೊಕ್ಕುಳ ಕೆಳಗೆ ಅಥವಾ ಗುಂಜೆಲು ಮೇಲೆ ಗೀರುಗಾಯ ಮಾಡಿ ಅದರ ಮೂಲಕವೂ ಈ ಕೃತಕ ಸ್ತನದ ವಸ್ತುಗಳನ್ನು ಒಳಸೇರಿಸಿ ಸ್ತನಕ್ಕೆ ರೂಪುತಂದುಕೊಡಬಹುದು.

2) ಸ್ತನವನ್ನು ಎತ್ತಿ ಕಟ್ಟುವುದು (ಮ್ಯಾಸ್ಟೊಪೆಕ್ಸಿ)

ಪದೇ ಪದೇ ಹೆರಿಗೆ- ಹಾಲೂರಿಕೆ, ತೂಕದ ಏರಿಕೆ-ಇಳಿಗೆ, ಹೆಚ್ಚುತ್ತಿರುವ ವಯಸ್ಸು ಅವುಗಳ ಫಲವಾಗಿ ಜೋತುಬೀಳುವ ಸ್ತನಗಳನ್ನು ಎತ್ತಿಕಟ್ಟುವ ಶಸ್ತ್ರಕ್ರಿಯೆ ಲಭ್ಯ. ಇಲ್ಲಿ ಸ್ತನದ ಊತಕವನ್ನು ಮುಟ್ಟದೆ, ಚರ್ಮದ ಹೊದಿಕೆಯನ್ನು ನೆಟ್ಟಗೆ ಮಾಡಿ (ಟ್ರಿಂ) ಬಿಗಿಮಾಡಲಾಗುವುದು. ಸ್ವಲ್ಪ ಮಟ್ಟಿಗೆ ಜೋತುಬಿದ್ದಾಗ, ಮೊಲೆತೊಟ್ಟು ಸುತ್ತಲ ಕಲೆಯ ಮೇಲೆ ಅರೆಚಂದ್ರಾಕಾರದ ರೀತಿಯಲ್ಲಿ ಚರ್ಮವನ್ನು ಕತ್ತರಿಸಿ ತೆಗೆದು ಹೊಲೆಯಲಾಗುತ್ತದೆ. ಅದರಿಂದಾದ ಕಲೆ ನಂತರ ಮುಚ್ಚಿಹೋಗುತ್ತದೆ. ತುಂಬ ಜಾಸ್ತಿ ಜೋತುಬಿದ್ದಾಗ ಶಸ್ತ್ರವೈದ್ಯ ಮೊಲೆತೊಟ್ಟು ಸುತ್ತಲ ಕಲೆಯ ಸುತ್ತ ಗೀರುಗಾಯ ಮಾಡುವುದಲ್ಲದೆ, ಕಪ್ಪುಕಲೆಯ ಅರು ಘಂಟೆ ಸ್ಥಳದಿಂದ ಕೆಲಕ್ಕೆ ಸ್ತನ ಮಡಿಕೆಯವರೆಗೂ ಗೀರುಗಾಯ ಮಾಡಿ ನಂತರ ಅಡ್ಡವಾಗಿ ಮತ್ತೊಂದು ಗೀರುಗಾಯ ಮಾಡಲಾಗುವುದು. ನಂತರ ಹೆಚ್ಚಿನ ಊತಕಭಾಗಗಳನ್ನು ತೆಗೆದು ಟ್ರೆಮ್ ಮಾಡಿ ಹೊಲಿಯಲಾಗುವುದು.

3) ಸ್ತನವನ್ನು ಚಿಕ್ಕದು ಮಾಡುವುದು (ರಿಡಕ್ಷನ್)

ತುಂಬ ದಪ್ಪನಾದ ಸ್ತನಗಳನ್ನು ಕಿರಿದುಮಾಡಿ ಸುರುಪಗೊಳಿಸುವುದು ಮತ್ತೊಂದು ಶಸ್ತ್ರಕ್ರಿಯೆ. ಇಲ್ಲಿ ಸ್ತನದ ನೆಣವನ್ನು ತೆಗೆದು ಚಿಕ್ಕದನ್ನಾಗಿ ಮಾಡಲಾಗುತ್ತದೆ. ಗರ್ಭಧಾರಣೆ-ಹಾಲೂರಿಕೆ ವಯೋಮಾನಕ್ಕೆ ಇದು ಸರಿಯಲ್ಲ. ಶಸ್ತ್ರಚಿಕಿತ್ಸೆ ಕೇಡಮಾಡುವ ಕಲೆಗಟ್ಟು ತೊಂದರೆದಾಯಕವಾಗಬಹುದು.

(ಡಾ. ಅರವಿಂದ ದೇಸಾಯಿ)