ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯಜುರ್ವೇದ ಸಂಹಿತೆ
ಯಜುರ್ವೇದ ಸಂಹಿತೆ - ವೈದಿಕ ಸಂಹಿತೆಗಳು ಎನಿಸಿದ ನಾಲ್ಕು ವೇದಗಳ ಪೈಕಿ ಒಂದು. ವೇದ ಸಂಹಿತೆಗಳಲ್ಲಿ ಯಜ್ಞಯಾಗಾದಿ ಕರ್ಮ ಅಥವಾ ಕ್ರಿಯಾ ಕಲ್ಪಗಳನ್ನು ಹೆಚ್ಚಾಗಿ ಕುರಿತಂಥ ಸಂಹಿತೆ. ಋಕ್ ಮತ್ತು ಅಥರ್ವ ಸಂಹಿತೆಗಳಲ್ಲಿ ಕೇವಲ ಮಂತ್ರಗಳೂ ಸಾಮಸಂಹಿತೆಯಲ್ಲಿ ಮಂತ್ರಗಳಿಗೆ ಗಾನದ ಸಂಪರ್ಕವೂ ಯಜುಸ್ ಸಂಹಿತೆಯಲ್ಲಿ ಕ್ರಿಯಾ ಕಲಾಪಗಳ ಬಗ್ಗೆ ವಿಧಿಗಳೂ ಇವೆ. ಅಥರ್ವ ಸಂಹಿತೆಯ ಕೆಲವು ಭಾಗಗಳನ್ನು ಬಿಟ್ಟರೆ, ಆ ಮೂರು ಸಂಹಿತೆಗಳೂ ಛಂದೋ ಬದ್ಧವಾಗಿದೆ. ಯಜುಸ್ ಸಂಹಿತೆಯಲ್ಲಿ ಛಂದೋಬದ್ಧವಾದ ಮಂತ್ರಗಳೊಂದಿಗೆ ಗದ್ಯರೂಪವಾದ ಮಂತ್ರಗಳೂ ಇವೆ. ಛಂದಸ್ಸಿನಲ್ಲಿರುವ ಮಂತ್ರವನ್ನು ಋಕ್ ಎಂದೂ ಗದ್ಯರೂಪದ ಮಂತ್ರವನ್ನು ಯಜುಸ್ ಎಂದೂ ಸಾಮಾನ್ಯವಾಗಿ ಕರೆಯುವುದಿದೆ. ಯಜ್ಞ ಕಾರ್ಯಗಳಲ್ಲಿ ಅಧ್ವರ್ಯು ಎಂಬ ಋತ್ವಿಜನ ಕೆಲಸಗಳಿಗೆ ಈ ಸಂಹಿತಿಯೇ ಆಧಾರ. ಅಧ್ವರ್ಯು ಯಜ್ಞದ ಸಮಯದಲ್ಲಿ ಉಪಯೋಗಿಸುವ ಗದ್ಯವಾಕ್ಯಗಳ ಸಮೂಹ ಈ ವೇದದಲ್ಲಿದೆ.
ಈ ಸಂಹಿತೆಯಲ್ಲಿ ಕೃಷ್ಣ ಯಜುಸ್ ಸಂಹಿತಾ ಮತ್ತು ಶುಕ್ಲಯಜುಸ್ ಸಂಹಿತಾ ಎಂಬ ಎರಡು ಶಾಖೆಗಳು ಕಂಡು ಬರುತ್ತವೆ. ಈ ಶಾಖೆಗಳ ಭೇದಾಭೇದದ ಬಗ್ಗೆ ಒಂದು ಪೌರಾಣಿಕ ಕಥೆಯಿದೆ. ವೈಶಂಪಾಯನ ಋಷಿ ತನ್ನ 27 ಶಿಷ್ಯರಿಗೆ ಯಜುರ್ವೇದ ಸಂಹಿತೆ ಉಪದೇಶ ಮಾಡಿದ. ಅವರಲ್ಲಿ ಒಬ್ಬನಾದ ಯಾಜ್ಞವಲ್ಕ್ಯನ ಬಗೆಗೆ ಗುರು ಕಾರಣಾಂತರದಿಂದ ಕುಪಿತನಾಗಿ ಸ್ವೀಕರಿಸಿದ ವಿದ್ಯೆಯನ್ನು ಹಿಂದಕ್ಕೆ ಕೊಡಲು ಆಜ್ಞೆ ಮಾಡಿದ. ಅದರಂತೆ ಯಾಜ್ಞವಲ್ಕ್ಯ ವಾಮನರೂಪದಲ್ಲಿ ಅದನ್ನು ಕಕ್ಕಿದ. ಗುರುವಿನ ಆಜ್ಞೆಯಂತೆ, ಇತರ ಶಿಷ್ಯರು ತಿತ್ತಿರಿ ಪಕ್ಷಿಗಳ ರೂಪದಲ್ಲಿ ಯಾಜ್ಞವಲ್ಕ್ಯ ಕಕ್ಕಿದುದನ್ನು ಸ್ವೀಕರಿಸಿದರು. ದುಃಖಿತನಾದ ಯಾಜ್ಞವಲ್ಕ್ಯತಪಸ್ಸು ಮಾಡಿ ಸೂರ್ಯನನ್ನು ಒಲಿಸಿಕೊಂಡ. ಸೈರ್ಯ ಕುದುರೆಯ ರೂಪದಲ್ಲಿ ಯಾಜ್ಞವಲ್ಕ್ಯನಿಗೆ ಯಜುರ್ವೇದ ಸಂಹಿತೆ ಉಪದೇಶಿಸಿದ. ಹೀಗಾಗಿ ತಿತ್ತಿರಿ ಪಕ್ಷಿಗಳ ರೂಪದಲ್ಲಿ ಸ್ವೀಕರಿಸಿದುದಕ್ಕೆ ತೈತ್ತಿರೀಯ ಮತ್ತು ಕೃಷ್ಣ ಯಜುರ್ವೇದ ಎಂತಲೂ ಕುದುರೆಯ (ವಾಜೀ) ರೂಪದಲ್ಲಿ ಸೂರ್ಯನಿಂದ ಪಡೆದುದಕ್ಕೆ ವಾಜಸನೇಯ ಮತ್ತು ಶುಕ್ಲ ಎಂತಲೂ ಹೆಸರಾಯಿತು. ಇದು ಕಥೆ, ಕೃಷ್ಣ ಎಂದರೆ ಮಿಶ್ರ ಎಂತಲೂ ಶುಕ್ಲ ಎಂದರೆ ಶುದ್ಧ, ಮಿಶ್ರವಲ್ಲದ್ದು ಎಂಬ ಅರ್ಥಗಳು ಕಂಡು ಬರುತ್ತವೆ. ಅಂತೆಯೇ ಕೃಷ್ಣ ಯಜುರ್ವೇದದಲ್ಲಿ ಮಂತ್ರ ಬ್ರಾಹ್ಮಣಗಲೆರಡೂ ಶುಕ್ಲ ಯಜುರ್ವೇದದಲ್ಲಿ ಮಂತ್ರಗಳು ಮಾತ್ರ ಕಾಣಬರುತ್ತವೆ.
ಪತಂಜಲಿಯ ಮಹಾಭಾಷ್ಯದಿಂದ ಯಜುರ್ವೇದದಲ್ಲಿ 101 ಶಾಖೆಗಳಿದ್ದುವೆಂದು ತಿಳಿದುಬರುತ್ತದೆ. ಆದರೆ ಇಮದು ಹೆಸರಿಸಬಹುದಾದಂಥವು 6 ಶಾಖೆಗಳು ಮಾತ್ರ. ಕೃಷ್ಣ ಯಜುರ್ವೇದದಲ್ಲಿ ನಾಲ್ಕು : 1 ಕಾಠಕ 2 ಕಾಪಿಸ್ಥಲ 3 ಮೈತ್ರಾಯಣೀ (ಅಥವಾ ಕಲಾಪ) 4 ತೈತ್ತಿರೀಯ. ಶುಕ್ಲ ಯಜುರ್ವೇದದಲ್ಲಿ ಎರಡು : 5 ಕಾಣ್ವ ಮತ್ತು 6 ಮಾಧ್ಯಂದಿನ. ಕಾಪಿಸ್ಥಲ - ಕಾಠಕಸಂಹಿತೆಗಳ ಕೆಲವು ಭಾಗಗಳು ಮಾತ್ರ ದೊರೆತಿವೆ. ಇತರ ಸಂಹಿತೆಗಳು ಮುದ್ರಿತವಾಗಿವೆ.
ತೈತ್ತಿರೀಯ ಸಂಹಿತೆ : ಇದರಲ್ಲಿ ಏಳು ಕಾಂಡಗಳಿವೆ. ಪ್ರತಿಯೊಂದು ಕಾಂಡವೂ ಪ್ರಪಾಠಕ ಅಥವಾ ಪ್ರಶ್ನೆಗಳು ಎಂದು ವಿಭಾಗವಾಗಿದೆ. ಒಟ್ಟು 44 ಪ್ರಪಾಠಕಗಳಿವೆ. ಸ್ಥೂಲವಾಗಿ ವಿಷಯ ವಿಭಾಗವನ್ನು ಪಟ್ಟಿಯ ಮೂಲಕ ತೋರಿಸಲಾಗಿದೆ. ಒಂದೊಂದು ಕಾಂಡದಲ್ಲಿಯೂ ಇತರ ಕಾಂಡಗಳ ವಿಷಯಗಳೂ ಬಂದಿರುತ್ತವೆ :
ಕಾಂಡ ಪ್ರಪಾಠಕ ಸಂಖ್ಯೆ ವಿಷಯ 1 8 ದರ್ಶಪೂರ್ಣಮಾಸ, ಸೋಮ ಮತ್ತು ರಾಜಸೂಯ ಯಾಗಗಳು 2 6 ಪಶುಮೇಧ ವಿಶೇಷೇಷ್ಟಿ 3 5 ಸೋಮ, ಕಾಮ್ಯೇಷ್ಟಿ 4 7 ಅಗ್ನ್ಯಾಧಾನ, ಅಗ್ನಿಚಯನ, ರುದ್ರಹೋಮ 5 7 ಅಗ್ನ್ಯಾಧಾನ, ಅಶ್ವಮೇಧ 6 6 ಸೋಮಯಾಗ, ದಕ್ಷಿಣಾದಿ ಹೋಮ 7 5 ಏಕಾಹ, ದ್ವಾದಶರಾತ್ರ, ಅಶ್ವಮೇಧ
ಮೈತ್ರಾಯಣೀ ಸಂಹಿತೆಯಲ್ಲಿ 4 ಕಾಂಡಗಳೂ 54 ಪ್ರಪಾಠಕಗಳೂ ಇವೆ.
ಶುಕ್ಲಯಜುರ್ವೇದಸಂಹಿತೆ ಅಥವಾ ವಾಜಸನೇಯ ಸಂಹಿತೆಯಲ್ಲಿ ಮೇಲೆ ಹೇಳಿದ ವಿಷಯಗಳೇ ಕಾಣಬರುವುದಾದರೂ ಪ್ರತಿಪಾದಿಸುವ ಕ್ರಮ ಮತ್ತು ರೀತಿಗಳಲ್ಲಿ ಭಿನ್ನತೆಯಿದ್ದರೂ ಅಧಿಕವಾಗಿಲ್ಲ. ಈ ಸಂಹಿತೆಯ ಶಾಖೆಗಳಾದ ಮಧ್ಯಂದಿನ ಕಾಣ್ವಗಳೆರಡೂ ವಿಷಯ ಹಾಗೂ ಅವುಗಳ ಕ್ರಮದಲ್ಲಿ ಸಮಾನತೆ ಪಡೆದಿದೆ.
ದೇವತಾ ವಿಚಾರದಲ್ಲಿ ಋಗ್ವೇದಕ್ಕಿಂತ ಸ್ವಲ್ಪ ಬದಲಾವಣೆಗಳು ಯಜುರ್ವೇದದಲ್ಲಿ ಕಂಡುಬರುತ್ತವೆ. ಪ್ರಜಾಪತಿಗೆ ಹೆಚ್ಚಿನ ಪ್ರಾಶಸ್ತ್ಯ ದೊರೆತಿದೆ. ರುದ್ರ - ವಿಷ್ಣು ಇವರುಗಳೂ ಹೊಗಳಲ್ಪಟ್ಟಿದ್ದಾರೆ. ವಿಷ್ಣುವಿಗೂ ಯಜ್ಞಕ್ಕೂ ತಾದಾತ್ಮ್ಯವಿದೆ. ವಿಷ್ಣುವೇ ಯಜ್ಞ, ಯಜ್ಞವೇ ವಿಷ್ಣು. ದೇವಾಸುರ ಯುದ್ಧಗಳನ್ನು ಬಹಳವಾಗಿ ಪ್ರಸ್ತಾಪಿಸಲಾಗಿದೆ. ಯಜ್ಞವೇ ಶ್ರೇಷ್ಠತಮಕರ್ಮ ಎಂದು ಪರಿಗಣಿಸಲಾಗಿದೆ. ಅದನ್ನು ಮೀರಿದುದಿಲ್ಲ; ವಿಶ್ವವ್ಯಾಪಾರವೆಲ್ಲವೂ - ಸೃಷ್ಟಿ ಮೊದಲ್ಗೊಂಡು ಯಜ್ಞದ ರೂಪಗಳು ಎನ್ನಲಾಗಿದೆ.
ಈ ವೇದದಲ್ಲಿ ಅಲೌಕಿಕ ಸಂಗತಿಗಳೇ ಅಲ್ಲದೆ ಲೌಕಿಕ ಸಂಗತಿಗಳೂ ಇವೆ. ಪ್ರಕೃತಿ ವರ್ಣನೆ, ಲೌಕಿಕ ಅಭ್ಯಸಗಳು, ಒಗಟು, ಔಷಧಿ, ಶಿವ, ವಿಷ್ಣು ಇವರ ಉದಯ, ಜಾತಿ ಮತ್ತು ಮತಗಳ ವಿಶಿಷ್ಟ ಕಲ್ಪನೆ, ಯಾಗವಿಧಿ ಮುಂತಾದ ವಿಷಯಗಳಲ್ಲಿ ಇಲ್ಲಿ ಪ್ರಸ್ತಾಪಗೊಂಡಿವೆ. (ಜಿ. ಎಮ್.)