ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯಾಮುನಾಚಾರ್ಯ
ಯಾಮುನಾಚಾರ್ಯ - ಸು. 923. ವೈಷ್ಣವಪಂಥದ ಅಚಾರ್ಯರಲ್ಲಿ ಮೊದಲಿಗರಾದ ನಾಥಮುನಿಗಳ ಮೊಮ್ಮಗ. ಇವರ ಪೂರ್ವಾಶ್ರಮದ ಹೆಸರು ಆಳವಂದಾರ್. ನಾಥಮುನಿಗಳ ಬಳಿಕ ಶ್ರೀರಂಗದಲ್ಲಿ ಆಚಾರ್ಯಗದ್ದುಗೆ ಏರಿದವರು ರಾಮಮಿಶ್ರರು. ಯಾಮುನಾಚಾರ್ಯರು ರಾಜಸ ವೈಭವದಲ್ಲಿ ಕಾಲ ಕಳೆಯುತ್ತಿದ್ದುದನ್ನು ನೋಡಿ ರಾಮಮಿಶ್ರರು ದುಃಖಿತರಾದರು. ಪ್ರತಿಭಾವಂತರಾದ ಯಾಮಾನಾಚಾರ್ಯರನ್ನು ಧರ್ಮದ ಕಡೆಗೆ ಒಲಿಸಿಕೊಳ್ಳಲು ಪ್ರಯತ್ನಿಸಿ ಸಫಲರಾದರು. ಅನಂತರ ಯಾಮುನಾಚಾರ್ಯರು ರಾಮಮಿಶ್ರರ ಶಿಷ್ಯರಾಗಿ ಅಧ್ಯಾತ್ಮದಲ್ಲಿ ತಮ್ಮ ಮನಸ್ಸನ್ನು ನೆಟ್ಟರು. ರಾಮಮಿಶ್ರರ ಅನಂತರ ಗುರುಪೀಠವನ್ನು ಏರಿದರು. ಇವರು ಪ್ರಾಚೀನ ಆಳ್ವಾರರ ಕಾವ್ಯಗಳನ್ನು ಪ್ರಚಾರಮಾಡಿದುದೇ ಅಲ್ಲವೆ ತಾವೇ ಸಂಸ್ಕøತದಲ್ಲಿ ಕೆಲವು ಗ್ರಂಥಗಳನ್ನು ರಚಿಸಿದರು. ಗೀತಾರ್ಥ ಸಂಗ್ರಹ, ಚತುಃಶ್ಲೋಕೀ. ಸಿದ್ಧಿತ್ರಯ, ಮಹಾಪುರುಷ ನಿರ್ಣಯ, ಆಗಮ ಪ್ರಾಮಾಣ್ಯ, ಸ್ತೋತ್ರರತ್ನ-ಇವೇ ಆ ಗ್ರಂಥಗಳು. ಇವುಗಳೆಲ್ಲದರ ಉದ್ದೇಶ ವಿಶಿಷ್ಟಾದ್ವೈತ ಮತಕ್ಕೆ ಅನುಸಾರವಾಗಿ ಗೀತೆಯ ತಾತ್ಪರ್ಯವನ್ನು ವಿವರಿಸಲಾಗಿದೆ. ಚತುಃಶ್ಲೋಕೀ ಕೃತಿಯಲ್ಲಿ ಲಕ್ಷ್ಮಿಯ ಸ್ತುತಿಯಿದೆ. ಸಿದ್ಧಿತ್ರಯದಲ್ಲಿ ಆತ್ಮಸಿದ್ಧಿ, ಈಶ್ವರಸಿದ್ಧಿ, ಮತ್ತು ಸಂವಿತ್ ಸಿದ್ಧಿ ಎಂಬ ಭಾಗಗಳಿವೆ. ಕೊನೆಯಭಾಗದಲ್ಲಿ ಮಾಯಾವಾದವನ್ನು ಖಂಡಿಸಿ ಆತ್ಮಸ್ವರೂಪವೇನು ಎಂಬುದನ್ನು ನಿರ್ದೇಶಿಸಿದ್ದಾರೆ. ಮಹಾಪುರುಷ ನಿರ್ಣಯದಲ್ಲಿ ವಿಷ್ಣು ಪಾರಮ್ಯವನ್ನು ಪ್ರತಿಪಾದಿಸಿದ್ದಾರೆ. ಆಗಮ ಪ್ರಾಮಾಣ್ಯದಲ್ಲಿ ಶ್ರೀವೈಷ್ಣವ ಧರ್ಮಕ್ಕೆ ಆಧಾರವನ್ನು ಭೂತವಾದ ಪಾಂಚರಾತ್ರ ಸಿದ್ಧಾಂತದ ಪ್ರಾಮಾಣಿಕತೆಯನ್ನು ಸ್ಥಾಪಿಸಿದ್ದಾರೆ. ಪಾಂಚರಾತ್ರ ಸಿದ್ಧಾಂತ ಅವೈದಿಕವೆಂಬ ವಾದವನ್ನು ಯುಕ್ತಿ ತರ್ಕಗಳ ಆಧಾರದಿಂದ ಪ್ರಬಲವಾಗಿ ಖಂಡಿಸಿದ್ದಾರೆ. ಇವರ ಆಳವಂದಾರ್ ಸ್ತೋತ್ರ ಪ್ರಸಿದ್ಧವಾಗಿದೆ. ಯಾಮುನಾಚಾರ್ಯರ ಗ್ರಂಥಗಳಲ್ಲಿ ಇದು ಲೋಕಪ್ರಿಯವಾದುದು. ಇದರಲ್ಲಿ ಇವರ ಅಂತರಾಳ ಹುದುಗಿದೆ. ಕವಿ ಹೃದಯದ ಭಕ್ತಿಭಾವನೆ ಅಡಗಿದೆ. ಇವರ ಆತ್ಮಸಮರ್ಪಣ ಸಿದ್ಧಾಂತ ಸೌಂದರ್ಯ ಪೂರ್ಣ ವಿಕಾಸ ಈ ಪದ್ಯದಲ್ಲಿದೆ. ಈ ಸ್ತೋತ್ರಕ್ಕೆ ಸ್ತೋತ್ರರತ್ನ ಎಂಬ ಖ್ಯಾತಿಯಿದೆ.
(ಎಂ.ವೈ.)