ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯುನಾನಿ ವೈದ್ಯ ಪದ್ಧತಿ

ವಿಕಿಸೋರ್ಸ್ದಿಂದ
Jump to navigation Jump to search

ಯುನಾನಿ ವೈದ್ಯ ಪದ್ಧತಿ - ಇದೊಂದು ಪುರಾತನ ಪದ್ಧತಿ. ಯುನಾನಿ ವೈದ್ಯ ಪದ್ಧತಿ ಉಗಮಿಸಿದುದು ಪುರಾತನ ಗ್ರೀಸಿನಲ್ಲಿ. ಈ ಪದ್ಧತಿಯ ಮೊದಲ ವೈದ್ಯರು ಭಾರತೀಯರು, ಚೀನೀಯರು, ಬ್ಯಾಬಿಲೋನಿಯನ್ನರು, ಈಜಿಪ್ಷಿಯನ್ನರು ಹಾಗೂ ಗ್ರೀಕರಾಗಿದ್ದರೆಂದು ದಾಖಲೆಗಳಿಂದ ತಿಳಿದುಬರುತ್ತದೆ.

ಮುಸ್ಲಿಮರ ಆಳ್ವಿಕೆಯ ಕಾಲದಲ್ಲಿ ಯುನಾನಿ ವೈದ್ಯಪದ್ಧತಿಯಲ್ಲಿ ಎರಡು ಮುಖ್ಯ ವಿಭಾಗಗಳಿದ್ದವು. ಪೌರ್ವಾತ್ಯ ಮತ್ತು ಪಾಶ್ಚಾತ್ಯ. ಪೌರ್ವಾತ್ಯ ಪದ್ಧತಿಗೆ ಬಾಗ್ದಾದ್ ಮತ್ತು ಪಾಶ್ಚಾತ್ಯ ಪದ್ಧತಿಗೆ ಕಾರ್ಡೋವ ವಿಧಾನಕೆಂದ್ರಗಳಾಗಿದ್ದವು. ಆವಿಸೆನ್ನ ಹಾಗೂ ರೆಹಾಜಿನ್‍ರು ಪೌರ್ವಾತ್ಯ ಪದ್ಧತಿಯ ಹಾಗೂ ಅಬುಲ್ ಕಾಸಿಸ್ ಮತ್ತು ಅಬುಲ್ ಖಾಸಿಮ್ ಅಲ್ ಜುಹ್ರಾಸಿ ಪಾಶ್ಚಾತ್ಯ ಪದ್ಧತಿಯ ಪ್ರಮುಖರು. ಅವಿಸೆನ್ನ 'ಮೆಟಿಯಾ ಮೆಡಿಕ ಗ್ರಂಥ ರಚಿಸಿದ. ಹೀಗೆ ಅಭಿವೃದ್ಧಿಗೊಂಡ ಗ್ರೀಕ್ ವೈದ್ಯಪದ್ಧತಿಯೇ ಇಸ್ಲಾಮಿಕ್ ವೈದ್ಯಪದ್ಧತಿಯಾಗಿ ಖ್ಯಾತಿ ಪಡೆದು ಅರಬ್‍ದೇಶಗಳಲ್ಲಷ್ಟೇ ಅಲ್ಲ ಯೂರೋಪಿನಲ್ಲೂ ತುಂಬ ಪ್ರಚಾರದಲ್ಲಿತ್ತು.

ಯುನಾನಿ ವೈದ್ಯ ಪದ್ಧತಿಗೆ ರಸಧಾತು ಸಿದ್ಧಾಂತವೇ ಮೂಲಾಧಾರ. ಇವರ ಪ್ರಕಾರ ವಿಶ್ವವು ಸೂಕ್ಷ್ಮ ಹಾಗೂ ಸ್ಥೂಲ ಎಂಬ ಎರಡು ಬಗೆಯ ಪದಾರ್ಥಗಳಿಂದಾದುದು. ಸೂಕ್ಷ್ಮ ಪದಾರ್ಥಗಳು ಆತ್ಮ ಹಾಗೂ ಚೈತನ್ಯಕ್ಕೆ ಸಂಬಂಧಿಸಿದವು. ಸ್ಥೂಲ ಪದಾರ್ಥಗಳು ಘನ, ದ್ರವ ಮತ್ತು ಅನಿಲ. ಈ ಮೂರು ಸೇರಿ ಭೂಮಿ, ನೀರು ಹಾಗೂ ವಾತಾವರಣ ರಚಿಸಿವೆ. ಇವುಗಳ ಜೊತೆಗೆ ಅಗ್ನಿಯೂ ಸೇರಿ ಎಲ್ಲ ಖನಿಜ, ಸಸ್ಯ ಹಾಗೂ ಪ್ರಾಣಿಗಳ ವಿಕಸನಕ್ಕೆ ಕಾರಣವಾಗಿವೆ.

ಯುನಾನಿ ಪದ್ಧತಿಯಲ್ಲಿ ರೋಗನಿದಾನದಲ್ಲಿ ಮೂರು ಮುಖ್ಯಾಂಶಗಳಿವೆ. 1. ಗುಣಾತ್ಮಕ ಬದಲಾವಣೆಗಳು 2. ರಚನಿಕ ಬದಲಾವಣೆಗಳು 3. ಸಾರ್ವತ್ರಿಕ ಲಕ್ಷಣಗಳು. ರೋಗ ತಗುಲಿರುವ ಭಾಗಗಳನ್ನು ಸ್ಪರ್ಶಿಸಿ, ಕೊಬ್ಬಿನ ಅಂಶವನ್ನು ಅಳೆದು, ಕೂದಲಿನ ಬಣ್ಣ ಹಾಗೂ ದಪ್ಪವನ್ನು ಪರಿಶೀಲಿಸಿ, ಚರ್ಮದ ಬಣ್ಣ ಹಾಗೂ ವಾಸನೆಯನ್ನು ಅವಲೋಕಿಸಿ, ರಕ್ತ, ಬೆವರು, ಮೂತ್ರ, ಮಲಗಳ ಪರೀಕ್ಷೆ ನಡೆಸಿ ರೋಗನಿರ್ಧಾರ ಮಾಡಲಾಗುತ್ತದೆ. ನಿದ್ರೆಯಲ್ಲಿ ಮತ್ತು ಎಚ್ಚರವಾಗಿದ್ದಾಗ ರೋಗಿಯ ಮನೋಸ್ಥಿತಿಯನ್ನು ಗಮನಿಸಲಾಗುತ್ತದೆ. ಎಲ್ಲಕ್ಕೂ ಮೊದಲು ನಾಡಿ ನೋಡಿ ರೋಗದ ವಿಶಿಷ್ಟ ಸ್ವರೂಪವನ್ನು ಪತ್ತೆಹಚ್ಚಲಾಗುತ್ತದೆ.

ಈ ಪದ್ಧತಿಯ ರೋಗ ಚಿಕಿತ್ಸಾ ವಿಧಾನವನ್ನು "ಇಲಾಜ್-ಬೆ-ಜಿದಿಹಿ" ಎಂದು ಕರೆಯಲಾಗುತ್ತದೆ. ರೋಗಕ್ಕೆ ಅತ್ಯುಷ್ಣವು ಕಾರಣವಾಗಿದ್ದಲ್ಲಿ, ರೋಗಿಗೆ ತದ್ವಿರುದ್ದವಾದ ಆಹಾರ ಮತ್ತು ಔಷಧಿ ನೀಡಲಾಗುತ್ತದೆ. ಪುರಾತನ ಕಾಲದಲ್ಲಿ ಯುನಾನಿ ಪದ್ಧತಿಯಲ್ಲಿಯೂ ಶಸ್ತ್ರಕ್ರಿಯೆ ಬಳಕೆಯಲ್ಲಿದ್ದಿತು. ಅಬುಲ್ ಕಾಸಿನ್ ತನ್ನ ಗ್ರಂಥದಲ್ಲಿ ಮಿದುಳಿನ ಶಸ್ತ್ರಚಿಕಿತ್ಸೆ, ಅಂಗಚ್ಛೇದನ, ಸುಡುವ (ಚಿಟಿಕೆ ಹಾಕುವ) ವಿಧಾನಗಳ ಬಗೆಗೆ ಬರೆದಿದ್ದಾನೆ. ಆದರೆ ಈಗ ಈ ಪದ್ಧತಿಯಲ್ಲಿ ಶಸ್ತ್ರಚಿಕಿತ್ಸೆ ಬಹುಮಟ್ಟಿಗೆ ಇಲ್ಲವಾಗಿದೆ.

(ಡಾ. ವಸುಂಧರಾ ಭೂಪತಿ)