ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯೂಫೋರ್ಬಿಯೇಸೀ

ವಿಕಿಸೋರ್ಸ್ದಿಂದ

ಯೂಫೋರ್ಬಿಯೇಸೀ -

 	ನೆಲ್ಲಿ, ಹರಳು, ಕೋಲುಕಳ್ಳಿ, ರಬ್ಬರ್‍ಮರ, ಮರಗೆಣಸು, ಕ್ರೋಟನ್ ಮುಂತಾದ ಸುಮಾರು 220 ಜಾತಿ ಮತ್ತು 400 ಪ್ರಭೇದಗಳನ್ನು ಒಳಗೊಂಡ ಒಂದು ವಿಶಿಷ್ಟ ಸಸ್ಯ ಕುಟುಂಬ.  ಇದಕ್ಕೆ ಸೇರಿದ ಸಸ್ಯಪ್ರಭೇದಗಳು ಶೀತವಲಯಗಳನ್ನು ಬಿಟ್ಟು ಪ್ರಪಂಚದ ಉಳಿದೆಲ್ಲ ಭಾಗಗಳಲ್ಲೂ ಸ್ವಾಭಾವಿಕವಾಗಿ ಬೆಳೆಯುವುವು.  ಕೆಲವು ಮರುಭೂಮಿ ಸಸ್ಯಗಳಾದರೆ, ಇನ್ನು ಕೆಲವು ಜೌಗುಪ್ರದೇಶಗಳಲ್ಲೂ ಮತ್ತೆ ಕೆಲವು ಇಂಡೋ-ಮಲೇಷ್ಯ ಪ್ರದೇಶದ ಕಾಡುಗಳಲ್ಲೂ ಕಾಣದೊರೆಯುವುವು.  ಮರಗೆಣಸು (ಮ್ಯಾನಿಹಟ್ ಎಸ್ಕುಲೆಂಟ್).  ರಬ್ಬರ್ ಮರ (ಹೀವಿಯ ಬ್ರಸಿಲಿಯೆಸ್ಸಿಸ್), ಹರಳು (ರಿಸಿನಸ್ ಕಮ್ಯೂನಿಸ್), ಸಾಬೂನು ಮರ (ಸೇಪಿಯಮ್ ಇನಸ್ಟೆಗ್ನೆ) ಮುಂತಾದವು ಆರ್ಥಿಕವಾಗಿ ಉಪಯುಕ್ತವಾಗಿರುವುದರಿಂದ ಕ್ರೋಟನ್ ಮುಂತಾದ ಅಲಂಕಾರ ದೃಷ್ಟಿಯಿಂದ ಮಹತ್ತ್ವದವಾಗಿರುವುದರಿಂದ ಇಂಥವನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವುದಿದೆ.
   ಈ ಕುಟುಂಬದ ಸಸ್ಯಗಳು ಮರಗಳ ರೂಪವಾದರೆ ಇನ್ನೂ ಕೆಲವು ಪೊದೆಗಳು ಮತ್ತೆ ಕೆಲವು ಮೂಲಿಕೆ ರೂಪದವು.  ಸಣ್ಣ ತುರಚಿ ಮುಂತಾದವು (ಟ್ರೇಜಿಯ ಹಿಸ್ಪಿಡ) ಬಳ್ಳಿರೂಪದ ಗಿಡಗಳು, ಹಾಗೆಯೇ ಒಂದೇ ಜಾತಿಗೆ ಸೇರಿದ ಗಿಡಗಳು ಕೂಡ ವಿವಿಧ ರೂಪದವಾಗಿರುವುದುಂಟು.  ಉದಾಹರಣೆಗೆ ನೆಲ್ಲಿಜಾತಿಯಲ್ಲಿ (ಫಿಲ್ಯಾಂತಸ್) ಕೆಲವು ಮರಗಳು (ಫಿ.ಅಸಿಡಸ್) ಇನ್ನು ಕೆಲವು ಮೂಲಿಕೆಗಳು (ಫಿ. ಫ್ರಾಟೆರ್ನಸ್).  ಅಂತೆಯೇ ಯೂಫೋರ್ಬಿಯ ಜಾತಿಯ ತಿರುಕಳ್ಳಿ ಪ್ರಭೇದ ಪೊದೆರೂಪದ ಕಳ್ಳಿಗಿಡವಾದರೆ ಹಿರ್ಟ್ ಪ್ರಭೇದ ಪುಟ್ಟಮೂಲಿಕೆ ರೂಪದ್ದು.
   ಬಾಹ್ಯರೂಪ ಏನೇ ಇರಲಿ ಸಾಮಾನ್ಯವಾಗಿ ಈ ಕುಟುಂಬದ ಎಲ್ಲ ಬಗೆಗಳಲ್ಲೂ ಒಂದು ರೀತಿಯ ಹಾಲಿನಂಥ ಲೇಟಕ್ಸ್ ಎಂಬ ರಸ ಇರುತ್ತದೆ.  ಇದು ಈ ಕುಟುಂಬದ ಪ್ರಧಾನ ಲಕ್ಷಣಗಳಲ್ಲೊಂದು.  ಹಾಗೆಯೇ ಎಲ್ಲ ಸದಸ್ಯ ಗಿಡಗಳಲ್ಲೂ ಕಂಡುಬರುವ ಲಕ್ಷಣ ಎಂದರೆ ಹೂಗಳು ಏಕಲಿಂಗಿಗಳಾಗಿರುವುದು.  ಈ ಕುಟುಂಬದ ಇತರ ಲಕ್ಷಣ ಎಂದರೆ ಸರಳರೀತಿಯ ಎಲೆಗಳು ಕೆಲವು ಪ್ರಭೇದಗಳಲ್ಲಿ ಗೊಂಚಲ ಸಯೇತಿಯಮ್ ಎಂಬ ವಿಶಿಷ್ಟ ಬಗೆಯದಾಗಿರುವುದು (ಉದಾ: ಯೂಫೋರ್ಬಿಯ).  ಹೆಣ್ಣು ಮತ್ತು ಗಂಡು ಹೂಗಳು ಬೇರೆ ಬೇರೆ ಸಸ್ಯಗಳಲ್ಲಿ ಇರಬಹುದು.  ಇಲ್ಲವೇ ಒಂದೇ ಸಸ್ಯದಲ್ಲಿರಬಹುದು.  ಫಲ ಸಂಪುಟ ಮಾದರಿಯದಾಗಿರಬಹುದು, ಬೀಜಗಳು ಭ್ರೂಣಾಕಾರಯುಕ್ತವಾಗಿರುವುದು.

ಈ ಕುಟುಂಬದ ಹಲವು ಪ್ರಭೇದಗಳು ಮನುಷ್ಯನಿಗೆ ಉಪಯುಕ್ತವಾಗಿವೆ ಎಂಬುದು ವೇದ್ಯ, ಮಹತ್ತ್ವದ ಇನ್ನು ಕೆಲವು ಬಗೆಗಳು ಇಂತಿವೆ : ಕ್ರೋಟನ್ ಟಿಗ್ಲಿಯಮ್ (ಜಾಪಾಳ), ಅಕ್ಯಾಲಿಫಿ ಇಂಡಿಕ (ಕುಪ್ಪಿಗಿಡ), ಮ್ಯಾಲೋಟಸ್ ಫಿಲಿಪೆನ್ಸಿಸ್ (ಕುಂಕುಮದ ಮರ), ಮಕರಂಗ ಇಂಡಿಕ (ಬೆಟ್ಟದಾವರೆ), ಜಟ್ರೋಫ ಕರ್ಕಾಸ್ (ತುರುಕು ಹರಳು) ಇತ್ಯಾದಿ.

  ದಕ್ಷಿಣ ಅಮೆರಿಕದಲ್ಲಿ ಟಾಕ್ಸಿಕೊಡೆಂಡ್ರಾನ್ ಎಂಬ ಜಾತಿಯ ವಿಷಪೂರಿತ ಪ್ರಭೇದಗಳು ಬೆಳೆಯುತ್ತಿದ್ದು ಇವುಗಳ ವಿಷವನ್ನು ಅಲ್ಲಿನ ಮೂಲನಿವಾಸಿಗಳು ಬಾಣದ ತುದಿಗೆ ಸವರಿ ಮಾರಕಾಸ್ತ್ರಗಳನ್ನಾಗಿ ಬಳಸುತ್ತಾರೆ.		

(ಎಂ.ಸಿ.ಆರ್.)