ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯೂರಲ್ ಪರ್ವತಶ್ರೇಣಿ

ವಿಕಿಸೋರ್ಸ್ದಿಂದ

ಯೂರಲ್ ಪರ್ವತಶ್ರೇಣಿ ಸೋವಿಯತ್ ರಷ್ಯದ (ಹಿಂದಿನ ಸೋವಿಯತ್ ಸಮಾಜವಾದಿ ಗಣರಾಜ್ಯ) ಒಂದು ಪರ್ವತಶ್ರೇಣಿ. ಕಾರಾ ಸಮುದ್ರದಿಂದ ಅರಲ್ ಸಮುದ್ರದವರೆಗೆ 60ನೆಯ ಮೆರಿಡಿಯನ್ ರೇಖೆಯುದ್ದಕ್ಕೂ ಉತ್ತರ-ದಕ್ಷಿಣ ಸು. 2410 ಕಿಮೀ ಉದ್ದ ಹಬ್ಬಿದ್ದು ಯುರೋಪ್ ಹಾಗೂ ಏಷ್ಯಗಳ ನಡುವಣ ಪ್ರಾಕೃತಿಕ ಗಡಿಯಂತಿದೆ. ಈ ಪರ್ವತಸಾಲು ಕಡಿಮೆ ಎತ್ತರದ ಬೆಟ್ಟಗಳಿಂದ ಕೂಡಿದ್ದು ಯುರೋಪ್ ಹಾಗೂ ಏಷ್ಯ ನಡುವಿನ ಸಂಚಾರಕ್ಕೆ ಅಡ್ಡಿಯಾಗಿಲ್ಲ. ಈ ಶ್ರೇಣಿಯ ಉತ್ತರದ ತುದಿಯಲ್ಲಿ ನೋವಾಯ eóÉಮ್ಲೀಯ ಮತ್ತು ವೈಗಾಜ್ ದ್ವೀಪಗಳಿವೆ. ದಕ್ಷಿಣ ತುದಿಯಲ್ಲಿ ಕಡಿಮೆ ಎತ್ತರದ ಮುಗೋಡ್ ಜಾರಿ ಬೆಟ್ಟಗಳಿವೆ. ಈ ಪರ್ವಶ್ರೇಣಿ ಯೂರಲ್, ವೋಲ್ಗಾ, ಪೋರಾ ಮತ್ತು ಕಾಮಾ ನದಿಗಳ ಜಲಾನಯನ ಪ್ರದೇಶಗಳನ್ನು ಪ್ರತ್ಯೇಕಿಸುತ್ತದೆ.

ಹಸಿನಿಯನ್ ಭೂಮಾರ್ಪಾಟಿನಿಂದಾಗಿ ಹುಟ್ಟಿದ ಮಡಿಕೆಗಳಾದ ಈ ಪರ್ವತ ಸಾಲುಗಳು ಪೇಲಿಯೋ ಜೋಯಿಕ್ ಯುಗದ ಕೊನೆಯಲ್ಲಿ ಸು,225 ಮಿಲಿಯ ವರ್ಷಗಳ ಹಿಂದೆ ರೂಪುಗೊಂಡವು. ಕ್ರಮೇಣ ಸವೆತದಿಂದ ಕೆಳಮಟ್ಟದ ಕಣಿವೆಗಳಾಗಿ (ವಿಶಾಲವಾದ ನದಿಬಯಲುಗಳಾಗಿ) ಹಾಗೂ ದುಂಡಗಿರುವ ಶಿಖರಗಳಾಗಿ ಮಾರ್ಪಾಟಾದವು. ಪೂರ್ವದ ಜೌಗುಪ್ರದೇಶದ ಮಧ್ಯದಲ್ಲಿ ಸು., 229 ಮೀ ಎತ್ತರದ ಪೈಡ್‍ಮೌಂಟ್ ಮಧ್ಯದ ಬೆಟ್ಟಸಾಲುಗಳು ಹರಳುಹರಳಾದ ಬಂಡೆಗಳಿಂದ ಕೂಡಿದ್ದು ಅನೇಕ ಉನ್ನತಶಿಖರಗಳನ್ನು ಹೊಂದಿದೆ. ಇವುಗಳಲ್ಲಿ ಮುಖ್ಯವಾದವು ಮೌಂಟ್‍ನರೋದ್‍ನಯ (1894 ಮೀ) ಮೌಂಟ್ ಕಚ್‍ಕಾನಾರ್ (914 ಮೀ) ಟೆಲ್‍ಪೊಸ್ ಇಜ್ (1678 ಮೀ) ಹಾಗೂ ಯಾಮನ್ ತಾವೊ (1638 ಮೀ).

ಈ ಪ್ರದೇಶದಲ್ಲಿ ಖಂಡಾಂತರ ವಾಯುಗುಣವಿದೆ. ನೊವಾಯ eóÉಮ್ಲೀಯದಲ್ಲಿ ನೀರ್ಗಲ್ಲ ನದಿಗಳಿವೆ. ಸು. 762 ಮೀ ಗೂ ಹೆಚ್ಚು ಎತ್ತರವಾದ ಪ್ರದೇಶದಲ್ಲಿ ತಂಡ್ರಾ ಪ್ರದೇಶವಿದೆ. ಇಲ್ಲಿಂದ ಮುಂದಿನ ಭಾಗದಲ್ಲಿ ಕೊನಿಫೆರಸ್ ಅರಣ್ಯವಿದ್ದು ಸ್ಟ್ರೂಸ್, ಪೈನ್, ಲಾರ್ಚ್, ಫರ್, ಆಲ್ಡರ್, ಬಿರ್ಚ್ ಹಾಗೂ ವಿಲ್ಲೊ ಮರಗಳಿವೆ. ಇಲ್ಲಿಂದ ದಕ್ಷಿಣಕ್ಕೆ ಬೆಂಗಾಡು ಪ್ರದೇಶ. ಇಲ್ಲಿ ಮರುಭೂಮಿಯಲ್ಲಿ ಬೆಳೆಯುವ ಸಸ್ಯವರ್ಗವನ್ನು ಕಾಣಬಹುದು. ಈ ಪರ್ವತಶ್ರೇಣಿಯಲ್ಲಿನ ಅರಣ್ಯಸಂಪತ್ತನ್ನು 16ನೆಯ ಶತಮಾನದಿಂದ ಇದ್ದಲಿಗಾಗಿ ಉಪಯೋಗಿಸಲಾಗುತ್ತಿದ್ದು ಈಗ ಅದನ್ನು ಸೆಲ್ಯುಲೊಸ್ ಮತ್ತು ಕಾಗದದ ತಯಾರಿಕೆಗೆ ಬಳಸಲಾಗುತ್ತಿದೆ.

ಯೂರಲ್ ಪರ್ವತಶ್ರೇಣಿಯಲ್ಲಿ ಖನಿಜಸಂಪತ್ತು ಹೇರಳವಾಗಿದೆ. ಇಲ್ಲಿ ಸಿಗುವ ಖನಿಜಗಳಲ್ಲಿ ತಾಮ್ರ, ನಿಕ್ಕಲ್, ಕ್ರೋಮೈಟ್, ಚಿನ್ನ, ಪ್ಲಾಟಿನಮ್, ಕಲ್ನಾರು, ಅಭ್ರಕ, ಕಾವು ಜೇಡು, ಮ್ಯಾಗ್ನಸೈಟ್ ಮತ್ತು ಪದ್ಮರಾಗ, ಗೋಮೇಧಿಕ, ಪಚ್ಚೆ ಮೊದಲಾದವು ಮುಖ್ಯವಾದವು. ರಷ್ಯದ ಕಲ್ಲಿದ್ದಲು ಮತ್ತು ಲಿಗ್ನೈಟ್‍ನ ಆವಶ್ಯಕತೆಯಲ್ಲಿ ಬಹುಪಾಲು ಇಲ್ಲಿಂದಲೇ ಸರಬರಾಜಾಗುತ್ತದೆ. ಈ ಪರ್ವತಶ್ರೇಣಿಯ ಎರಡೂ ಕಡೆ ಗಣಿಗಳೂ ಕೈಗಾರಿಕಾ ಕೇಂದ್ರಗಳೂ ಇವೆ. ಇದರ ಮೂಲಕ ಅನೇಕ ರೈಲುಮಾರ್ಗಗಳು ಹಾದಿಹೋಗುತ್ತವೆ. (ಜೆ.ಎಸ್.ಎಸ್.)