ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯೂರಿಂಜರ್, ರಿಚರ್ಡ್

ವಿಕಿಸೋರ್ಸ್ದಿಂದ

ಯೂರಿಂಜರ್, ರಿಚರ್ಡ್ 1891-?. ಜರ್ಮನಿಯ ಕಾದಂಬರಿಕಾರ ಹಾಗೂ ಕವಿ. ಹುಟ್ಟಿದ್ದು ಬವೇರಿಯದ ಆಗ್ಸ್‍ಬರ್ಗ್‍ನಲ್ಲಿ. ಶಾಲಾವಿದ್ಯಾಭ್ಯಾಸದ ಅನಂತರ ಸಂಗೀತಕಲೆಯನ್ನು ಕಲಿಯತೊಡಗಿದ. ಈತ 1913ರಲ್ಲಿ ಸೈನ್ಯಕ್ಕೆ ಸೇರಿದ. ಮೊದಲನೆಯ ಮಹಾಯುದ್ಧದ ಅವಧಿಯಲ್ಲಿ ವಿಮಾನ ಚಾಲಕನಾಗಿ ಕೆಲಸಮಾಡಿ 1917ರಲ್ಲಿ ಬವೇರಿಯದ ವಿಮಾನಚಾಲಕರ ತರಬೇತಿಶಾಲೆಯ ಮುಖ್ಯಾಧಿಕಾರಿಯಾಗಿದ್ದ. ಯುದ್ಧ ಮುಗಿದ ಮೇಲೆ ಈತ ಮತ್ತೆ ವಿದ್ಯಾಭ್ಯಾಸಕ್ಕೆ ಮರಳಿದ. ಆದರೆ ಹಣದ ಅಭಾವದಿಂದಾಗಿ ವಿದ್ಯಾಭ್ಯಾಸ ಸಾಗಲಿಲ್ಲ. ಉದ್ಯೋಗಿಯಾದ. ಮರ ಕೊಯ್ಯುವ ಕಾರ್ಖಾನೆಯೊಂದರಲ್ಲಿ ಕೆಲಸಗಾರನಾಗಿ ಸ್ವಲ್ಪಕಾಲ, ಬ್ಯಾಂಕೊಂದರಲ್ಲಿ ಸ್ವಲ್ಪಕಾಲ ದುಡಿದ. ಹಿಟ್ಲರನ ಸೇವೆಯಲ್ಲಿ ಈತ ತೋರಿಸಿದ ನಿಷ್ಠೆಗಾಗಿ ಇವನಿಗೆ 1933ರಲ್ಲಿ ಎಸ್ಸೆನ್ ನಗರದ ಸಾರ್ವಜನಿಕ ಪುಸ್ತಕಭಂಡಾರದ ಮುಖ್ಯಾಧಿಕಾರಿ ಕೆಲಸ ಸಿಕ್ಕಿತು. 1936ರಲ್ಲಿ ಆ ಕೆಲಸದಿಂದ ನಿವೃತ್ತನಾಗಿ ಲಿಪ್ಪಿ ಪ್ರಾಂತದ ಸಣ್ಣ ಊರೊಂದರಲ್ಲಿ ನೆಲೆಸಿದ. ಅನಂತರ ತನ್ನ ಪೂರ್ಣ ವೇಳೆಯನ್ನು ಸಾಹಿತ್ಯಸೃಷ್ಟಿಗೆ ವಿನಿಯೋಗಿಸಿದ.

ಈತ ಅನೇಕ ಕಾದಂಬರಿಗಳನ್ನೂ ನಾಟಕಗಳನ್ನೂ ಬರೆದಿದ್ದಾನೆ. ಫ್ಲೀಜರ್ ಷ್ಯೂಲೆ 4(91939) ಎಂಬ ಕಾದಂಬರಿ ಯುದ್ಧದ ನೋವು ನಲಿವುಗಳೆರಡನ್ನೂ ಚಿತ್ರಿಸುತ್ತದೆ. ವಿಮಾನ ಚಾಲಕರ ಸಾಹಸ ಜೀವನದ ಚಿತ್ರಣ ಇದರಲ್ಲಿ ಕಂಡುಬರುತ್ತದೆ. ಡೀ ಆರ್ಬೀಟ್ ಸ್ಲೋಸೆನ್ (1930) ನಿರುದ್ಯೋಗ ಸಮಸ್ಯೆಯನ್ನು ಕುರಿತದ್ದು. ಡೀ ಫರೆನ್ಸ್ ಫಾಲೆನ್ (1935) ಎಂಬುದು ಹದಿನೆಂಟು-ಹತ್ತೊಂಬತ್ತನೆಯ ಶತಮಾನಗಳಲ್ಲಿ ನಡೆದ ಕೆಲವು ರಾಜಮನೆತನಗಳ ಪತನವನ್ನು ಚಿತ್ರಿಸುವ ಚಾರಿತ್ರಿಕ ಕಾದಂಬರಿ. ಈತ ರಚಿಸಿದ ಡಾಯಿಷ್ ಫ್ಯಾಷನ್ (1933) ಎಂಬ ರೇಡಿಯೊ ನಾಟಕ ತುಂಬ ಯಶಸ್ವಿಯಾಯಿತು. ಇವನು ರಚಿಸಿರುವ ಕೆಲವು ಭಾವಗೀತೆಗಳು ಸ್ಫೂರ್ತಿಯುತವೂ ಸತ್ವಪೂರ್ಣವೂ ಆಗಿವೆ. ಸಾಹಿತ್ಯ ಸೇವೆಗಾಗಿ ಈತ ಜರ್ಮನಿ ಸರ್ಕಾರದ ಪಾರಿತೋಷಿಕವನ್ನು ಪಡೆದ.

			   (ಎಂ.ಆರ್.)