ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯೂರಿಪಿಡಿಸ್

ವಿಕಿಸೋರ್ಸ್ದಿಂದ

ಯೂರಿಪಿಡಿಸ್ :- ಕ್ರಿ.ಪೂ.ಸು. 480-406. ಮೂವರು ಗ್ರೀಕ್ ಮಹಾನಾಟಕಕಾರರಲ್ಲಿ ಒಬ್ಬ (ಉಳಿದಿಬ್ಬರು ಈಸ್ಕಿಲಸ್ ಮತ್ತು ಸಾಫೊಕ್ಲಿಸ್). ಇವನು ಹುಟ್ಟಿದ್ದು ಕ್ರಿ.ಪೂ. 480 ಅಥವಾ 485ರಲ್ಲಿ. ಇವನ ನಾಟಕಗಳು ಉಳಿದಿಬ್ಬರ ನಾಟಕಗಳಿಗಿಂತ ಇವನ ಮರಣಾನಂತರ ಹೆಚ್ಚು ಜನಪ್ರಿಯವಾದವು.

ಕ್ರಿ.ಪೂ. 5ನೆಯ ಶತಮಾನದಲ್ಲಿ ಗ್ರೀಸ್‍ನಲ್ಲಿ `ಯೂರಿಪಿಡಿಸ್ ಯುಗವೆಂದು ಗುರುತಿಸಲಾಗಿದೆ. ವಾಸ್ತವವಾಗಿ ಅದು ಜಗತ್ತಿನ ಇತಿಹಾಸದಲ್ಲೇ ಒಂದು ಮಹತ್ತ್ವದ ಕಾಲಾವಧಿ; ಆಧುನಿಕ ನಾಗರಿಕತೆಗೆ ಆಗ ತಳಹದಿ ಸಿದ್ಧವಾಯಿತು.

ಯೂರಿಪಿಡಿಸ್ ಪ್ರಾಚೀನ ಕಾಲದ `ಆಧುನಿಕ ನಾಟಕಕಾರ ಇವನನ್ನು `ಆಧುನಿಕ ರಂಗಭೂಮಿಯ ಜನಕ ಎಂದು ಕರೆಯಲಾಗಿದೆ. ಒಂದರ್ಥದಲ್ಲಿ ಯುರೋಪಿಯನ್ ಸಾಹಿತ್ಯದ ಪ್ರಪ್ರಥಮ `ರೊಮ್ಯಾಂಟಿಕ್ ಲೇಖಕನೀತ. ವೈಚಾರಿಕತೆ ಮತ್ತು ವ್ಯಷ್ಟಿಯ ಮೇಲೆ ಒತ್ತು ಇವನ ನಾಟಕಗಳ ಪ್ರಮುಖ ವೈಶಿಷ್ಟ್ಯ. ಇವನು ಸಾಕ್ರೆಟೀಸನಂತೆ `ವೈe್ಞÁನಿಕ ಮನೋಧರ್ಮವುಳ್ಳವ; ಇವನದು ಕ್ರಾಂತೀಕಾರಿ ಧೋರಣೆ ಮತ್ತು ಎಲ್ಲವನ್ನೂ ಪ್ರಶ್ನಿಸುವ ಪ್ರವೃತ್ತಿ. ಈ ಬೌದ್ಧಿಕತೆಯೇ ಇವನನ್ನು ಸಾಫೊಕ್ಲಿಸನಿಂದ ಬೇರ್ಪಡಿಸುವ ಅಂಶ. `ಸಾಫೊಕ್ಲಿಸ್ ಅನುಭವಿಸಿದರೆ ಯೂರಿಪಿಡಿಸ್ ಆಲೋಚಿಸುತ್ತಾನೆ. ಪುರಾಣ ಕಥೆಗಳನ್ನೆ ಯೂರಿಪಿಡಿಸ್ ತನ್ನ ನಾಟಕಗಳ ವಸ್ತುವನ್ನಾಗಿ ಮಾಡಿಕೊಂಡರೂ ಅವುಗಳನ್ನು ಪುನರ್‍ವ್ಯಾಖ್ಯಾನಿಸುತ್ತಾನೆ (ಆದರೆ ಕೆಲವೊಮ್ಮೆ ಅದರ ಅಸಂಬದ್ಧತೆಯನ್ನು ಮನಗಾಣಿಸುವುದಕ್ಕಾಗಿ ಸಾಂಪ್ರಾದಾಯಿಕ ಅಂತ್ಯವನ್ನು ಉಳಿಸಿಕೊಳ್ಳುತ್ತಾನೆ). ಇವನ ಆಸಕ್ತಿ ಮಾನವರಲ್ಲಿ; ಮಾನವೀಯತೆಯಲ್ಲಿ, ಪೌರಾಣಿಕ ಪಾತ್ರಗಳು ಇವನಲ್ಲಿ ಸಮಕಾಲೀನ ಮಾನವ ವ್ಯಕ್ತಿಗಳಾಗಿ ಮರುಹುಟ್ಟು ಪಡೆಯುತ್ತವೆ.

ಯೂರಿಪಿಡಿಸ್ ನಾಸ್ತಿಕನಲ್ಲವಾದರೂ ಈಸ್ಕಿಲಸ್ ಮತ್ತು ಸಾಫೊಕ್ಲಿಸರ ದೈವಶ್ರದ್ಧೆ ಇವನಿಗಿರಲಿಲ್ಲ. ದೈವದ ಪ್ರಾಬಲ್ಯವನ್ನು ಇವನು ನಿರಾಕರಿಸಿ, ಮನುಷ್ಯನ ದುರಂತಕ್ಕೆ ಅವನ ದೌರ್ಬಲ್ಯವೇ ಕಾರಣವೆಂದು ಸಾರುತ್ತಾನೆ. ಈತ ವಾಸ್ತವವಾದಿ ನಾಟಕಕಾರನೂ ಹೌದು. ಮಾನವರು ಹೇಗಿರಬೇಕೋ ಹಾಗೆ ಸಾಫೊಕ್ಲಿಸ್ ಚಿತ್ರಿಸಿದರೆ, ಹೇಗಿದ್ದಾರೋ ಹಾಗೆ ಚಿತ್ರಿಸುತ್ತಾನೆ ಯೂರಿಪಿಡಿಸ್. ಇವನ ವಾಸ್ತವಿಕತೆ ಇಂದಿನ ಅರ್ಥದಲ್ಲಿ ವಾಸ್ತವಿಕತೆಯಿಲ್ಲದಿರಬಹುದು; ಆದರೆ ಈಸ್ಕಿಲಸ್, ಸಾಫೋಕ್ಲಿಸರ ಜಗತ್ತಿಗೆ ಹೋಲಿಸಿದರೆ ಇವನ ಜಗತ್ತು ಹೆಚ್ಚು ವಾಸ್ತವವಾಗಿ ತೋರುತ್ತದೆ.

ಯೂರಿಪಿಡಿಸನ ಮನೋವೈಜ್ಞಾನಿಕ ಒಳನೋಟ ಗಮನಾರ್ಹವಾದುದು. `ಮೊತ್ತಮೊದಲ ಮನೋವಿಜ್ಞಾನಿ ಎಂದು ಇವನನ್ನು ಕರೆಯಲಾಗಿದೆ. ಮಾನವ ಮನಸ್ಸಿನ ಆಳ ಎತ್ತರ ಬಿತ್ತರಗಳನ್ನು ಇವನಂತೆ ಅಭಿವ್ಯಕ್ತಿಸಿದವರು ವಿರಳ. ಕಾಮ, ಪ್ರೇಮಗಳ ಸಾಮಥ್ರ್ಯವನ್ನು ಇವನಂತೆ ಹಿಂದಿನವರು ನಿರೂಪಿಸಲಿಲ್ಲ. ಹಾಗೆಯೆ ` ಮನುಷ್ಯನಲ್ಲಿರುವ ತರ್ಕಾತೀತ ಶಕ್ತಿಗಳನ್ನು ಮೊದಲ ಬಾರಿಗೆ ದಾಖಲಿಸಿದವ ಯೂರಿಪಿಡಿಸ್. ನಮಗೆ ಅಜ್ಞಾತವಾದ ಎಷ್ಟೋ ವಿಷಯಗಳಿವೆ ಎಂಬುದನ್ನು ಸಾಕ್ರಟೀಸನಂತೆ ಇವನೂ ಒಪ್ಪುತ್ತಾನೆ.

`ಸಾಂಸಾರಿಕ ನಾಟಕವನ್ನು ಕಂಡುಹಿಡಿದವ ಯೂರಿಪಿಡಿಸ್ ಎನ್ನಲಾಗಿದೆ. ಇವನು `ಕವಿಗಳಲ್ಲೆಲ್ಲ ರುದ್ರತಮ ಎಂಬುದು ಅರಿಸ್ಟಾಟಲನ ಉಕ್ತಿ. ಯೂರಿಪಿಡಿಸ್‍ನ `ಎಷ್ಟೊ ನಾಟಕಗಳು ದುರಂತನಾಟಕಗಳೇ ಅಲ್ಲ, ದುರಂತ ವೈನೋದಿಕಗಳು ಎಂಬ ಹೇಳಿಕೆಯೂ ಉಂಟು. ತನ್ನದೇ ರೀತಿಯಲ್ಲಿ ಈತ ನೀತಿವಾದಿಯೂ ಹೌದು.

ಸಾಂಪ್ರದಾಯಿಕ ರಂಗತಂತ್ರಗಳನ್ನು ಈತ ಕೆಲವೊಮ್ಮೆ ಮೀರುತ್ತಾನೆ. ನಾಟಕದ ಸಮಸ್ಯೆಯ ಪರಿಹಾರಕ್ಕಾಗಿ `ಯಂತ್ರೋತ್ಪನ್ನ ದೇವತೆಯ ತಂತ್ರವನ್ನು ಇವನು ಬಳಕೆಗೆ ತಂದ. ಈತ ಸುಮಾರು 92 ನಾಟಕಗಳನ್ನು ಬರೆದಿದ್ದಾನೆ. ಅವುಗಳಲ್ಲಿ 18 ಮಾತ್ರ ಉಪಲದ್ಧವಾಗಿವೆ. ಇವನ ಕೆಲವು ಮುಖ್ಯ ನಾಟಕಗಳು: ಮೀಡಿಯ, ದ ಬ್ಯಾಕೆ, ಹಿಪ್ಪೋಲಿಟಿಸ್, ಎಲೆಕ್ಟ್ರಾ, ಅಲ್‍ಸೆಸ್ಫಿಸ್, ಆಂಡ್ರೊಮೆಕೆ, ಹೆಕೂಟ, ಟ್ರೋಜನ್ ವಿಮನ್ ಮತ್ತು ಹೆಲೆನ್.

(ಸಿ.ಪಿ.ಕೆ.)

`ದಿ ಬ್ಯಾಕೆ ನಾಟಕವನ್ನು ಬರೆದಾಗ ಯೂರಿಪಿಡಿಸ್‍ಗೆ ಎಪ್ಪತ್ತು ವರ್ಷ ದಾಟಿತ್ತು. ಅವನು ತೀರಿಕೊಂಡ ಮೇಲೆ ಅವನ ಮಗ ಪ್ರದರ್ಶಿಸಿದ.

ಇನ್ನಿಬ್ಬರು ನಾಟಕಕಾರರ ನಾಟಕಗಳಲ್ಲಿ ದುಷ್ಟರಿಗೂ ಒಂದು ಘನತೆ ಇದೆ. ಹೋಮನನ ಮಹಾಕಾವ್ಯಗಳಲ್ಲಿ ಅತಿ ಮಾನವರಾಗಿದ್ದವರು ಹಲವರು ಯೂರಿಪಿಡೀಸ್‍ನ ನಾಟಕಗಳಲ್ಲಿ ಸಣ್ಣ ಮನುಷ್ಯರಾಗುತ್ತಾರೆ. ಕುಯುಕ್ತಿಗಿಳಿಯುತ್ತಾರೆ. ದೇವತೆಗಳ ವಿಷಯದಲ್ಲಿಯೂ ಇವನು ಅಂಥ ಗೌರವವೇನನ್ನೂ ತೋರಿಸಿಲ್ಲ. ಪೌರಾಣಿಕ ಸಾಮಗ್ರಿಯನ್ನು ಐರನಿಯೊಡನೆ ಬಳಸುವ ಮೊದಲನೆಯ ನಾಟಕಕಾರ ಯೂರಿಪಿಡಿಸ್. ದೇವತೆಗಳ ನಡತೆಯನ್ನು ಐರನಿಯ ಬೆಳಕಿನಲ್ಲಿ ವಿಶ್ಲೇಷಣೆ ಮಾಡುತ್ತಾನೆ. ಹಲವೊಮ್ಮೆ ಮೂಲಕಥೆಯ ಮುಕ್ತಾಯವನ್ನು ಉಳಿಸಿಕೊಳ್ಳುತ್ತಾನೆ. ಆದರೆ ಅದರ ಅಸಂಬದ್ಧತೆಯನ್ನು ತೋರಿಸುತ್ತಾನೆ. ಕಾಲಜ್ಞರು, ದೈವಜ್ಞರ ವಿಷಯದಲ್ಲಿ ಇವನದು ಸಂಪೂರ್ಣವಾಗಿ ವೈಚಾರಿಕ ನಿಲುವು.

ಮನುಷ್ಯ-ಅದೃಶ್ಯ ಶಕ್ತಿಗಳ ಸಂಬಂಧ ಯೂರಿಪಿಡೀಸನ್ ನಾಟಕದ ಒಂದು ಮುಖ್ಯ ವಸ್ತುವಾದರೆ ಮನುಷ್ಯನೊಳಗಿರುವ ರಾಗಗಳ ಶಕ್ತಿ ಇನ್ನೊಂದು ಮುಖ್ಯ ವಸ್ತು ಮನುಷ್ಯನ ರಾಗಗಳು ಎಷ್ಟು ಪ್ರಚಂಡವಾದವು. ಅವುಗಳಿಗೆ ವಿವೇಕ ಮತ್ತು ಸಂಯಮಗಳ ಕಡಿವಾಣ ಹಾಕದಿದ್ದರೆ ಅವು ಮನುಷ್ಯನ ಬಾಳನ್ನು ಹೇಗೆ ಬಂಡೆಗಪ್ಪಳಿಸಿ ನುಚ್ಚುನೂರು ಮಾಡುತ್ತವೆ ಎಂಬುದು ಅವನ ಮುಖ್ಯ ಕಾಳಜಿ. ಇವು ತರ್ಕಕ್ಕೆ ಸಿಕ್ಕುವುದಿಲ್ಲ ಎನ್ನುವುದನ್ನು ಗುರುತಿಸಿದ. ಈ ರಾಗಗಳಲ್ಲಿ ಕಾಮದ ಅದಮ್ಯ ಶಕ್ತಿಯನ್ನು ಚಿತ್ರಿಸಿದ. ಇವನು ಸ್ತ್ರೀದ್ವೇಷಿ ಎಂಬ ಮಾತು ಅವನ ಜೀವಮಾನದ ಕಾಲದಲ್ಲೇ ಕೇಳಿಬರುತ್ತಿತ್ತು. ಆದರೆ, ಮೀಡಿಯಳಂಥ ಭಯಂಕರ ಹೆಣ್ಣನ್ನು ಸೃಷ್ಟಿಸಿದ ಈ ನಾಟಕಕಾರನೇ ಹೆಕೂಬ, ಆ್ಯಂಡ್ರೊ ಮೆರೆಯುವಂತೆ ಗಂಡಸಿನ ಕ್ರೌರ್ಯಕ್ಕೆ ತುತ್ತಾದ ಹೆಂಗಸರನ್ನು ಚಿತ್ರಿಸಿದ ನಾಗರಿಕತೆ ಯಾವುದು, ಅನಾಗರಿಕತೆ ಯಾವುದು ಎಂಬ ಪ್ರಶ್ನೆಯನ್ನೂ ಎತ್ತಿದ.

ಯೂರಿಪಿಡಿಸನ ನಾಟಕದಲ್ಲಿ ಮತ್ತೆ ಮತ್ತೆ `ಮೆಲೊಡ್ರಾಮ ಕಾಣುತ್ತದೆ. ಸಫೋಕ್ಲಿಸನ ನಾಟಕಗಳ ರಚನಾಕೌಶಲವೂ ಇವನಲ್ಲಿ ವಿರಳ. ಮೇಳದ ಪ್ರಾಧಾನ್ಯ ಇವನ ನಾಟಕಗಳಲ್ಲಿ ಬಹು ಕಡಿಮೆ. ಇನ್ನಿಬ್ಬರು ನಾಟಕಕಾರರಲ್ಲಿ ಕಾಣದ ಹಾಸ್ಯದ ಅಂಶ ಇವನ ನಾಟಕಗಳಲ್ಲಿ ಕಾಣುತ್ತದೆ.

(ಎಲ್.ಎಸ್.ಎಸ್.)