ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯೂರಿಯ

ವಿಕಿಸೋರ್ಸ್ದಿಂದ

ಯೂರಿಯ ಜೀವಿಗಳ ಉಪಾಪಚನಕ್ರಿಯೆಗಳಲ್ಲಿ ನೈಟ್ರೋಜನ್‍ಯುಕ್ತ ಸಂಯುಕ್ತಗಳ ವಿಭಜನೆಯಿಂದಾಗಿ ಉಂಟಾಗುವ ವಸ್ತುಗಳ ಪೈಕಿ ಮುಖ್ಯವಾದ್ದು. ರಾಸಾಯನಿಕ ಅಣುಸೂತ್ರ ಊ2ಓ.ಅಔ.ಓಊ2. ಮೂತ್ರದಲ್ಲಿ ಇದು ಅತಿ ಹೆಚ್ಚಿನ ಮೊತ್ತದಲ್ಲಿ ಇರುತ್ತದೆ. ಮನುಷ್ಯನೊಬ್ಬ 24 ಗಂಟೆಗಳ ಅವಧಿಯಲ್ಲಿ ಸು. 30 ಗ್ರಾಮ್ ಯೂರಿಯವನ್ನು ಹೊರಹಾಕುತ್ತಾನೆ. ಇದು ಹಾಲು, ರಕ್ತ, ಬೆವರು, ಕಣ್ಣೀರುಗಳಲ್ಲೂ ಇರುತ್ತದೆ. ಆದರೆ ಸಸ್ಯಸಾಮ್ರಾಜ್ಯದಲ್ಲಿ ಕೆಲವೊಂದು ಸಂದರ್ಭಗಳನ್ನು ಬಿಟ್ಟರೆ ಯೂರಿಯಕ್ಕೆ ಸ್ಥಾನವಿಲ್ಲವೆಂದೇ ಹೇಳಬಹುದು. ಝೂಲೆ ಎಂಬ ಫ್ರೆಂಚ್ ವಿಜ್ಞಾನಿ ಮೂತ್ರದಿಂದ ಸ್ಫಟಿಕಾಕೃತಿಯ ಯೂರಿಯವನ್ನು ಬೇರ್ಪಡಿಸಿದ (1773).

ಸಾವಯವ ರಾಸಾಯನ ವಿಜ್ಞಾನದಲ್ಲಿ ಯೂರಿಯಕ್ಕೆ ಒಂದು ಐತಿಹಾಸಿಕ ಸ್ಥಾನ ಉಂಟು. ಇದು ಪ್ರಪ್ರಥಮವಾಗಿ ಸಂಶ್ಲೇಷಿತವಾದ ಸಾವಯವಸಂಯುಕ್ತ. ಜೀವಿಗಳ ಸಹಾಯವಿಲ್ಲದೆ ಸಾವಯವ ಸಂಯುಕ್ತಗಳನ್ನು ತಯಾರಿಸುವುದು ಸಾಧ್ಯವೇ ಇಲ್ಲ ಎಂದು ಬಲು ಹಿಂದಿನ ಕಾಲದಿಂದಲೂ ನಂಬಲಾಗಿತ್ತು. ಆದರೆ ಜರ್ಮನ್ ರಸಾಯನವಿಜ್ಞಾನಿ ಫ್ರೀಡ್ರೀಚ್ ವೋಹ್ಲರ್ (1800-82) ಎಂಬಾತ ಅಮೋನಿಯಮ್ ಸಯನೇಟ್ ಎಂಬ ಸಂಯುಕ್ತವನ್ನು ಕಾಸಿ ಪ್ರಯೋಗಶಾಲೆಯಲ್ಲೆ ಯೂರಿಯವನ್ನು ತಯಾರಿಸಿ (1828) ಈ ನಂಬುಗೆಯನ್ನು ಸುಳ್ಳು ಮಾಡಿದ. ಈ ಸಂಶೋಧನೆಯೇ ಸಂಶ್ಲೇಷಣಾತ್ಮಕ ಸಾವಯವರಸಾಯನ ವಿಜ್ಞಾನದ ಉಗಮಕ್ಕೆ ಕಾರಣವಾಯಿತು.

ಯೂರಿಯ ಸ್ಫಟಿಕಾಕೃತಿಯ ಬಿಳಿಬಣ್ಣದ ವಸ್ತು. ಇದರ ದ್ರವಬಿಂದು 132.70ಸೆ. ಇದು ನೀರು, ಆಲ್ಕೋಹಾಲ್‍ಗಳಲ್ಲಿ ಸುಲಭವಾಗಿ ಕರಗುತ್ತದೆ. ದ್ರವರೂಪದ ಕಾರ್ಬನ್ ಡೈಆಕ್ಸೈಡ್ ಮತ್ತು ಅಮೋನಿಯಗಳನ್ನು ಅಧಿಕ ಒತ್ತಡದಲ್ಲಿ 160-2000 ಸೆ. ಉಷ್ಣತೆಯಲ್ಲಿ ಕಾಯಿಸಿದಾಗ ಅಮೋನಿಯಮ್ ಕಾರ್ಬಮೇಟ್ ಉಂಟಾಗುತ್ತದೆ. ಇದು ಕಡಿಮೆ ಒತ್ತಡದಲ್ಲಿ ನಿರ್ಜಲೀಕರಣಗೊಂಡು ಯೂರಿಯ ಫಲಿಸುತ್ತದೆ. ಇದೇ ವಿಧಾನದಿಂದ ಔದ್ಯೋಗಿಕವಾಗಿ ಯೂರಿಯ ತಯಾರಾಗುತ್ತದೆ. ಕ್ಯಾಲ್ಸಿಯಮ್ ಸಯನೈಡ್‍ನ್ನು ಕಾರ್ಬನ್ ಡೈಆಕ್ಸೈಡಿನ ದ್ರಾವಣದಿಂದ ಜಲೀಕರಿಸಿಯೂ ಯೂರಿಯವನ್ನು ತಯಾರಿಸುತ್ತಾರೆ.

ಯೂರಿಯವನ್ನು ಗೊಬ್ಬರವಾಗೂ ದನಗಳಿಗೆ ಆಹಾರವಾಗೂ ಉಪಯೋಗಿಸುವುದಿದೆ. ಇದು ಫಾರ್ಮಾಲ್ಡಿಹೈಡಿದೊಂದಿಗೆ ಸೇರಿ ನಾನಾ ಪ್ರಕಾರದ ಉತ್ತಮ ದರ್ಜೆಯ ಪ್ಲಾಸ್ಟಿಕುಗಳನ್ನು ಕೊಡುತ್ತದೆ. ಇದನ್ನು ಅಂಟು, ಲೀನಕಾರ, ಸ್ಪೋಟಕವಸ್ತು, ರಾಸಾಯನಿಕ ಮಧ್ಯವರ್ತಿವಸ್ತುಗಳು ಹಾಗೂ ಔಷಧಗಳನ್ನು ತಯಾರಿಸುವಲ್ಲಿ ಬಳಸುತ್ತಾರೆ.

(ನೋಡಿ- ಅಮೈನೋ-ಆಮ್ಲಗಳು) (ಎಸ್.ವೈ.ಎ.)