ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯೇಟ್ಸ್, ವಿಲಿಯಮ್ ಬಟ್ಲರ್
ಯೇಟ್ಸ್, ವಿಲಿಯಮ್ ಬಟ್ಲರ್ 1865-1939. ನೊಬೆಲ್ ಪ್ರಶಸ್ತಿ ಪಡೆದ ಐರಿಷ್ ಸಂಜಾತ ಇಂಗ್ಲಿಷ್ ಕವಿ. ನಾಟಕಕಾರ, ಅನುಭಾವಿ. ಐರಿಷ್ ಸಾಹಿತ್ಯದ ಪುನರುಜ್ಜೀವನದಲ್ಲಿ ಮಹತ್ತರ ಪಾತ್ರವಹಿಸಿದ ನೇತಾರ. ಈತ 1865 ಜೂನ್ 13ರಂದು ಡಬ್ಲಿನ್ ಕೌಂಟಿಯ ಸ್ಯಾಂಡಿಮೌಂಟ್‍ನಲ್ಲಿ ಪ್ರಾಟೆಸ್ಟಂಟ್ ಕುಟುಂಬವೊಂದರಲ್ಲಿ ಜನಿಸಿದ. ಈತನ ತಂದೆ ಜಾನ್ ಬಟ್ಲರ್ ಯೇಟ್ಸ್ ದೊಡ್ಡ ವಕೀಲನೂ ಚಿತ್ರಕಲಾವಿದನೂ ಆಗಿದ್ದ. ಈತನ ತಾಯಿ ಪೊಲೆಕ್ಸ್‍ಫೆನ್. ತಾತ ಮುತ್ತಾತಂದಿರು ಆಂಗ್ಲಿಕನ್ ಚರ್ಚ್‍ನ ಅರ್ಚಕರಾಗಿದ್ದರು. 1874ರಲ್ಲಿ ಈ ಕುಟುಂಬದವರು ಲಂಡನ್ನಿಗೆ ಬಂದು ನೆಲೆಸಿದರು. ಈತನ ಬಾಲ್ಯ ಲಂಡನ್‍ನಲ್ಲಿ ಕಳೆಯಿತು. ಹ್ಯಾಮರ್‍ಸ್ಮಿತ್‍ನ ಗೊಡೋಲ್ಫಿನ್ ಶಾಲೆಯಲ್ಲೂ ಅನಂತರ ಕೌಂಟಿಸ್ಲಿಗೋದ ಶಾಲೆಯಲ್ಲೂ ಪ್ರಾಥಮಿಕ ವಿದ್ಯಾಭ್ಯಾಸವಾಯಿತು. ಸ್ಲಿಗೋ ಈತನ ತಂದೆತಾಯಿಯರ ಹುಟ್ಟೂರು. ಕವಿಗೂ ಆ ಊರು ಮನೆಗಳು ತುಂಬಾ ಪ್ರಿಯವಾಗಿದ್ದುವು. ತನ್ನ 15ನೆಯ ವಯಸ್ಸಿನಲ್ಲಿ 1880ರಲ್ಲಿ ಡಬ್ಲಿನ್‍ಗೆ ಹಿಂದಿರುಗಿದ. ಯೇಟ್ಸ್ ಇಲ್ಲಿ ಪ್ರೌಢಶಾಲೆಯ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಲ್ಲದೆ ಒಂದು ಕಲಾಶಾಲೆಯಲ್ಲಿಯೂ ಕೆಲವು ಕಾಲ ಕಲಾಭ್ಯಾಸ ಮಾಡಿದ. ಕ್ರಮೇಣ ಇವನ ಆಸಕ್ತಿ ಸಾಹಿತ್ಯದ ಕಡೆಗೆ ತಿರುಗಿತು. ಇಲ್ಲಿಂದ ಮುಂದೆ ಇವನ ಜೀವನ ಹಲವಾರು ದಿಕ್ಕುಗಳಲ್ಲಿ ಮುಂದುವರಿಯಿತು. ಡಬ್ಲಿನ್ ಮತ್ತು ಲಂಡನ್‍ಗಳಲ್ಲಿ ಹಲವಾರು ಸಾಹಿತ್ಯ ಸಂಘಗಳನ್ನು ಆರಂಭಿಸಿದ. 1889ರಲ್ಲಿ ಈತ ಮಾಡ್ ಗಾನ್ ಎಂಬಾಕೆಯನ್ನು ಭೇಟಿ ಆದ. ಆಕೆ ಅಪರಿಮಿತ ಸುಂದರಿಯೂ ರಾಷ್ಟ್ರೀಯವಾದಿಯೂ ಆಗಿದ್ದಳು. ಆಕೆಯನ್ನು ಯೇಟ್ಸ್ ಪ್ರೇಮಿಸಿದ ಆಕೆ ಇವನ ಅನೇಕ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದವಳೂ ಆಗಿದ್ದಳು. ಯೇಟ್ಸ್ ಆಕೆಯ ಭೇಟಿಯನ್ನು 'ನನ್ನ ಜೀವನದ ಸಮಸ್ಯೆಗಳ ಆರಂಭ ಎಂದು ಹೇಳಿಕೊಂಡಿದ್ದಾನೆ. ಆಕೆ 1903ರಲ್ಲಿ ಮೇಜರ್ ಜಾನ್ ಮೆಕ್‍ಬ್ರೈಡ್ ಎಂಬವನನ್ನು ವಿವಾಹವಾದಳು. ರಾಜಕೀಯ ಅತಿರೇಕವಾದಿಯಾದ ಆಕೆ ಯೇಟ್ಸ್‍ನಿಂದ ಪೂರ್ಣವಾಗಿ ಬೇರೆಯಾದಳು. ಆದರೆ ಯೇಟ್ಸ್‍ನ ಕಾವ್ಯದಲ್ಲಿ ಆಕೆ ಒಂದು ರೂಪಕವಾಗಿ ಸೇರಿಹೋಗಿದ್ದಾಳೆ.
ಯೇಟ್ಸ್ ಆ ಕಾಲದ ಪ್ರಸಿದ್ಧ ಮಾನವತಾವಾದಿ ಮತ್ತು ಅತೀಂದ್ರಿಯವಾದಿಗಳಾದ ಮೇಡಮ್ ಹೆಲೆನ ಪೆಟ್ರೋವ್ನ್ ಬ್ಲಾವಟ್‍ಸ್ಕಿ (1831-91) ಮತ್ತು ಮೆಗ್ರಗರ್ ಮ್ಯಾದರ್ಸ್‍ರ ಪ್ರಭಾವಕ್ಕೆ ಒಳಗಾಗಿದ್ದ. ಅವರ ಸಿದ್ಧಾಂತಗಳು ಈತನಿಗೆ ತನ್ನ ಅತೀಂದ್ರಿಯವಾದವನ್ನು ರೂಪಿಸಲು ಸಹಾಯಕವಾದವು.
1904ರಲ್ಲಿ 'ಅಬ್ಟೆ ಥಿಯೇಟರ್ ಅನ್ನು ಆರಂಭಿಸಿದ ಮೇಲೆ ಯೇಟ್ಸ್ ತನ್ನನ್ನು ಐರ್ಲೆಂಡಿನ ನಾಟಕ ಚಳವಳಿಯಲ್ಲಿ ಗಾಢವಾಗಿ ತೊಡಗಿಸಿಕೊಂಡ; ತನ್ನ ಹೆಚ್ಚಿನ ಕಾಲವನ್ನು ಅದಕ್ಕಾಗಿ ವಿನಿಯೋಗಿಸಿದ. 1916ರ ಈಸ್ಟರ್ ದಂಗೆಯನ್ನು ಬ್ರಿಟಿಷರು ಅತ್ಯಂತ ಕ್ರೂರವಾಗಿ ದಮನ ಮಾಡಿದ್ದರ ಪರಿಣಾಮವಾಗಿ ಯೇಟ್ಸ್‍ನ ಪ್ರಸಿದ್ಧವಾದ 'ರಾಜಕೀಯ ಕವಿತೆಗಳು ರಚನೆಗೊಳ್ಳುವಂತಾಯಿತು. ಈತ 1917ರಲ್ಲಿ ಜಾರ್ಜೀ ಹೈಡ್‍ಲೀಸ್ ಎಂಬ ಓರ್ವ ಇಂಗ್ಲಿಷ್ ಮಹಿಳೆಯನ್ನು ಮದುವೆಯಾದ. ತನ್ನ ಹೆಂಡತಿಯ ಸ್ವಯಂಚಾಲಿತ ಬರೆಹವನ್ನು ಆಧರಿಸಿ 'ಎ ವಿಷನ್ ಕವಿತೆಯನ್ನು ಬರೆದ.
ಐರಿಷ್ ಸ್ವತಂತ್ರರಾಷ್ಟ್ರ ಸ್ಥಾಪನೆಯಾದ ಮೇಲೆ ಸೆನೆಟ್‍ನಲ್ಲಿ ಯೇಟ್ಸ್ ಆರು ವರ್ಷ ಅದರ ಸದಸ್ಯನಾಗಿ ಸೇವೆ ಸಲ್ಲಿಸಿದ. ಅವಧಿ ಮುಗಿದ ಮೇಲೆಯೂ ಐರ್ಲೆಂಡಿನ ಏಳಿಗೆಗಾಗಿ ಅನೇಕ ಯೋಜನೆಗಳಲ್ಲಿ ತೊಡಗಿಕೊಂಡ. ಆದರೆ ಒಂದಾದ ಮೇಲೊಂದರಂತೆ ಬಂದ ಸರ್ಕಾರಗಳ ವಿಷಯದಲ್ಲಿ ಈತ ಅತೃಪ್ತನಾದ. ತನ್ನ `ಸೆಕೆಂಡ್ ಕಮಿಂಗ್ ಎಂಬ ಕವನ ಈ ಭಾವನೆಯನ್ನೂ ಭವಿಷ್ಯದ್ದರ್ಶನವನ್ನೂ ಅಭಿವ್ಯಕ್ತಿಸುತ್ತದೆ. ಯೇಟ್ಸ್ ದಂಪತಿಗಳಿಗೆ ಒಬ್ಬ ಮಗ, ಒಬ್ಬ ಮಗಳು ಇದ್ದರು. ತನ್ನ ಜೀವಿತದ ಕಡೆಗಾಲದಲ್ಲಿ ಯೇಟ್ಸ್ ತನ್ನ ಕುಟುಂಬದೊಂದಿಗೆ ಕೂಲೆಯಲ್ಲಿದ್ದ ಲೇಡಿ ಗ್ರೆಗರಿಯ ಮನೆಯ ಬಳಿಯಿದ್ದ ಟವರ್‍ನಲ್ಲಿ ವಾಸಿಸಿದ. ಇದು ಇವನ `ದ ಟವರ್ ನಂಥ ಮಹತ್ತ್ವಪೂರ್ಣ ಕವನಗಳಲ್ಲಿ ರೂಪಕವಾಗಿ ಬಳಕೆಯಾಗಿದೆ. ಯೇಟ್ಸ್ 1939 ಜನವರಿ 28ರಂದು ದಕ್ಷಿಣ ಫ್ರಾನ್ಸ್‍ನಲ್ಲಿ ನಿಧನಹೊಂದಿದ. ಎರಡನೆಯ ಮಹಾಯುದ್ಧ ನಿಂತ ಅನಂತರ ಇವನ ಅಸ್ಥಿಯನ್ನು ತಾಯ್ನಾಡಾದ ಐರ್ಲೆಂಡಿಗೆ ತಂದು, ಇವನೇ ತನ್ನ ಒಂದು ಕವನದಲ್ಲಿ ಆಶಿಸಿದಂತೆ, ಸ್ಲಿಗೋ ಹತ್ತಿರ `ಬೆನ್‍ಬುಲ್‍ಬೆನ್‍ನಲ್ಲಿ ಸಮಾಧಿ ಮಾಡಲಾಯಿತು.
ಯೇಟ್ಸ್‍ನ ಕಾವ್ಯವನ್ನು ಎರಡು ಘಟ್ಟಗಳಾಗಿ ರೂಪಿಸಿಕೊಳ್ಳಬಹುದು: ಒಂದು, 1918ರವರೆಗಿನ ಕಾವ್ಯಸೃಷ್ಟಿ; ಎರಡು, 1918-39ರವರೆಗಿನ ಕಾವ್ಯಸೃಷ್ಟಿ. ಎರಡನೆಯ ಘಟ್ಟದಲ್ಲಿ ಇವನ ಕಾವ್ಯದ ಮೇಲೆ ಎಲಿಯಟ್ಟನ ಕಾವ್ಯ ಮತ್ತು ವಿಮರ್ಶೆಗಳು ಗಾಢವಾಗಿ ಪ್ರಭಾವ ಬೀರಿವೆ. ಈ ಪ್ರಭಾವದ ಕಾರಣದಿಂದ ತನ್ನ ಕಾವ್ಯ `ಹೆಚ್ಚು ಶಕ್ತಿಯುತವಾದದ್ದಾಯಿತು ಎಂದು ಯೇಟ್ಸ್ ಸ್ವತಃ ಒಂದು ಕಡೆ ಹೇಳಿಕೊಂಡಿದ್ದಾನೆ. ಐರ್ಲೆಂಡಿನ ಕನಸು ಯೇಟ್ಸ್‍ನ ಕಾವ್ಯದ ಬೆಳವಣಿಗೆಗೆ ಮೂಲ ಪ್ರಚೋದಕ ಶಕ್ತಿಯಾಯಿತು. ಐರಿಷ್ ರಾಷ್ಟ್ರೀಯತೆಯ ಸಂದರ್ಭದಲ್ಲಿ ಯೇಟ್ಸ್ ತನ್ನ ಸ್ವಂತಿಕೆಯನ್ನು ಕಂಡುಕೊಳ್ಳುವ ಪ್ರಯತ್ನಮಾಡಿದ. ಐರಿಷ್ ಸ್ವಾತಂತ್ರ್ಯ ಚಳವಳಿಗೆ, ಕೇವಲ ಇಂಗ್ಲೆಂಡನ್ನು ದ್ವೇಷಿಸುವುದನ್ನು ಬಿಟ್ಟು ಹೆಚ್ಚು ಅರ್ಥಪೂರ್ಣವಾಗಲು ಶ್ರಮಿಸಿದ. `ಈಸ್ಟರ್ ದಂಗೆ ಮಾಡಿದ ವಿನಾಶವನ್ನು ವಿಷಾದದಿಂದ ಕಂಡ.
ಯೇಟ್ಸ್ ತನ್ನದೇ ಆದ ಒಂದು ಮಿಥಿಕ್ ಪ್ರಪಂಚವನ್ನು ಮತ್ತು ಸಿಂಬಾಲಿಸಂ ಅನ್ನು ಸೃಷ್ಟಿಸಿಕೊಂಡು. ಅದಕ್ಕೆ ತನ್ನ ಕಾವ್ಯದಲ್ಲಿ ಅಭಿವ್ಯಕ್ತಿಕೊಟ್ಟ. ಐರ್ಲೆಂಡ್ ಮೇಲಿನ ಇವನ ಅಭಿಮಾನ ಚಿಕ್ಕ ವಯಸ್ಸಿನಿಂದಲೇ ಬೆಳೆದು ಬಂದದ್ದು. ರಾಷ್ಟ್ರೀಯ ಸಾಹಿತ್ಯದ ಅವಶ್ಯಕತೆಯನ್ನು ಇವನು ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿಯೇ ಕಂಡುಕೊಂಡಿದ್ದ. ಹೊಸ ಐರಿಷ್ ಕವಿಗಳ ಕಾವ್ಯಸಂಕಲನ `ಪೊಯಮ್ಸ್ ಅಂಡ್ ಬ್ಯಾಲೆಡ್ಸ್ ಆಫ್ ಯಂಗ್ ಐರ್ಲೆಂಡ್ 1888ರಲ್ಲಿ ಪ್ರಕಟವಾಯಿತು. 1889ರಲ್ಲಿ ಯೇಟ್ಸ್‍ನ `ದ ವಾಂಡರಿಂಗ್ಸ್ ಆಫ್ ಓಷೇನ್ ಮತ್ತು ಇತರ ಕವಿತೆಗಳು ಪ್ರಕಟಗೊಂಡಿತು. ಇದರಲ್ಲಿ ಪ್ರಥಮ ಬಾರಿಗೆ ಐರಿಷ್ ಜನಪದವು ಆಧುನಿಕ ಪ್ರಜ್ಞೆಯಲ್ಲಿ ಅಭಿವ್ಯಕ್ತಿಗೊಂಡಿರುವುದನ್ನು ಕಾಣುತ್ತೇವೆ. ಅಲ್ಲಿಂದ ಮುಂದೆ 19ನೆಯಶತಮಾನದ ಕೊನೆಯವರೆಗೆ `ಭಾವನೆಗಳನ್ನು ಬಡಿಯುವ ಒಂದು ಕಾಯಕದಲ್ಲಿ ತೊಡಗಿದ. ಈ ಕಾಲಾವಧಿಯ ಇವನ ಕಾವ್ಯದಲ್ಲಿ ಸಂಕೇತಗಳ ಗಾಢವಾದ ಬಳಕೆ. ಆಧ್ಯಾತ್ಮಿಕತೆಗಳನ್ನು ಕಾಣುತ್ತೇವೆ. 19ನೆಯ ಶತಮಾನದ 90ರ ದಶಕದಲ್ಲಿ ತನ್ನದೇ ಆದ ಸಂಕೇತಗಳನ್ನು ರೂಪಿಸುವ ಪ್ರಯತ್ನದಲ್ಲಿ ತೊಡಗಿದ. ಈ ಸಂಕೇತಗಳು (ಗುಲಾಬಿ, ಲಿಲಿ ಅಥವಾ ನಕ್ಷತ್ರ) ಇವನ ಕಾವ್ಯದುದ್ದಕ್ಕೂ ಹೆಚ್ಚು ಹೆಚ್ಚಿನ ಅರ್ಥಗಳನ್ನು ಪಡೆದುಕೊಂಡು ಪ್ರಯೋಗವಾಗುತ್ತವೆ. ತನ್ನ `ವಿಂಡ್ ಅಮಂಗ್ ದ ರೀಡ್ಸ್‍ನಲ್ಲಿ ವಸ್ತುಗಳು, ಧೋರಣೆಗಳು, ರೂಪಕಗಳು, ಪ್ರತಿಮೆಗಳು ಅರ್ಥಪೂರ್ಣಗುಚ್ಛಗಳಾಗಿ ಬರುತ್ತವೆ. ಈ ಕೃತಿ ನವ್ಯತೆಯ ಆಗಮನವನ್ನು ಮುನ್ಸೂಚಿಸುವಂತಿದೆ. ಇವನ ಕಾವ್ಯ ವಿರುದ್ಧ ಶಕ್ತಿಗಳ ಕರ್ಷಣವನ್ನು ಚಿತ್ರಿಸುತ್ತದೆ. ವ್ಯಕ್ತಿಯ ಅಂತರಂಗದಲ್ಲಿ `ನಾನೇನಾಗಿದ್ದೇನೆ ಮತ್ತು ನಾನೇನಾಗಬೇಕು ಎಂಬುದರ ಘರ್ಷಣೆ ನಡೆಯುತ್ತದೆ. ಪ್ರಜ್ಞೆ ಎನ್ನುವುದು ವೈರುಧ್ಯಗಳ ಘರ್ಷಣೆ; ಈ ವೈರುಧ್ಯಗಳಾಚೆ ಇರುವುದು `ಏಕತೆ. ಈ ವಿಚಾರಗಳ ವಿವೇಚನೆ ಇವನ `ಎ ವಿಷನ್ ಕೃತಿಯಲ್ಲಿದೆ. ಯೇಟ್ಸ್‍ನಿಗೆ ವಯಸ್ಸಾದಂತೆ ಜೀವನಾಸಕ್ತಿ ಇನ್ನೂ ಚುರುಕಾಗುತ್ತ ಹೋಯಿತು. ಈತನ ಪ್ರಕಾರ ಮನುಷ್ಯ ಪೂರ್ಣನಲ್ಲ: ತನ್ನಲ್ಲಿಲ್ಲದ `ಪೂರ್ಣತೆಯನ್ನು ಪಡೆಯಲು ಹೋರಾಡುತ್ತಿರುವವನು.
ಯೇಟ್ಸ್ ಇಂಗ್ಲಿಷ್ ಸಾಹಿತ್ಯದ ಶ್ರೇಷ್ಠ ಕವಿಗಳಲ್ಲೊಬ್ಬ; ಬಹುಶಃ ಎಲಿಯಟ್ಟನ ಕಾವ್ಯದಷ್ಟೇ ಅರ್ಥಪೂರ್ಣವಾದ ಕಾವ್ಯ ರಚಿಸಿದವ. 1918ರ ಅನಂತರ ಸಾಯುವವರೆಗೆ ಬರೆದ ಈತನ ಕಾವ್ಯವನ್ನು ವಿಮರ್ಶಕರು ಶ್ರೇಷ್ಠ ಕಾವ್ಯವೆಂದು ಪರಿಗಣಿಸುತ್ತಾರೆ. ಯೇಟ್ಸ್‍ನ ಪ್ರಸಿದ್ಧ ಕವನಗಳಿವು: ಟು ಇಂಟರ್‍ಲೂಡ್ ಇನ್ ದ ಕಮಿಂಗ್ ಟೈಮ್ಸ್, ದ ವೈಲ್ಡ್ ಸ್ವಾನ್ಸ್ ಅಟ್ ಕೂಲೆ, ಈಸ್ತರ್ 1969. ಸೈಲಿಂಗ್ ಟು ಬೈಜಾಂಟಿಯಮ್, ದ ಟವರ್, ಕೂಲೆ, ಪಾರ್ಕ್ ಅಂಡ್ ಬೆಲಿಲಿ, ಅಂಡರ್ ಬೆನ್‍ಬುಲ್‍ಬೆನ್, ಕ್ರೇಜಿ ಜೇಮ್ ಪೊಯಮ್ಸ್. ಈತ 1923ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಬಹುಮಾನವನ್ನು ಪಡೆದ.
ಯೇಟ್ಸ್ ಒಳ್ಳೆಯ ನಾಟಕಕಾರನೂ ಆಗಿದ್ದ. ಸಣ್ಣ ವಯಸ್ಸಿನಿಂದಲೇ `ನಾಟಕದಲ್ಲಿ ಇವನಿಗೆ ಆಸಕ್ತಿಯಿತ್ತು. 1899ರಲ್ಲಿ ಐರಿಷ್ ನಾಟಕ ಚಳವಳಿಯನ್ನು ಲೇಡಿ ಗ್ರೆಗರಿಯೊಂದಿಗೆ ಆರಂಭಿಸಿದ. `ಅಬ್ಬೆ ಥಿಯೇಟರ್‍ನ ನಿರ್ದೇಶಕನಾದ. ತನ್ನ ಜೀವಿತದ ಕೊನೆಯವರೆಗೆ ನಾಟಕ ಚಳವಳಿಯ ಮುಂಚೂಣಿಯಲ್ಲಿದ್ದ. ಇವನು ನಾಟಕವನ್ನು ಕುರಿತು ಬರೆದಿರುವ ಮುಖ್ಯ ಪ್ರಬಂಧಗಳಿವು: ದ ಐರಿಷ್ ಲಿಟರೆರಿ ಥಿಯೇಟರ್ (1900) ಮತ್ತು ದ ಐರಿಷ್ ಡ್ರಮ್ಯಾಟಿಕ್ ಮೂವ್‍ಮೆಂಟ್ (1923). ಭಿನ್ನ ಶೈಲಿಗಳಲ್ಲಿ ಈತ ಸುಮಾರು ಮೂವತ್ತು ನಾಟಕಗಳನ್ನು ಬರೆದಿದ್ದಾನೆ. ಆರಂಭದ ನಾಟಕಗಳಾದ ದ ಲ್ಯಾಂಡ್ ಆಫ್ ಹಾಟ್ರ್ಸ್ ಡಿಸೈರ್ (1894), ದ ಕೌಂಟೆಸ್ ಕ್ಯಾಥಲೀನ್ (1889-99), ಷ್ಯಾಂಡೋಯಿ ವಾಟರ್ (1906)-ಇವು ಕಾವ್ಯಾತ್ಮಕವಾಗಿವೆ. 1900 ರಲ್ಲಿ ವಾಸ್ತವವಾದಿ ನಾಟಕಗಳನ್ನು ಬರೆಯುವ ಪ್ರಯತ್ನ ಮಾಡಿದ. ಕ್ಯಾಥಲೀನ್ ನೀ ಹೌಲಿಹಸ್, ದ ಪಾಟ್ ಆಫ್ ಬ್ರಾತ್ (1901 ಮತ್ತು 1902) - ಈ ಬಗೆಯ ನಾಟಕಗಳು. ದ ಗ್ರೀನ್ ಹೆಲ್‍ಮೆಟ್ (1910), ದ ಹಾಕ್ಸ್‍ವೆಲ್ (1916)-ಇವು ಐರಿಷ್ ಜನಪದ ಕಥೆಗಳ ಆಧಾರದ ಮೇಲೆ ರಚನೆಗೊಂಡ ನಾಟಕಗಳು. ಷರ್‍ಗೆಟೊರಿ (1938) ಈತ ರಚಿಸಿದ ಕೊನೆಯ ನಾಟಕ.
ಕವಿಯಾಗಿ ಮಾತ್ರವಲ್ಲ ಒಬ್ಬ ವ್ಯಕ್ತಿಯಾಗಿ ಸಹೃದಯನಾಗಿ ಯೇಟ್ಸ್ ನಡೆದುಕೊಳ್ಳುತ್ತಿದ್ದ ರೀತಿ ಅದರಣೀಯವಾದುದು. ಸರಳ, ನಿರಾಡಂಬರ ವ್ಯಕ್ತಿಯಾಗಿದ್ದ ಈತನಲ್ಲಿ ಯಾವ ಬಗೆಯ ಸ್ವಪ್ರತಿಷ್ಠೆಯಾಗಲಿ, ಮಾತ್ಸರ್ಯವಾಗಲಿ ಇರಲಿಲ್ಲ. ಕಿರಿಯ ಸಾಹಿತಿಗಳನ್ನು ಪ್ರಸಿದ್ಧಿಯ ಬೆಳಕಿಗೆ ಇನ್ನೂ ಬಾರದಿದ್ದ ಕವಿಗಳನ್ನೂ ಪ್ರೀತಿಯಿಂದ ಗಮನಿಸುತ್ತ ಪ್ರೋತ್ಸಾಹಿಸುತ್ತಿದ್ದ. ಯೋಗ್ಯ ಸಾಹಿತ್ಯ ಗುಣಗಳನ್ನು ಕಂಡಾಗ ಗುರುತಿಸಿ ಮೆಚ್ಚುತ್ತಿದ್ದ, ಓದಿ ಸಂತೋಷಪಡುತ್ತಿದ್ದ, ವಿಶ್ವವಿಖ್ಯಾತಿಗೂ ನೊಬೆಲ್ ಪಾರಿತೋಷಕಕ್ಕೂ ಕಾರಣವಾದ ಕವಿ ರವೀಂದ್ರನಾಥ ಠಾಕೂರರ `ಗೀತಾಂಜಲಿಯನ್ನು ಇಂಗ್ಲಿಷ್ ಸಹೃದಯ ಕಾವ್ಯಭಿಮಾನಿಗಳಿಗೆ ತದನಂತರ ಜಗತ್ತಿಗೆ ಮೊಟ್ಟ ಮೊದಲಬಾರಿಗೆ ಪರಿಚಯಮಾಡಿಕೊಟ್ಟವನು ಯೇಟ್ಸ್. ಗೀತಾಂಜಲಿಯನ್ನು ಬಲುವಾಗಿ ಮೆಚ್ಚಿಕೊಂಡಿದ್ದ ಈತ ಅದರ ಒಂದು ಪ್ರತಿಯನ್ನು ಸದಾ ತನ್ನ ಬಳಿ ಇರಿಸಿಕೊಂಡು ಎಲ್ಲೆಂದರಲ್ಲಿ ಸಮಯ ಸಿಕ್ಕಾಗ ಓದಿ ಆನಂದದಿಂದ ಕಣ್ಣೀರು ಮಿಡಿಯುತ್ತಿದ್ದನಂತೆ. ಗೀತಾಂಜಲಿಯ ಮೊದಲ ಆವೃತ್ತಿಗೆ ಈತ ಮುನ್ನುಡಿ ಬರೆದಿದ್ದಾನೆ. ಭಾರತೀಯರಾದ ಶ್ರೀ ಪುರೋಹಿತ್ ಎಂಬವರೊಂದಿಗೆ 10 ಉಪನಿಷತ್ತುಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದಾನೆ (ಟೆನ್ ಪ್ರಿನ್ಸಿಪಲ್ ಉಪನಿಷದ್ಸ್, 1916). (ಕೆ.ಬಿ.ಪಿ.)
ಯೇಟ್ಸ್ ರೊಮಾಂಟಿಕ್ ಕವಿಯಾಗಿ ಪ್ರಾರಂಭಿಸಿದ. 'ದ ಲೇಕ್ ಎಲ್ ಆಫ್ ಇನಿಸ್ ಫ್ರೀ ಅಪ್ಪಟ ರೊಮಾಂಟಿಕ್ ಕವನ. ಕ್ರಮೇಣ ವಾಸ್ತವ ಜಗತ್ತಿಗೆ ತಿರುಗಿದ. ನಾಡಿನ ಹೋರಾಟದಲ್ಲಿ ಭಾಗವಹಿಸಿದ. ಆಧುನಿಕ ಕವಿಯಾದ. ಎಲಿಯೆಟ್ ಮತ್ತು ಯೇಟ್ಸ್ ಸಮಕಾಲೀನರು. ತೀರ ವೈದೃಶ್ಯವಿದಾನ ಕವಿಗಳು. ಯೇಟ್ಸ್ ತೀವ್ರ ಭಾವನೆಗಳ ಕವಿ, ಅನ್ವೇಷಣೆಯ ಕವಿ. ಬದುಕನ್ನು ಗಾಢವಾಗಿ ಪ್ರೀತಿಸಿ ತೀವ್ರವಾಗಿ ಅನುಭವಿಸಿ ಬಾಳಿದ ಕವಿ. ಹೊಸ ಹೊಸ ಪ್ರತೀಕಗಳನ್ನು ಸೃಷ್ಟಿಸುತ್ತ ಹೋದ ಕವಿ. ಬದುಕಿನ ಎಲ್ಲ ತಳಮಳಗಳನ್ನೂ ಸ್ವೀಕರಿಸಿ, ತನ್ನೊಳಗಿನ ಅನಿಸಿಕೆ, ತಳಮಳ, ಆಸೆ, ನಿರಾಸೆಗಳು ಯಾವುದನ್ನು ಮುಚ್ಚಿಡದೆ, ಈ ಅನುಭವ ಪ್ರತಿಕ್ರಿಯೆಗಳಿಂದ ಬಹು ಶಕ್ತವಾದ ವ್ಯಕ್ತಿತ್ವದ ಕುಲುಮೆಯಲ್ಲಿ ಮೂಡಿ ಬಂದ ಕವನಗಳು ಯೇಟ್ಸ್‍ನವು. ಅವನ ಅನುಭವ ವಿಸ್ತಾರವಾದದ್ದು, ಸಮೃದ್ಧವಾದದ್ದು, ಅವನ ಪ್ರತಿಕ್ರಿಯೆಗಳು ತೀಕ್ಷ್ಣ. ಇವುಗಳನ್ನು ಪ್ರಾಮಾಣಿಕವಾಗಿ, ಅತ್ಯಂತ ನಿರ್ದಿಷ್ಟವಾಗಿ ಶಬ್ದಗಳಲ್ಲಿ ಸೆರೆಹಿಡಿಯುವ, ದೈತ್ಯ ಪ್ರತಿಭೆಯ ಪ್ರಯತ್ನ, ಇವನ ಕಾವ್ಯ. ಬಹು ಬಾರಿ ಯಶಸ್ವಿಯಾಗುತ್ತಾನೆ.
(ಎಲ್.ಎಸ್.ಎಸ್.)