ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯೇಸುಕ್ರಿಸ್ತ

ವಿಕಿಸೋರ್ಸ್ದಿಂದ

ಯೇಸುಕ್ರಿಸ್ತ ಕ್ರೈಸ್ತ ಧರ್ಮ ಸ್ಥಾಪಕ. ಈತ ಮನುಕುಲದ ಸಂರಕ್ಷಣೆಗಾಗಿ ಧರೆಗಿಳಿದು ಬಂದ ದೇವಪುತ್ರನೆಂದು ಕ್ರೈಸ್ತಧರ್ಮೀಯರ ನಂಬಿಕೆ. ಕ್ರೈಸ್ತ ಧರ್ಮಿಯರಲ್ಲದವರು ಕೂಡ ಯೇಸುಕ್ರಿಸ್ತನನ್ನು ಮಹಾನ್ ಬೋಧಕನೆಂದು ಒಪ್ಪುತ್ತಾರೆ. ಮನುಕುಲದ ಮೇಲೆ ಗಾಢ ಪ್ರಭಾವ ಬೀರಿದ ಧಾರ್ಮಿಕ ವ್ಯಕ್ತಿಗಳಲ್ಲಿ ಯೇಸುವಿನ ಹೆಸರು ಮೊದಲನೆಯ ಸ್ಥಾನದಲ್ಲಿ ನಿಲ್ಲುತ್ತದೆ ಎನ್ನಲಾಗಿದೆ ಎನ್ನಬಹುದು. ಇಸ್ಲಾಂ ಧರ್ಮಸ್ಥಾಪಕನಾದ ಮಹಮ್ಮದ್ ಪೈಗಂಬರ್ ಕೂಡ ಈತನನ್ನು ಮಹಾನ್ ಪ್ರವಾದಿ (ಪ್ರಾಫೆಟ್) ಎಂದು ನಂಬಿದ್ದ. ಯೇಸುವಿನ ಅನೇಕ ಆಲೋಚನೆಗಳನ್ನು ಆತ ತನ್ನ ಧರ್ಮಬೋಧನೆಯಲ್ಲಿ ಅಳವಡಿಸಿಕೊಂಡಿದ್ದಾನೆ. ಪ್ರಜಾಪ್ರಭುತ್ವದ ಬೇರುಗಳನ್ನು ಯೇಸುವಿನ ಧಾರ್ಮಿಕ ಬೋಧನೆಗಳಲ್ಲಿ ಕಾಣಬಹುದು.

 	ಹೀಬ್ರೂ ಭಾಷೆಯಲ್ಲಿ ಜೀಸಸ್ (ಕನ್ನಡದಲ್ಲಿ ಯೇಸು) ಎಂಬ ಪದಕ್ಕೆ ಪಾಪಗಳಿಂದ ರಕ್ಷಿಸುವವ, ಉದ್ಧಾರಕ ಎಂಬ ಅರ್ಥವಿದೆ. ಕ್ರೈಸ್ಟ್ ಎಂಬ ಪದ ಗ್ರೀಕ್ ಭಾಷೆಯ ಕ್ರಿಸ್ಟೊಸ್ ಎಂಬ ಪದದಿಂದ ಬಂದಿದೆ. ಕ್ರಿಸ್ತ ಎಂದರೆ ಉದ್ಧಾರಕ (ಮೆಸೈಯ), ಅಭಿಷಿಕ್ತ, ದೇವರ ಉದ್ದೇಶವನ್ನು ಸಾಧಿಸಲು ಅರಿಸಲ್ಪಟ್ಟಿವ ಎಂದರ್ಥ. ಮೇರಿಯ ಗರ್ಭದಲ್ಲಿ ಜನಿಸಿದ ಯೇಸುಕ್ರಿಸ್ತ ದೇವಕುಮಾರ, ಮಾನವಕುಲದ ರಕ್ಷಕ, ಮೃತ್ಯುಂಜಯನಾದ ಕರ್ತ, ಕಾಲಾಂತ್ಯದಲ್ಲಿ ಲೋಕವನ್ನು ಉದ್ಧರಿಸುವ ಎಂಬುದು ಕ್ರೈಸ್ತ ಸಭೆಯ ನಂಬಿಕೆ. ಈತನ ಜೀವನ ಮತ್ತು ಬೋಧನೆಯ ವಿಷಯಗಳನ್ನು ಸ್ಥೂಲವಾಗಿ ಇಲ್ಲಿ ಕೊಟ್ಟಿದೆ.
 	ಮೂಲ ಗ್ರಂಥಗಳು : ಯೇಸುವಿನ ಜೀವನಕ್ಕೂ ಬೋಧನೆಗೂ ಆಧಾರವಾಗಿರುವ ಮುಖ್ಯ ಮೂಲ ಗ್ರಂಥಗಳು ಹೊಸ ಒಡಂಬಡಿಕೆಯ (ನ್ಯೂ ಟೆಸ್ಟ್‍ಮೆಂಟ್) ಆದಿಭಾಗದಲ್ಲಿರುವ ಮ್ಯಾಥ್ಯೂ, ಮಾರ್ಕ್, ಲ್ಯೂಕ್, ಜಾನ್, -ಇವರ ನಾಲ್ಕು ಸುವಾರ್ತೆಗಳು (ಗಾಸ್ಪಲ್ಸ್). ಇವುಗಳಲ್ಲಿ ಮಾರ್ಕನು ಬರೆದ ಸುವಾರ್ತೆ ಕಾಲ ಗಣನೆಯಲ್ಲಿ ಮೊದಲನೆಯದೆಂಬುದು ವಿದ್ವಾಂಸರ ಆಭಿಪ್ರಾಯ. ಯೇಸುವಿನ ಜೀವನಕ್ಕೆ ಸಂಬಂಧಿಸಿದ ಮುಖ್ಯ ವಿಷಯಗಳು ಅತನ ಸೇವೆಯ ಕಾಲ, ಅತನ ಬಾಧೆ, ಮರಣ, ಪುನರುತ್ಥಾನ ಇವುಗಳನ್ನು ಮಾರ್ಕನು ಸಂಕ್ಷೇಪವಾಗಿ ವಿವರಿದ್ದಾನೆ. ಉಳಿದ ಸುವಾರ್ತಕರಿಗೆ ಮಾರ್ಕ್‍ನ ಗ್ರಂಥವು ಆಧಾರ, ಜಾನ್‍ನ ಸುವಾರ್ತೆ ಯೇಸುವಿನ ಜೀವನಕ್ಕೆ ಕೆಲವು ಮಖ್ಯ ಚಾರಿತ್ರಿಕ ಅಂಶಗಳನ್ನೂ ಬೋಧನೆಯ ಭಾಗಗಳನ್ನೂ ಆಧ್ಯಾತ್ಮಿಕ ದೃಷ್ಟಿಯಿಂದ ವಿಚಾರಿಸಿ, ಆತ ಮಾನವಾವತಾರವೆತ್ತಿ ಬಂದಿರುವ ದೇವರ ದೂತನಾಗಿದ್ದಾನೆ (ಜಾನ್ 1 : 14) ಎಂಬುದನ್ನು ನಿರೂಪಿಸುವ ಉದ್ದೇಶದಿಂದ ಬರೆಯಲಾಗಿದೆ. ಈ ನಾಲ್ಕು ಸುವಾರ್ತೆಗಳ ಕಾಲ ಮತ್ತು ಬರೆಯಲಾದ ಸ್ಥಳಗಳ ವಿಷಯವಾಗಿ ಸಾಧಾರಣವಾಗಿ ಸ್ವೀಕರಿಸಿರುವ ಅಭಿಪ್ರಾಯಗಳು ಹೀಗಿವೆ :
    		ಸುವಾರ್ತೆ	ಕಾಲ	ಸ್ಥಳ

1 ಮಾರ್ಕ್ ಕ್ರಿ.ಶ. 60-65 ಜೆರುಸಲೆಮ್ 2 ಮ್ಯಾಥ್ಯೂ ಕ್ರಿ.ಶ. 80-90 ರೋಮ್ 3 ಲ್ಯೂಕ್ ಕ್ರಿ.ಶ. 75-90 ಕೈಸರೈಯ 4 ಜಾನ್ ಕ್ರಿ.ಶ. 90-100 ಎಫಿಸಸ್

 	ಚಾರಿತ್ರಿಕ ಹಿನ್ನಲೆ : ಕ್ರೈಸ್ತಧರ್ಮ ಯೇಸುಕ್ರಿಸ್ತನ ಚಾರಿತ್ರಿಕ ಜೀವನದ ಆಧಾರದ ಮೇಲೆ ನಿಂತಿದೆ. ಯೇಸುಕ್ರಿಸ್ತನ ಕಾಲದಲ್ಲಿ ಪ್ಯಾಲಸ್ತೀನ್ ದೇಶ ರೋಮನರಿಗೆ ಸೇರಿತ್ತು. ರೋಮ್ ಸರ್ಕಾರ ದೇಶದ ಬೇರೆಬೇರೆ ಭಾಗಗಳಿಗೆ ರಾಜ್ಯಪಾಲರನ್ನು ನೇಮಿಸಿ ಅವರ ಮೂಲಕ ಆಡಳಿತವನ್ನು ನಡೆಸುತ್ತಿತ್ತು. ಸತ್ಯವೆಂದರೇನು ಎಂಬ ಪ್ರಮುಖ ಪ್ರಶ್ನೆಯನ್ನು ಕ್ರೈಸ್ತನಿಗೆ ಹಾಕಿದ ಪೈಲಟ್ (ಪಿಲಾತ) (ಟಡಳಿತ ಕಾಲ ಸು. 26-36) ಇಂಥ ರಾಜ್ಯಪಾಲರಲ್ಲಿ ಒಬ್ಬ. ಸ್ವಾತಂತ್ರ್ಯ, ಪ್ರಿಯರಾದ ಯೆಹೂದ್ಯರು ರೋಮನರಿಗೆ ವಿರೋಧವಾಗಿ ಆಗಾಗ್ಗೆ ದಂಗೆ ಏಳುತ್ತ ಇದ್ದರು. ಆದ್ದರಿಂದ ರೋಮ್ ಸರ್ಕಾರ ಇವರ ಬಗ್ಗೆ ಬಹುಜಾಗ್ರತೆ ವಹಿಸಬೇಕಾಗಿತ್ತು. ಯೆಹೂದ್ಯರಲ್ಲೆ ಆ ಕಾಲದಲ್ಲಿ ಹಲಕೆಲವು ಪಂಗಡಗಳಿದ್ದುವು. ಫ್ಯಾರಿಸೀ ಪಂಗಡದವರು ಜನತಾ ಪಕ್ಷದವರು; ಇವರು ಧರ್ಮ ಬೋಧಕರಾಗಿದ್ದು ನ್ಯಾಯ ಪ್ರಮಾಣವನ್ನು ಬಹು ನಿಷ್ಠೆಯಿಂದ ಪಾಲಿಸುತ್ತ ಅದನ್ನು ಜನರಿಗೆ ಉಪದೇಶಿಸುತ್ತಿದ್ದರು. ಅವರಲ್ಲಿ ಕೆಲವರು ಉಗ್ರವಾದಿಗಳಾಗಿದ್ದು ಅಗತ್ಯವಿದ್ದಾಗ ತಮ್ಮ ಸ್ವಾತಂತ್ರ್ಯಕ್ಕಾಗಿ ರಕ್ತಚೆಲ್ಲಲೂ ಹಿಂಜರಿಯುತ್ತಿರಲಿಲ್ಲ. ಸ್ಯಾಜೂಸೀ ಗುಂಪಿನವರು ಪುರೋಹಿತವರ್ಗಕ್ಕೆ ಸೇರಿದವರು. ಬಲುಮಟ್ಟಿಗೆ ಕುಲೀನರಾಗಿದ್ದ ಇವರು ತಮ್ಮ ಅನುಕೂಲತೆಗಾಗಿ ರೋಮನರ ಅಧಿಕಾರವನ್ನು ಒಪ್ಪಿಕೊಂಡು ಅವರ ಅಧೀನರಾಗಿ ಧಾರ್ಮಿಕ ಆಡಳಿತ ನಡೆಸುತ್ತಿದ್ದರು. ಯೇಸುಕ್ರಿಸ್ತನನ್ನು ಪೂಜಿಸುವ ತೀರ್ಮಾನ ಮಾಡಿದ ಮೇರಿ ಗುಂಪಿನವರು ಈ ಪಂಗಡಕ್ಕೆ ಸೇರಿದವರು. ಇವರಲ್ಲದೆ ಆ ಕಾಲದಲ್ಲಿ ಯಾವ ಪಂಗಡಗಳಿಗೂ ಸೇರದ ಭಕ್ತರೂ ನಿರಹಂಕಾರಿಗಳೂ ಸರಳರೂ ಆದ ಸಾವಿರಾರು ಜನ, ದೇವರು ತಾನೇ ತಕ್ಕ ಸಮಯದಲ್ಲಿ ತಮಗೆ ಮೆಸೈಯನೆಂಬ ಸ್ವಾತಂತ್ರ್ಯ ವೀರನನ್ನು ಕಳುಹಿಸಿ ಕೊಡುವ ಎಂಬ ಮಹದಾಸೆಯಿಂದಿದ್ದರು. ಇಂಥ ಕುಟುಂಬ ಒಂದರಲ್ಲಿ ಯೇಸುಕ್ರಿಸ್ತ ಜನ್ಮವೆತ್ತಿದ.

ಯೇಸುಕ್ರಿಸ್ತನ ಜೀವನ ಮತ್ತು ಸೇವೆಯ ಸಂಕ್ಷಿಪ್ತ ವೃತ್ತಾಂತ : ಯೇಸುವಿನ ಜನನ ವೃತ್ತಾಂತ ಲ್ಯೂಕನ ಸುವಾರ್ತೆಯಲ್ಲಿ (ಅಧ್ಯಾಯ 2) ಮತ್ತು ಮ್ಯಾಥ್ಯೂ ಸುವಾರ್ತೆಯಲ್ಲಿ (ಅಧ್ಯಾಯ 1 ವಚನ 18ರಿಂದ, ಅಧ್ಯಾಯ 2 ವಚನ 23ರಲ್ಲಿ) ಕಂಡುಬರುತ್ತದೆ. ಯೇಸು ಕನ್ಯೆ ಮೇರಿಯಲ್ಲಿ ಜನಿಸಿದ. ಆತನ ಜನನದ ಶುಭ ವಾರ್ತೆಯನ್ನು ಹೊಲದಲ್ಲಿದ್ದ ಕುರುಬರು ಮೊದಲು ತಿಳಿದುಕೊಂಡಿದ್ದು, ಪೌರ್ವಾತ್ಯ ದೇಶಗಳಿಂದ ಬಂದ ಜ್ಞಾನಿಗಳು ಯೇಸು ಶಿಶುವನ್ನು ಮೊದಲು ಆರಾಧಿಸಿದ್ದು ಈ ಮೊದಲಾದ ವಿಷಯಗಳು ಸುವಾರ್ತೆಗಳಲ್ಲಿ ಅಡಕವಾಗಿವೆ. ಯೇಸು ಹನ್ನೆರಡು ವರುಷದ ಬಾಲಕನಾಗಿದ್ದಾಗ ತನ್ನ ತಂದೆತಾಯಿಗಳೊಡನೆ ಜೆರುಸಲೆಮ್‍ನ ದೇವಾಲಯಕ್ಕೆ ಹೋಗಿ ಅಲ್ಲಿಯ ಧರ್ಮಪಂಡಿತರೊಡನೆ ಧಾರ್ಮಿಕ ವಿಷಯಗಳನ್ನು ಕುರಿತು ಜಿಜ್ಞಾಸೆ ನಡೆಸಿದ (ಲ್ಯೂಕ್ 2 : 41-51) ಎಂಬ ವಿಷಯವನ್ನು ಬಿಟ್ಟರೆ ಯೇಸುವಿನ ಆರಂಭದ ವರ್ಷಗಳ ವಿಷಯವಾಗಿ ಸುವಾರ್ತೆಗಳಲ್ಲಿ ಅನೇಕ ಉಲ್ಲೇಖಗಳಿದ್ದರೂ ಅವುಗಳಿಗೆ ಯಾವಚಾರಿತ್ರಿಕ ಆಧಾರಗಳೂ ಇಲ್ಲ. ಆತನಿಗೆ ಸುಮಾರು ಮೂವತ್ತು ವರ್ಷವಾದಾಗ ಮನೆಯಿಂದ ಹೊರಟು ಗೆಲೀಲೀ ಸೀಮೆಗೆ ಬಂದು ಜಾನ್‍ನಿಂದ ದೀಕ್ಷಾಸ್ನಾನ ಮಾಡಿಸಿಕೊಂಡು ತನ್ನ ಸಾರ್ವಜನಿಕ ಸೇವೆಯನ್ನು ಆರಂಭಿಸಿದ. ಕಾಲ ಪರಿಪೂರ್ಣವಾಯಿತು. ದೇವರ ರಾಜ್ಯ ಸಮೀಪಿಸಿತು. ದೇವರಕಡೆಗೆ ತಿರುಗಿಕೊಂಡು ಸುವಾರ್ತೆಯನ್ನು ನಂಬಿರಿ (ಮಾರ್ಕ್ 1:15) ಎಂಬುವುದು ಆತನ ಆದ್ಯ ಸಂದೇಶ. ಯೇಸುಕ್ರಿಸ್ತನ ಸೇವೆಯ ಕುರಿತಾದ ಕಾಲಗಣನೆಯನ್ನು ನಿರ್ಣಯಿಸುವುದು ಸುಲಭವಲ್ಲದಿದ್ದರೂ ಸು. 28-30ರ ತನಕ ಆತ ತನ್ನ ಸಾರ್ವಜನಿಕ ಸೇವೆಯನ್ನು ಮಾಡಿ ಇಹವನ್ನು ತ್ಯಜಿಸಿದನೆಂದು ಹೇಳಬಹುದು.

ಆರಂಭದಲ್ಲಿ ಆತ ಯೆಹೂದ್ಯರ ಸಭಾಮಂದಿರಗಳಲ್ಲಿ ಬೋಧಿಸುತ್ತಿದ್ದ. ಕ್ರಮೇಣ ಬಹುಮಂದಿ ಅದನ್ನು ಕೇಳಲು ಕೂಡಿಬರುತ್ತಿದ್ದ ಕಾರಣ ಗೆಲೀಲೀಯ ಸಮುದ್ರದ ತೀರದಲ್ಲಿಯೂ ಇತರ ಪ್ರದೇಶಗಳಲ್ಲಿಯೂ ಆತ ಪ್ರಯಾಣಮಾಡುತ್ತ ಬೋಧಿಸುತ್ತಿದ್ದ. ಪ್ರಯಾಣದ ಕಾಲದಲ್ಲಿ ತನ್ನ ಸೇವೆಯನ್ನು ಮುಂದುವರಿಸಲು ಆರಿಸಿಕೊಂಡ ಶಿಷ್ಯರನ್ನು ತರಬೇತು ಮಾಡುವುದು ಆತನ ಒಂದು ಮುಖ್ಯ ಉದ್ದೇಶವಾಗಿತ್ತು. ಬೋಧನಾಕಾಲದ ಆರಂಭದಲ್ಲಿಯೇ ಯೇಸು ತನ್ನ ಅನುಯಾಯಿಗಳಲ್ಲಿ ಹನ್ನೆರಡು ಮಂದಿಯನ್ನು ತನ್ನ ಶಿಷ್ಯರಾಗುವಂತೆ ಆರಿಸಿಕೊಂಡ. ಜೇಮ್ಸ್ ದಲೆಸ್, ಸೈಮನ್, ಆಂಡ್ರ್ಯೂ ಜೇಮ್ಸ್, ಜಾನ್ ಬಾಥ್ರ್ಯೊಲೋಮು ಥಾಡಿಯಸ್, ಪೀಟರ್, ಥಾಮಸ್, ಫಿಲಿಪ್, ಮ್ಯಾಥ್ಯೂ, ಜುದಾಸ್-ಇವರೇ ಆ ಹನ್ನೆರಡು ಮಂದಿ ಶಿಷ್ಯರು. ಸೈಮನ್, ಪೀಟರ್, ಜೇಮ್ಸ್, ಜಾನ್ ಇವರು ಪ್ರಮುಖರು. ಆತ ಹನ್ನೆರಡು ಮಂದಿಯನ್ನು ಆರಿಸಿ ಅವರು ತನ್ನ ಸಂಗಡ ಇರಬೇಕೆಂತಲೂ ದೆವ್ವಗಳನ್ನು ಬಿಡಿಸುವ ಅಧಿಕಾರವುಳ್ಳವರಾಗಿ ಸುವಾರ್ತೆಯನ್ನು ಸಾರುವುದಕ್ಕೆ ತಾನು ಅವರನ್ನು ಕಳುಹಿಸುವೆನೆಂತಲೂ ಅವರಿಗೆ ತಿಳಿಸಿದ (ಮಾರ್ಕ್ 3: 14, 15). ಈ ಕಾರಣದಿಂದ ಯೇಸುವಿನ ಶಿಷ್ಯರನ್ನು ಅಪಾಸಲ್ಸ್ ಅಂದರೆ ಪ್ರವರ್ತಕರು ಎಂದು ಕರೆಯಲಾಗುತ್ತದೆ.

ಅದ್ಭುತಕಾರ್ಯಗಳು ಅಥವಾ ಪವಾಡಗಳು ; ಯೇಸು 36 ಪವಾಡಗಳನ್ನು ಮೆರೆದನೆಂದು ಗಾಸ್ಪೆಲ್‍ಗಳಲ್ಲಿ ಹೇಳಿದೆ. ಸುವಾರ್ತೆಯಲ್ಲಿ ವಿವರಿಸಿರುವ ಯೇಸುವಿನ ಅದ್ಭುತ ಕಾರ್ಯಗಳು, ದೇವರ ಶಕ್ತಿ ಮಾನವನ ಜೀವನದಲ್ಲಿ ಪ್ರಭಾವ ಬೀರುತ್ತದೆ ಎಂಬುದನ್ನು ಸೂಚಿಸುವುದಕ್ಕಾಗಿಯೇ ಹೊರತು ಜನರನ್ನು ತನ್ನ ಕಡೆಗೆ ಆಕರ್ಷಿಸಿಕೊಳ್ಳುವ ಉದ್ದೇಶದಿಂದ ಮಾಡಿದವುಗಳಲ್ಲ. ಕ್ರಿಸ್ತನ ಬೋಧನೆಗೂ ಮಹತ್ಕಾರ್ಯಗಳಿಗೂ ನಿಕಟ ಸಂಬಂಧವಿದೆ. ಆತ ದೇವರ ರಾಜ್ಯದ ಸುವಾರ್ತೆಯನ್ನು ಸಾರಿಹೇಳುವ ಮೂಲಕ ದೇವರ ಶಕ್ತಿಯನ್ನು ಪ್ರದರ್ಶಿಸಿದ.

ಸುಮಾರ್ತೆಯ ಪ್ರಕಟಣೆ : ತಾನು ದೇವರ ಸುವಾರ್ತೆಯನ್ನು ಸರ್ವರಿಗೂ ಪ್ರಕಟಪಡಿಸಲು ಬಂದಿದ್ದೇನೆಂಬುದನ್ನು ಯೇಸು ಆರಂಭದಿಂದಲೇ ಸ್ಪಷ್ಟಪಡಿಸಿದ. ಸರಳವಾದ ಸಾಮ್ಯಗಳ (ಪ್ಯಾರಬಲ್ಸ್) ಮೂಲಕ ತನ್ನ ಸಂದೇಶ ಜನರಿಗೆ ಅರ್ಥವಾಗುವಂತೆ ಬೋಧಿಸಿದ. ಸುವಾರ್ತೆಯಲ್ಲಿ ಇಂಥ ಸುಮಾರು 70 ಕಥೆಗಳನ್ನು ಗುರುತಿಸಲಾಗಿದೆ. ರಲೋಕ ರಾಜ್ಯ ಸಾಸಿವೆಯಕಾಳಿಗೆ, ಹುಳಿಹಿಟ್ಟಿಗೆ, ಹೊಲದಲ್ಲಿ ಹೂತಿಟ್ಟ ದ್ರವ್ಯಕ್ಕೆ, ಬಹು ಬೆಲೆಯುಳ್ಳ ಮುತ್ತಿಗೆ ಸಮಾನವಾಗಿದೆ. (ಮ್ಯಾಥ್ಯೂ 13)-ಈ ಮೊದಲಾದ ಉಪಮೆಗಳನ್ನು ಜನರಿಗೆ ಅರ್ಥವಾಗುವ ರೀತಿಯಲ್ಲಿ ಉಪಯೋಗಿಸಿದ. ದೇವರ ಶಕ್ತಿಯನ್ನು ಜನರು ಸ್ವೀಕರಿಸುವುದಾಗಲೀ ತಿರಸ್ಕರಿಸುವುದಾಗಲೀ ಅದು ಅವರ ಜವಾಬ್ದಾರಿಕೆ; ತಿರಸ್ಕಾರದಿಂದ ಶಾಪ, ಸ್ವೀಕಾರದಿಂದ ಆಶೀರ್ವಾದ ದೊರಕುತ್ತದೆ. ಆದ್ದರಿಂದ ಜನರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರಕಡೆ ತಿರುಗಬೇಕು ಎಂಬುದು ಕ್ರಿಸ್ತನ ಕರೆ.

ಯೇಸುವಿನ ಸೇವೆಯ ಮೂಲಕ ಜನರ ಮೇಲಾದ ಪರಿಣಾಮ : ಜನರೆಲ್ಲರೂ ಕ್ರಿಸ್ತನ ಪ್ರಭಾವದಿಂದಲೂ ಬೋಧನೆಯಿಂದಲೂ ಆಕರ್ಷಿಸಲ್ಪಟ್ಟರು. ಸದಾ ದೊಡ್ಡ ಗುಂಪುಗಳು ಆತನನ್ನು ಹಿಂಬಾಲಿಸುತ್ತಿದ್ದವು. ಒಂದು ಸಂದರ್ಭದಲ್ಲಿ ಆತನ ಬೋಧನೆ ಕೇಳಲು ಬಂದ ಜನರ ಗುಂಪಿನಲ್ಲಿ ಗಂಡಸರೇ ಐದು ಸಾವಿರ ಮಂದಿ ಇದ್ದರು. ಜನರು ಹೀಗೆ ಆತನನ್ನು ಹಿಂಬಾಲಿಸಲು ಕೆಲವು ಕಾರಣಗಳಿದ್ದವು. ಆತನ ಅಧಿಕಾರವಾಣಿ, ಆಳವಾದ ಆಧ್ಯಾತ್ಮಿಕ ತಿಳಿವಳಿಕೆ, ದೇವರ ಮೇಲಿನ ಭರವಸೆ, ಸರಳವಾದ ಬೋಧನಾ ರೀತಿ, ನಿರೀಕ್ಷೆ ಶಾಂತಿಗಳ ಸಂದೇಶ-ಇವೆಲ್ಲವೂ ಜನರ ಮನಸ್ಸನ್ನು ಸೆಳೆದುವು. ಆದರೂ ಕೇವಲ ಜನಪ್ರಿಯನಾಗುವುದು ಕ್ರಿಸ್ತನ ಉದ್ದೇಶವಾಗಿರಲಿಲ್ಲ. ಅಲ್ಲದೆ ಅಂಥ ಪೊಳ್ಳು ಉತ್ಸಾಹದಿಂದ ಆತ ಮೋಸಹೋಗಲೂ ಇಲ್ಲ. ತನ್ನ ಬೋಧನೆಯನ್ನು ಜನರು ಎಷ್ಟರಮಟ್ಟಿಗೆ ಸ್ವೀಕರಿಸುತ್ತಾರೆಂಬುದನ್ನು ಬಿತ್ತುವವನ ಸಾಮ್ಯದಲ್ಲಿ (ಮಾರ್ಕ್ 4:3-9) ಆತ ಸ್ಪಷ್ಟಮಾಡಿದ. ಜಾನ್ ಹೇಳುವಂತೆ ಯೇಸು ಎಲ್ಲರನ್ನೂ ಬಲ್ಲವನಾದ್ದರಿಂದ ಅವರಿಗೆ ವಶವಾಗಲಿಲ್ಲ. ಆತ ಪ್ರತಿಮನುಷ್ಯನ ಅಂತರ್ಯವನ್ನು ತಿಳಿದವನಾದ ಕಾರಣ ಯಾವನೂ ಯಾವ ಮನುಷ್ಯನ ವಿಷಯದಲ್ಲಿಯೂ ಆತನಿಗೆ ಸಾಕ್ಷಿ ಕೊಡಬೇಕಾದ ಅವಶ್ಯಕತೆಯಿರಲಿಲ್ಲ. (ಜಾನ್ 2/24.25).

ಕ್ರೈಸ್ತನನ್ನು ಕುರಿತು ಧಾರ್ಮಿಕ ಮುಂದಾಳುಗಳ ವಿರೋಧ : ಇದಕ್ಕೆ ಸ್ಪಷ್ಟವಾದ ಕೆಲವು ಕಾರಣಗಳಿದ್ದವು. ಫ್ಯಾರೀಸಿಯರ ಕೇವಲ ಆಚಾರಬದ್ಧ ಧರ್ಮ ಜೀವನ ಕಪಟವೆಂದು ಕ್ರಿಸ್ತ ಹೇಳಿದ (ಲೂಕ್ 11/42-52). ಸಾಂಪ್ರದಾಯಿಕ ಬೋಧನೆಗಳನ್ನು ಅನುಸರಿಸಿದರೆ ಮಾತ್ರವೇ ನವಜೀವನ ಶಕ್ತಿಯೂ ದೇವರ ಕುರಿತು ಜೀವದಾಯಕ ತಿಳಿವಳಿಕೆಯೂ ಬರಲಾರವು ಎಂಬುದನ್ನು ಆತ ಒತ್ತಿ ಹೇಳಿದ (ಮಾರ್ಕ್ 7/6 ಮು.). ಉಪವಾಸ ಮಾಡುವುದು (ಮಾರ್ಕ್ 2/18). ಸಬ್ಬತ್ ದಿನ ಆಚರಣೆ (ಲ್ಯೂಕ್ 13 10-17) ಈ ಮೊದಲಾದವುಗಳು ಬರೀ ಆಚಾರಬದ್ಧವಾಗಿದ್ದರೆ ಅವುಗಳಿಂದ ಆಧ್ಯಾತ್ಮಿಕ ಲಾಭವಿಲ್ಲವೆಂಬುದು ಆತನ ಬೋಧನೆ. ಸಮೇರಿಟನ್ನರು, ಕೀಳುಜಾತಿಯವರು, ಸುಂಕದವರು, ಪಾಪಿಗಳು ಮೊದಲಾದವರೊಡನೆ ಆತ ಸ್ನೇಹಭಾವದಿಂದ ವರ್ತಿಸಿದ್ದು, ಪಾಪಗಳನ್ನು ಕ್ಷಮಿಸಲು ತನಗೆ ಅಧಿಕಾರ ಉಂಟೆಂದು ಧೈರ್ಯವಾಗಿ ಹೇಳಿದ್ದು (ಮಾರ್ಕ್ 2:10)-ಇವೆಲ್ಲವೂ ಕೆಲವು ಧಾರ್ಮಿಕ ಮುಂದಾಳುಗಳ ವಿರೋಧಕ್ಕೆ ಕಾರಣಗಳಾದವು.

ಸ್ವಲ್ಪಕಾಲ ಆತ ತನ್ನ ಸಾರ್ವಜನಿಕ ಸೇವೆಯನ್ನು ಬಿಟ್ಟು ತನ್ನ ಶಿಷ್ಯರೊಡನೆ ಬೇರೆ ಬೇರೆ ಕಡೆಗಳಲ್ಲಿ ಪ್ರಯಾಣ ಮಾಡಬೇಕಾಗಿ ಬಂತು (ಮಾರ್ಕ್ 7:24:29). ಈ ಪ್ರಯಾಣ ಕಾಲದಲ್ಲಿ ಶಿಷ್ಯರನ್ನು ತರಬೇತು ಮಾಡಲು ಆತನಿಗೆ ಹೆಚ್ಚಿನ ಸಂದರ್ಭವೊದಗಿತು; ಅಲ್ಲದೆ ಶಿಷ್ಯರೂ ಆತನ ಮಹತ್ತ್ವವನ್ನು ಕುರಿತು ಆಳವಾಗಿ ತಿಳಿದುಕೊಳ್ಳುವುದು ಸಾಧ್ಯವಾಯಿತು,. ಈ ಕಾಲದಲ್ಲಿ ಪೀಟರನು ಯೇಸು ಕೇಳಿದ ಪ್ರಶ್ನೆಗೆ ಉತ್ತರವಾಗಿ ಜೀವಸ್ವರೂಪನಾದ ದೇವರಕುಮಾರ ಎಂದು ಅರಿಕೆ ಮಾಡಿದ. ತಾನು ಒಬ್ಬ ರಾಜಕೀಯ ಉದ್ಧಾರಕನಲ್ಲ; ಲೌಕಿಕ ಸ್ವಾತಂತ್ರ್ಯವನ್ನು ಹಿಂಸಾಮಾರ್ಗದ ಮೂಲಕ ಸ್ಥಾಪಿಸುವುದು ತನ್ನ ಉದ್ದೇಶವಲ್ಲವೆಂಬುದನ್ನು ಕ್ರಿಸ್ತ ಅವರಿಗೆ ಬೋಧಿಸಿದ. ದೇವಕುಮಾರನಾಗಿರುವ ತಾನು ದೇವೇಚ್ಛೆಯನ್ನು ನೆರವೇರಿಸಬೇಕಾದರೆ ತ್ಯಾಗ ಜೀವನದ ಶ್ರಮಮಾರ್ಗ ಅಗತ್ಯವೆಂದು ಶಿಷ್ಯರಿಗೆ ತಿಳಿಸುತ್ತ ಬಂದ. ಮುನುಷ್ಯಕುಮಾರನಾಗಿ ತಾನು ಬಹು ಕಷ್ಟಗಳನ್ನು ಅನುಭವಿಸಿ ಹಿರಿಯರಿಂದಲೂ ಶಾಸ್ತ್ರಗಳಿಂದಲೂ ನಿರಾಕೃತನಾಗಿ ಕೊಲ್ಲಲ್ಪಟ್ಟು ಮೂರುದಿನದ ಮೇಲೆ ಜೀವಿತನಾಗಿ ಎದ್ದು ಬರಬೇಕಾಗಿದೆ ಎಂದು ಉಪದೇಶಿಸುವುದಕ್ಕೆ ಪ್ರಾರಂಭ ಮಾಡಿದ (ಮಾರ್ಕ್ 8:31).

ಆಮೇಲೆ ಆತ ಶಿಷ್ಯರೊಡನೆ ಯೆಹೂದ್ಯರ ಮುಖ್ಯ ಧಾರ್ಮಿಕ ಕೇಂದ್ರವಾದ ಜೆರುಸಲೆಮಿಗೆ ಪ್ರಯಾಣ ಬೆಳೆಸಿದ. ತನ್ನ ಅವಸಾನ ಸಮಯ ಹತ್ತಿರ ಬಂತೆಂಬುದನ್ನು ತಿಳಿದುಕೊಂಡು ಶಿಷ್ಯರೊಡನೆ ಕಡೆಯ ಭೋಜನವನ್ನು (ಲಾಸ್ಟ್ ಸಪ್ಪರ್) ಮಾಡಿದ ಸಂದರ್ಭದಲ್ಲಿ (ಮಾರ್ಕ್ 14:17-25) ತನ್ನ ಮರಣದ ಮೂಲಕ ಹೊಸ ಒಡಂಬಡಿಕೆಯೊಂದನ್ನು ಸ್ಥಾಪಿಸಿದ್ದಲ್ಲದೆ ತಾನು ಗುರುವಾಗಿದ್ದರೂ ಶಿಷ್ಯರ ಕಾಲುಗಳನ್ನು ತೊಳೆದು ವಿನೀತ ಭಾವವನ್ನು ತೋರಿಸಿದ (ಜಾನ್ 13:1-20). 'ಕರ್ತನೂ ಗುರುವೂ ಆಗಿರುವ ನಾನು ನಿಮ್ಮ ಕಾಲುಗಳನ್ನು ತೊಳೆದಿರಲಾಗಿ ನೀವು ಸಹ ಒಬ್ಬರ ಕಾಲನ್ನು ತೊಳೆಯುವ ಹೊಣೆ ಹೊತ್ತಿದ್ದೀರಿ' (ಜಾನ್ 13:14) ಎಂದು ಹೇಳಿದ. ತನ್ನ ಶಿಷ್ಯರಿಗೆ ಬ್ರೆಡ್ ಮತ್ತು ವೈನ್ ನೀಡಿ 'ಇದು ನನ್ನ ದೇಹ. ಇದು ನನ್ನ ರಕ್ತ ಎಂದು ತಿಳಿಸಿದ. (ಮಾರ್ಕ್ 14:22-50) ಗೆತ್ಸೆಮನೆ ತೋಟದಲ್ಲಿ ಶಿಷ್ಯರೊಡನೆ ಪ್ರಾರ್ಥನೆಯಲ್ಲಿ ನಿರತನಾಗಿದ್ದಾಗ ಜುದಾಸ್‍ನ ವಂಚನೆಯಿಂದ ವೈರಿಗಳಿಗೆ ಸೆರೆಸಿಕ್ಕಿ ಶಿಲುಬೆಗೇರಿಸಲ್ಪಟ್ಟ (ಮಾರ್ಕ್15). ಸಮಾಧಿಯಲ್ಲಿ ಹೂಳಲ್ಪಟ್ಟ ಮೇಲೆ ಮೂರನೆಯ ದಿನದಲ್ಲಿ ಪುನರುತ್ಥಾನವಾಗಿ ಬಂದ (ಜಾನ್ ಅಧ್ಯಾಯ 20 ಮತ್ತು 21). ಶಿಲುಬೆಗೇರಿಸಿದ ಸಂದರ್ಭದಲ್ಲಿ ಯೇಸು ಹೇಳಿದ ಕಡೆಯ ಮಾತುಗಳಿವು; ತಂದೆಯೇ ಅವರನ್ನು ಕ್ಷಮಿಸು. ಅವರು ಮಾಡುತ್ತಿರುವ ಕೆಲಸ ಅವರಿಗೇ ತಿಳಿಯದು.

ಯೇಸುಕ್ರಿಸ್ತನ ಬೋಧನೆ: ಸರಳತೆ, ಅಧಿಕಾರವಾಣಿ, ಜನರ ತಿಳಿವಳಿಕೆಯ ಮಟ್ಟಕ್ಕೆ ಅನುಗುಣವಾದ ಬೋಧನಾ ಕ್ರಮ. ದೈನಂದಿನ ಜೀವನದಿಂದ ಆರಿಸಿಕೊಂಡ ಸಾಮ್ಯಗಳ ಉಪಯೋಗ-ಇವು ಕ್ರಿಸ್ತನ ಬೋಧನೆಯ ಕೆಲವು ಮುಖ್ಯ ಲಕ್ಷಣಗಳು. ಕರುಣೆಯುಳ್ಳ ಸಮೇರಿಟನ್, ದಾರಿತಪ್ಪಿದ ಮಗ, ಐಶ್ವರ್ಯವಂತನಾದ ಬುದ್ಧಿಹೀನ-ಇವೇ ಮೊದಲಾದ ಸಾಮ್ಯಗಳು ನೈತಿಕ ಸೂತ್ರಗಳನ್ನೂ ದೇವಲೋಕದ ಸಂದೇಶವನ್ನೂ ಜನರಿಗೆ ಸ್ವಷ್ಟಮಾಡುವ ಸಾಧನಗಳಾಗಿವೆ.

ದೇವರರಾಜ್ಯ-ಇದು ಯೇಸುಕ್ತಿಸ್ತನ ಬೋಧನೆಯ ಮುಖ್ಯ ಪ್ರಸ್ತಾಪ. ಪಶ್ಚಾತ್ತಾಪಪಟ್ಟು ದೇವರ ಕಡೆ ತಿರುಗಿ; ಏಕೆಂದರೆ ದೇವರರಾಜ್ಯ ಹತ್ತಿರಕ್ಕೆ ಬಂದಿದೆ ಎಂಬುದು ಆತನ ಸಂದೇಶದ ಆದ್ಯಿವಾಕ್ಯ (ಮಾರ್ಕ್ 1:15). ದೇವರರಾಜ್ಯ ಭವಿಷ್ಯತ್ಕಾಲದಲ್ಲಿ ಬರುವುದು; ದೇವರು ತಾನೇ ಕಳುಹಿಸುವ ಮೆಸೈಯ ಈ ರಾಜ್ಯವನ್ನು ಸ್ಥಾಪಿಸುವ ಎಂಬ ನಿರೀಕ್ಷೆಯಿಂದ ಇದ್ದ ಜನರಿಗೆ ಯೇಸುಕ್ರಿಸ್ತ ಅವರು ನಿರೀಕ್ಷಿಸುತ್ತಿದ್ದ ದೇವರರಾಜ್ಯ ಈಗ ತನ್ನ ಜೀವನ ಬೋಧನೆ ಮತ್ತು ಚರಿತ್ರೆಯಲ್ಲಿ ಬಂದಿದೆ ಎಂದು ಪ್ರಕಟಿಸಿದ. ದೇವರರಾಜ್ಯ ಆತನ ದಾನ (ಲ್ಯೂಕ್ 12:32). ಶಿಶುಗಳಂತೆ ಅದನ್ನು ಸ್ವೀಕರಿಸಬೇಕು (ಮಾರ್ಕ್ 10:15). ತನ್ನ ಜೀವನ ಮತ್ತು ಮಹತ್ಕಾರ್ಯಗಳಲ್ಲಿ ತೋರಿಬರುತ್ತಿರುವ ದೇವರರಾಜ್ಯ ಮುಂದಕ್ಕೆ ಪ್ರಬಲವಾಗಿ ಪರಿಪೂರ್ಣತೆಯನ್ನು ಹೊಂದುವುದು. ಸಾಸಿವೆ ಕಾಳು ಚಿಕ್ಕದಾಗಿದ್ದರೂ ದೊಡ್ಡ ಗಿಡವಾಗುವಂತೆ (ಮ್ಯಾಥ್ಯೂ 13:31), ಸ್ವಲ್ಪ ಹುಳಿಹಿಟ್ಟು ಎಲ್ಲ ಹುಳಿಯ ಮೇಲೆ ಪರಿಣಾಮ ಮಾಡುವಂತೆ (ಮ್ಯಾಥ್ಯೂ 13:33)-ದೇವರ ರಾಜ್ಯ ಕೂಡ ಮುಂದೆ ವಿಸ್ತರಿಸುತ್ತದೆ. ಆದುದರಿಂದ ನಿನ್ನ ರಾಜ್ಯ ಬರಲಿ ಎಂದು (ಮಾಥ್ಯೂ 6:10) ಶಿಷ್ಯರು ಪ್ರಾರ್ಥಿಸತಕ್ಕದ್ದು ಎಂದು ಬೋಧಿಸಿದ.

ಪಾಪಿಗಳನ್ನು ರಕ್ಷಿಸುವುದೇ ತನ್ನ ಜೀವನದ ಉದ್ದೇಶ ಎಂಬುದು ಕ್ರಿಸ್ತನ ಸ್ಪಷ್ಟ ಸಂದೇಶ. 'ದೇವಕುಮಾರ ಕೆಟ್ಟುಹೋಗಿರುವವರನ್ನು ಹುಡುಕಿ ರಕ್ಷಿಸುವುದಕ್ಕೆ ಮುನುಷ್ಯನಾಗಿ ಬಂದ (ಲ್ಯೂಕ್ 19:10); ಪಾಪದ ಭಾರದಿಂದ ತೊಳುತ್ತಿರುವ ಪಾಪಿಗಳಿಗೆ ಆತ್ಮಶಾಂತಿಯನ್ನು ನಾನು ಕೊಡುವೆ. ಆದುದರಿಂದ ;ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿ ಕೊಡುವೆ (ಮ್ಯಾಥ್ಯೂ 11:28) ಎಂಬ ವಾಗ್ದಾನ ಮಾಡಿದ. ಇದೇ ರಕ್ಷಣಾ ಉದ್ದೇಶವನ್ನು ಆತ ಹೇಳಿದ ಕೆಲವು ಮುಖ್ಯಸಾಮ್ಯಗಳೂ ಕೂಡ (ಲ್ಯೂಕ್ 15) 'ತಪ್ಪಿಹೋದಮಗ, ಕಳೆದುಹೋದ ನಾಣ್ಯ, ತಪ್ಪಿಸಿಕೊಂಡ ಕುರಿ' ಸ್ಪಷ್ಟವಾಗುತ್ತದೆ. ಈ ರಕ್ಷಣಾಕಾರ್ಯವನ್ನು ಸಾಧಿಸುವುದಕ್ಕಾಗಿ ತ್ಯಾಗಜೀವನ, ಶ್ರಮಮಾರ್ಗ ಅಗತ್ಯ. ಪಾಪಿಗಳ ಬದಲಗಿ ತಾನು ಶಿಕ್ಷೆಯನ್ನು ಅನುಭವಿಸುವವ ಎಂಬುದನ್ನು ತಿಳಿದಿ, ಮನುಷ್ಯಕುಮಾರ ಸೇವೆಮಾಡಿಸಿಕೊಳ್ಳುವುದಕ್ಕೆ ಬರಲಿಲ್ಲ; ಸೇವೆ ಮಾಡುವುದಕ್ಕೊ ಅನೇಕರನ್ನು ಪಾರು ಮಾಡುವುದಕ್ಕೂ ತನ್ನ ಪ್ರಾಣವನ್ನೆ ಈಡುಮಾಡುವುದಕ್ಕೂ ಬಂದ (ಮಾರ್ಕ್ 10:45) ಎಂದು ಹೇಳಿದ. ಶಿಷ್ಯರೊಡನೆ ಮಾಡಿದ ಕಡೆಯ ಭೋಜನದ ಸಂದರ್ಭದಲ್ಲಿ ತನ್ನ ಮರಣದ ಮೂಲಕದೇವಮಾನವರಲ್ಲಿ ಒಂದು ಹೊಸ ಬಾಂಧವ್ಯ ಬೆಳೆಯುವುದೆಂಬುದು ಆತನ ಬೋಧನೆಯಾಗಿತ್ತು (ಮಾರ್ಕ್ 14:24). ತಾನು ಪಾಪರಹಿತ ವ್ಯಕ್ತಿಯಾಗಿದ್ದುದರಿಂದ (ಜಾನ್ 8:46)ತನಗೆ ಇತರರ ಪಾಪಗಳನ್ನು ಕ್ಷಮಿಸುವ ಅಧಿಕಾರವಿದೆ (2:10) ಎಂಬುದನ್ನು 'ಯೇಸು ಸ್ಪಷ್ಟ ಮಾಡಿದ್ದಾನೆ. ಯೇಸು 'ಬರಬೇಕಾದ ಮೆಸೈಯ ಮನುಷ್ಯ ಕುಮಾರನೇ ದೇವಕುಮಾರ. ಈ ಮೊದಲಾದ ವಿವರಣೆಗಳು ಆತನಿಗೂ ತಂದೆಯಾದ ದೇವರಿಗೂ ಇರುವ ಸಂಬಂಧವನ್ನು ತಿಳಿಸುತ್ತದೆ. ಮಗ ತಂದೆಗೆ ಅಧೀನವಾಗಿದ್ದರೂ (ಮಾರ್ಕ್ 13:32) ಆತನಿಗೂ ದೇವರಿಗೂ ಅದ್ವಿತೀಯವಾದ ಒಂದು ನಿಕಟ ಸಂಬಂಧವಿದೆ ಎಂಬುದು ಆತನ ಮಾತುಗಳಲ್ಲಿ ಕಂಡುಬರುತ್ತದೆ. 'ನನ್ನನ್ನು ನೋಡಿದಾತ ತಂದೆಯನ್ನು ನೋಡಿದ್ದಾನೆ (ಜಾನ್ 14:9) 'ನನ್ನ ತಂದೆ ಎಲ್ಲವನ್ನೂ ನನಗೆ ಒಪ್ಪಿಸಿದ್ದಾನೆ. ತಂದೆಯ ಹೊರತು ಇನ್ನಾವನೂ ಮಗನನ್ನು ತಿಳಿದವನಲ್ಲ, (ಮ್ಯಾಥ್ಯೂ 11:27) ಎಂಬವು ಆತನ ವಚನಗಳು.

ಯೇಸುವಿನ ಪುನರುತ್ಥಾನ ರಿಸರೆಕ್ಸನ್): ಯೇಸುಕ್ರಿಸ್ತ ಮರಣವನ್ನು ಬಯಸಿದ ಜೀವನಾಯಕನೆಂಬುದು ಕ್ರೈಸ್ತಸಭೆಯ ನಂಬಿಕೆ. ಸುವಾರ್ತೆಗ¼ ಸಾಕ್ಷಿಯ ಮೇರೆಗೆ ಕ್ರೈಸ್ತ ಸಂದೇಶದ ಅರಂಭ ಮತ್ತು ಕ್ರೈಸ್ತಸಭೆಯ ಆಸ್ತಿಭಾರ ಅವನ ಪುನರುತ್ಥಾನದ ಮೆಲಿದೆ ಎಂದೇ ಹೇಳಬೇಕು. ಮಾನವರು ಅನ್ಯಾಯದಿಂದ ಆತನನ್ನು ಬಾಧೆಗೊಳಪಡಿಸಿ ತ್ಯಜಿಸಿದರು ; ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದ ; ಆದುದರಿಂದ ಮೃತ್ಯುಂಜಯನಾದ ಯೇಸುವಿನ ಮೇಲೆ ನಂಬಿಕೆಯಿಡಬೇಕೆಂದು ಆದಿ ಕ್ರೈಸ್ತ ಸುವಾರ್ತೆ ಪ್ರಕಟಣೆ, ಕಷ್ಟ, ಬಾಧೆ, ಮರಣಕ್ಕೆ ಅಧೀನವಾಗಿರುವ ಈ ಲೋಕದಲ್ಲಿ ಪಾಪಿ ಮಾನವರು ನಿರಾಶೆಪಡುವ ಅಗತ್ಯವಿಲ್ಲ ; ಕ್ರಿಸ್ತನ ಮೂಲಕ ನಿತ್ಯತೆ ಭಕ್ತರಿಗೆ ದೊರಕಲು ಸಾಧ್ಯ ಎಂಬುದನ್ನು ಸ್ಥಾಪಿಸುವು, ದೇವರ ಅಸ್ತಿತ್ವದಲ್ಲಿ ನಂಬಿಕೆಯುಂಟುಮಾಡುವುದು ಪುನರುತ್ಥಾನದ ಮೂಲ ಉದ್ದೇಶ. (ಎಸ್.ಜೆ.ಎಸ್.)