ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಯೊಹಾನನ ಸುವಾರ್ತೆ

ವಿಕಿಸೋರ್ಸ್ದಿಂದ

ಯೊಹಾನನ ಸುವಾರ್ತೆ - ಯೇಸುಕ್ರಿಸ್ತನ ಜೀವನ ಮತ್ತು ಸಂದೇಶವನ್ನು ಪ್ರಕಟಪಡಿಸುವ ಸುವಾರ್ತೆ, ಪತ್ರಿಕೆ ಹಾಗೂ ಪ್ರಕಟಣೆಗಳನ್ನು ಒಳಗೊಂಡ ಹೊಸ ಒಡಂಬಡಿಕೆಯಲ್ಲಿನ ಮೊದಲು ನಾಲ್ಕು ಗ್ರಂಥಗಳಲ್ಲಿ ನಾಲ್ಕನೆಯ ಸುವಾರ್ತೆ. ಹೊಸ ಒಡಂಬಡಿಕೆಯಲ್ಲಿನ ಮೊದಲ ಮೂರು ಸುವಾರ್ತೆಗಳನ್ನು ಮ್ಯಾಥ್ಯೂ, ಮಾರ್ಕ್ ಮತ್ತು ಲ್ಯೂಕರು ಬರೆದಿದ್ದಾರೆ. ನಾಲ್ಕನೆಯ ಸುವಾರ್ತಾಕಾರ ಯೊಹಾನ (ಜಾನ್). ಮೊದಲ ಮೂರು ಸುವಾರ್ತೆಗಳು ಮುಖ್ಯವಾಗಿ ಗೆಲೀಲೀಯದಲ್ಲಿನ ಯೇಸುವಿನ ಜೀವನವನ್ನು ಕುರಿತಂತೆ ಚಿತ್ರಿಸುತ್ತದೆ. ಯಾವ ಸುವಾರ್ತೆಯೂ ಯೇಸುವಿನ ಜೀವನದ ಸಮಗ್ರ ಚಿತ್ರಣವನ್ನು ನೀಡುವುದಿಲ್ಲ. ಯೊಹಾನನ ಸುವಾರ್ತೆ ಉಳಿದ ಮೂವರ ಸುವಾರ್ತೆಗಳಿಗಿಂತ ಹಲವು ವಿಷಯಗಳಲ್ಲಿ ಭಿನ್ನವಾಗಿದೆ. ಮೊದಲ ಮೂರು ಸುವಾರ್ತೆಗಳಲ್ಲಿ ಇರುವ ಸಂಗತಿಗಳನ್ನು ದಾಖಲೆ ಮಾಡದೆ ಅವುಗಳಲ್ಲಿಲ್ಲದ ಅನೇಕ ಘಟನೆಗಳನ್ನೂ ಬೋಧನೆಗಳನ್ನೂ ವಿವರಗಳನ್ನೂ ಉಲ್ಲೇಖಿಸಿದೆ.

ಇದನ್ನು ಎಫಿಸಸ್ ಎಂಬ (ಈಗಿನ ತುರ್ಕಿ ದೇಶದ ಪಶ್ಚಿಮ ತೀರದಲ್ಲಿದೆ). ಪ್ರಸಿದ್ಧವಾದ ಪಟ್ಟಣದಲ್ಲಿ ಕ್ರಿ.ಶ. 90-100 ಅವಧಿಯಲ್ಲಿ ಬರೆದಿರಬಹುದು ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಈ ಸುವಾರ್ತೆ ಯೇಸುಯುಡೇಯದಲ್ಲಿ ಮಾಡಿದ ಕಾರ್ಯಗಳನ್ನು ಮುಖ್ಯವಾಗಿ ವಿವರಿಸುತ್ತದೆ. ಜೆರುಸಲೆಮಿನಲ್ಲಿ ಯೇಸು ಮಾಡಿದ ಧರ್ಮೋಪದೇಶ ಹಾಗೂ ಆತ ಸಾರ್ವಜನಿಕವಾಗಿ ಸಭೆಯ ಆರಂಭದಲ್ಲಿಯೇ ತಾನು ದೇವರ ಪುತ್ರ ಎಂದು ಸಾಧಿಸಿ ತೋರಿಸಿದುದನ್ನು ವಿವರವಾಗಿ ಚಿತ್ರಿಸುತ್ತದೆ. ಯೊಹಾನನ ಪ್ರಕಾರ ಈ ಜಗತ್ತು ಉಗಮವಾಗುವ ಮೊದಲೇ ಯೇಸು ಇದ್ದ. ಅವನು ಮಾನವ ರೂಪದಲ್ಲಿರುವ ದೇವನ ಶಬ್ದ. ಯೇಸು ತನಗೆ ತಾನೇ ಹೇಗೆ ದೇವರ ಶಬ್ದವಾಗಿ, ದೇವರ ಮಗನಾಗಿ ಅವತರಿಸಿದ ಎಂಬುದನ್ನು ನಿರೂಪಿಸಲು ಯೊಹಾನನು ಅವನ ಕ್ರಿಯೆ ಹಾಗೂ ಬೋಧನೆಗಳ ಕಥೆಗಳನ್ನು ಹೇಳುತ್ತಾನೆ.

ಈ ಕೃತಿಯ ರಚನೆಗೆ ಮುಖ್ಯವಾಗಿ ನಾಲ್ಕು ಕಾರಣಗಳನ್ನು ಕೊಡಲಾಗಿದೆ. (1) ಕ್ರೈಸ್ತಧರ್ಮ ಉಗಮವಾಗಿ ಸು. 60 ವರ್ಷಗಳಾಗಿದ್ದವು. ಯೆಹೂದ್ಯರಲ್ಲದ ಅನ್ಯ ಜನರಿಗೆ ಇದರ ಪರಿಚಯವಿದ್ದು, ಅವರ ತಾರ್ಕಿಕ ಮತ್ತು ತಾತ್ತ್ವಿಕ ಜ್ಞಾನಕ್ಕೆ ತಕ್ಕಂತೆ ಕ್ರೈಸ್ತಧರ್ಮ ಹೊಸ ರೀತಿಯಲ್ಲಿ ಪ್ರಚುರವಾಗಬೇಕಿತ್ತು. (2) ಬ್ಯಾಪ್ಟಿಸ್ಟ್ ಪಂಥಾಭಿಮಾನಿಗಳಿಗೆ ಸರಿಯಾದ ತಿಳಿವಳಿಕೆಯನ್ನು ಉಂಟುಮಾಡಬೇಕಿತ್ತು. (3) ಯೆಹೂದಿ ಕ್ರೈsಸ್ತರಿಗೆ ಪ್ರೋತ್ಸಾಹವನ್ನು ತುಂಬಬೇಕಾಗಿತ್ತು. (4) ಒಟ್ಟಾರೆಯಾಗಿ ಕ್ರೈಸ್ತರಿಗೆ ಹಾಗೂ ಯೆಹೂದ್ಯೇತರರಿಗೆ ಪ್ರೋತ್ಸಾಹ ನೀಡಬೇಕಾಗಿತ್ತು. ಚಾರಿತ್ರಿಕ ವ್ಯಕ್ತಿಯಾದ ಯೇಸುವಿನ ಮಾನವತ್ವ ಮತ್ತು ದೈವತ್ವಗಳನ್ನು ಅಲ್ಲಗಳೆಯುವ ಜನರಿಗೆ ಸರಿಯಾದ ತಿಳಿವಳಿಕೆಯನ್ನುಂಟುಮಾಡಿ ಯೇಸುವಿನ ಮಾನವತ್ವವನ್ನೂ ದೈವತ್ವವನ್ನೂ ಸಿದ್ಧಾಂತಪಡಿಸಿಸುವುದು ಈ ಸುವಾರ್ತೆಯ ರಚನೆಯ ಹಿಂದಿನ ಉದ್ದೇಶವಾಗಿದೆ. ಯೊಹಾನ ಒಂದು ಪರಂಪರೆಯನ್ನು ನಿರ್ಮಿಸಿದ ಐತಿಹಾಸಿಕ ವ್ಯಕ್ತಿಯಾಗಿದ್ದನೆಂಬುದನ್ನು ಒಪ್ಪದ ಜನ ಈತನ ಮೇಲೆ ಆಧ್ಯಾತ್ಮರಹಸ್ಯಜ್ಞಾನವಾದಿಗಳ ಅಥವಾ ಗ್ರೀಕ್ ಪಂಡಿತರ ಪ್ರಭಾವವಾಗಿದೆ ಎಂದು ಅಭಿಪ್ರಾಯಪಡುತ್ತಾರೆ.

(ಎಸ್.ಎ.ಕೆ.ಯು.)