ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಕ್ತಕಾರಿ ಹುಳು
ರಕ್ತಕಾರಿ ಹುಳು - ಪ್ರಾಣಿಪ್ರಪಂಚದ ಚಪ್ಪಟೆಹುಳುಗಳು (ಪ್ಲಾಟಿಹೆಲ್ಮಿಂತಿಸ್) ವಂಶಕ್ಕೆ ಸೇರಿದ ಪರತಂತ್ರಜೀವಿ (ಬ್ಲಡ್ ಫ್ಲೂಕ್). ಈ ಹುಳುಗಳು ಮನುಷ್ಯ ಮತ್ತು ಇತರ ಕಶೇರುಕಪ್ರಾಣಿಗಳ ರಕ್ತನಾಳಗಳಲ್ಲಿ ಪರತಂತ್ರ ಜೀವಿಗಳಾಗಿ ಇರುತ್ತವೆ. ಮನುಷ್ಯರಲ್ಲಿ ಕಂಡುಬರುವ ರಕ್ತಕಾರಿ ಹುಳುವಿನ ಜೈವಿಕನಾಮ ಸಿಸ್ಟೊಸೋಮ ಹೆಮಟೋಬಿಯಮ್. ಇನ್ನಿತರ ಕಶೇರುಕಗಳಲ್ಲಿ ಪರತಂತ್ರ ಜೀವಿಗಳಾಗಿರುವಂಥವು ಎಂದರೆ ಸಿ. ಮ್ಯಾನ್ಸೊನಿ, ಸಿ. ನೆಸಾಸ, ಸಿ. ಬೊವಿಸ್ ಮುಂತಾದವು. ಗಂಡು ಮತ್ತು ಹೆಣ್ಣುಗಳ ನಡುವೆ ಸಾಕಷ್ಟು ಭಿನ್ನತೆ ಇದೆ. ಲೈಂಗಿಕ ದ್ವಿರೂಪತೆ (ಸೆಕ್ಷುಯಲ್ ಡೈಮಾರ್ಫಿಸಮ್) ಈ ಪ್ರಭೇದಗಳ ಸಾಮಾನ್ಯ ಗುಣ, ಚಿಕ್ಕ ಗಂಡು ಮತ್ತು ಹೆಣ್ಣು ಹುಳುಗಳು ಬೇರೆಬೇರೆಯಾಗಿದ್ದರೆ, ಪ್ರೌಢ ಗಂಡುಹುಳು ಹೆಣ್ಣನ್ನು ಮೈಮೇಲೆ ಇಟ್ಟುಕೊಂಡು ಜೊತೆಗೂಡಿರುತ್ತದೆ. ಗಂಡು ಹುಳುವಿನ ದೇಹದ ಮೇಲೆ ತೋಡುರಚನೆ (ಗ್ರೂಪ್) ಇದೆ. ಇದಕ್ಕೆ ಕೆನಾಲಿಸ್ ಗೈನೆಕೊಫೊರಸ್ ಎಂದು ಹೆಸರು. ಈ ತೋಡು ರಚನೆಯಲ್ಲಿ ಹೆಣ್ಣುಹುಳು ಆಶ್ರಯ ಪಡೆದು ಗಂಡಿನೊಂದಿಗೆ ಇರುತ್ತದೆ. ಗಂಡು ಹುಳುಗಳು ಚಿಕ್ಕದಾಗಿದ್ದರೂ ದಷ್ಟಪುಷ್ಟವಾಗಿರುತ್ತವೆ. ಇವುಗಳ ಉದ್ದ 10-15 ಸೆಂ.ಮೀ; ಅಗಲ 1 ಮಿಮೀ. ಹೀರುತಟ್ಟೆಗಳು (ಸಕ್ಕರ್ಸ್) ಚೆನ್ನಾಗಿ ಬೆಳೆದಿದ್ದು ಅವುಗಳಲ್ಲಿ ಸೂಕ್ಷ್ಮ ತೆರನಾದ ಮುಳ್ಳುಗಳಿರುತ್ತವೆ. ಈ ಹುಳುಗಳು ಆತಿಥೇಯ ಪ್ರಾಣಿಯ ಚರ್ಮವನ್ನು ಭೇದಿಸಿ ದೇಹದೊಳಕ್ಕೆ ನುಸುಳುತ್ತದೆ.
ಮನುಷ್ಯರಲ್ಲಿ ಪರತಂತ್ರಜೀವಿಯಾದ ಸಿ. ಹೆಮಟೊಬಿಯಮ್ ಆಫ್ರಿಕ ಖಂಡದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಪ್ರೌಢಹುಳುಗಳು ರಕ್ತಮೂತ್ರ (ಹೆಮಟ್ಯೂರಿಯ) ರೋಗಕ್ಕೆ ಕಾರಣವೆನಿಸುತ್ತದೆ. ಹೆಣ್ಣು ಹುಳುಗಳು ಇಟ್ಟು ಮೊಟ್ಟೆಗಳು ಮೂತ್ರದ ಮೂಲಕ ಹೊರಬರುತ್ತವೆ. ಮೊಟ್ಟೆಗಳಿಂದ ಹೊರಬಂದ ಮಿರಸಿಡಿಯಮ್ ಎಂಬ ಡಿಂಬ ಈ ಹುಳುವಿನ ಬೆಳೆವಣಿಗೆಯ ಒಂದು ಹಂತ. ಈ ಡಿಂಬ ನೀರಿನಲ್ಲಿ ಸ್ವಲ್ಪ ಹೊತ್ತು ಈಜುತ್ತಲಿದ್ದು, ಮಧ್ಯವರ್ತಿ ಆತಿಥೇಯ ಪ್ರಾಣಿಯಾದ ಬಸವನಹುಳುವಿನ ದೇಹದಲ್ಲಿ ಸೇರಿಕೊಳ್ಳುತ್ತದೆ. ಕ್ರಮೇಣ ಮತ್ತಷ್ಟು ಬೆಳವಣಿಗೆ ಹೊಂದಿ ಸಿರ್‍ಕೇರಿಯ ಡಿಂಬ ಎಂಬ ರೂಪತಳೆಯುತ್ತದೆ. ಸಿರ್‍ಕೇರಿಯ ಎಂಬ ಬಸವನಹುಳುವಿನ ದೇದದಿಂದ ಹೊರಬಂದು ನೀರಿನಲ್ಲಿ ಈಜುತ್ತಿರುವಾಗ ಮನುಷ್ಯದೇಹವನ್ನು ಸ್ಪರ್ಶಿಸಿದರೆ ಅದು ಚರ್ಮವನ್ನು ಭೇದಿಸಿ ರಕ್ತನಾಳಗಳನ್ನು ಸೇರುತ್ತದೆ. ಭಾರತದಲ್ಲಿ ಸಿ. ಇಂಡಿಕಮ್, ಸಿ. ಸ್ಪಿಂಡಿಯಾಲಿಸ್ ಮತ್ತು ಸಿ. ಬೋವಿಸ್ ಎಂಬ ರಕ್ತಹುಳುಗಳು ದನಗಳಲ್ಲಿ ಪರತಂತ್ರಜೀವಿಗಳಾಗಿ ಇರುತ್ತವೆ. (ಎಚ್.ಎನ್.ವೈ.)