ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಕ್ತ ಸಂಬಂಧ

ವಿಕಿಸೋರ್ಸ್ದಿಂದ

ರಕ್ತ ಸಂಬಂಧ - ಪೂರ್ವಿಕರ (ಪೂರ್ವಜರು, ಮೂಲಪುರುಷರು) ವಂಶದಲ್ಲಿ ಹುಟ್ಟಿ, ಬೆಳೆದುಬಂದಿರುವ, ಆ ವಂಶದ ಕೆಲವೊಂದು ಮೂಲಭೂತ ಲಕ್ಷಣಗಳು ಎನಿಸಿಕೊಂಡಿರುವ ವಂಶವಾಹೀಗುಣಗಳನ್ನು ಪಡೆದುಕೊಂಡು, ಬೇರೆ ಬೇರೆ ಕುಟುಂಬಗಳಿಗೆ ಸೇರಿರುವ ಸದಸ್ಯರಲ್ಲಿ (ಬಂದುಗಳು) ಕಂಡುಬರುವ ಸ್ವಭಾವ, ಗುಣ, ಇಲ್ಲವೆ ಸಂಬಂಧ (ಕಿನ್‍ಷಿಪ್). ಇದಕ್ಕೆ ಬಂಧುತ್ವ ಎಂಬ ಹೆಸರೂ ಇದೆ. ಹೀಗಾಗಿ ಈ ಪರಿಕಲ್ಪನೆ ಸಾಮಾಜಿಕ ಹಾಗು ಸಾಂಸ್ಕøತಿಕ ಅಂಶಗಳನ್ನು ಆಧರಿಸಿರುವಂಥದ್ದಾಗಿದೆ. ಇಲ್ಲಿ ವಿವಾಹ ಎನ್ನುವುದು ರಕ್ತಸಂಬಂಧವನ್ನು ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಾನವಜೀವನದ ಮೂರು ಮೂಲಭೂತ ಸಂಗತಿಗಳು ಎಂದರೆ ಸಂಭೋಗ, ಜನನ ಮತ್ತು ಮರಣ. ಸಂಭೋಗ ಎನ್ನುವುದು ಗಂಡು - ಹೆಣ್ಣುಗಳ ನಡುವೆ ಜರುಗುವ ಲೈಂಗಿಕ ಕ್ರಿಯೆ. ಜನನ ಎನ್ನುವುದು ಈ ಕ್ರಿಯೆಯ ಉತ್ತರೋತ್ತರ ಪರಿಣಾಮ. ಮರಣ ಎನ್ನುವುದು ವ್ಯಕ್ತಿಯ ಅವಸಾನಘಟ್ಟ, ಈ ಮೂರು ಪ್ರಕ್ರಿಯೆಗಳ ನಡುವೆ ಏರ್ಪಡುವ ಅಮೂರ್ತಬಂಧನವೇ ರಕ್ತಸಂಬಂಧ. ವ್ಯಕ್ತಿಯೊಬ್ಬನ ಮರಣ ಅವನ ಜೀವನ ಪ್ರಕ್ರಿಯೆಯಲ್ಲಿ ಸಂಬಂಧಿಗಳ ನಡುವೆ ಅಂತರವನ್ನು ಏರ್ಪಡಿಸುವುದಾದರೂ ಆ ಸ್ಥಾನದ ಪೂರೈಕೆಯ ಆವಶ್ಯಕತೆಯನ್ನು ಸೂಚಿಸುತ್ತದೆ.

ಈ ಮೂಲಭೂತ ಪರಿಕಲ್ಪನೆಗಳ ವಿಚಾರವಾಗಿ ತಾರ್ಕಿಕ ವಿಶ್ಲೇಷಣೆ ಮಾಡುವ ಕೆಲಸ ರಕ್ತಸಂಬಂಧದ ಅಧ್ಯಯನದಲ್ಲಿ ಅಡಕವಾಗಿದೆ. ಮನುಷ್ಯನ ಹೊರತಾಗಿ ಇತರ ಪ್ರಾಣಿಗಳಿಗೆ ಈ ಸಂಬಂಧವನ್ನು ಕಲ್ಪಿಸಿಕೊಳ್ಳುವ ಸಾಮಥ್ರ್ಯವಿರುವುದಿಲ್ಲ. ಇದು ಎಲ್ಲ ಸಾಮಾಜಿಕ ಸಂಬಂಧಗಳಿಗಿಂತಲೂ ಪ್ರಬಲವೆನಿಸುವ ಸಂಬಂಧವೂ ಹೌದು. ಸರಳಸಮಾಜಗಳಲ್ಲಿ ರಕ್ತಸಂಬಂಧ ಅವುಗಳ ಎಲ್ಲ ಅಂಗಗಳಲ್ಲಿಯೂ ಪ್ರಾಧಾನ್ಯವನ್ನು ಪಡೆದುಕೊಂಡಿವೆ. ರಕ್ತಸಂಬಂಧದ ಆಧಾರದ ಮೇಲೆ ಏರ್ಪಟ್ಟ ಗುಂಪು ಗಾತ್ರದಲ್ಲಿ ಅತಿದೊಡ್ಡದಾಗಿದ್ದರೆ ಅದರಿಂದ ಅನಾನುಕೂಲಗಳೂ ಹೆಚ್ಚುತ್ತವೆ. ಆದ್ದರಿಂದ ಎಲ್ಲ ಸಮಾಜಗಳಲ್ಲಿಯೂ ಅದರ ಗಾತ್ರವನ್ನೂ ನಿಯಂತ್ರಣಕ್ಕೆ ಒಳಪಡಿಸಲಾಗುತ್ತದೆ. ಇದು ಸಾಮಾನ್ಯವಾಗಿ ವಂಶಾನುಕ್ರಮದ ನಿಯಮಗಳ ಮೂಲಕ ನಡೆಯುವಂಥದು. ಪ್ರಾಥಮಿಕ ಸಂಬಂಧಿಗಳ ನಡುವಿನ ಲೈಂಗಿಕ ನಿಷೇಧದ ತತ್ತ್ವವನ್ನು ಆಧರಿಸಿ ಬಂಧುತ್ವ ವ್ಯವಸ್ಥೆಯ ಸೌಧವನ್ನು ನಿರ್ಮಿಸಲಾಗಿದೆ. ಪ್ರಾಥಮಿಕ ಬಂಧುಗಳೆಂದರೆ ಒಬ್ಬ ವ್ಯಕ್ತಿಯ ತಂದೆ, ತಾಯಿ, ಸಹೋದರ, ಸಹೋದರಿ, ಮಗ ಮತ್ತು ಮಗಳು, ಪ್ರಾಥಮಿಕ ಸಂಬಂಧಿಗಳ ನಡುವಿನ ಲೈಂಗಿಕಸಂಬಂಧಕ್ಕೆ ಅಗಮ್ಯಗಮನ (ಇನ್‍ಸೆಸ್ಟ್) ಎಂದು ಹೆಸರು. ಈ ಸಂಬಂಧದ ನಿಷೇಧಕ್ಕೆ ಅಗಮ್ಯಗಮನ (ಇನ್‍ಸೆಸ್ಟ್ ಟ್ಯಾಬೂ) ಎಂದು ಹೆಸರು. ಈ ನಿಷೇಧವನ್ನು ಇತರ ದೂರದ ಕೆಲವು ಸಂಬಂಧಿಗಳಿಗೂ ವಿಸ್ತರಿಸಲಾಗುತ್ತದೆ. ಎಲ್ಲ ಸಮಾಜಗಳಲ್ಲಿಯೂ ಅಗಮ್ಯ ಗಮನದ ಕೆಲವು ಘಟನೆಗಳು ನಡೆದಿರುವ ಪ್ರಸಂಗಗಳೂ ಇವೆ. ಆದ್ದರಿಂದಲೇ ಈ ನಿಷೇಧದ ಅಗತ್ಯ ಕಂಡುಬಂದಿರುವುದು ಹಿಂದಿನ ಕಾಲದ ಕೇವಲ ಕೆಲವೇ ಸಮಾಜಗಳಲ್ಲಿ; ಆ ಸಮಾಜಗಳ ಕೆಲವು ವ್ಯಕ್ತಿಗಳಿಗೆ ಮಾತ್ರ. ವಿಶೇಷವಾಗಿ ರಾಜಕುಟುಂಬದವರಿಗೆ ಅಗಮ್ಯ ಗಮನಕ್ಕೆ ಅವಕಾಶ ದೊರೆಯುತ್ತಿತ್ತು. ಈಗಿನ ಯಾವುದೇ ಸಮಾಜದವರಲ್ಲಿ ಅಗಮ್ಯಗಮನ ಸಂಪ್ರದಾಯವಾಗಿ ಉಳಿದಿಲ್ಲ. ಬಂಧುತ್ವದ ಅಧ್ಯಯನದಲ್ಲಿ ಅಹಂ (ಈಗೋ) ಎಂಬ ಪರಿಕಲ್ಪನೆ ಪ್ರಧಾನವಾಗಿ ಇರುವಂಥದು. ಯಾವ ವ್ಯಕ್ತಿಯ ಮೂಲಕ ಸಂಬಂಧಗಳನ್ನು ಗುರುತಿಸುತ್ತೇವೆಯೋ ಅವನನ್ನು ಇಲ್ಲವೆ ಅವಳನ್ನು ಅಹಂ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ, ಇಬ್ಬರ ನಡುವಿನ ಕೆಲವು ಸಂಬಂಧಗಳ ಮಧ್ಯೆ ಕೊಂಡಿಯೆನಿಸುವ ಕೆಲವು ಬಂಧುವರ್ಗದವರೂ ಇರುತ್ತಾರೆ.

ಬಂಧುತ್ವದ ಶ್ರೇಣಿ: ಒಬ್ಬ ವ್ಯಕ್ತಿಗೆ ನೇರವಾಗಿ ಸಂಬಂಧಿಸಿದ ಬಂದುವಿಗೆ ಪ್ರಾಥಮಿಕ ಬಂದು ಎಂದು ಹೆಸರು. ಒಬ್ಬ ವ್ಯಕ್ತಿಗೆ ಇಂಥ ಆರು ರಕ್ತ ಸಂಬಂಧಿತ ಬಂದುಗಳು ಒಬ್ಬ ವೈವಾಹಿಕ ಸಂಬಂಧಿತ ಬಂಧುವೂ ಇರುತ್ತಾರೆ. ಇವರೆಲ್ಲ ಆ ವ್ಯಕ್ತಿಯ ಮೂಲ ಕುಟುಂಬದ ಸದಸ್ಯರೂ ಆಗಿರುತ್ತಾರೆ. ಒಬ್ಬ ವ್ಯಕ್ತಿಯ ಪ್ರಾಥಮಿಕ ಸಂಬಂಧಿಯ ಪ್ರಾಥಮಿಕ ಬಂಧುಗಳು ಅವನ (ಳ) ದ್ವಿತೀಯ ಸಂಬಂಧಿಗಳೆನಿಸುತ್ತಾರೆ. ಹೀಗೆ ಈ ಬಂಧುಗಳು ತೃತೀಯ, ಚತುರ್ಥ ಇತ್ಯಾದಿ ಶ್ರೇಣಿಗಳವರೆಗೆ ಬೆಳೆಸುತ್ತ ಹೋಗಬಹುದು. ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಶ್ರೇಣಿಗಳಲ್ಲಿರುವ ಬಂಧುವರ್ಗಗಳ ಪರಮಾವಧಿ ಸಂಖ್ಯೆ ಅನುಕ್ರಮವಾಗಿ 8, 33 ಮತ್ತು 151 ಆಗಿರುತ್ತದೆ. ಬಂಧುವರ್ಗಗಳ ಸಂಖ್ಯೆಯ ಆಧಾರದ ಮೇಲೆ ಬಂಧುತ್ವದ ಗುಂಪುಗಳನ್ನು ಸಂಕುಚಿತವ್ಯಾಪ್ತಿಯದು ಇಲ್ಲವೆ ವಿಶಾಲವ್ಯಾಪ್ತಿಯದು ಎಂದು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಸಂಕುಚಿತವ್ಯಾಪ್ತಿಯ ಬಂಧುತ್ವದ ಗುಂಪುಗಳಲ್ಲಿ ಕೆಲವೇ ಬಂಧುಗಳು ಸಮೀಪದಲ್ಲಿರುತ್ತಾರೆ. ವಿಶಾಲವ್ಯಾಪ್ತಿಯ ಗುಂಪುಗಳಲ್ಲಿ ಅನೇಕ ಬಂಧುಗಳು ವಿಸ್ತøತವಾದ ಪ್ರದೇಶದಲ್ಲಿ ಹಂಚಿಹೋಗಿರುತ್ತಾರೆ.

ವಂಶಾನುಕ್ರಮ: ಪ್ರತಿಯೊಂದು ಸಮಾಜದಲ್ಲಿಯೂ ಬಂಧುವರ್ಗದಲ್ಲಿಯ ಸಂಖ್ಯೆಯನ್ನು ಮಿತಗೊಳಿಸುವ ನಿಯಮಗಳಿರುತ್ತವೆ. ಮುಖ್ಯವಾಗಿ ವಂಶಾನುಕ್ರಮದ ನಿಯಮಗಳು ಬಂಧÀುಗಳ ಸಂಖ್ಯೆಯನ್ನು ಮಿತಿಯಲ್ಲಿಡುತ್ತದೆ. e್ಞÁತ ಇಲ್ಲವೆ ಕಲ್ಪಿತ ಹಿರಿಯಬಂಧುಗಳ ಮೂಲಕ ಬಂಧುವರ್ಗಗಳನ್ನು ಗುರುತಿಸುವುದು ಮತ್ತು ಬಂಧುಗುಂಪಿನ ನಿರ್ಮಾಣದಲ್ಲಿ ಅವರ ಸಂಬಂಧಗಳನ್ನು ಗಣನೆಗೆ ತೆಗೆದುಕೊಳ್ಳುವ ಕ್ರಮಕ್ಕೆ ವಂಶಾನುಕ್ರಮ (ಡಿಸೆಂಟ್) ಎಂದು ಹೆಸರು. ಪಿತೃಪ್ರಧಾನ, ಮಾತೃಪ್ರಧಾನ, ಸಂದಿಗ್ಧ, ದ್ವಿಪಾರ್ಶಕ ಮತ್ತು ಉಭಯ ಎಂಬ ವಂಶಾನುಕ್ರಮಗಳು ಪ್ರಮುಖವಾಗಿವೆ. ಮಾತೃಪ್ರಧಾನವಾದ (ಮೆಟ್ರಿಲೀನಿಯಲ್) ವಂಶಾನುಕ್ರಮವೇ ಹೆಚ್ಚು ಪ್ರಸಿದ್ಧವಾದ್ದು. ತಂದೆಯ ಮೂಲಕ ಏರ್ಪಟ್ಟ ಬಂದುಗಳನ್ನು ಪಿತೃಪ್ರಧಾನ (ಪೆಟ್ರಲೀನಿಯಲ್) ವರ್ಗದಲ್ಲಿ ಗುರುತಿಸಲಾಗುತ್ತದೆ. ಮಾತೃಪ್ರಧಾನ ವಂಶಾನುಕ್ರಮದಲ್ಲಿ ತಾಯಿಯ ಮೂಲಕ ಏರ್ಪಟ್ಟ ಬಂಧುಗಳನ್ನು ಗುರುತಿಸಲಾಗುತ್ತದೆ. ಸಂದಿಗ್ಧ ವಂಶಾನುಕ್ರಮದಲ್ಲಿ ತಂದೆ ಇಲ್ಲವೆ ತಾಯಿಯ ಮೂಲಕ ಏರ್ಪಟ್ಟ ಬಂಧುಗಳನ್ನು ಗಣನೆಗೆ ತೆಗೆದುಕೊಳ್ಳುವುದಾದರೂ ಈ ಪ್ರಕ್ರಿಯೆ ಬದಲಾವಣೆಯಾಗುವಂಥದು. ಉಭಯ ವಂಶಾನುಕ್ರಮದವರನ್ನೂ ಇನ್ನಿತರ ಉದ್ಧೇಶಗಳಿಗೆ ತಾಯಿಯ ಮೂಲಕದ ಬಂಧುವರ್ಗದವರನ್ನೂ ಸಮಾಜದಲ್ಲಿ ಒಬ್ಬ ಗಂಡಸಿನ ಸ್ವತ್ತು (ಭೂಮಿ ಮತ್ತು ಮನೆ) ಅವನ ಮಗನಿಗೂ ಅವನ ಚರಸ್ವತ್ತು, ಹಣ, ಪ್ರಾಣಿಗಳು ಇತ್ಯಾದಿ ಅವನ ಸಹೋದರಿಯ ಮಗನಿಗೂ ಸೇರುತ್ತವೆ.

ವಂಶಾನುಕ್ರಮದಿಂದ ಉದ್ಭವಿಸುವ ಬಂಧುಗಳ ಗುಂಪುಗಳಿಗೆ ನಿರ್ದಿಷ್ಟ ಹೆಸರುಗಳಿವೆ. ಪಿತೃಪ್ರಧಾನ ಮತ್ತು ಮಾತೃಪ್ರಧಾನವೆನಿಸುವ ವಂಶಾನುಕ್ರಮಗಳಿಂದ ಪೀಳಿಗೆ (ಲೀನಿಯೇಜ್), ಕುಲ (ಕ್ಲ್ಯಾನ್), ಸಂಬಂಧಿತ ಕುಲಗುಂಪು (ಪ್ರೇಟೀ), ಏಕಾಂಶ ಕುಲಗುಂಪು (ಮಾಯ್ಟಿ) ಇತ್ಯಾದಿ ಬಂದುಗುಂಪುಗಳು ಉಂಟಾಗುತ್ತವೆ. ದ್ವಿಪಾಶ್ರ್ವಕ ವಂಶಾನುಕ್ರಮದಿಂದ ಬಂಧುಬಳಗವೆಂಬ ಗುಂಪು ಏರ್ಪಡುತ್ತದೆ. ದ್ವಿಪಾಶ್ರ್ವಕ ವಂಶಾನುಕ್ರಮದಲ್ಲಿ ತಂದೆ ಮತ್ತು ತಾಯಿಯರ ಬಳಗದ ನಿಯಮಿತ ಸಂಖ್ಯೆಯ ಬಂದುವರ್ಗದವರನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಬಂಧುತ್ವ ಪದಗಳು: ಪ್ರತಿಯೊಂದು ಬಂಧುತ್ವದ ವ್ಯವಸ್ಥೆಯ ಬಂಧುವರ್ಗದವರನ್ನು ಗುರುತಿಸಲು ಕೆಲವೊಂದು ವಿಶಿಷ್ಟ ಪದಗಳನ್ನು ಬಳಸಲಾಗುತ್ತದೆ. ಇವಕ್ಕೆ ಬಂದುತ್ವಪದಗಳೆಂದು ಹೆಸರು. ಇದು ಬಂಧುತ್ವದ ಶಾಬ್ದಿಕಅಂಶ. ಬಂಧುತ್ವಪದಗಳ ಆಧಾರದ ಮೇಲೆ ಕೆಲವೊಂದು ವಿದೇಶೀ ಸಮೂಹಗಳಿಗೆ ಸಂಬಂಧಿಸಿದಂತೆ ಆರು ಮುಖ್ಯವಾದ ಬಂಧುತ್ವ ವ್ಯವಸ್ಥೆಗಳನ್ನು ಗುರುತಿಸಲಾಗಿದೆ. ಅವು ಯಾವುವೆಂದರೆ ಒಮಾಹ, ಕ್ರೊ, ಇರೊಕ್ವೀಸ್, ಹಪೈಯನ್, ಎಸ್ಕಿಮೋ ಮತ್ತು ಸೂಡಾನೀಸ್.

ಬಂಧುತ್ವ ಪದಗಳನ್ನು ಉಪಯೋಗದ ರೀತಿ, ಅವುಗಳ ಭಾಷಿಕ ರಚನೆ ಮತ್ತು ಅವುಗಳ ಉಪಯೋಗದ ವ್ಯಾಪ್ತಿಯ ಆಧಾರದ ಮೇಲೆ ವರ್ಗೀಕರಿಸಲಾಗಿದೆ. ಉಪಯೋಗರೀತ್ಯದ ವರ್ಗೀಕರಣದಲ್ಲಿ ಉಲ್ಲೇಖಿತ ಪದಗಳು ಮತ್ತು ಸಂಭೋಧಿತ ಪದಗೂ ಎಂಬ ಎರಡು ವರ್ಗಗಳಿವೆ. ಭಾಷಿಕ ರಚನೆಯ ವರ್ಗೀಕರಣದಲ್ಲಿ ಅವಿಭಜಿತ, ಸಾಧಿತ ಮತ್ತು ವರ್ಣನಾತ್ಮಕವೆಂಬ ಮೂರುವರ್ಗಗಳಿವೆ. ಉಪಯೋಗದ ವ್ಯಾಪ್ತಿ ಆಧಾರಿತ ವರ್ಗೀಕರಣದಲ್ಲಿ ಸೂಚಕ ಮತ್ತು ವಿಂಗಡಿಕೆಯ ವರ್ಗಗಳಿವೆ.

ಹತ್ತೊಂಬತ್ತೆನೆಯ ಶತಮಾನದಲ್ಲಿ ಅಮೆರಿಕ ಮಾನವಶಾಸ್ತ್ರಜ್ಞ ಲೆವಿಸ್ ಹೆನ್ರಿ ಮಾರ್ಗನ್ ಎಂಬವ ಬಂಧುತ್ವಪದಗಳ ಬಗ್ಗೆ ಶಾಸ್ತ್ರೀಯ ಅಧ್ಯಯನವನ್ನು ಪ್ರಾರಂಭಿಸಿದ. ಬಳಿಕ ಅಮೆರಿಕದ ಮತ್ತೊಬ್ಬ ಮಾನವಶಾಸ್ತ್ರಜ್ಞ ಎ. ಎಲ್. ಕ್ರೋಬರ್ (1876 - 1960) ಕೆಲವಾರು ತಾರ್ಕಿಕರೂಪದ ತತ್ತ್ವಗಳನ್ನು ಮುಂದಿಟ್ಟ. ತಲೆಮಾರು, ತಾರತಮ್ಯದ ವಯಸ್ಸು, ಏಕರೇಖಾತ್ಮಕತೆ ಅಥವಾ ಅನುಷಂಗಿಕತೆ, ಸಂಬಂಧಿಯ ಲಿಂಗ, ರಕ್ತಸಂಬಂಧಿ ಅಥವಾ ವೈವಾಹಿಕ ಸಂಬಂಧಿ, ಸ್ಥಾನ ಅಥವಾ ಜೀವನಸ್ಥಿತಿ ಮತ್ತು ಸಂಬಂಧಿಯ ಜೀವನಸ್ಥಿತಿ - ಇವೇ ಆ ತತ್ತ್ವಗಳಾಗಿವೆ. ಬಂಧುತ್ವ ವರ್ತನೆ: ಬಂಧುಗಳು ಪರಸ್ಪರ ಹೇಗ ವರ್ತಿಸಬೇಕೆಂಬುದನ್ನು ಪ್ರತಿಯೊಂದು ಸಮಾಜದಲ್ಲೂ ಸೂಚಿಸಲಾಗಿದೆ. ಪರಸ್ಪರ ಕ್ರಿಯೆಯ ಆಧಾರದ ಮೇಲೆ ಈ ವರ್ತನೆಗಳಿಗೆ ಬೇರೆ ಬೇರೆ ಹೆಸರುಗಳಿವೆ. ಇವುಗಳಲ್ಲಿ ಮುಖ್ಯವಾದುವೆಂದರೆ: ತಪ್ಪಿಸಿಕೊಳ್ಳುವಿಕೆ, ವಿನೋದಸಂಬಂಧ, ಸೋದರಮಾವನ ಪ್ರಭಾವೀ ಸಂಬಂಧ, ಸೋದರತ್ತೆಯ ಪ್ರಭಾವೀ ಸಂಬಂಧ, ಮಗುವಿನ ಮೂಲಕ ಜನ್ಮದಾದರನ್ನು ಕರೆಯುವುದು ಇತ್ಯಾದಿ.

ತಪ್ಪಿಸಿಕೊಳ್ಳುವಿಕೆ: ಸೊಸೆ ಅತ್ತೆ - ಮಾವಂದಿರಿಂದ ತಪ್ಪಿಸಿಕೊಳ್ಳುವುದು ಎಲ್ಲ ಸಮಾಜಗಳಲ್ಲಿ ಸಾಮಾನ್ಯ. ಅಳಿಯ ಅತ್ತೆ - ಮಾವಂದಿರಿಂದ ತಪ್ಪಿಸಿಕೊಳ್ಳುವುದು ಕೆಲವು ಸಮಾಜಗಳಲ್ಲಿ ಕಂಡಬಂದಿದೆ. ಸಂಭಾವ್ಯ ಸಾಧ್ಯವಾದ ಉದ್ವೇಗವನ್ನು ಕಡಿಮೆಮಾಡುವುದೇ ಇದರ ಉದ್ದೇಶ. ಇನ್ನು ಕೆಲವು ಸಮಾಜಗಳಲ್ಲಿ ಸಹೋದರ - ಸಹೋದರಿಯರು ಒಂದೇ ಮನೆಯಲ್ಲಿ ವಾಸಿಸುವುದಿಲ್ಲ; ಒಟ್ಟಿಗೆ ಆಹಾರವನ್ನು ಸೇವಿಸುವುದಿಲ್ಲ.

ವಿನೋದ ಸಂಬಂಧ: ಸಂಬಂಧಿಗಳು ಅತಿನಿಕಟವಾದ ಸಂಪರ್ಕವನ್ನಿಟ್ಟುಕೊಂಡು ವಿನೋದಕ್ರಿಯೆಗಳಲ್ಲಿ (ಜೋಕಿಂಗ್ ಆಕ್ಟಿವಿಟೀಸ್) ತೊಡಗಿರುತ್ತಾರೆ. ವಿನೋದದ ಜೊತೆಗೆ ಬೈಯುವುದು, ಹೆದರಿಸುವುದು, ಆಸ್ತಿ ನಾಶಮಾಡುವುದು, ಲೈಂಗಿಕಾಸಕ್ತಿಯನ್ನು ಪ್ರದರ್ಶಿಸುವುದು, ಹಿಯ್ಯಾಳಿಸುವುದು - ಇತ್ಯಾದಿ ವರ್ತನೆಗಳಿಗೂ ಈ ಸಂಬಂಧಿಕರಲ್ಲಿ ಕಂಡುಬರುತ್ತದೆ. ಈ ಸಂಬಂಧವನ್ನು ಹೊಂದಿದ ಸಂಬಂಧಿಕರ ಸ್ಥಾನಮಾನಗಳು ಸಮಾನವಾಗಿರುತ್ತವೆ. ಅವರಲ್ಲಿ ಅನ್ಯೋನ್ಯ ಆರ್ಥಿಕ ಸಹಕಾರವನ್ನು ಕಾಣಬಹುದು. ಅಳಿಯ - ಅತ್ತೆ, ಹೆಂಗಸು - ಗಂಡನ ತಮ್ಮ, ಗಂಡಸು - ಆತನ ಹೆಂಡತಿಯ ತಂಗಿ, ಅಜ್ಜ / ಅಜ್ಜಿ - ಮೊಮ್ಮಕ್ಕಳು ಮುಂತಾದ ಸಂಬಂಧಿಕರಲ್ಲಿ ವಿನೋದಸಂಬಂಧ ಇರುವುದು ಕಂಡುಬರುತ್ತದೆ.

ಸೋದರಮಾವನ ಪ್ರಭಾವೀ ಸಂಬಂಧ: ಕೆಲವು ಸಮಾಜಗಳಲ್ಲಿ ಸೋದರ ಮಾವನಿಗೂ ಮಹತ್ತರ ಸ್ಥಾನವನ್ನು ಕೊಡಲಾಗಿದೆ. ಈ ಸ್ಥಾನ ತಂದೆಗೆ ನೀಡುವ ಸ್ಥಾನಕ್ಕಿಂತಲೂ ಹೆಚ್ಚು ಮಹತ್ತ್ವದ್ದಾಗಿರುತ್ತದೆ. ಈ ಸಮಾಜದಲ್ಲಿ ಮಕ್ಕಳು ಹೆಚ್ಚಾಗಿ ತಮ್ಮ ಬಾಲ್ಯವನ್ನು ಸೋದರಮಾವನ ಮನೆಯಲ್ಲೇ ಕಳೆಯುವುದನ್ನು ಕಾಣಬಹುದು.

ಸೋದರತ್ತೆಯ ಪ್ರಭಾವೀ ಸಂಬಂಧ: ಇಲ್ಲಿ ಸೋದರತ್ತೆಗೆ ಮಹತ್ತ್ವದ ಸ್ಥಾನಮಾನವಿದೆ.

ಮಗುವಿನ ಮೂಲಕ ಜನ್ಮದಾತರನ್ನು ಕರೆಯುವುದು (ಟೆಕ್ನೋನೆಮಿ): ಒಬ್ಬ ಗಂಡು ಅಥವಾ ಹೆಣ್ಣನ್ನು ಅವನ ಅಥವಾ ಅವಳ ಮಕ್ಕಳ ಹೆಸರಿನ ಮೂಲಕ ಕರೆಯುವ ಪದ್ಧತಿ ಕೆಲವು ಸಮಾಜಗಳಲ್ಲಿ ಪ್ರಚಲಿತವಾಗಿದೆ. ಹಿಂದಿನ ಕಾಲದಲ್ಲಿ ಹೆಂಗಸರಿಗಿದ್ದ ಪ್ರಮುಖ ಸ್ಥಾನಮಾನವನ್ನು ಇದು ತೋರಿಸುತ್ತದೆಂದು ಕೆಲವು ಮಾನವಶಾಸ್ತ್ರಜ್ಷರು ಅಭಿಪ್ರಾಯಪಡುತ್ತಾರೆ.

ಗಂಡನ ಬಾಣಂತಿತನ: ಭಾರತದ ಮೇಘಾಲಯ ರಾಜ್ಯದ ಖಾಸಿ, ತಮಿಳುನಾಡಿನ ನೀಲಗಿರಿ ಪ್ರದೇಶದ ತೋಡ ಮುಂತಾದ ಆದಿವಾಸಿ ಜನಾಂಗಗಳಲ್ಲಿ ಮತ್ತು ಪ್ರಪಂಚದ ಹಲವಾರು ಆದಿವಾಸಿ ಜನಾಂಗಗಳಲ್ಲಿ ಕಂಡುಬರುವ ವಿಚಿತ್ರ ಪದ್ಧತಿ (ಕೂವಾಡ್). ಹೆಂಡತಿ ಬಸುರಿಯಾಗಿದ್ಧ ಸಮಯದಲ್ಲಿ ಹಾಗೂ ಬಾಣಂತಿಯಾಗಿರುವಾಗಿನ ಸಮಯದಲ್ಲಿ ಆಕೆಯ ಸ್ಥಿತಿಯ ಅನುಕರಣೆಯನ್ನು ಗಂಡ ಮಾಡುವುದೇ ಈ ಪದ್ಧತಿ. ಗಂಡ ಈ ಅವಧಿಯಲ್ಲಿ ಹೆಂಡತಿ ಅನುಸರಿಸುವ ಎಲ್ಲ ಕಟ್ಟುಪಾಡುಗಳನ್ನೂ ಅನುಸರಿಸುತ್ತಾನೆ. ಉದಾಹರಣೆಗೆ ಖಾಸಿ ಸಮಾಜದಲ್ಲಿ ಹೆಂಗಸು ಮಗುವನ್ನು ಪ್ರಸವಿಸಿದ ಬಳಿಕ ಪ್ರಸವಕ್ಕೆ ಸಂಬಂಧಿಸಿದ ದೇವತೆಗಳನ್ನು ಪೂಜಿಸುವ ಮೊದಲು ಬಟ್ಟೆಗಳನ್ನು ತೊಳೆಯಬಾರದು. ಹಳ್ಳ ದಾಟಬಾರದು ಎಂಬ ರೂಢಿಗಳಿವೆ. ಇದರಂತೆಯೇ ಆಕೆಯ ಗಂಡನೂ ಈ ನಿಯಮಾವಳಿಗಳನ್ನು ಅನುಸರಿಸುತ್ತಾನೆ.

ಗಂಡನ ಬಾಣಂತಿತನವೆಂಬ ಈ ಪದ್ಧತಿ ಹಿಂದಿನ ಕಾಲದಲ್ಲಿದ್ದ ಮಾತೃ-ಪಿತೃ ಪ್ರಧಾನ ಸಮಾಜದ ಪಳೆಯುಳಿಕೆಯಾಗಿದೆಯೆಂದು ಕೆಲವು ಮಾನಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಗಂಡ-ಹೆಂಡತಿ ಸಂಬಂಧವನ್ನು ದೃಢೀಕರಿಸಲು ಮತ್ತು ಪ್ರೀತಿ, ವಾತ್ಸಲ್ಯಗಳನ್ನು ಹಂಚಲು ಈ ರೂಢಿ ಅಸ್ತಿತ್ವಕ್ಕೆ ಬಂತ್ತೆಂದು ಮತ್ತೆ ಕೆಲವು ಮಾನವಶಾಸ್ತ್ರಜ್ಞರು ಹೇಳಿದ್ದಾರೆ. ಗಂಡನ ಸಹಭಾಗಿತ್ವದಿಂದ ಹೆಂಡತಿಯ ಮಾನಸಿಕ ಸಾಮಥ್ರ್ಯ ವೃದ್ಧಿಯಾಗುವುದೆಂದೂ ಅಭಿಪ್ರಾಯಪಡಲಾಗಿದೆ. (ಎಚ್.ಕೆ.ಬಿ.) (ನಾ. ಸೋಮೆಶ್ವರ)