ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಘುನಾಥರಾವ್, ಆರ್
ಗೋಚರ
ರಘುನಾಥರಾವ್, ಆರ್ ಸು. 1860-1918. ಹೊಸಗನ್ನಡ ಅರುಣೋದಯ ಕಾಲದ ಭಾಷಾಸೇವಕರು. ಮೈಸೂರಿವನರು. ಮದರಾಸು ವಿಶ್ವವಿದ್ಯಾಲಯದ ಬಿ. ಎ. ಪದವೀಧರರಾಗಿ ಬೆಂಗಳೂರು. ಚಿತ್ರದುರ್ಗ, ಶಿವಮೊಗ್ಗ ಮುಂತಾದ ಕಡೆಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ಇವರು ಭೂಗೋಳ, ಇತಿಹಾಸ, ಇಂಗ್ಲಿಷ್ ವಿಷಯಗಳ ಬೋಧಕರಾಗಿದ್ದರೂ ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಹಲವು ಬಗೆಯಲ್ಲಿ ಶ್ರಮಿಸಿದರು. ಚಾರಿತ್ರಿಕ ಮತ್ತು ಶಾಸ್ತ್ರೀಯ ದೃಷ್ಟಿಯಿಂದ ಕನ್ನಡ ಭಾಷೆಯ ಅಧ್ಯಯನ ಕೈಗೊಂಡ ಇವರು ಭಾಷೆಯ ಸ್ವರೂಪ, ಬೆಳೆವಣಿಗೆ, ವರ್ಣಮಾಲೆ, ವ್ಯಾಕರಣ ಮೊದಲಾದ ವಿಷಯಗಳನ್ನು ಕುರಿತು ಅಭ್ಯಾಸಪೂರ್ಣ ಬರೆಹಗಳನ್ನು ಪ್ರಕಟಿಸಿದರು. ಈಸೋಪನ ನೀತಿ ಕಥೆಗಳು, ಕರ್ನಾಟಕ ವ್ಯಾಕರಣೋಪನ್ಯಾಸ ಮಂಜರಿ, ನೀತಿರತ್ನಾಕರ, ಸನಾತನ ಧರ್ಮದೀಪಿಕೆ, ದಿ ಆರ್ಟ್ ಆಫ್ ಟ್ರಾನ್ಸ್‍ಲೇಷನ್- ಇವು ಇವರ ಕೆಲವು ಕೃತಿಗಳು.
ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗಾಗಿಯೂ ಶ್ರಮಿಸಿದ ರಘುನಾಥರಾಯರು ಪರಿಷತ್ತಿನ ಕಾರ್ಯದರ್ಶಿಗಳಾಗಿಯೂ (1916-1918) ಸೇವೆ ಸಲ್ಲಿಸಿದ್ದಾರೆ.