ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಷ್ಯನ್ ಭಾಷೆ

ವಿಕಿಸೋರ್ಸ್ದಿಂದ
Jump to navigation Jump to search

ರಷ್ಯನ್ ಭಾಷೆ - ಇಂಡೋಯೂರೋಪಿಯನ್ ಭಾಷಾ ಪರಿವಾರದ ಸ್ಲಾವನಿಕ್ ವರ್ಗಕ್ಕೆ ಸೇರಿದ ಪೂರ್ವ ಸ್ಲಾವನಿಕ್ ಗುಂಪಿನ ಒಂದು ಪ್ರಮುಖ ಭಾಷೆ. 1979 ರ ಜನಗಣತಿಯ ಪ್ರಕಾರ ಇದು ಸು. 153.5 ಮಿಲಿಯನ್ ಜನರ ಮಾತೃಭಾಷೆ. ಇದು ಹಿಂದಿನ ಸೋವಿಯತ್ ಒಕ್ಕೂಟದ ಅಧಿಕೃತ ಭಾಷೆಯಾಗಿತ್ತು.

ರಷ್ಯನ್ ಭಾಷೆ ಇತರ ಸ್ಲಾವಿಕ್ ಭಾಷೆಗಳೊಂದಿಗೆ ಪರಸ್ಪರ ಸಂಬಂಧಹೊಂದಿದೆ. ಮುಖ್ಯವಾಗಿ ಪೋಲಿಷ್, ಜೆóಕ್, ಸ್ಲಾವಿಕ್, ಸ್ಲಾವೆನಿಯನ್, ಸರ್‍ಬೊ-ಕ್ರೋಷಿಯನ್, ಮ್ಯಾಸಿಡೋನಿಯನ್ ಹಾಗೂ ಬಲ್ಗೇರಿಯನ್ ಭಾಷೆಗಳೊಂದಿಗೆ ಆಂತರಿಕ ಸಂಬಂಧವನ್ನು ಹೊಂದಿದೆ.

ಮೂರು ಪ್ರಮುಖ ಉಪಭಾಷೆಗಳಿದ್ದು ಅವು ಉತ್ತರ, ಕೇಂದ್ರಿಯ ಹಾಗೂ ದಕ್ಷಿಣ ಉಪಭಾಷೆಗಳು. ಆಧುನಿಕ ಸಾಹಿತ್ಯದ ರಷ್ಯನ್ ಭಾಷಾರೂಪ ಕೇಂದ್ರಿಯ ಉಪಭಾಷಾ ಮತ್ತು ಮಾಸ್ಕೋ ಸುತ್ತಮುತ್ತಲಿನ ಆಡುಭಾಷಾ ರೂಪವನ್ನು ಹೆಚ್ಚಾಗಿ ಆಧರಿಸಿದೆ. ವೋಲ್ಗಾ ಬುಡಕಟ್ಟಿನವರು ಮಾತನಾಡುವ ಪ್ರಾಚೀನ ಬಲ್ಗೇರಿಯನ್ ಭಾಷೆ, ಚರ್ಚ್ ಹಾಗೂ ಸಾಹಿತ್ಯಕ ರಷ್ಯನ್ ಭಾಷೆ, ಹದಿನೇಳನೆಯ ಶತಮಾನದವರೆಗೂ ಬದಲಾಗದೆ ಹಾಗೆಯೇ ಉಳಿಯಿತು. ಇದರಿಂದ ರಷ್ಯನ್ ಭಾಷೆಯ ಆಕೃತಿಮಾತ್ಮಕ ಮತ್ತು ವಾಕ್ಯಾತ್ಮಕ ಬೆಳವಣಿಗೆಯನ್ನು ಐತಿಹಾಸಿಕವಾಗಿ ವಿವರಿಸುವುದು ಕಷ್ಟ.

 ರಷ್ಯನ್ ವರ್ಣಮಾಲೆಯಲ್ಲಿ 33 ಅಕ್ಷರಗಳಿವೆ. ಅವುಗಳದು ಸಿರಿಲಿಕ್ ಅಕ್ಷರ ರೂಪ. ಈ ಭಾಷೆಯ ಬರವಣಿಗೆ ಹೆಚ್ಚಾಗಿ ಗ್ರೀಕ್ ಮತ್ತು ರೋಮನ್ ಭಾಷೆಯ ವರ್ಣಗಳನ್ನೇ ಅಧರಿಸಿದೆ. ಒಂದು ವರ್ಣಕ್ಕೆ ಒಂದು ಧ್ವನಿ ಎಂಬ ಸೂತ್ರ ಇದರದು. ವರ್ಣಗಳಾದ b,bi ಮತ್ತು b ಪದದ ಅಥವಾ ಅಕ್ಷರದ ಆದಿಯಲ್ಲಿ ಬರುವುದಿಲ್ಲ. ಆದರೆ ಈ ವರ್ಣಗಳು ಸಹಿ, ಶೀರ್ಷಿಕೆ ಹಾಗೂ ವಿಶೇಷ ಬಳಕೆಯಲ್ಲಿ ಪ್ರಾಧಾನ್ಯವನ್ನು ಪಡೆದಿವೆ. ಸಾಮಾನ್ಯವಾಗಿ ಹೆಚ್ಚಿನ ವ್ಯಂಜನಗಳು ಉಚ್ಚಾರಣೆಯಲ್ಲಿ ಎರಡು ಭಿನ್ನ ಮೌಲ್ಯವನ್ನು ಪಡೆದಿವೆ. ಮೊದಲನೆಯದು ಸಾಮಾನ್ಯ ಕಠಿಣ ಅಥವಾ ತಾಲೌವ್ಯೇತರ ಧ್ವನಿ ಮೌಲ್ಯ ಮತ್ತು ಎರಡನೆಯದು ಮೃದು ಅಥವಾ ತಾಲವ್ಯೀಕರಣ ಧ್ವನಿ ಮೌಲ್ಯ. ಈ ಭಾಷೆಯ ಕಾಗುಣಿತ ಇಂಗ್ಲಿಷ್ ಕಾಗುಣಿತದಂತಿದ್ದು, ಚಾರಿತ್ರಿಕ್ ಸೂತ್ರಗಳು ಒಟ್ಟಾಗಿ ಧ್ವನ್ಯಾತ್ಮಕತೆಯ ವಿಶೇಷ ಗುಣವಾಗಿದೆ. ಆದರೂ ಅವು ಹೆಚ್ಚು ಕಾಲ ಹಾಗೆಯೇ ಉಚ್ಚಾರಣೆಯಲ್ಲಿ ಉಳಿಯದಿದ್ದರೂ ಕೆಲವು ಪದಗಳು ಪ್ರಾಚೀನ ಕಾಗುಣಿತವನ್ನೇ ಇಂದಿಗೂ ಬಳಕೆಯಲ್ಲಿ ಉಳಿಸಿಕೊಂಡಿವೆ.


ರಷ್ಯನ್ ಭಾಷೆಯಲ್ಲಿ ಒಟ್ಟು 42 ವಿಭಾಜಕ ಧ್ವನಿಗಳಿವೆ. ಅವುಗಳನ್ನು ಒತ್ತು ಸ್ವರಗಳು (6) ಮತ್ತು ವ್ಯಂಜನಗಳು (33) ಎಂದು ಎರಡು ವಿಭಾಗಗಳಾಗಿ ವರ್ಗೀಕರಿಸಿದೆ. ಇಲ್ಲಿ ಧ್ವನಿಮಾತ್ಮಕ ಬೆಳೆವಣಿಗೆ ಮುಖ್ಯವಾಗಿ ಸ್ಥಳೀಯ ಉಪಭಾಷಾ ರಚನೆಯೊಂದಿಗೆ ವಿಶೇಷ ಸಂಬಂಧ ಹೊಂದಿದ್ದು, ಶಿಷ್ಟ ಭಾಷೆಯ ವ್ಯವಸ್ಥಿತ ಲಕ್ಷಣವನ್ನು ಉಳಿಸಿಕೊಂಡಿದೆ. ಪ್ರಾದೇಶಿಕ ಅಥವಾ ಸಾಮಾಜಿಕ ಉಪಭಾಷಾ ಧ್ವನಿ ಭಿನ್ನತೆಗಳು ವಿಶೇಷವಾಗಿವೆ. ಅಲ್ಲದೆ ಇಂಗ್ಲಿಷ್, ಜರ್ಮನ್ ಫ್ರೆಂಚ್, ಫಿನ್ನಿಷ್, ಪೋಲಿಷ್, ಮತ್ತು ಡಚ್ ಭಾಷೆಯ ಧ್ವನಿ ಪ್ರಭಾವವನ್ನೂ ಆಧುನಿಕ ರಷ್ಯನ್ ಭಾಷೆಯಲ್ಲಿ ಕಾಣಬಹುದು.


ರಷ್ಯನ್ ವಿಶೇಷವಾಗಿ ವ್ಯಾಕರಣ ರೂಪಗಳಲ್ಲಿ ಶ್ರೀಮಂತ ಭಾಷೆ. ಇದರ ವ್ಯಾಕರಣಾಂಶ ಇಂಡೋಯುರೋಪಿಯನ್ ಭಾಷಾಪರಿವಾರದ ಭಾಷೆಗಳ ವ್ಯಾಕರಣಾಂಶಗಳಂತಯೇ ಇದೆ. ಲ್ಯಾಟಿನ್ ಮತ್ತು ಗ್ರೀಕ್‍ನಂತೆ ಇದು ಕೂಡ ಪ್ರತ್ಯಯಾತ್ಮಕ ಭಾಷೆ. ನಾಮಪದಗಳು, ಆರು ವಿಭಕ್ತಿ (ಪ್ರಥಮ, ದ್ವಿತೀಯಾ, ತೃತೀಯಾ, ಚತುರ್ಥ, ಷಷ್ಠಿ ಮತ್ತು ಸಪ್ತಮಿ), ಮೂರು ಲಿಂಗ (ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ) ಹಾಗೂ ಎರಡು ವಚನಗಳು (ಏಕ ಮತ್ತು ಬಹುವಚನ) ಕಂಡು ಬರುವುವು. ಇದರ ನಾಮಪದಗಳು ಇಂದಿಗೂ ಸಪ್ತಮಿ ಮತ್ತು ತೃತೀಯಾ ವಿಭಕ್ತಿ ರೂಪಗಳನ್ನು ಹೊಂದಿವೆ. ಆದರೆ ಕೆಲವು ಇಂಡೋಯುರೋಪಿಯನ್ ಭಾಷೆಗಳಲ್ಲಿ ಈ ಗುಣ ಬಹಳ ಹಿಂದೆಯೇ ಕಾಣೆಯಾಗಿತ್ತು. ಲಿಂಗಗಳು ಕ್ರಮೇಣ ಬಹುವಚನದಲ್ಲಿ ಬೇರೆಯಾಗಿವೆ. ಆದರೆ ಷಷ್ಠಿ ವಿಭಕ್ತಿಯನ್ನುಳಿದಂತೆ ಬಹುವಚನ ಒಂದೇ ಆಗಿದೆ. ನಪುಂಸಕ ಏಕವಚನದಲ್ಲಿ ಪುಲ್ಲಿಂಗಕ್ಕಿಂತ ಸ್ವಲ್ಪ ವ್ಯತ್ಯಾಸವುಂಟು. ಆದರೆ ಸ್ತ್ರೀಲಿಂಗ ಏಕವಚನ ವಿಭಕ್ತಿ ಮತ್ತು ಉಪಸರ್ಗಗಳಲ್ಲಿ ಅನೇಕ ವ್ಯತ್ಯಾಸಗಳಿವೆ. ನಾಮಪದ( ಮೂರು ಲಿಂಗ, ಆರು ವಿಭಕ್ತಿ ಎರಡು ವಚನರೂಪ). ಎರಡು ಗುಣವಾಚಕ ನಾಮಪದಗಳು (ಸರಳ ಮತ್ತು ಸಾಧಿತ ಗುಣವಾಚಕ) ಹಾಗೂ ಯಥೇಚ್ಚ ಕ್ರಿಯಾಪದಗಳಿರುವುದು ಈ ಭಾಷೆಯ ವ್ಯಾಕರಣ ವಿಶೇಷ. ವ್ಯಾಕರಣರೂಪ ಬದಲಾವಣೆಗಳನ್ನು ಚಾರಿತ್ರಿಕವಾಗಿ ಪ್ರಾಚೀನ ಚರ್ಚ್ ಸ್ಲಾವನಿಕ್ ಭಾಷಾ ಅಧ್ಯಯನದಿಂದ ಕಂಡುಕೊಳ್ಳಬಹುದು.

ಸರ್ವನಾಮ ಮತ್ತು ಗುಣವಾಚಕಗಳ ಬದಲಾವಣೆ ಪದರೂಪದೊಂದಿಗೆ ಬದ್ಧವಾಗಿದ್ದು ಕೆಲವೊಮ್ಮೆ ಮಾರ್ಪಾಟಾಗಿದೆ. ನಾಮ ಆಕೃತಿಮಾಗಳು ಹಳೆಯ ಇಂಡೋಯುರೋಪಿಯನ್ ಭಾಷೆಗಳ ನಾಮ ಆಕೃತಿಮಾ ರಚನೆಗಳಂತೆಯೇ ಇವೆ. ವಿಧೇಯ ವಿಶೇಷಣ, ತರತಮ ಮತ್ತು ಉತ್ತಮಪುರುಷ ರೂಪಗಳಿಗೆ ವಿಶೇಷ ರೂಪಗಳಿವೆ. ಕ್ರಿಯಾಪದಗಳು ಮೂರು ಕಾಲರೂಪಗಳನ್ನು ಮಾತ್ರ ಹೊಂದಿದೆ. ಪೂರ್ಣ ಮುಂದುವರಿಯುವ ಹಾಗೂ ಪುನರಾವರ್ತಿತ ಕ್ರಿಯೆಗಳನ್ನು ಅಭಿವ್ಯಕ್ತಿಸಲು ವಿಶೇಷ ಕ್ರಿಯಾರೂಪಗಳಿವೆ. ಅವುಗಳನ್ನು ವಿಶೇಷ ಕ್ರಿಯಾ ಆಕೃತಿಮಾ ರೂಪಗಳೆಂದು ಕರೆಯಬಹುದು. ಬಲಾಘಾತ ಇಲ್ಲಿಯ ಮುಖ್ಯ ಲಕ್ಷಣ. ಸ್ವರಾಘಾತ ಪದಗಳ ಅರ್ಥವನ್ನು ಬದಲಾಯಿಸುವುದಲ್ಲದೆ ನಿರ್ದಿಷ್ಟ ವ್ಯಾಕರಣರೂಪವನ್ನು ಕಾಣಬಹುದು. ಕ್ರಿಯಾ ಆಕೃತಿಮಾಗಳ ಸರಳೀಕರಣ ಹಾಗೂ ಸಂಕೀರ್ಣತೆ ಇಲ್ಲಿಯ ಗಮನಾರ್ಹ ಅಂಶ. ಕ್ರಿಯಾ ಪದಗಳನ್ನು ಪೂರ್ಣ ಕ್ರಿಯಾಪದ ಮತ್ತು ಅಪೂರ್ಣ ಕ್ರಿಯಾಪದವೆಂದು ಎರಡು ವರ್ಗಗಳಾಗಿ ವರ್ಗೀಕರಿಸಿದೆ. ಸಾಮಾನ್ಯ ಬಳಕೆಯಲ್ಲಿ ಕರ್ಮಣೀ ಪ್ರಯೋಗಗಳಿಲ್ಲ. ಆದರೆ ಸಂಭಾವನಾ ರೂಪದ ಅಸಮುಚ್ಚುಯಾತ್ಮಕ ಭೂತಕಾಲ ವಿಶೇಷಣರೂಪ ಹೆಚ್ಚಾಗಿ ಬಳಕೆಯಲ್ಲಿದೆ. ಅಲ್ಲದೆ ಇದರ ಜೊತೆಗೆ ಆತ್ಮಾರ್ಥಕ ಕ್ರಿಯಾರೂಪವೂ ಬಳಕೆಯಲ್ಲಿದೆ. ಬದಲಾಗದಿರುವ ಆತ್ಮಾರ್ಥಕ ಅಂತ್ಯಕ್ರಿಯಾ ರೂಪವನ್ನು ಬಿಟ್ಟರೆ ಬೇರಾವ ಕ್ರಯಾಪದಗಳೂ ಭಿನ್ನವಾಗಿಲ್ಲ.

ರಷ್ಯನ್ ಭಾಷೆಯ ವಾಕ್ಯಗಳಲ್ಲಿ ಮುಖ್ಯವಾಗಿ ಎರಡು ಮುಖ್ಯ ಅಂಶಗಳೆಂದರೆ ಅನ್ವಯ ಮತ್ತು ಪದಕ್ರಮ. ವಾಕ್ಯದಲ್ಲಿನ ಪದಕ್ರಮದಲ್ಲಿ ಯಾವುದೇ ನಿರ್ಭಂಧವೂ ಇಲ್ಲ. ಇಂಗ್ಲಿಷ್ ಪದಕ್ರಮದಂತೆಯೇ ಇದರ ಪದಕ್ರಮವೂ ಇದೆ. ರಷ್ಯನ್ ಆಡು ಭಾಷೆ ಮತ್ತು ಬರೆಹಭಾಷೆಯ ಮೇಲೆ ಚರ್ಚ್ ಸವನಿಕ್ ಪ್ರಭಾವ ಗಾಢವಾಗಿದೆ. ಅಲ್ಲದೆ ಪ್ರಾದೇಶಿಕ ಉಪಭಾಷಾ ಸ್ವೀಕಾರವನ್ನೂ ಗಮನಿಸಿದ್ದೆ ಆದರೆ ಇಂಗ್ಲಿಷ್ ಪ್ರಭಾವ ಹೆಚ್ಚು. ಅಲ್ಲದೆ ಇತರ ಭಾಷೆಗಳಾದ ಫ್ರೆಂಚ್, ಜರ್ಮನ್, ಫಿನ್ನಿಷ್, ಪೋಲಿಷ್, ಮತ್ತು ಡಚ್ ಭಾಷಾರೂಪಗಳು ಸಾಕಷ್ಟು ಪ್ರಮಾಣದಲ್ಲಿ ಮಿಳಿತಗೊಂಡಿವೆ. ಹಾಗಾಗಿ ರಷ್ಯನ್ ಸಾಹಿತ್ಯದಲ್ಲಿ ಅಂತಾರಾಷ್ಟ್ರೀಯ ವೈಜ್ಞಾನಿಕ ಪಾರಿಭಾಷಿಕ ಪದಗಳನ್ನು ಹೆಚ್ಚಾಗಿ ಗುರುತಿಸಬಹುದು. ರಷ್ಯನ್ ಭಾಷೆ ಇಂದಿನ ಆಗುಹೋಗುಗಳಿಗೆ ಹೊಂದಿಕೆಯಾಗುವ ರೀತಿಯಲ್ಲಿ ತನ್ನ ಕಟ್ಟುನಿಟ್ಟಾದ ವ್ಯಾಕರಣ ನಿರ್ಬಂಧವನ್ನು, ಅಪರೂಪದ ವರ್ಣವ್ಯವಸ್ಥೆಯನ್ನು ಸರಳ ಹಾಗೂ ಸೂಕ್ತರೀತಿಯಲ್ಲಿ ಬದಲಾಯಿಸಿಕೊಂಡ ಆಧುನಿಕ ಭಾಷೆ. ಈ ಭಾಷೆಯ ಸಾಹಿತ್ಯ ಪ್ರಪಂಚ ಸಾಹಿತ್ಯದಲ್ಲಿ ವಿಶೇಷ ಮನ್ನಣೆಗೆ ಪಾತ್ರವಾಗಿದೆ.

(ಆರ್.ಸಿ.ಎಸ್.)