ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಸ್ಕಿನ್, ಜಾನ್

ವಿಕಿಸೋರ್ಸ್ದಿಂದ

ಜಾನ್ ರಸ್ಕಿನ್ : - 1819-1900. ಪ್ರಸಿದ್ಧ ಇಂಗ್ಲಿಷ್ ಗದ್ಯಬರೆಹಗಾರ, ಕಲಾವಿಮರ್ಶಕ, ಸಮಾಜ ಸುಧಾರಕ. 1819 ಫೆಬ್ರವರಿ 8ರಂದು ಲಂಡನ್ನಿನಲ್ಲಿ ಜನಿಸಿದ. ಇವನ ತಂದೆತಾಯಿಗಳು ಸ್ಕಾಟಿಷ್ ಮೂಲದವರು. ತಂದೆ ದೊಡ್ಡ ಮದ್ಯವ್ಯಾಪಾರಿ. ಭೌದ್ಧಿಕವಾಗಿಯೂ ನೈತಿಕವಾಗಿಯೂ ಪ್ಯೂರಿಟನ್ ವಾತಾವರಣದಲ್ಲಿ ಬೆಳೆದ ರಸ್ಕಿನ್ ವಿಚಿತ್ರ ಮತ್ತು ಹರ್ಷರಹಿತ ಬಾಲ್ಯ ಕಳೆದ. ಈತ ತನ್ನ ತಾಯಿಯಿಂದ ಹಾಗೂ ಖಾಸಗೀ ಉಪಾಧ್ಯಾಯರಿಂದ ಗಣಿತ, ಚಿತ್ರಕಲೆ, ಸಂಗೀತ, ಅನಂತರ ಆಕ್ಸ್‍ಫರ್ಡ್‍ನ ಕ್ರೈಸ್ತ ಚರ್ಚ್ ಸೇರಿ 1842ರಲ್ಲಿ ಬಿ.ಎ. ಪದವಿಯನ್ನೂ 18943ರಲ್ಲಿ ಎಂ.ಎ. ಪದವಿಯನ್ನೂ ಗಳಿಸಿದ. 1848ರಲ್ಲಿ ವಿವಾಹವಾದ. ಆದರೆ ವೈವಾಹಿಕ ಜೀವನ ಇವನಿಗೆ ಸಂತೃಪ್ತಿ ತರಲಿಲ್ಲವಾಗಿ 1855ರಲ್ಲಿ ವಿಚ್ಛೇದನ ಪಡೆದ. ಅನಂತರ ಇಳಿವಯಸ್ಸಿನಲ್ಲಿ ಅರಳಿದ ಅನುರಾಗವೊಂದು ಕೂಡ ದುಃಖವನ್ನೇ ತಂದಿತು. 1869ರಲ್ಲಿ ಆಕ್ಸ್‍ಫರ್ಡ್‍ನಲ್ಲಿ ಲಲಿತಕಲೆಗಳ ಪ್ರಾಧ್ಯಾಪಕನಾದ. ಸುಮಾರು ಹನ್ನೊಂದು ವರ್ಷಗಳ ಸೇವೆ ಸಲ್ಲಿಸಿ ಆ ಹುದ್ದೆಗೆ ರಾಜೀನಾಮೆ ನೀಡಿದ (1884). ಸುಮಾರು ಇಪ್ಪತ್ತು ವರ್ಷಗಳ ಕಾಲ ಮಿದುಳುಜ್ವರಬಾಧೆಯಿಂದ ನರಳಿದ ಈತ ಇನ್‍ಪ್ಲುಯನ್‍ಜ ಕಾಯಿಲೆಗೆ ಬಲಿಯಾಗಿ 1900 ಜನವರಿ 20ರಂದು ನಿಧನ ಹೊಂದಿದ. ತಂದೆತಾಯಿಗಳ ಇಚ್ಛೆಯಂತೆ ಇವನು ಚರ್ಚ್‍ನ್ನು ಸೇರದಿದ್ದರೂ ಇವನ ನೈತಿಕ ಶ್ರದ್ಧೆ ಜೀವಮಾನದುದ್ದಕ್ಕೂ ಉಪದೇಶಕನನ್ನಾಗಿಯೇ ಇರಿಸಿತು. ಇವನ ಬರೆಹಗಳು ಇವನ ಜೀವಮಾನದ ಕಾಲದಲ್ಲಿಯೇ ಬಲವಾದ ವಿರೋಧವನ್ನು ತಂದವು. ಉದಾತ್ತ ಮನೋಭಾವ. ಉದಾರ ದೃಷ್ಟಿ ರಸ್ಕಿನ್‍ನಲ್ಲಿ ಪ್ರಧಾನವಾಗಿ ಕಂಡುಬರುತ್ತದೆ.

ರಸ್ಕಿನ್ ವಿಪುಲವಾಗಿ ಬರೆದಿದ್ದಾನೆ. ಮಾಡರ್ನ್‍ಪೆಯಂಟರ್ಸ್‍ನ ಮೊದಲನೆಯ ಸಂಪುಟ 1843ರಲ್ಲಿ ಪ್ರಕಟವಾಯಿತು. ಎರಡನೆಯ ಸಂಪುಟ 1846ರಲ್ಲೂ ಮೂರು ನಾಲ್ಕನೆಯ ಸಂಪುಟಗಳು 1856ರಲ್ಲೂ ಐದನೆಯ ಸಂಪುಟ 1860ರಲ್ಲೂ ಪ್ರಕಟವಾಯಿತು. ಅನಂತರ ದಿ ಸೆವೆನ್ ಲಾಂಪ್ಸ್ ಆಫ್ ಆರ್‍ಕಿಟೆಕ್‍ಚರ್ (1849), ದಿ ಸ್ಟೋನ್ಸ್ ಆಫ್ ವೆನಿಸ್ (1851-53). ಲೆಕ್ಚ್‍ರ್ಸ್ ಆನ್ ಆರ್‍ಕಿಟೆಕ್‍ಚರ್ ಅಂಡ್ ಪೆಯಿಂಟಿಂಗ್ (1854). ಎಲಿಮೆಂಟ್ಸ್ ಆಫ್ ಡ್ರಾಯಿಂಗ್ (1856)- ಹೀಗೆ ಹಲವಾರು ಗ್ರಂಥಗಳಲ್ಲಿ ಶಿಲ್ಪಕಲೆ, ಸೌಂದರ್ಯತತ್ತ್ವ ಮೊದಲಾದ ಸಂಗತಿಗಳನ್ನು ಕುರಿತು ವಿವೇಚಿಸಿದ್ದಾನೆ. ಅನ್‍ಟುದಿಸ್‍ಲಾಸ್ಟ್, ಮುನಿರಪಲ್‍ವೆರಿಸ್ (1862). ಸಿಸಮಿ ಅಂಡ್ ಲಿಲೀಸ್ (1865). ದಿ ಕ್ರೌನ್ ಆಫ್ ವೈಲ್ಡ್ ಆಲಿವ್ (1866), ಎಥಿಕ್ಸ್ ಆಫ್ ದಿ ಡಸ್ಟ್ (1866), ಟೈವರ್ ಅಂಡ್ ಟೈಡ್ (1867). ಇವು ಸಮಾಜಸುಧಾರಣೆ ಕುರಿತು ಪ್ರಯತ್ನಗಳಾಗಿವೆ.

ಇಂಗ್ಲೀಷ್ ಗದ್ಯಸಾಹಿತ್ಯದಲ್ಲಿ ಪ್ರಥಮ ಪಂಕ್ತಿಯ ಹಿರಿಯ ಸ್ಥಾನ ರಸ್ಕಿನ್‍ನದು. ಕಲೆಯಲ್ಲಿಯೂ ಜೀವನದ ಎಲ್ಲ ರಂಗಗಳಲ್ಲಿಯೂ ರಸ್ಕಿನ್ ಬಯಸಿದುದು ಪ್ರಾಮಾಣಿಕತೆಯನ್ನು, ನೈತಿಕ ಅಶ್ರದ್ಧೆಯನ್ನೂ ಕಲೆಯಲ್ಲಿಯ ಅಪ್ರಾಮಾಣಿಕ ಆಡಂಬರವನ್ನೂ ಈತ ಅಕ್ಷೇಪಿಸಿದ. ಮರುಕ, ಮಾನವೀಯತೆಗಳಿಲ್ಲದ, ಹಣದ ಗಳಿಕೆಯೊಂದೇ ಗುರಿಯಾದ ಆರ್ಥಿಕ ಮತ್ತು ಸಾಮಾಜಿಕ ತತ್ತ್ವಗಳನ್ನು ಕಟುವಾಗಿ ಖಂಡಿಸಿದ. ಕಲೆ ಸ್ವಭಾವತಃ ಧರ್ಮ ಮತ್ತು ಇತರ ಶ್ರೇಷ್ಠ ಅಂಶಗಳನ್ನೊಳಗೊಂಡ ಕ್ರಿಯೆಯೆಂದೂ ಪರಮಾತ್ಮನ ಸಹಜ ಸೌಂದರ್ಯ ಮತ್ತು ವೈಭವ ತೋರಿಸಿ ಕೊಡುವ ಪ್ರಮಾಣವೆಂದೂ ಅಭಿಪ್ರಾಯಪಟ್ಟ. ಬಾಲ್ಯದ ಬೈಬಲ್ ಅಧ್ಯಯನ ಇವನ ಶೈಲಿಯ ಮೇಲೆ ಪ್ರಭಾವವನ್ನು ಬೀರಿತು. ಕಾರ್ಲೈಲ್‍ನ ಬರೆವಣಿಗೆ ಕೂಡ ಇವನ ಮೇಲೆ ಅಪಾರ ಪ್ರಭಾವ ಬೀರಿದೆ. ಅಸಹನೆ, ಶೀಘ್ರಕೋಪಗಳು ಪ್ರಾರಂಭದ ಕೃತಿಗಳ ಶೈಲಿಯನ್ನು ಸ್ವಲ್ಪ ಹದಗೆಡಿಸಿವೆಯಾದರೂ ಅನಂತರದ ಕೃತಿಗಳಲ್ಲಿ ಸರಳತೆ ಸ್ಪಷ್ಟತೆ ಮೂಡಿಬಂದಿದೆ. ಇವನ ಬರಹಗಳು, ಮುಖ್ಯವಾಗಿ - ಅನ್‍ಟು ದಿಸ್ ಲಾಸ್ಟ್ (1860) ಮತ್ತು ಎಥಿಕ್ಸ್ ಆಫ್ ದಿ ಡಸ್ಟ್ - ಇವು ಮಹಾತ್ಮಗಾಂಧಿಯವರ ಮೇಲೆ ಗಾಢವಾದ ಪ್ರಭಾವ ಪರಿಣಾಮವನ್ನು ಬೀರಿದುವು. ಪ್ರೆಟೆರಿಟ (1885 - 89) ಎಂಬುದು ಇವನ ಆತ್ಮಕಥೆ, ಅಪೂರ್ಣವಾಗಿದೆ. (ಎಲ್.ಎಸ್.ಎಸ್.)