ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಂಚಿ

ವಿಕಿಸೋರ್ಸ್ದಿಂದ

ರಾಂಚಿ ಭಾರತದ ಬಿಹಾರ್ ರಾಜ್ಯದ ಚೋಟಾನಾಗಪುರ್ ವಿಭಾಗಕ್ಕೆ ಸೇರಿದ ಒಂದು ಜಿಲ್ಲೆ ಹಾಗೂ ಜಿಲ್ಲಾ ಆಡಳಿತ ಕೇಂದ್ರ ನಗರ. ಬಿಹಾರದ ದಕ್ಷಿಣಕ್ಕಿರುವ ಈ ಜಿಲ್ಲೆಯನ್ನು ವಿಸ್ತೀರ್ಣ 18252 ಚ. ಕಿಮೀ. ಜನಸಂಖ್ಯೆ 2.205034 (1991). ಈ ಜಿಲ್ಲೆಯನ್ನು ದಕ್ಷಿಣದಲ್ಲಿ ಸಿಂಧಭೂಮ್ ಜಿಲ್ಲೆ ಮತ್ತು ಒರಿಸ್ಸ ರಾಜ್ಯವೂ ಉತ್ತರದಲ್ಲಿ ಹಜಾರಿಬಾಗ್, ವಾಯುವ್ಯದಲ್ಲಿ ಡಾಲ್ಫನ್‍ಗಂಜ್ ಜಿಲ್ಲೆಯೂ ಈಶಾನ್ಯದಲ್ಲಿ ಧನಬಾದ್ ಜಿಲ್ಲೆಯೂ ಪೂರ್ವದಲ್ಲಿ ಪಶ್ಚಿಮಬಂಗಾಲ ರಾಜ್ಯ. ಪಶ್ಚಿಮಕ್ಕೆ ಮಧ್ಯಪ್ರದÉೀಶ ರಾಜ್ಯ ಸುತ್ತುವರಿದಿದೆ. ದಾಮೋದರ ನದಿ ತಗ್ಗು ಪ್ರದೇಶ ಹಜಾರಿಬಾಗ್ ಮತ್ತು ರಾಂಚಿಯ ಪ್ರಸ್ಥಭೂಮಿಯನ್ನು ಬೇರ್ಪಡಿಸಿದೆ. ಮೇ ಅತ್ಯಂತ ಹೆಚ್ಚು ಉಷ್ಣತೆಯ ಕಾಲ. ಆಗ ರಾಂಚಿ, ಹಜಾರಿಬಾಗ್ ಬಿಟ್ಟು ಉಳಿದೆಡೆ 320ಅ ಮೀರಿ ಉಷ್ಣತೆ ಇರುತ್ತದೆ. ರಾಂಚಿ ಪ್ರಸ್ಥಭೂಮಿ ಪ್ರದೇಶದಲ್ಲಿ ಸು. 152.3 ಸೆಂಮೀ ಮಳೆಯಾಗುತ್ತದೆ. ಜಿಲ್ಲೆಯಲ್ಲಿ ಸುವರ್ಣರೇಖ, ಶಂಖ್, ಉತ್ತರ ಮತ್ತು ದಕ್ಷಿಣ ಕೊಯಲ್ ನದಿಗಳು ಹರಿಯುತ್ತವೆ. ಬತ್ತ ಇಲ್ಲಿಯ ಮುಖ್ಯ ಬೆಳೆ. ಜಿಲ್ಲೆಯಲ್ಲಿ ಸಾರಿಗೆ ಸಂಪರ್ಕ ಉತ್ತಮವಾಗಿದೆ.

ಹಜಾರಿಬಾಗ್ ಮತ್ತು ರಾಂಚಿ ಪ್ರಸ್ಥಭೂಮಿಗಳೆರಡೂ ಸಮುದ್ರ ಮಟ್ಟಕ್ಕಿಂತ 600 ಮೀಗಳಷ್ಟು ಸಮಾನ ಎತ್ತರದಲ್ಲಿವೆ. ಈ ಪ್ರಸ್ಥಭೂಮಿ ಬೆಸಾಲ್ಟ್‍ನಿಂದಾಗಿ ಹಿಂದೊಮ್ಮೆ ಸವೆತದ ಹೊರಮೈ (ಎರೋಷನಲ್ ಸರ್‍ಫೇಸ್) ಆಗಿತ್ತು. ಇದರಿಂದಾಗಿ ಬಹು ಉಪಯೋಗಿ ಸಂಪನ್ಮೂಲ ನಿಕ್ಷೇಪಗಳಿಂದ ಜೆಂಬಿಟ್ಟಿಗೆ (ಲ್ಯಾಟರೈಟ್) ಮತ್ತು ಅಲ್ಯೂಮಿನಿಯಮ್ ಅದಿರಾದ ಬಾಕ್ಷೈಟ್‍ಗಳು ಇಲ್ಲಿ ಹೇರಳವಾಗಿ ದೊರೆಯುತ್ತದೆ. ಲೋಹಾರ್ದಾಗ ಪ್ರದೇಶಗಳಲ್ಲಿ ಬಾಕ್ಸೈಟ್ ಗಣಿಗಳಿದ್ದು. ಆ ಗಣಿಗಳಿಂದ ತೆಗೆದ ಅದಿರು ಮುರಿ ಎಂಬ ಸ್ಥಳದಲ್ಲಿರುವ ಪರಿಷ್ಕರಣಾಗಾರಕ್ಕೆ ರೈಲುಗಳು ಸಾಗಾಣಿಕೆಯಾಗುವುದು.

ಜಿಲ್ಲಾ ಆಡಳಿತಕೇಂದ್ರವಾದ ರಾಂಚಿನಗರ ಸುವರ್ಣರೇಖ ನದಿ ದಡದಲ್ಲಿದೆ. ಬಿಹಾರ ರಾಜ್ಯದ ಬೇಸಗೆಯ ರಾಜಧಾನಿಯಾದ ಈ ಕೈಗಾರಿಕಾ ನಗರದಲ್ಲಿ ವಿವಿಧ ಕಾಲೇಜುಗಳಿದ್ದು 1960 ರಲ್ಲಿ ಸ್ಥಾಪನೆಯಾದ ವಿಶ್ವವಿದ್ಯಾಲಯವಿದೆ. ದೊಡ್ಡ ತಾಂತ್ರಿಕ ಕಾರ್ಖಾನೆಗಳಿವೆ. ಹತ್ತಿ, ಟೀ, ವ್ಯವಸಾಯೋತ್ಪನ್ನಗಳ ಕೇಂದ್ರ ಮಾರುಕಟ್ಟೆ, ರೇಷ್ಮೆ, ಅರಗು, ಬೃಹತ್ ಯಂತ್ರಗಳ ಹಾಗೂ ಆಯುಧಗಳ ಕಾರ್ಖಾನೆ, ಎರಕ ಹುಯ್ಯುವ ಸ್ಥಾವರ ಮುಂತಾದವು ಇಲ್ಲಿವೆ. ಇದರಲ್ಲಿ ಎರಕ ಹೊಯ್ಯುವ ಕಾರ್ಖಾನೆ ರಷ್ಯದ ಸಹಾಯದಿಂದಲೂ ಉಳಿದೆರಡು ಚೆಕ್ ನೆರವಿನಿಂದಲೂ ಸ್ಥಾಪಿಸಲ್ಪಟ್ಟಿವೆ. ಇಲ್ಲಿನ ಸಾಹಿಬ್ ಬಂದ್ ಕೊಳದ ನಿವೇಶನ ಮನೋಹರವಾಗಿದೆ. ರಾಂಚಿ ಗುಡ್ಡ ಎಂಬ ಸ್ಥಳದಿಂದ ಸು. 18 ಕಿಮೀ ದೂರದಲ್ಲಿ ಪ್ರಸಿದ್ಧ ಜಗನ್ನಾಥ ದೇವಾಲಯವಿದೆ. ರಾಂಚಿಯಿಂದ ಸು. 43 ಕಿಮೀ ದೂರದಲ್ಲಿ ರಮಣೀಯ ಹುಂದ್ರು ಜಲಪಾತವಿದೆ. ರಾಂಚಿ ನಗರಕ್ಕೆ ರಾಷ್ಟ್ರೀಯ ಹೆದ್ದಾರಿ, ರೈಲು ಮತ್ತು ವಿಮಾನ ಸಂಪರ್ಕವಿದ್ದು ಉತ್ತಮ ಸಾರಿಗೆ ವ್ಯವಸ್ಥೆಯಿದೆ. *