ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಗಿ

ವಿಕಿಸೋರ್ಸ್ದಿಂದ

ಜನಪ್ರಿಯ ಕೃಷಿಸಸ್ಯ ಹಾಗೂ ಧಾನ್ಯ. ಪುಷ್ಟಿಕರವಾದ ಸಣ್ಣ ಕಾಳುಗಳುಳ್ಳ ತೆನೆ ಬಿಡುವ ಸಸ್ಯ ಇದು. ಎಲ್ಯೂಸೈನ್ ಕೊರಕೋನ ಇದರ ವೈಜ್ಞಾನಿಕ ಹೆಸರು. ಪೋಯೆಸೀ (ಗ್ರಾಮಿನೀ) ಕುಟುಂಬಕ್ಕೆ ಸೇರಿದೆ. ಇಂಗ್ಲಿಷಿನಲ್ಲಿ ಇದಕ್ಕೆ ಫಿಂಗರ್ ಮಿಲೆಟ್ ಎಂದು ಹೆಸರು.

ರಾಗಿ ಸಸ್ಯ ವೈಜ್ಞಾನಿಕವಾಗಿ 60-120 ಸೆಂ.ಮೀ. ಎತ್ತರಕ್ಕೆ ಬೆಳೆಯುವಂಥ ವಾರ್ಷಿಕ ಹುಲ್ಲುಸಸ್ಯ. ಕಾಂಡ ಸ್ವಲ್ಪ ಚಪ್ಪಟೆಯಾಗಿರುತ್ತದೆ. ಒಂದೊಂದು ಕಾಂಡದ ತುದಿಯಲ್ಲೂ ಬೆರಳುಗಳಂತೆ ಕಾಣುವ 4 - 6 ಹೂಗೊಂಚಲುಗಳು (ಇಕ್ಕಲು) ಮೂಡುತ್ತವೆ. ಪ್ರತಿಯೊಂದು ಹೂಗೊಂಚಲಿನಲ್ಲಿ ಸುಮಾರು 70 ಕಿರಿಹೂಗುಚ್ಛ (ಸೈಕ್‍ಲೆಟ್) ಇರುತ್ತವೆ. ಒಂದೊಂದು ಹೂಗುಚ್ಛದಲ್ಲಿ 4 - 7 ಬೀಜಗಳು ರೂಪುಗೊಳ್ಳುತ್ತವೆ. ಬೀಜಗಳು ಗುಂಡಗಿದ್ದು ಕೆಂಗಂದು ಬಣ್ಣದವವಾಗಿವೆ. ಕೆಲವೊಮ್ಮೆ ಬಿಳಿಬಣ್ಣಕ್ಕಿರುವುದೂ ಉಂಟು. ರಾಗಿ ಉಷ್ಣವಲಯದ ಮುಖ್ಯ ಆಹಾರ ಬೆಳೆಗಳ ಪೈಕಿ ಒಂದು. ಭಾರತದಲ್ಲಿ ಮಾತ್ರವಲ್ಲದೆ ಆಫ್ರಿಕ ಖಂಡದ ಪೂರ್ವ ದೇಶಗಳಲ್ಲೂ ಇಥಿಯೋಪಿಯ. ಸೋಮಾಲಿಲ್ಯಾಂಡ್ ಪ್ರದೇಶಗಳಲ್ಲೂ ಇದರ ವ್ಯಾಪಕ ಕೃಷಿ ಉಂಟು. ಇದರ ಉಗಮ ಎಲ್ಲಿ ಆಯಿತೆಂದು ಖಚಿತವಾದ ಮಾಹಿತಿ ಇಲ್ಲ. ಆದರೂ ಭಾರತ ಇಲ್ಲವೆ ಆಫ್ರಿಕ ಇವರ ತವರು ಎನ್ನಲಾಗಿದೆ. ಪ್ರಪಂಚದ ಉಷ್ಣಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಕಾಣಸಿಗುವ ಎಲ್ಯೂಸೈನ್ ಇಂಡಿಕ ಎಂಬ ಪ್ರಬೇಧದಿಂದ ಇದನ್ನು ತಳಿ ಆಯ್ಕೆ ಕ್ರಮದ ಮೂಲಕ ಪಡೆಯಲಾಗಿದೆ ಎಂಬ ಅಭಿಪ್ರಾಯವಿದೆ.

ಭಾರತದಲ್ಲಿ ಸುಮಾರು 3 ಮಿಲಿಯನ್ ಹೆಕ್ಟೇರು ಪ್ರದೇಶದಲ್ಲಿ ಇದನ್ನು ಬೇಸಾಯ ಮಾಡಲಾಗುತ್ತಿದೆ. ಇದರ ಬೇಸಾಯ ದಕ್ಷಿಣ ಭಾರತದಲ್ಲಿ ಹೆಚ್ಚು ವ್ಯಾಪಕವಾಗಿದ್ದು ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರಗಳು ರಾಗಿಯ ಕೃಷಿಗೆ ಹೆಸರಾಗಿವೆ. ಕರ್ನಾಟಕದಲ್ಲಿ ಸುಮಾರು ಒಂದು ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ರಾಗಿಯನ್ನು ಬೆಳೆಯಲಾಗುತ್ತಿದೆ. ರಾಗಿಯ ಇಳುವರಿ ಹೆಕ್ಟೇರಿಗೆ ಸರಾಸರಿ 1250 ಕೆಜಿ. ಇದ್ದು ಎಷ್ಟು ಕಡಿಮೆ ಪ್ರಮಾಣದ ಇಳುವರಿಗೆ ಕಾರಣ ರಾಗಿ ಮಳೆಯನ್ನಾಧರಿಸಿದ ಬೆಳೆಯಾಗಿರುವುದು, ಭಾರತದಲ್ಲಿ ಒಟ್ಟು ಇಳುವರಿ ಸುಮಾರು 2.6 ಮಿಲಿಯನ್ ಮೆಟ್ರಿಕ್ ಟನ್ನುಗಳು.

ರಾಗಿ ಒಣಬೇಸಾಯಕ್ಕೆ ಹೇಳಿ ಮಾಡಿಸಿದಂಥ ಬೆಳೆ. ಸಾಧಾರಣವಾಗಿ ಇದನ್ನು ಮಳೆಯನ್ನೇ ಅಶ್ರಯಿಸಿರುವ ಜಮೀನುಗಳಲ್ಲಿ ಖಾರಿ ಬೆಳೆಯಾಗಿ ಬೇಸಾಯ ಮಾಡಲಾಗುತ್ತದೆ. ಇದರ ಬೇಸಾಯಕ್ಕೆ ಆದ್ರ್ರಪೂರಿತ ವಾತಾವರಣ, ಹೆಚ್ಚು ಉಷ್ಣತೆ (ಸುಮಾರು 760 ಸೆ.), ಸಾಧಾರಣ ಪ್ರಮಾಣದ ಮಳೆ ಮತ್ತು ನೀರು ಸುಲಭವಾಗಿ ಬಸಿದುಹೋಗುವಂಥ ಮಣ್ಣು ತುಂಬ ಉತ್ತಮ. ನೀರು ನಿಲ್ಲುವಂಥ ಜೌಗು, ಜೇಡಿಭೂಮಿ ಇದರ ಬೇಸಾಯಕ್ಕೆ ಒಳ್ಳೆಯದಲ್ಲ. ಮಳೆ ತುಂಬ ಕಡಿಮೆ ಇರುವೆಡೆಯಲ್ಲಿ ರಾಗಿಯನ್ನು ನೀರಾವರಿಯಿಂದಲೂ ಬೇಸಾಯ ಮಾಡಬಹುದು. ರಾಗಿ ಎತ್ತರ ಬೆಟ್ಟಪ್ರದೇಶಗಳಿಗೂ ಸುಲಭವಾಗಿ ಹೊಂದಿಕೊಳ್ಳುತ್ತದೆ. ಇದರಿಂದಾಗಿ ಪಶ್ಚಿಮ ಘಟ್ಟಗಳ ಉನ್ನತ ಪ್ರದೇಶಗಳಲ್ಲೂ ಹಿಮಾಲಯದ ತಪ್ಪಲಿನ ಬೆಟ್ಟಸೀಮೆಗಳಲ್ಲೂ (ಸು. 2000 - 2500 ಮೀ. ಎತ್ತರದ) ಇದರ ಬೇಸಾಯವನ್ನು ಕಾಣಬಹುದು.

ರಾಗಿಯ ಬೇಸಾಯಕ್ಕೆ ಕೆಂಪು ಲ್ಯಾಟರೈಟ್‍ಗೋಡು ಮಣ್ಣು ಅತ್ಯುತ್ಕøಷ್ಟ. ಇನ್ನಿತರ ಬಗೆಯ ಗೋಡುಮಣ್ಣಿನ ಭೂಮಿಯಲ್ಲೂ ಇದನ್ನು ಬೆಳೆಯಬಹುದು. ಬೇರೆ ಪೈರುಗಳಿಗೆ ಹೋಲಿಸಿದರೆ ರಾಗಿ ನೆಲದ ಆಮ್ಲತೆಯನ್ನು ಸುಲಭವಾಗಿ ತಡೆದುಕೊಳ್ಳುತ್ತದೆ.

ಕರ್ನಾಟದಲ್ಲಿ ರಾಗಿಯನ್ನು ಎರಡು ಶ್ರಾಯಗಳಲ್ಲಿ ಬೇಸಾಯ ಮಾಡುವುದಿದೆ. ಮೇ - ಆಗಸ್ಟ್ ತಿಂಗಳುಗಳ ಅವಧಿಯಲ್ಲಿ ಕಾರುರಾಗಿಯನ್ನೂ, ಜುಲೈ - ನವೆಂಬರ್ ಇಲ್ಲವೆ ಡಿಸೆಂಬರ್ ತಿಂಗಳುಗಳ ಅವಧಿಯಲ್ಲಿ ಹೈನುರಾಗಿಯನ್ನೂ ಬೆಳೆಯಲಾಗುತ್ತದೆ. ತಮಿಳುನಾಡಿನ ಉತ್ತರ ಹಾಗೂ ಮಧ್ಯ ಪ್ರದೇಶಗಳಲ್ಲಿ ರಾಗಿಯನ್ನು ಮೇ ತಿಂಗಳಲ್ಲಿ ಬಿತ್ತಿದರೆ, ದಕ್ಷಿಣ ಜಿಲ್ಲೆಗಳಲ್ಲಿ ಅಕ್ಟೋಬರ್ - ಡಿಸೆಂಬರ್‍ನಲ್ಲಿ ಬಿತ್ತುತ್ತಾರೆ. ಉಳಿದೆಡೆಗಳಲ್ಲಿ ಆಗಸ್ಟ್ - ಸೆಪ್ಟೆಂಬರ್ ಅಥವಾ ನವೆಂಬರ್ - ಡಿಸೆಂಬರ್ ತಿಂಗಳುಗಳಲ್ಲಿ ಮುಖ್ಯ ಬೆಳೆಯಾಗಿ ಬೇಸಾಯ ಮಾಡುತ್ತಾರೆ. ರಾಗಿಯನ್ನು ಬಿಹಾರ್ - ಪಂಜಾಬ್, ಒರಿಸ್ಸ, ಉತ್ತರಪ್ರದೇಶಗಳಲ್ಲಿ ಮೇ - ಜುಲೈ ತಿಂಗಳುಗಳಲ್ಲಿ ಬಿತ್ತನೆಮಾಡಿ ಆಗಸ್ಟ್ - ನವೆಂಬರ್ ತಿಂಗಳುಗಳಲ್ಲಿ ಕೋಯ್ಲು ಮಾಡುತ್ತಾರೆ.

ರಾಗಿಯನ್ನು ನೇರವಾಗಿ ಚೆಲ್ಲಿ ಇಲ್ಲವೆ ಕೂರಿಗೆಯ ಮೂಲಕ ಬಿತ್ತನೆ ಮಾಡಲಾಗುವುದು. ಕೆಲವೆಡೆ ಮಳೆ ಅನಿಶ್ಚಿತವಾಗಿರುವಂಥ ಸನ್ನಿವೇಶಗಳಲ್ಲಿ ಒಟ್ಲು ಪಾತಿಗಳಲ್ಲಿ ಬಿತ್ತು ಸಸಿ ಪಡೆದು ಬೇಕಾದೆಡೆ ನಾಟಿಯ ಮೂಲಕ ಬೆಳೆಯುವುದಿದೆ.

ರಾಗಿಯನ್ನು ಶುದ್ಧಬೆಳೆಯಾಗಿ ಇಲ್ಲವೆ ಬೇರೆ ಧಾನ್ಯ ಬೆಳೆಗಳ ಜೊತೆಯಲ್ಲಿ ಮಿಶ್ರ ಬೆಳೆಯಾಗಿ ಅಂದರೆ, ಬೇಳೆಕಾಳು, ಹರಳು, ಹುಚ್ಚೆಳ್ಳು, ನೆಲಗಡಲೆ, ಇಲ್ಲವೆ ಎಳ್ಳುಗಳೊಂದಿಗೆ ಬೇಸಾಯ ಮಾಡುವುದಿದೆ. ಕೆಲವೊಮ್ಮೆ ಹಲಸಂದೆ, ಹುರುಳಿ, ಅವರೆಗಳನ್ನೂ ಅಕ್ಕಡಿಬೆಳೆಗಳಾಗಿ ರಾಗಿಯೊಂದಿಗೆ ಬೇಸಾಯ ಮಾಡುವುದುಂಟು. ರಾಗಿಗೆ ಹಲವಾರು ಬಗೆಯ ಶಿಲೀಂದ್ರ ರೋಗಗಳೂ ಕೀಟಪಿಡುಗುಗಳೂ ಬರುವುದುಂಟು. ಇವುಗಳಲ್ಲಿ ಮುಖ್ಯವಾದವು ಇಂತಿವೆ: ಮೆಲನೋಪ್ಸಿಕಿಯಮ್ ಎಲ್ಯೂಸೈನಸ್ ಹಾಗೂ ಹೆಲ್ಮಿಂತೊಸ್ಪೋರಿಯಮ್ ಎಂಬ ಶಿಲೀಂಧ್ರರೋಗಗಳು; ಆಮ್‍ಸ್ಯಾಕ್ ಅಲ್ಬಿಸ್ಟ್ರೈಗ ಎಂಬ ಕಂಬಳಿಹುಳು, ಕೋಲ್‍ಮಾನಿಯ ಸ್ಫೀನ ರಾಯ್‍ಡಿಸ ಎಂಬ ಮಿಡತೆ, ಸೆಸೇಮಿಯ ಇನ್‍ಫರೆನ್ಸ್ ಮತ್ತು ಸಾಲೂರಿಯ ಇನ್‍ಫಿಸಿಟ ಎಂಬ ಕಾಂಡಕೊರಕ ಹುಳುಗಳು. ಮರಾಸಾಮಿಯ ಟ್ರಪೀಜಾಲಿಸ್ ಎಂಬ ಎಲೆಸುರುಳಿ ಹುಳು. ಯುಕ್ತ ಶಿಲೀಂಧ್ರ ನಾಶಕಗಳ ಹಾಗೂ ಕೀಟನಾಶಕಗಳ ಬಳಕೆಯಿಂದ ಈ ಪಿಡುಗುಗಳನ್ನು ನಿವಾರಿಸಬಹುದು.

ರಾಗಿ ಬಡವರ ಆಹಾರವೆಂದೇ ಹೆಸರಾಗಿದೆ. ಇದರ ಹಿಟ್ಟಿನಿಂದ ರೊಟ್ಟಿ, ಮುದ್ದೆ, ಅಂಬಲಿ, ಗಂಜಿ ಮುಂತಾದ ಪೌಷ್ಟಿಕ ಆಹಾರಪದಾರ್ಥಗಳನ್ನು ತಯಾರಿಸಲಾಗುತ್ತದೆ. ರಾಗಿಯನ್ನು ಮೊಳೆಸಿ, ಒಡೆದು ಹಿಟ್ಟುಮಾಡಿ ತಯಾರಿಸಲಾಗುವ ಒಡರಾಗಿ ಹಿಟ್ಟು ಹಾಗೂ ರಾಗಿಮಾಲ್ಟ್ ಅತ್ಯುತ್ತಮ ಆಹಾರಗಳೆಂದು ಹೆಸರಾಗಿದೆ. ಮಕ್ಕಳಿಗೂ, ಮಧುಮೇಹ ರೋಗಿಗಳಿಗೂ ರಾಗಿಯ ಹಿಟ್ಟು ಅತ್ಯಂತ ಒಳ್ಳೆಯದು. ರಾಗಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರೋಟೀನ್ ಅಂಶ ಇದೆ. ಸಾಧಾರಣವಾಗಿ ಪ್ರೋಟೀನ್ ಪ್ರಮಾಣ ಶೇ. 6-11 ರಷ್ಟು ಇರುತ್ತದೆ. ಕೆಲವು ತಳಿಗಳಲ್ಲಿ ಶೇ. 14 ರಷ್ಟು ಇರುವುದೂ ಉಂಟು. ರಾಗಿಯ ಪೌಷ್ಟಿಕ ಮೌಲ್ಯ ಗೋಧಿಗೆ ಸಮನಾಗಿದೆ.

ಅಕ್ಕಿಗಿಂತಲೂ ಹಲವಾರು ಪಟ್ಟು ಹೆಚ್ಚು. ಅಲ್ಲದೇ ರಾಗಿಯಲ್ಲಿ ಕ್ಯಾಲ್ಸಿಯಮ್, ಫಾಸ್ಫರಿಕ್ ಮತ್ತು ಕಬ್ಬಿಣದ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಜೊತೆಗೆ ರಾಗಿಯಲ್ಲಿ ಇರುವ ಆಯೋಡಿನ್ ಪ್ರಮಾಣ ಇನ್ಯಾವುದೇ ಆಹಾರ ಧಾನ್ಯದಲ್ಲಿರುವುದಕ್ಕಿಂತಲೂ ಹೆಚ್ಚಾಗಿದೆ. ರಾಗಿಯ ಹುಲ್ಲು ದನಗಳಿಗೆ ಒಳ್ಳೆಯ ಮೇವು. ರಾಗಿಯಲ್ಲಿ ಹಲವಾರು ಕೃಷಿಯೋಗ್ಯ ತಳಿಗಳನ್ನು ಪಡೆಯಲಾಗಿದೆ. ಇವುಗಳ ಪೈಕಿ ಇಂಡಾಫ್-5, ಇಂಡಾಫ್-8, ಇಂಡಾಫ್-9, ಇಂಡಾಫ್-7, ಇಂಡಾಫ್-15, ಎಂ. ಆರ್.-1, ಎಚ್.ಆರ್.-911, ಪಿ. ಆರ್. 202 ಎಂಬವು ಮುಖ್ಯ.

(ಕೆ.ಬಿ.ಎಸ್.)

ಜನಪದ ಸಾಹಿತ್ಯದಲ್ಲಿ ರಾಗಿ: ಜನಪದರಲ್ಲಿ ರಾಗಿಯ ಬಗೆಗೆ ವಿಶೇಷ ಗೌರವ ಮಮತೆಗಳಿವೆ. ಇದು ಜನಪದರ ಮೂಲ ಜೀವನಾಧಾರ ಆಹಾರ. ರಾಗಿಯನ್ನು ಆಹಾರದ ಅನೇಕ ರೂಪಗಳಲ್ಲಿ ಬಳಸುವುದುಂಟು. ರೊಟ್ಟಿ, ಮುದ್ದೆ, ಅಂಬಲಿ, ಗಂಜಿ, ಸೇವಿಗೆಯನ್ನು ರಾಗಿಯಿಂದ ತಯಾರಿಸಲಾಗುತ್ತದೆ. ರಾಗಿಯ ಪೌಷ್ಟಿಕತೆಯನ್ನು ಎತ್ತಿಹಿಡಿಯುವ `ರಾಗಿ ತಿಂದವ ನಿರೋಗಿ' ಎಂಬ ಗಾದೆ ಮಾತು ರೂಢಿಯಲ್ಲಿದೆ. ಜನಪದರು ರಾಗಿಮುದ್ದೆ ಹಾಗೂ ಮಾಂಸದ ಎಸರನ್ನು ಪಂಚಪ್ರಾಣವೆಂದು ಭಾವಿಸುತ್ತಾರೆ. `ಸಿಂಡುಪಂಡು ಎಂದರೆ ಚೆಂಡು ವೋಟು' ಎಂಬ ಗಾದೆ ಮಾಂಸದ ಎಸರಿದ್ದರೆ ಒಂದು ರಾಗಿಮುದ್ದೆಗಿಂತಲೂ ಹೆಚ್ಚು ಉಣ್ಣುವ, ಉಣ್ಣಬಯಸುವ ಅಪೇಕ್ಷೆಯನ್ನು ಸೂಚಿಸುತ್ತದೆ. ಇದೇ ಭಾವವನ್ನು ಬಿಂಬಿಸುವ ಇನ್ನೊಂದು ಗಾದೆ; `ಕೋಳಿಬಾಡ ಎಸರು, ಕೋಲಮ್ಯಾಗಲ ಹಿಟ್ಟು (ಬಿಸಿಹಿಟ್ಟು), ತೊರೆಮಳ್ಳು (ಮರಳು), ಹೊಂಗೆನೆಳ್ಳು (ನೆರಳು), ಸಗ್ಗಸುಳ್ಳು. ಈ ಗಾದೆ ಜನಪದರ ಲೌಕಿಕ ಜೀವನಾಪೇಕ್ಷೆಯ ಪರಾಕಾಷ್ಠತೆಯನ್ನು ಅವರ ಕೈಗೆಟಕುವ ಸ್ವರ್ಗದ ಸುಖವನ್ನೂ ಮನವರಿಕೆ ಮಾಡಿಕೊಡುತ್ತದೆ.

ಕನಕದಾಸರು ಬರೆದಿರುವ, ಜನಪರ ನಿಲುವಿನ, ರಾಗಿಯ ಶ್ರೇಷ್ಠತೆಯನ್ನು ಸಾರುವ 'ರಾಮಧಾನ್ಯ ಚರಿತೆ' ಎಂಬ ಖಂಡಕಾವ್ಯ ಇಲ್ಲಿ ಉಲ್ಲೇಖನೀಯ. ರಾಮನಿಗೆ ಪ್ರಿಯವಾದ `ರಾಮಧಾನ್ಯ' ಎಂದು ಹೆಸರು ಪಡೆದ `ರಾಗಿ' ಮತ್ತು `ವ್ರೀಹಿ' ಭತ್ತ - ಇವುಗಳ ನಡುವೆ ನಡೆದಂಥ ಸ್ವಾರಸ್ಯಕರ ಸಂಘರ್ಷದ ಜೀವಂತ ಚಿತ್ರಣವನ್ನು ಈ ಪುಟ್ಟಕಾವ್ಯದಲ್ಲಿ ನಾವು ಕಾಣುತ್ತೇವೆ. ವ್ರೀಹಿ ಶ್ರೀಮಂತರನ್ನು ರಾಗಿ ಶ್ರೀಸಾಮಾನ್ಯರನ್ನೂ ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ.

ಪುರಂದರ ದಾಸರ `ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ' ಎಂಬ ಪದ್ಯದಲ್ಲಿ ಅವರಿಗಿದ್ದ ಸಾಮಾಜಿಕ ಕಳಕಳಿ ಎದ್ದು ಕಾಣುತ್ತದೆ. ದಾಸರು ಉಪಾದಾನಕ್ಕೆ ಬಂದಾಗ ಒಂದು ಮನೆಯಲ್ಲಿ ಅಕ್ಕಿಗೆ ಬದಲಾಗಿ ರಾಗಿ ದೊರಕಿತು. ರಾಗಿ ಎಂಬ ಮಾತನ್ನೇ (ಅದರ ನಾಮವಾಚಕ ಹಾಗೂ ಕ್ರಿಯಾವಾಚಕ ರೂಪಗಳನ್ನು ಗಮನಿಸಿಕೊಂಡು) ಹಿಡಿದು ಅದರ ಸುತ್ತ ಹೆಣೆದಿರುವ ಜಾಣತನದ ಪದ ಇದು. * (ಪರಿಷ್ಕರಣೆ : ಕೆ ಬಿ ಸದಾನಂದ)