ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಘವೇಂದ್ರ ತೀರ್ಥ

ವಿಕಿಸೋರ್ಸ್ದಿಂದ

1595-1671. ಮಾಧ್ವ ಪರಂಪರೆಯ ಪ್ರಸಿದ್ಧ ಆಚಾರ್ಯರು. ಇವರು ಮೂಲತಃ ಕುಂಭಕೋಣದವರು. ಗೌತಮಗೋತ್ರಜರು. ವೇದವಿದ್ಯಾವಿಶರದರೂ ವೀಣಾವಾದನ ನಿಪುಣರೂ ಆಗಿದ್ದು ಕೃಷ್ಣದೇವರಾಯನ (1509-29) ಆಸ್ಥಾನ ವಿದ್ವಾಂಸರಾಗಿದ್ದ ಕುಂಭಕೋಣದ ವೀಣಾ ಕೃಷ್ಣಭಟ್ಟ ಇವರ ಪಿತಾಮಹ, ತಾತಕನಕಾಚಲಭಟ್ಟ, ತಂದೆ ವೀಣಾ ತಿಮ್ಮಣ್ಣಭಟ್ಟ, ತಾಯಿ ಗೋಪಮ್ಮ. ಆ ದಂಪತಿಗಳಿಗೆ ಮೂವರು ಮಕ್ಕಳು-ವೆಂಕಮ್ಮ, ಗುರುರಾಜ ಮತ್ತು ವೆಂಕಟಭಟ್ಟ. ಆ ಮೂವರಲ್ಲಿ ಇವರೇ ಕೊನೆಯವರು. ತಿರುಪತಿಯ ವೆಂಕಟೇಶನ ವರಬಲದಿಂದ ಹುಟ್ಟಿದವರೆಂದು ಪ್ರತೀತೀ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ಮಧುರೆಯಲ್ಲಿದ್ದ ಭಾವನ ಮನೆಯಲ್ಲಿ ಪ್ರಾರಂಭಿಕ ವಿದ್ಯಾಭ್ಯಾಸ ಮಾಡಿ, ಪುನಃ ಕುಂಭಕೋಣಕ್ಕೆ ಬಂದು ಅಲ್ಲಿದ್ದ ಸುಧೀಂದ್ರ ತೀರ್ಥರ ಆಶ್ರಯದಲ್ಲಿ ಶಸ್ತ್ರಾಧ್ಯಯನ ಮಾಡಿ ಪಾಂಡಿತ್ಯ ಗಳಿಸಿಕೊಂಡರು. ಇವರ ಪತ್ನಿ ಸರಸ್ವತೀ ದೇವಿ, ಪುತ್ರ ಲಕ್ಷ್ಮೀನಾರಾಯಣ. ವೆಂಕಟಭಟ್ಟ ಎಂಬುದು ಇವರ ಪೂರ್ವಾಶ್ರಮದ ಹೆಸರು. ಇವರ ವಿದ್ಯಾ ಸಂಪನ್ನತೆ, ಆಕರ್ಷಕ ನಡೆನುಡಿ, ಆಚಾರನಿಷ್ಠೆ, ಸಿದ್ಧಾಂತದೀಕ್ಷೆ, ಅಪೂರ್ವ ತೇಜಸ್ಸುಗಳನ್ನು ಕಂಡು ಗುರು ಸುಧೀಂದ್ರರು ಇವರಿಗೆ ಸನ್ಯಾಸದೀಕ್ಷೆಯಿತ್ತು ರಾಘವೇಂದ್ರ ತೀರ್ಥ ಎಂದು ನಾಮಕರಣಮಾಡಿ ತಮ್ಮ ಪೀಠಕ್ಕೆ ಉತ್ತರಾಧಿಕಾರಿಯನ್ನಗಿ ನೇಮಿಸಿದರು (1623), 1623-71 ರ ವರೆಗೆ ಪೀಠಸ್ಥರಾಗಿದ್ದ ಇವರ ಕಾಲ ಮಧ್ವಾಚಾರ್ಯ ಪರಂಪರೆಯ ಆ ಮಠದ ಸುವರ್ಣಯುಗ. ಇವರ ತರುವಾಯ ಆ ಮಠಕ್ಕೆ ರಾಘವೇಂದ್ರ ಸ್ವಾಮಿಗಳ ಮಠ (ರಾಯರ ಮಠ) ಎಂದೇ ಹೆಸರಾಗಿ ಇಂದಿಗೂ ಆ ಹೆಸರೇ ಪ್ರಸಿದ್ಧ. ಇವರು 1671 ರ ಶ್ರಾವಣ ಬಹುಳ ಬಿದಿಗೆ ಗುರುವಾರ ಸಶರೀರರಾಗಿ ತುಂಗಭದ್ರಾ ತೀರದ ಮಂತ್ರಾಲಯದಲ್ಲಿ ಬೃಂದಾವನ ಪ್ರವೇಶ ಮಾಡಿದರು.

ರಾಘವೇಂದ್ರ ತೀರ್ಥರು ಪ್ರಕಾಂಡ ಪಂಡಿತರು. ದ್ವೈತಸಿದ್ಧಾಂತದ ಬೆಳವಣಿಗೆಯ ಇತಿಹಾಸದಲ್ಲಿ ಇವರ ಹೆಸರು ಚಿರಸ್ಥಾಯಿಯಾದುದು. ಆ ಸಿದ್ಧಾಂತವನ್ನು ಖಚಿತವಾಗಿ ನಿರೂಪಿಸುವನೆಂದೂ ಸಾರವನ್ನು ಎತ್ತಿಹಿಡಿಯುವವೆಂದೂ ಪ್ರಸಿದ್ಧವಾಗಿರುವ ಪರಿಮಳ, ಭಗವದ್ಗೀತಾವಿವೃತ್ತಿ, ಪ್ರಾತಃಸಂಕಲ್ಪಗದ್ಯ, ಉಪನಿಷತ್ ಖಂಡಾರ್ಥ, ರಾಮಚರಿತ್ರಮಂಜರಿ, ಕೃಷ್ಣಚರಿತ್ರಮಂಜರಿ ಮುಂತಾದ 48 ಉದ್ಗ್ರಂಥಗಳನ್ನು ಇವರು ಸಂಸ್ಕೃತದಲ್ಲಿ ರಚಿಸಿದ್ದಾರೆ.

ಇವರು ಸಂಗೀತಜ್ಞರೂ ಆಗಿದ್ದು ಅನೇಕ ಕೀರ್ತನೆಗಳನ್ನು ರಚಿಸಿ ದೇವಾರ್ಪಣೆ ಮಾಡುತ್ತಿದ್ದರಂತೆ. ಕನ್ನಡದಲ್ಲಿ ಇವರದು ಎಂದು ಹೇಳಲಾಗಿರುವ ಒಂದೇ ಒಂದು ದೇವರನಾಮ ಇಂದು ಎನಗೆ ಗೋವಿಂದಾ ಎಂಬುದು ಮಾತ್ರ ಪ್ರಸಿದ್ಧವಾಗಿ ಉಳಿದಿದೆ. ಆದರೆ ಇವರ ದಿವ್ಯಪ್ರೋತ್ಸಾಹದಿಂದ ಕನ್ನಡದಲ್ಲಿ ಹರಿದಾಸ ಸಾಹಿತ್ಯ ಸಮೃದ್ಧವಾಗಿ ಬೆಳೆದಿದೆ. ಬಹುಮಂದಿ ಸುಪ್ರಸಿದ್ಧ ಹರಿದಾಸರು ಇವರ ವ್ಯಕ್ತಿತ್ವ ಮಹಿಮೆಗಳನ್ನು ಕುರಿತು ಅನೇಕಕೃತಿಗಳನ್ನು ರಚಿಸಿ ಕೊಂಡಾಡಿದ್ದಾರೆ.

ಭರತಖಂಡದ ಬಹು ಜನರ ಆದ್ಯಾತ್ಮಿಕ ಜೀವನ ಸಾಧನೆಯಲ್ಲಿ ರಾಘವೇಂದ್ರರ ಪಾತ್ರ ಹಿರಿದಾಗಿದೆ. ರಾಘವೇಂದ್ರರು ಭಕ್ತರ ಸಕಲಾಭೀಷ್ಟಪ್ರದಾಯಕರು, ಪವಾಡಪುರುಷರು ಎಂದು ಪ್ರಸಿದ್ಧರಾಗಿದ್ದಾರೆ. ಇವರ ಮೂಲವೃಂದಾವನವಿರುವ ಮಂತ್ರಾಲಯ ಮಹಿಮಾ ಕ್ಷೇತ್ರವೆಂದು ಹೆಸರಾಗಿದ್ದು ಸಹಸ್ರಾರು ಭಕ್ತರನ್ನು ಆಕರ್ಷಿಸುತ್ತದೆ. ಭಕ್ತರು ಇವರ ಹೆಸರಿನ ಮೃತ್ತಿಕಾ ಬೃಂದಾವನಗಳನ್ನು ಮುಂಬಯಿ, ಮದರಾಸು, ದೆಹಲಿ, ಹೈದರಾಬಾದ್ ಬೆಂಗಳೂರು, ಮೈಸೂರು ಮುಂತಾದೆಡೆಗಳಲ್ಲಿ ಸ್ಥಾಪಿಸಿದ್ದಾರೆ. ಇಂಥ ಸುಮಾರು 152 ಬೃಂದಾವನಗಳು ಭಾರತಾದ್ಯಂತ ಪೂಜೆಗೊಳ್ಳುತ್ತಿವೆ.