ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಘವ ಬಳ್ಳಾರಿ

ವಿಕಿಸೋರ್ಸ್ದಿಂದ

1880-1946. ಹೆಸರಾಂತ ನಟ. ನಾಟಕಕಾರ ಹಾಗೂ ವಕೀಲರು. ತಾಡಪತ್ರಿರಾಘವಾಚಾರ್ಯ ಇವರ ನಿಜನಾಮ. ಹುಟ್ಟಿದ್ದು ಬಳ್ಳಾರಿಯ ಶ್ರೀವೈಷ್ಣವ ಕುಟುಂಬವೊಂದರಲ್ಲಿ. ತಂದೆ ನರಸಿಂಹಾಚಾರ್ಯರು ತೆಲಗು ಪಂಡಿತರಾಗಿದ್ದರು. ತಾಯಿ ಶೇಷಮ್ಮ. ಆರಂಭದ ವ್ಯಾಸಂಗವನ್ನು ಬಳ್ಳಾರಿಯಲ್ಲಿ ಮುಗಿಸಿದ ಇವರು ಎಫ್. ಎ. ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಅನಂತರ ಮದರಾಸಿನಲ್ಲಿ ಓದಿ ಬಿ.ಎ. ಹಾಗೂ ಬಿ. ಎಲ್. ಪದವಿಗಳನ್ನು ಗಳಿಸಿ (1905) ಬಳ್ಳಾರಿಯಲ್ಲಿ ತಮ್ಮ ಸೋದರಮಾವ ಧರ್ಮಾವರಂ ರಾಮಕೃಷ್ಣಾಚಾರ್ಯರ ಬಳಿ ವಕೀಲವೃತ್ತಿಯಲ್ಲಿ ತರಬೇತಿ ಪಡೆದರು (1906-12). ಅನಂತರ ಸ್ವತಂತ್ರವಾಗಿ ವಕೀಲಿವೃತ್ತಿಯನ್ನು ಆರಂಭಿಸಿ, ತಮ್ಮ ದಕ್ಷತೆ ಹಾಗೂ ಪರಿಶ್ರಮಗಳಿಂದ ಒಳ್ಳೆಯ ವಕೀಲರೆಂದೂ ಹೆಸರು ಪಡೆದರು.

ರಾಘವರು ಮದರಾಸಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಬಾಂಬೆ ಪಾರಸೀ ಥಿಯೇಟ್ರಿಕಲ್ ಕಂಪೆನಿ ನಾಟಕಗಳನ್ನು ನೋಡುತ್ತಿದ್ದರು. ಆ ಕಂಪೆನಿಯ ಸುಪ್ರಸಿದ್ಧ ನಟ ದಾದಾಬಾಯಿ ಮಿಸ್ತ್ರಿಯವರ ಅಭಿನಯ ಇವರ ಮೇಲೆ ಗಾಢವಾದ ಪ್ರಭಾವವನ್ನು ಬೀರಿತಲ್ಲದೆ, ಮುಂದೆ ಇವರು ರಂಗಭೂಮಿಯನ್ನು ಪ್ರವೇಶಿಸಲೂ ಕಾರಣವಾಯಿತು. ಕನ್ನಡದ ಜೊತೆಗೆ ತಮಿಳು, ತೆಲಗು, ಇಂಗ್ಲಿಷ್ ಮತ್ತು ಹಿಂದೀ ಭಾಷೆಗಳಲ್ಲಿ ಒಳ್ಳೆಯ ಪರಿಶ್ರಮವನ್ನು ಸಂಪಾದಿಸಿಕೊಂಡಿದ್ದ ಇವರು ಮೊದಲು ಅಭಿನಯಸಿದ್ದು ಡಾಕ್ಟರ್ ಆಂಡ್ ಅಪಾತಕಿರಿ ಎಂಬ ಇಂಗ್ಲಿಷ್ ನಾಟಕದಲ್ಲಿ. ಅನಂತರ ಬಳ್ಳಾರಿಯಲ್ಲಿ ವಟ್ಟಂ ಶಾಮರಾವ್ ಸೋದರ ಅವರ ನೆರವಿನೊಂದಿಗೆ ಷೇಕ್‍ಸ್ಪಿಯರ್ ಕ್ಲಬ್ಬನ್ನು ಸ್ಥಾಪಿಸಿ ಕೆಲವು ಇಂಗ್ಲಿಷ್ ನಾಟಕಗಳಲ್ಲಿ ಅಭಿನಯಿಸಿದರು.

ಅಂದಿನ ದಿನಗಳಲ್ಲಿ ಬಳ್ಳಾರಿಯಲ್ಲಿ ಧರ್ಮಾವರಂ ರಾಮಕೃಷ್ಣಮಾಚಾರ್ಯ ಕೋಲಾಚಲಂ ಶ್ರೀನಿವಾಸರಾಯ ಎಂಬ ಪ್ರತಿಭಾವಂತ ನಾಟಕಕಾರರು ಅನೇಕ ಸ್ವತಂತ್ರ ನಾಟಕಗಳನ್ನು ಬರೆದು ಸರಸವಿನೋದಿನಿ ಸಭೆ, ಸಮನೋರಮ ಸಭೆಗಳಿಂದ ನಾಟಕ ಪ್ರದರ್ಶನಗಳನ್ನು ನಡೆಸುತ್ತಿದ್ದರು. ಈ ಕಂಪೆನಿಗಳ ಹಲವಾರು ನಾಟಕಗಳಲ್ಲಿ ರಾಘವರು ಅಭಿನಯಿಸಿದರು. ವಿಜಯನಗರ ಪತನ ಎಂಬ ನಾಟಕದಲ್ಲಿ ಇವರು ವಹಿಸಿದ ಪಾತ್ರ ಇವರಿಗೆ ಪ್ರಸಿದ್ಧಯನ್ನು ದೊರಕಿಸಿಕೊಟ್ಟಿತು. ಮುಂದೆ ಬೆಂಗಳೂರಿನ ಅಮೆಚೂರ್ ಡ್ರಮಾಟಿಕ್ ಅಸೋಸಿಯೇಷನ್ (ಅಡ) ಸಂಸ್ಥೆಯ ನೇತಾರರಾಗಿ ಕರ್ನಾಟಕದಲ್ಲಿ ಮಾತ್ರವಲ್ಲದೆ ಮುಂಬಯಿ, ಕಲ್ಕತ್ತ ಮತ್ತು ಸಿಮ್ಲಾಗಳಲ್ಲೂ ನಾಟಕ ಪ್ರದರ್ಶನಗಳನ್ನು ನಡೆಸಿದರು. ರಾಘವರು ಅಭಿನಯಿಸುತ್ತಿದ್ದ ಹರಿಶ್ಚಂದ್ರ, ದಶರಥ, ರಾವಣ ಈ ಮುಂತಾದ ಪೌರಾಣಿಕ ಪಾತ್ರಗಳು ತುಂಬ ಜನಪ್ರಿಯವಾದವು. ಇವರು 1928ರಲ್ಲಿ ಇಂಗ್ಲೆಂಡಿಗೆ ಹೋಗಿ, ಆ ದೇಶದ ರಂಗಭೂಮಿಯ ಚಟುವಟಿಕೆಗಳನ್ನು ಅಭ್ಯಸಿಸಿದರು. ಅಲ್ಲಿಯ ನಾಟಕಗಳಿಗೂ ತಮ್ಮ ನಾಟಕಗಳಿಗೂ ಇರುವ ಮುಖ್ಯ ವ್ಯತ್ಯಾಸಗಳನ್ನು ಅಧ್ಯಯನ ಮಾಡಿದರು. ಪ್ರಸಿದ್ಧ ನಾಟಕಕಾರ ಬರ್ನಾಡ್ ಷಾ ಅವರನ್ನು ಭೇಟಿಯಾದರು. ಷೇಕ್‍ಸ್ಪಿಯರ್ ನಾಟಕಗಳಲ್ಲಿನ ಇವರ ಅಭಿನಯವನ್ನು ಕಂಡು ಷಾ ವಿಸ್ಮಿತರಾದರು. ಷೇಕ್‍ಸ್ಪಿಯರ್ ನಾಡಿನಲ್ಲಿ ಹುಟ್ಟಿಬೆಳೆದು ನಟಿಸಿದ ನಟರಿಗಿಂತ ನಿಮ್ಮದು ಶ್ರೇಷ್ಠ ಅಭಿನಯ ಎಂದು ಹಾಡಿಹೊಗಳಿದರು. ಈ ಹೊಗಳಿಕೆಗೆ ಕನ್ನಡ ನಾಡಿನ ನಟನೊಬ್ಬನಿಗೆ ಜಾಗತಿಕ ಮಟ್ಟದಲ್ಲಿ ದೊರೆತ ಅಪೂರ್ವ ಗೌರವವೆನ್ನಬಹುದು. ಹೀಗೆ ಕನ್ನಡದ ಹಿರಿಮೆಯನ್ನು ಇಂಗ್ಲೆಂಡಿನಲ್ಲಿ ಸ್ಥಾಪಿಸಿದ ಕೀರ್ತಿ ರಾಘವರಿಗೆ ಸಲ್ಲುತ್ತದೆ. ಸ್ವದೇಶಕ್ಕೆ ಹಿಂದಿರುಗಿ, ತಮ್ಮ ನಾಟಕಗಳಲ್ಲಿ ಹಲವಾರು ಬದಲಾವಣೆಗಳನ್ನು ತಂದು ರಂಗಭೂಮಿಗೆ ಒಂದು ಹೊಸ ಆಯಾಮವನ್ನು ಜೋಡಿಸಿದರು. ಆ ದಿನಗಳಲ್ಲಿ ಸ್ತ್ರೀಪಾತ್ರಗಳನ್ನು ಸಾಮಾನ್ಯವಾಗಿ ಪುರುಷರೇ ವಹಿಸುತ್ತಿದ್ದರು. ರಾಘವರು ಇದನ್ನು ತಪ್ಪಿಸಿ ಸ್ತ್ರೀಪಾತ್ರಗಳನ್ನು ಸ್ತ್ರೀಯರಿಂದಲೇ ಮಾಡಿಸಿದರು. ರಾಘವರ ನಟನಾಸಾಮಥ್ರ್ಯ ಅನೇಕ ರಾಷ್ಟ್ರೀಯ ನಾಯಕರ ಮೆಚ್ಚುಗೆಗೆ ಪಾತ್ರವಾಯಿತು. ಲೋಕಮಾನ್ಯ ತಿಲಕ ಅವರು ಬಳ್ಳಾರಿಯಲ್ಲಿ ವಾಣಿವಿಲಾಸ ನಾಟಕ ಭವನವನ್ನು ಉದ್ಘಾಟಿಸಿದ ಸಮಯದಲ್ಲಿ ರಾಘವರ ಕಲಾನೈಪುಣ್ಯವನ್ನು ಮೆಚ್ಚಿಕೊಂಡರು. ಬೆಂಗಳೂರಿನಲ್ಲಿ ಹರಿಜನ ನಿಧಿಗಾಗಿ ದೀನಬಂಧು ಕಬೀರ್ ನಾಟಕವನ್ನು ಅಮೆಚೂರ್ ನಾಟಕ ಸಂಘದವರು ಗಾಂಧೀಜಿಯವರ ಎದುರಿನಲ್ಲಿ ಅಭಿನಯಿಸಿದಾಗ ಕಬೀರ್ ಪಾತ್ರದಲ್ಲಿ ಇವರು ಅಭಿನಯವನ್ನು ಕಂಡು ಗಾಂಧೀಜಿಯವರು ಜಯಕಾರಹಾಕಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ರವೀಂದ್ರನಾಥ ಟಾಗೂರರು ಬೆಂಗಳೂರಿಗೆ ಬಂದಾಗ ಅಮೆಚೂರ್ ನಾಟಕ ಸಂಘದವರು ಅಭಿನಯಿಸಿದ ಪ್ರಹ್ಲಾದ ನಾಟಕದಲ್ಲಿ ರಾಘವರ ಹಿರಣ್ಯಕಶಿಪು ಪಾತ್ರಾಭಿನಯವನ್ನು ಮೆಚ್ಚಿಕೊಂಡಾಡಿದರು.

ರಾಘವರು ತಮ್ಮ ಮಿತ್ರ ಒತ್ತಾಯದಿಂದ ಚಲನಚಿತ್ರರಂಗವನ್ನು ಪ್ರವೇಶಿಸಿ (1935-40) ದ್ರೌಪದೀಮಾನಸಂರಕ್ಷಣ, ರೈತುಬಿಡ್ಡ, ಚಂಡಿಕಾ _ ಈ ತೆಲಗು ಚಿತ್ರಗಳಲ್ಲಿ ಅಭಿನಯಿಸಿದರು.

ಭಾರತೀಯ ರಂಗಭೂಮಿಯನ್ನು ಸುವ್ಯವಸ್ಥಿತ ರೀತಿಯಲ್ಲಿ ಸಂಘಟಿಸಲು ಪ್ರಯತ್ನಿಸಿದ ರಾಘವರು ಆಂಧ್ರನಾಟಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆಸಲ್ಲಿಸಿದರು. ಆಗಿನ ಭಾರತ ಸರ್ಕಾರ ಇವರಿಗೆ ರಾವ್‍ಬಹದ್ದೂರ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಇವರು ತಮ್ಮ 66ನೆಯ ವಯಸ್ಸಿನಲ್ಲಿ 1946ಏಪ್ರಿಲ್ 16ರಂದು ನಿಧನಹೊಂದಿದರು.