ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಜಕುಮಾರ್ 1
ರಾಜಕುಮಾರ್ 1 -
1929-2006. ಕನ್ನಡ ಚಿತ್ರರಂಗದ ಪ್ರಸಿದ್ಧ ನಾಯಕ ನಟ; ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ 200ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಮಾತ್ರ ಅಭಿನಯಿಸಿ ಕನ್ನಡ ಚಿತ್ರರಂಗದ ಮಹತ್ವಪೂರ್ಣ ಬೆಳೆವಣಿಗೆಗೆ ಕಾರಣರಾದ ಅಪೂರ್ವಕಲಾವಿದ. ಕನ್ನಡ ಭಾಷೆ, ಸಂಸ್ಕøತಿ, ನಾಡು-ನುಡಿಗಳೊಂದಿಗೆ ತಮ್ಮ ವ್ಯಕ್ತಿತ್ವವನ್ನು ಸಮೀಕರಿಸಿಕೊಂಡಿರುವ ರಾಜಕುಮಾರ್ ಹುಟ್ಟಿದ್ದು 1929 ಏಪ್ರಿಲ್ 24ರಂದು, ಚಾಮರಾಜನಗರ ತಾಲ್ಲೂಕಿನ (ಈಗ ಜಿಲ್ಲೆ) ಗಾಜನೂರು ಗ್ರಾಮದಲ್ಲಿ. ಮುತ್ತತ್ತಿರಾಯನ ವರಪ್ರಸಾದದಿಂದ ಹುಟ್ಟಿದ ಮಗು ಎಂದು ಮುತ್ತುರಾಜ್ ಎಂದು ಹೆಸರಿಡಲಾಯಿತು. ತಾಯಿ ಲಕ್ಷಮ್ಮ. ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಆ ಕಾಲದ ಕನ್ನಡ ರಂಗಭೂಮಿಯ ಸುಪ್ರಸಿದ್ಧ ನಟರು. ಅಭಿನಯ ಗುಣ ಮಗನ ವ್ಯಕ್ತಿತ್ವದಲ್ಲಿಯೂ ಗುಪ್ತಗಾಮಿನಿಯಾಗಿ ಹರಿಯುತ್ತಿತ್ತು. ರಾಜಕುಮಾರ್ ಅವರಿಗೆ ಚಿಕ್ಕಂದಿನಲ್ಲಿ ಅಂಥ ವಿಶೇಷ ಶಿಕ್ಷಣವೇನೂ ದೊರೆಯಲಿಲ್ಲ. ಪ್ರಾಥಮಿಕ ಮೂರನೆಯ ತರಗತಿ ತೇರ್ಗಡೆಯಾಗುವಷ್ಟರಲ್ಲಿ ವಿದ್ಯಾಭ್ಯಾಸ ಆಕಸ್ಮಿಕವಾಗಿ ಕೊನೆಗೊಂಡಿತು. ದುರ್ಭರವಾದ ಬಡತನದ ಬೇಗೆಯಲ್ಲಿ ಬಾಲ್ಯಜೀವನ ಕಳೆಯಿತು. ಪುಟ್ಟಸ್ವಾಮಯ್ಯನವರು ನಟರು ಮಾತ್ರವಲ್ಲ ನಾಟಕ ಕಲಿಸುವ ಮಾಸ್ತರರೂ ಆಗಿದ್ದರಿಂದ ತಂದೆಯವರೊಡನೆ ಊರೂರು ತಿರುಗಾಡಬೇಕಾಯಿತು. ತಂದೆಯವರಿಂದ ಹಾಡುಗಾರಿಕೆ ಹಾಗೂ ಅಭಿನಯದಲ್ಲಿ ದೀಕ್ಷೆ ಪಡೆದುಕೊಂಡರು. ಪುಟ್ಟಸ್ವಾಮಯ್ಯನವರಿಗೆ ಮಗ ಓದಿ ಒಳ್ಳೆಯ ಕೆಲಸಕ್ಕೆ ಸೇರಬೇಕೆಂಬ ಆಸೆ. ಆದರೆ ಅದು ಕೈಗೂಡಲಿಲ್ಲ. ಬಡತನದ ಕಾರಣ ಬಣ್ಣದ ಬದುಕಿಗೇ ಅಂಟಿಕೊಳ್ಳಬೇಕಾದ ಅನಿವಾರ್ಯತೆ.
ರಂಗಭೂಮಿಯ ನಿಕಟ ಸಂಪರ್ಕ ಹಾಗೂ ತಂದೆಯ ಮಾರ್ಗದರ್ಶನದಲ್ಲಿ ರಾಜಕುಮಾರ್ ಬೆಳೆದರು. ಮುಂದೆ ಗುಬ್ಬಿವೀರಣ್ಣನವರ ನಾಟಕ ಕಂಪನಿಯನ್ನು ಪ್ರವೇಶಿಸುವುದರ ಮೂಲಕ ವೃತ್ತಿರಂಗಜೀವನವನ್ನು ಆರಂಭಿಸಿದರು. ಈ ಕಂಪನಿಯಲ್ಲಿ ಮೊದಲಿಗೆ ದೊರೆತದ್ದು ಬಾಲಪಾತ್ರಗಳು, ಸಖಿ, ಸೇವಕಿ ಮೊದಲಾದ ಹೆಣ್ಣು ಪಾತ್ರಗಳು. ಕುರುಕ್ಷೇತ್ರ ನಾಟಕದಲ್ಲಿ ಇವರು ಅಭಿಮನ್ಯು, ಕುಂತಿ ಪಾತ್ರಗಳನ್ನು ಅಭಿನಯಿಸುತ್ತಿದ್ದರು. ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ ಬಿ.ವಿ. ಕಾರಂತ, ಎಂ.ವಿ. ವಾಸುದೇವರಾವ್ ಮೊದಲಾದವರು ಆ ಕಾಲಕ್ಕೆ ಗುಬ್ಬಿ ಕಂಪನಿಯಲ್ಲಿ ರಾಜಕುಮಾರರ ಸಹೋದ್ಯೋಗಿಗಳು.
ಕನ್ನಡ ಚಿತ್ರರಂಗಕ್ಕೆ ನಾಯಕ ನಟನಾಗಿ ರಾಜಕುಮಾರ್ ಅಧಿಕೃತ ಪ್ರವೇಶವಾದದ್ದು 1954ರಲ್ಲಿ. ಗುಬ್ಬಿವೀರಣ್ಣನವರ ಗುಬ್ಬಿ ಕರ್ನಾಟಕ ಫಿಲಮ್ಸ್ ನಿರ್ಮಿಸಿದ `ಬೇಡರ ಕಣ್ಣಪ್ಪ ಚಿತ್ರದ ಮೂಲಕ. ಇದಕ್ಕೆ ಮೊದಲೇ 1942ರ ಸುಮಾರಿಗೆ ಕಲೈವಾಣಿ ಫಿಲಮ್ಸ್‍ನವರು ತೆಗೆದ 'ಭಕ್ತಪ್ರಹ್ಲಾದ ಚಿತ್ರದಲ್ಲಿ ಇವರು ಚಿಕ್ಕಪಾತ್ರವೊಂದರಲ್ಲಿ ಅಭಿನಯಿಸಿದ್ದರು. ಬೇಡರ ಕಣ್ಣಪ್ಪ ಚಿತ್ರವನ್ನು ನಿರ್ದೇಶಿಸಿದ ಎಚ್. ಎಲ್. ಎನ್. ಸಿಂಹ ಅವರು ಮುತ್ತುರಾಜ್‍ಗೆ ರಾಜಕುಮಾರ್ ಎಂದು ಚಿತ್ರ ನಾಮಕರಣ ಮಾಡಿದರು. ಅಲ್ಲಿಂದ ಮುಂದೆ ಕನ್ನಡ ಚಿತ್ರರಂಗದಲ್ಲಿ ರಾಜಕುಮಾರ್ ಎಂದೇ ಪ್ರಸಿದ್ಧರಾದರು. ರಾಜಕುಮಾರ್ ಚಿತ್ರರಂಗ ಪ್ರವೇಶಿಸಿದ ಆರಂಭದ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವುದು ಭಕ್ತಿಪಾತ್ರಗಳಲ್ಲಿ. ಅಂದಿನ ಸಮಕಾಲೀನ ಪರಿಸ್ಥಿತಿಯೇ ಇದಕ್ಕೆ ಕಾರಣವಾಗಿತ್ತು. ಅಂದಿನ ಚಿತ್ರ ನಿರ್ಮಾಪಕರು, ನಿರ್ದೇಶಕರು ಹೆಚ್ಚಾಗಿ ಪೌರಾಣಿಕ ವಸ್ತುಗಳಿಗೇ ಮನಸೋತಿದ್ದರು. 'ಭಕ್ತವಿಜಯ, 'ಹರಿಭಕ್ತ, 'ಓಹೀಲೇಶ್ವರ (1956), ಸತೀನಳಾಯನಿ (1957), ಕೃಷ್ಣಗಾರುಡಿ (1958), ಧರ್ಮವಿಜಯ (1959), ದಶಾವತಾರ, ಭಕ್ತ ಕನಕದಾಸ (1960), ಶ್ರೀಶೈಲ ಮಹಾತ್ಮೆ, ಕೈವಾರ ಮಹಾತ್ಮೆ, ಭಕ್ತಚೇತ (1961), ಮಹಾತ್ಮ ಕಬೀರ್ (1962), ಸಂತ ತುಕಾರಾಂ (1963), ಸರ್ವಜ್ಞ ಮೂರ್ತಿ (1956), ಮಂತ್ರಾಲಯ ಮಹಾತ್ಮೆ (1966), ಭಕ್ತ ಕುಂಬಾರ (1974) - ಇವು ಇವರು ಅಭಿನಯಿಸಿದ ಭಕ್ತಿ ಪ್ರಧಾನ ಪಾತ್ರಗಳ ಚಿತ್ರಗಳಲ್ಲಿ ಮುಖ್ಯವಾದವು. 'ಭೂಕೈಲಾಸದ (1958) ರಾವಣ, ಮಹಿಷಾಸುರ ಮರ್ದಿನಿಯ (1959) ಮಹಿಷ, ಶ್ರೀರಾಮಾಂಜನೇಯ ಯುದ್ಧದ (1963) ರಾಮ, ಮೋಹಿನಿ ಭಸ್ಮಾಸುರದ (1966) ಭಸ್ಮಾಸುರ, ಮಹಾಸತಿ ಅನಸೂಯದ (1965) ನಾರದ, ಬಭ್ರುವಾಹನದ (1976) ಬಭ್ರುವಾಹನ, ಸತ್ಯಹರಿಶ್ಚಂದ್ರದ ಹರಿಶ್ಚಂದ್ರ ಮೊದಲಾದವು ಇವರ ಅಭಿನಯದ ಜನಪ್ರಿಯ ಪೌರಾಣಿಕ ಪಾತ್ರಗಳು.
ಆದರೆ ರಾಜ್ ಪ್ರತಿಭೆ ಕೇವಲ ಪೌರಾಣಿಕ ಚಿತ್ರಗಳಿಗೆ ಸೀಮಿತವಾಗಲಿಲ್ಲ. ಸಾಮಾಜಿಕ, ಐತಿಹಾಸಿಕ, ಜಾನಪದ ಹೀಗೆ ಎಲ್ಲಾ ಪ್ರಕಾರಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ಬುದ್ಧನಿಂದ ಬಾಂಡ್‍ವರೆಗೆ ವೈವಿಧ್ಯಮಯ ಪಾತ್ರಗಳಲ್ಲಿ ರಾಜ್‍ಕುಮಾರ್ ತಮ್ಮ ಅಭಿನಯ ಪ್ರತಿಭೆಯನ್ನು ಪ್ರಕಟಪಡಿಸಿದ್ದಾರೆ.
ಸಾಮಾಜಿಕ ಚಿತ್ರಗಳಲ್ಲಿ ರಾಯರ ಸೊಸೆ, ಕರುಣೆಯೇ ಕುಟುಂಬದ ಕಣ್ಣು, ಕುಲವಧು, ಗಾಳಿಗೋಪುರ, ಕಸ್ತೂರಿನಿವಾಸ, ಕುಲಗೌರವ, ಸಿಪಾಯಿರಾಮು, ಬಂಗಾರದ ಮನುಷ್ಯ, ಹಾಲುಜೇನು, ಅನುರಾಗ ಅರಳಿತು, ಜೀವನ ಚೈತ್ರ ಮುಂತಾದ ಅಸಂಖ್ಯ ಚಿತ್ರಗಳು ದಾಖಲೆಗಳನ್ನು ಸೃಷ್ಟಿಸಿವೆ. ನಾಂದಿ, ಉಯ್ಯಾಲೆ, ಮುಂತಾದ ಪ್ರಯೋಗಾತ್ಮಕ ಚಿತ್ರಗಳು ಅಂತರರಾಷ್ಟ್ರೀಯ ಖ್ಯಾತಿಯನ್ನು ಪಡೆದವು. ಈ ಚಿತ್ರಗಳಲ್ಲಿ ರಾಜಕುಮಾರ್ ಅವರ ಅಭಿನಯ ಕೌಶಲ ಉತ್ತುಂಗವನ್ನು ಕಾಣಬಹುದಾಗಿದೆ. ಪ್ರಣಯ ಸನ್ನಿವೇಶಗಳಲ್ಲಿ ರಾಜಕುಮಾರರಷ್ಟು ಸ್ವಾಭಾವಿಕವಾಗಿ, ಸಹಜವಾಗಿ ರಸಿಕತೆಯ ಎಲ್ಲೆ ಮೀರದಂತೆ ಸುಮಧುರವಾದ ಸಂಬಂಧದ ಗಾಢತೆಯನ್ನು ತೆರೆಯ ಮೇಲೆ ಅಭಿವ್ಯಕ್ತಿಗೊಳಿಸಿದ, ನಟರು ಬಹಳ ಕಡಿಮೆ. ಮಣ್ಣಿನ ಮಗನ ಪಾತ್ರದಲ್ಲಿ ಅಣ್ಣತಂಗಿ, ಮಣ್ಣಿನ ಮಗ, ಮಲ್ಲಮ್ಮನ ಪವಾಡ, ದೂರದ ಬೆಟ್ಟ, ಮೇಯರ್ ಮುತ್ತಣ್ಣ, ಭೂದಾನ ಮುಂತಾದ ಚಿತ್ರಗಳು ಗಮನ ಸೆಳೆದವು. ರಾಣಿ ಹೊನ್ನಮ್ಮ, ಆಶಾಸುಂದರಿ (1960), ಸ್ವರ್ಣಗೌರಿ, ದೇವಸುಂದರಿ, ವಿಧಿವಿಲಾಸ (1962), ವೀರಕೇಸರಿ, ಚಂದ್ರಕುಮಾರ, ಬೆಟ್ಟದಹುಲಿ (1965), ಕಠಾರಿವೀರ, ಮಧುಮಾಲತಿ (1966), ಗಂಗೆ-ಗೌರಿ, ರಾಜದುರ್ಗದ ರಹಸ್ಯ, ದೇವರ ಗೆದ್ದ ಮಾನವ (1967), ಭಾಗ್ಯದೇವತೆ (1968), ಜಗಮೆಚ್ಚಿದ ಮಗ (1972), ಬಹದ್ದೂರ್ ಗಂಡು (1976) - ಇವು ಹಲವು ಜನಪ್ರಿಯ ಜಾನಪದ ಚಿತ್ರಗಳು.
ಕನ್ನಡದಲ್ಲಿ ಇದುವರೆಗೆ ನಿರ್ಮಾಣಗೊಂಡ ಸುಪ್ರಸಿದ್ಧ ಐತಿಹಾಸಿಕ ಚಿತ್ರಗಳಲ್ಲಿಯೂ ರಾಜಕುಮಾರ್ ಅವರೇ ನಾಯಕ ಪಾತ್ರಧಾರಿಯಾಗಿದ್ದಾರೆ. ರಣಧೀರ ಕಂಠೀರವ (1960), ಕಿತ್ತೂರು ಚೆನ್ನಮ್ಮ (1961), ಹುಲಿಯ ಹಾಲಿನ ಮೇವು (1979), ಕವಿರತ್ನ ಕಾಳಿದಾಸ (1983) - ಇವು ಇವರ ಅಭಿನಯದ ಪ್ರಮುಖ ಐತಿಹಾಸಿಕ ಚಿತ್ರಗಳು. ಮೈಸೂರು ಇತಿಹಾಸಕ್ಕೆ ಸಂಬಂಧಿಸಿದ ಕಥೆಯನ್ನಾಧರಿಸಿದ ರಣಧೀರ ಕಂಠೀರವ ಚಿತ್ರದಲ್ಲಿನ ರಾಜಕುಮಾರ್ ಅವರ ಅಭಿನಯ ಅವಿಸ್ಮರಣೀಯವಾದದ್ದು.
ರಾಜಕುಮಾರ್ ಅವರು ಬಾಂಡ್ ಶೈಲಿಯ ಚಿತ್ರಗಳಲ್ಲಿಯೂ ಹೆಸರು ಮಾಡಿದ್ದಾರೆ. 1968ರಲ್ಲಿ ತೆರೆಕಂಡ ಜೇಡರಬಲೆಯ ಮೂಲಕ ಆಧುನಿಕ ಬಾಂಡ್ ಶೈಲಿಯ ಪಾತ್ರಗಳಿಗೆ ಪ್ರವೇಶಿಸಿ ಜನಮನ್ನಣೆ ಗಳಿಸಿದರು. ಗೋವಾದಲ್ಲಿ ಸಿ.ಐ.ಡಿ. 999 (1968), ಆಪರೇಷನ್ ಜಾಕ್‍ಪಾಟ್ (12969), ಆಪರೇಷನ್ ಡೈಮಂಡ್ ರಾಕೆಟ್ (1978) ಎಂಬ ಚಿತ್ರಗಳಲ್ಲಿ ಬಾಂಡ್ ಆಗಿ ಕಾಣಿಸಿಕೊಂಡ ರಾಜ್ ಅವರು ಮುಂದೆ ಕನ್ನಡದಲ್ಲಿ ಇದೇ ಬಗೆಯ ಚಿತ್ರಗಳು ಕಾಣಿಸಿಕೊಳ್ಳಲು ಕಾರಣರಾದರು. ಸತಿಶಕ್ತಿ (1963), ದಾರಿ ತಪ್ಪಿದ ಮಗ (1975) ಬಭ್ರುವಾಹನ (1976) ಮೊದಲಾದ ಚಿತ್ರಗಳಲ್ಲಿ ದ್ವಿಪಾತ್ರದಲ್ಲಿಯೂ ಕುಲಗೌರವ (1972), ಶಂಕರ್‍ಗುರು (1977) ಚಿತ್ರದಲ್ಲಿ ತಂದೆ, ಮಗ, ಮೊಮ್ಮಗ - ಹೀಗೆ ತ್ರಿಪಾತ್ರಗಳಲ್ಲಿಯೂ ಕಾಣಸಿಕೊಂಡಿದ್ದಾರೆ. ರಾಜಕುಮಾರ್ ಅವರು ಕನ್ನಡ ಚಿತ್ರಗಳನ್ನುಳಿದು ಇತರ ಯಾವುದೇ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿಲ್ಲ. ಇವರ ಅನೇಕ ಚಿತ್ರಗಳು ಇತರ ಭಾಷೆಗಳಿಗೆ ಅದರಲ್ಲಿಯೂ ಹೆಚ್ಚಾಗಿ ತೆಲುಗು-ತಮಿಳಿಗೆ ಡಬ್ ಆಗಿವೆ.
ಇವರು ಅಭಿನಯಿಸಿದ ಬಂಗಾರದ ಮನುಷ್ಯ (1972) ಬೆಂಗಳೂರಿನಲ್ಲಿ 104 ವಾರಗಳ ಕಾಲ ಸತತವಾಗಿ ನಡೆದು ದಕ್ಷಿಣ ಭಾರತದಲ್ಲಿಯೇ ದಾಖಲೆ ಸ್ಥಾಪಿಸಿತು. ಇವರ ಅನೇಕ ಚಿತ್ರಗಳು ಶತಮಾನೋತ್ಸವ ಆಚರಿಸಿವೆ. ಇವರ ಅಭಿನಯದ `ಶಂಕರ್ ಗುರು ಗಳಿಕೆಯ ದೃಷ್ಟಿಯಿಂದ ದಾಖಲೆ ನಿರ್ಮಿಸಿದ ಚಿತ್ರವಾಗಿದೆ. ಚಿತ್ರರಂಗಕ್ಕೆ ಕಾಲಿಟ್ಟಂದಿನಿಂದ ಚಿರಯೌವನದ ನಟರಾಗಿರುವ ಇವರು ಬಹುಪಾಲು ಎಲ್ಲ ಪ್ರಸಿದ್ಧ ನಾಯಕಿಯರೊಂದಿಗೆ ನಟಿಸಿದ್ದಾರೆ. ಪಂಢರೀಬಾಯಿ, ಎಂ. ವಿ. ರಾಜಮ್ಮ, ವಂದನಾ, ಆದವಾನಿ ಲಕ್ಷ್ಮೀದೇವಿ, ಬಿ. ಸರೋಜಾದೇವಿ, ಲೀಲಾವತಿ, ಜಮುನಾ, ಸಾಹುಕಾರ್ ಜಾನಕಿ, ಹರಿಣಿ, ಕೃಷ್ಣಕುಮಾರಿ, ಜಿ. ವರಲಕ್ಷ್ಮೀ, ರಾಜಶ್ರೀ, ಕಲ್ಪನಾ, ಚಂದ್ರಕಲಾ, ಪದ್ಮಪ್ರಿಯಾ, ಜಯಂತಿ, ಭಾರತಿ, ಮಂಜುಳ, ಜಯಮಾಲ, ಲಕ್ಷ್ಮೀ, ಜಯಪ್ರದ, ಮಾಧವಿ, ಸರಿತಾ ಮೊದಲಾದ ನಾಯಕಿ ನಟಿಯರುಗಳನ್ನು ಇಲ್ಲಿ ಉಲ್ಲೇಖಿಸಬಹುದು. ಹೆಚ್ಚು ಜನಪ್ರಿಯ ಜೋಡಿಯಾಗಿ ಹೆಸರು ಗಳಿಸಿರುವವರೆಂದರೆ ಲೀಲಾವತಿ, ಜಯಂತಿ, ಭಾರತಿ, ಕಲ್ಪನಾ, ಮಂಜುಳ, ಮಾಧವಿ.
ಅಭಿನಯದೊಡನೆ ಹಿನ್ನೆಲೆ ಗಾಯನದಲ್ಲಿಯೂ ರಾಜಕುಮಾರ್ ಅವರು ಪ್ರಸಿದ್ಧಿ ಗಳಿಸಿದ್ದಾರೆ. ಇವರು ಹಿನ್ನೆಲೆ ಗಾಯಕರಾಗಿ ಮಹಿಷಾಸುರ ಮರ್ದಿನಿ (1959) ಚಿತ್ರದಲ್ಲಿಯೇ ಹಾಡಿದ್ದರೂ ಪೂರ್ಣಪ್ರಮಾಣದ ಗಾಯಕರಾಗಿ ಪ್ರಸಿದ್ಧರಾದದ್ದು ಸಂಪತ್ತಿಗೆ ಸವಾಲ್(1974) ಚಿತ್ರದಲ್ಲಿ ಹಾಡಿದ `ಯಾರೇ ಕೂಗಾಡಲಿ ಊರೇ ಹೋರಾಡಲಿ ಎಂಬ ಗೀತೆಯಿಂದ. ಅಂದಿನಿಂದ ಇಂದಿನವರೆಗೆ ನೂರಾರು ಗೀತೆಗಳನ್ನು ಹಾಡಿದ್ದಾರೆ. ಇವರು ಹಾಡಿದ ಅನೇಕ ಧ್ವನಿಮುದ್ರಿಕೆಗಳು ಜನಪ್ರಿಯವಾಗಿವೆ. ಮೊದಲಿಗೆ ತಮ್ಮ ಪಾತ್ರಗಳಿಗೆ ಮಾತ್ರ ಕಂಠದಾನ ಮಾಡುತ್ತಿದ್ದ ಇವರು ಅನಂತರ ಇತರ ಪಾತ್ರಗಳಿಗೂ ಕಂಠದಾನವನ್ನು ವಿಸ್ತರಿಸಿಕೊಂಡರು. ತಮ್ಮ ಚಿತ್ರಸಂಸ್ಥೆಯಿಂದ ನಿರ್ಮಾಣಗೊಂಡ ಬಹುಪಾಲು ಚಿತ್ರಗಳಲ್ಲಿ ರಾಜಕುಮಾರ್ ಅವರು ಹಾಡಿದ್ದಾರೆ. ಇವರು ಹಾಡಿರುವ ಮೂಗೂರು ಮಲ್ಲಪ್ಪನವರ ಜೋಗದ ಲಾವಣಿ, `ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಸಾಯೋತನಕ ಸಂಸಾರ್‍ದಲ್ಲಿ ಗಂಡಾಗುಂಡಿ' ಎಂಬುದು ಬಲು ಜನಪ್ರಿಯತೆಗಳಿಸಿದೆ. `ಜೀವನ ಚೈತ್ರ ಚಿತ್ರದಲ್ಲಿ ಇವರು ಹಾಡಿರುವ `ನಾದಮಯ ಎಂಬ ಗೀತೆಗೆ ಅತ್ಯುತ್ತಮ ಗಾಯಕನೆಂದು ರಾಷ್ಟ್ರಪ್ರಶಸ್ತಿ ದೊರೆತಿದೆ. ಚಿತ್ರೇತರ ಗೀತೆಗಳನ್ನು, ಅದರಲ್ಲಿಯೂ ನೂರಾರು ಭಾವಗೀತೆ ಹಾಗೂ ಭಕ್ತಿಗೀತೆಗಳನ್ನು ಇವರು ಹಾಡಿದ್ದಾರೆ. `ಕನ್ನಡವೇ ಸತ್ಯಎಂಬ ಧ್ವನಿಸುರುಳಿ ಹಾಗೂ ಅಯ್ಯಪ್ಪ, ರಾಘವೇಂದ್ರರ ಕುರಿತಂತೆ ಇವರು ಹಾಡಿರುವ ಧ್ವನಿ ಸುರುಳಿಗಳು ಕನ್ನಡಿಗರ ಮನವನ್ನು ತುಂಬಿವೆ.
ರಸಮಂಜರಿ ಕಾರ್ಯಕ್ರಮಗಳನ್ನು ಕನ್ನಡ ನಾಡಿನ ಉದ್ದಗಲಕ್ಕೂ ರಾಜ್ ನಡೆಸಿಕೊಟ್ಟಿದ್ದಾರೆ.
ಚಿತ್ರರಂಗದ ಸಮಸ್ಯೆಗಳಿಗೆ, ಕನ್ನಡ ನಾಡು, ನುಡಿಯ ಸಮಸ್ಯೆಗಳಿಗೆ ರಾಜ್ ಸ್ಪಂದಿಸಿದ್ದಾರೆ. ಬರ/ಪ್ರವಾಹ ಪರಿಸ್ಥಿತಿಯಲ್ಲಿ ಪಾದಯಾತ್ರೆ ಮಾಡಿ ಹಣ ಸಂಗ್ರಹಿಸಿ ಸಹಕರಿಸಿದ ರಾಜ್ ಪ್ರಮುಖ ಶಕ್ತಿಯಾಗಿ ಕಾಣಿಸಿಕೊಂಡದ್ದು ಗೋಕಾಕ್ ಚಳವಳಿಯ ಸಂದರ್ಭದಲ್ಲಿ.
ರಾಜಕುಮಾರ್ ಅವರು ಅಭಿನಯವನ್ನು ಆರಾಧನೆ ಎಂದು ಭಾವಿಸಿರುವರು; ಕಲಾವಿದರಿಗಿಂತ ಕಲೆ ದೊಡ್ಡದು ಎಂದು ತಿಳಿದವರು. ಅಖಂಡ ಕನ್ನಡಿಗರ ಎಲ್ಲ ಬಗೆಯ ಪ್ರೀತ್ಯಾದರಗಳಿಗೆ ಪಾತ್ರರಾದವರು. ಇವರಿಗೆ ಹಣ, ಕೀರ್ತಿ, ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಇವರ ಅಭಿನಯದ ಭಕ್ತ ಕನಕದಾಸ, ಸತ್ಯಹರಿಶ್ಚಂದ್ರ, ಕುಲಗೌರವ, ಭಕ್ತಕುಂಬಾರ, ಬಂಗಾರದ ಹೂ, ಮದುವೆಮಾಡಿ ನೋಡು ಮೊದಲಾದ ಚಿತ್ರಗಳು ರಾಜ್ಯ ಪ್ರಶಸ್ತಿ ಗಳಿಸಿವೆ. ಬಂಗಾರದ ಹೂ ಚಿತ್ರ ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿದೆ. ಇವರ ಅಮೋಘ ಅಭಿನಯಕ್ಕಾಗಿ ಅನೇಕ ಬಾರಿ ಫಿಲಂಫೇರ್ ಪ್ರಶಸ್ತಿ ದೊರೆತಿದೆ. ನಾಡಿನಾದ್ಯಂತ ಚಲನಚಿತ್ರ ಪ್ರೇಮಿಗಳಿಂದ, ಅನೇಕ ಸಂಘಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ. ವರನಟ, ನಟಸಾರ್ವಭೌಮ, ಕನ್ನಡಕಂಠೀರವ, ರಸಿಕರ ರಾಜ ಮೊದಲಾದ ಬಿರುದುಗಳನ್ನು ಕನ್ನಡ ಕಲಾರಸಿಕರು ಇವರಿಗೆ ನೀಡಿದ್ದಾರೆ. ಇವರ ಕಲಾಸೇವೆಯನ್ನು ಗಮನಿಸಿ 1976ರಲ್ಲಿ ಮೈಸೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಕೇಂದ್ರ ಸರ್ಕಾರ `ಪದ್ಮಭೂಷಣ' ಪ್ರಶಸ್ತಿಯನ್ನೂ ಕರ್ನಾಟಕ ರಾಜ್ಯ ಸರ್ಕಾರ 'ಕರ್ನಾಟಕ ರತ್ನ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ. ರಾಜಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ, ತನ್ಮೂಲಕವಾಗಿ ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪೂರ್ವ ಕೊಡುಗೆಗಾಗಿ ಇವರಿಗೆ 1996ರಲ್ಲಿ ನೀಡಲಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಅದ್ವಿತೀಯವಾದದ್ದು. ಈ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡಿಗರೆಂಬ ಕೀರ್ತಿಗೆ ರಾಜಕುಮಾರ್ ಭಾಜನರಾಗಿದ್ದಾರೆ. ಹಂಪಿ ವಿಶ್ವವಿದ್ಯಾನಿಲಯ 'ನಾಡೋಜ' ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಇದುವರೆಗೆ ಸುಮಾರು 205ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. "ಶಬ್ದವೇಧಿ"(2005) ನಂತರ ರಾಜಕುಮಾರ್ ಯಾವ ಚಿತ್ರದಲ್ಲೂ ಅಭಿನಯಿಸಿಲ್ಲ. ಅವರು ಮತ್ತಷ್ಟು ಚಿತ್ರಗಳಲ್ಲಿ ಅಭಿನಯಿಸಬೇಕೆಂದು ಅಭಿಮಾನಿಗಳ ನಿರಂತರ ಒತ್ತಾಯ.
ಚಿತ್ರರಂಗದಲ್ಲಿ ರಾಜಕುಮಾರ್ ಅವರ ಇಡೀ ಕುಟುಂಬವೇ ತೊಡಗಿಕೊಂಡಿದೆಯೆಂದರೆ ತಪ್ಪಾಗಲಾರದು. ಮಡದಿ ಪಾರ್ವತಮ್ಮ ರಾಜಕುಮಾರ್ ಕನ್ನಡ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಪಕಿ, ಮಕ್ಕಳಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ನಟರಾಗಿ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಕನ್ನಡಿಗರಿಗೆ ಆಘಾತವಾದದ್ದು ರಾಜ್‍ಕುಮಾರ್ ಅಪಹರಣದ ಸಂದರ್ಭದಲ್ಲಿ. ಕಾಡುಗಳ್ಳ ವೀರಪ್ಪನ್ ರಾಜ್‍ಕುಮಾರ್ ಅವರನ್ನು ಅಪಹರಿಸಿ ನೂರ ಎಂಟು ದಿನಗಳ ಕಾಲ ಒತ್ತೆ ಇಟ್ಟು ಬಿಡುಗಡೆ ಮಾಡಿದ.
ಕನ್ನಡ ನಾಡಿನ ಮೇಲೆ ಕನ್ನಡಿಗರ ಮೇಲೆ ರಾಜ್‍ಕುಮಾರ್ ಅವರ ವ್ಯಕ್ತಿತ್ವದ ಪ್ರಭಾವ ಅಪಾರವಾಗಿದೆ. ವ್ಯಕ್ತಿಯಾಗಿ ಮೇರುಮಟ್ಟದಲ್ಲಿ ನಿಂತ ಅಪರೂಪದ ಹೆಸರು ರಾಜ್‍ಕುಮಾರ್. ಇವರು ಎಪ್ರಿಲ್ 12, 2006ರಂದು ನಿಧನರಾದರು. (ಪರಿಷ್ಕರಣೆ: ಪ್ರವೀಣ್ ನಾಯಕ್)