ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಡಿನ್, ಪಾಲ್

ವಿಕಿಸೋರ್ಸ್ದಿಂದ

1883-1959. ಅಮೆರಿಕ ಸಂಯುಕ್ತ ಸಂಸ್ಥಾನದ ಮಾನವಶಾಸ್ತ್ರಜ್ಞ. ಅನೇಕ ಕ್ಷೇತ್ರಗಳಲ್ಲಿರುವ ಮಾನವಕುಲ ಚಾರಿತ್ರಿಕ ವಿಶ್ಲೇಷಣೆಗಾಗಿ (ಎಥ್ನೋಹಿಸ್ಟಾರಿಕಲ್ ಅನಾಲಿಸಸ್) ಖ್ಯಾತನಾಗಿದ್ದಾನೆ. ಇತ ಪೋಲೆಂಡಿನ ಲಾಡ್ಜ್ ಎಂಬಲ್ಲಿ 1883 ಏಪ್ರಿಲ್ 2 ರಂದು ಜನಿಸಿದ. ಇವನ ತಂದೆ ಭಾಷಾವಿಜ್ಞಾನಿಯೂ ಹೀಬ್ರೂ ಭಾಷೆಯಲ್ಲಿ ವಿದ್ವಾಂಸನೂ ಆಗಿದ್ದ. ರಾಡಿನ್ ತಂದೆಯೊಡನೆ ಚಿಕ್ಕಂದಿನಲ್ಲಿ ಅಮೆರಿಕಕ್ಕೆ ವಲಸೆ ಬಂದ. ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಜೇಮ್ಸ್ ಹಾರ್ವೆ ರಾಬಿನ್‍ಸನ್ ಮತ್ತು ಫ್ರಾನ್ಜ್ ಬೋಆಸ್ ಎಂಬ ವಿದ್ವಾಂಸರ ಪ್ರಭಾವಕ್ಕೆ ಒಳಗಾಗಿ ಮಾನವಶಾಸ್ತ್ರದಲ್ಲಿ ಆಸಕ್ತಿಗಳಿಸಿಕೊಂಡ. ಅನಂತರ ಸಂಶೋಧನೆ ಕೈಗೊಂಡು 1911 ರಲ್ಲಿ ಕೊಲಂಬಿಯ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ.ಪದವಿ ಗಳಿಸಿದ.

ಈತನಿಗೆ ಪ್ರಧಾನವಾಗಿ ಆದಿವಾಸಿಗಳ ಜಾನಪದ, ಧರ್ಮ, ಭಾಷೆಗಳ ಬಗ್ಗೆ ಆಸಕ್ತಿಯಿತ್ತು. ಇತಿಹಾಸದ ಒಂದು ಶಾಖೆ ಮಾನವಶಾಸ್ತ್ರ ಎಂಬುದು ಇವನ ತಿಳಿವಳಿಕೆಯಾಗಿತ್ತು. ಮೂಲಭೂತ ದಾಖಲೆಗಳ ಸಂಗ್ರಹದ ಬಗ್ಗೆ ಈತ ಹೆಚ್ಚು ಒತ್ತು ನೀಡಿದ. ದಿ ವಿನ್ನೆಬಾಗೊ ಟ್ರೈಬ್ (1915-16). ಪ್ರಿಮಿಟಿವ್ ಮ್ಯಾನ್ ಆ್ಯಸ್ ಫಿಲಾಸಫರ್ (1927), ದಿ ರೋಡ್ ಆಫ್ ಲೈಫ್ ಅಂಡ್ ಡೆತ್ (1945) ದಿ ರೇಸಿಯಲ್ ಮಿಥ್ (193). ಪ್ರಿಮಿಟಿವ್ ರಿಲಿಜನ್ (1937), ಕಲ್ಚರ್ ಅಫ್ ದಿ ವಿನ್ನೆಬಾಗೊ ಅ್ಯಸ್ ಡಿಸ್ಕ್ರೈಬ್ಡ್ ಬೈ ದೆಮ್‍ಸೆಲ್ವ್‍ಸ್ (1949), ದಿ ಟ್ರಕ್‍ಸ್ಟರ್; ಎ ಸ್ಟಡಿ ಇನ್ ಅಮೆರಿಕನ್ ಇಂಡಿಯನ್ ಮೈಥಾಲಜಿ (1955) -ಇವು ಇವನ ಪ್ರಮುಖ ಕೃತಿಗಳು. ಮಾನವಕುಲಶಾಸ್ತ್ರ ಸಿದ್ಧಾಂತಕ್ಕೆ ಸಂಬಂಧಿಸಿದಂತೆ ಈತ ಮೆಥಡ್ ಅಂಡ್ ಥಿಯರಿ ಆಫ್ ಎಥ್ನಾಲಜಿ (1933) ಎಂಬ ವಿಮರ್ಶಾತ್ಮಕ ಕೃತಿಯನ್ನು ಪ್ರಕಟಿಸಿದ್ದಾನೆ. ಭಾಷಾವಿಜ್ಞಾನ ಕ್ಷೇತ್ರದಲ್ಲಿಯೂ ಇವನಿಗೆ ಒಲವಿತ್ತು. ಐತಿಹಾಸಿಕ ಭಾಷಾವಿಜ್ಞಾನದ ಬಗ್ಗೆ ಕೆಲಸ ಮಾಡಿದ್ದಾನೆ. ದಿ ಜಿನೆಟಿಕ್ ರಿಲೇಷನ್ ಶಿಪ್ ಆಫ್ ಸಿ ನಾರ್ತ್ ಅಮೆರಿಕನ್ ಇಂಡಿಯನ್ ಲಾಂಗ್ವೆಜಸ್ (1919) ಎಂಬ ಕಿರು ಪುಸ್ತಕ ಈ ಕ್ಷೇತ್ರಕ್ಕೆ ಇವನ ಮಹತ್ತ್ವದ ಕೊಡುಗೆಯಾಗಿದೆ.

ರಾಡಿನ್ ತನ್ನ ಬದುಕಿನ ಕಲಾವಧಿಯನ್ನು ಹೆಚ್ಚಾಗಿ ಸಂಶೋಧನೆಯಲ್ಲಿ ಕಳೆದ. ಕೆಲಕಾಲ ಈತ ಕ್ಯಾಲಿಫೋರ್ನಿಯ, ಷಿಕಾಗೊ, ಕೇಂಬ್ರಿಜ್, ಬ್ರಾಂಡೀಸ್ ಮೊದಲಾದ ವಿಶ್ವವಿದ್ಯಾಲಯಗಳಲ್ಲಿ ಬೋಧಕನಾಗಿ ಕೆಲಸ ನಿರ್ವಹಿಸಿದ. ಬಹಳ ವರ್ಷಗಳ ಕಾಲ ಈತ ಕೆನಡದ ಭೂವಿಜ್ಞಾನ ಸರ್ವೇಕ್ಷಣ ಇಲಾಖೆಯಲ್ಲಿ ಕ್ಷೇತ್ರ ಮಾನವಕುಲದಶಾಸ್ತ್ರಜ್ಞನಾಗಿ (ಫಿಲ್ಡ್ ಎಥ್ನಾಲಜಿಸ್ಟ್) ಸೇವೆ ಸಲ್ಲಿಸಿದ. ಆರ್.ಎಚ್. ಲೋವಿ, ಎಡ್ವರ್ಡ್ ಸಪೀರ್ ಎಂಬ ವಿದ್ವಾಂಸರು ಈತನ ವೃತ್ತಿ ಗೆಳೆಯರಾಗಿದ್ದರು. ಈತ 1950 ಫೆಬ್ರವರಿ 12 ರಂದು ನ್ಯೂ ಯಾರ್ಕ್‍ನಲ್ಲಿ ನಿಧನಹೊಂದಿದ.

(ಪಿ.ಎನ್.ಎಚ್.)