ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರಾಡ್‍ಕ್ಲಿಫ್ ಬ್ರೌನ್, ಆಲ್ಫ್ರೆಡ್ ರೆಗಿನಾಲ್ಡ್

ವಿಕಿಸೋರ್ಸ್ದಿಂದ

1881-1955. ಆಧುನಿಕ ಸಾಮಾಜಿಕ ಮಾನವಶಾಸ್ತ್ರದ (ಸೋಷಿಯಲ್ ಆಂತ್ರೊಪಾಲೊಜಿ) ಪಿತಾಮಹನೆಂದು ಖ್ಯಾತನಾದ ಬ್ರಿಟಿಷ್ ಮಾನವಶಾಸ್ತ್ರಜ್ಞ. ಈತ ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್‍ನಲ್ಲಿ 1881 ಜನವರಿ 17 ರಂದು ಜನಿಸಿದ. ಕೇಂಬ್ರಿಜ್‍ನ ಟ್ರಿನಿಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ 1905 ರಲ್ಲಿ ಪದವಿಗಳಿಸಿದ. ಈ ಸಂದರ್ಭದಲ್ಲಿ ಇವನಿಗೆ ಡಬ್ಲ್ಯೂ.ಎಚ್. ಆರ್. ರಿವರ್ಸ್, ಎಂ. ಸಿ. ಹಡ್ಡನ್, ಸಿ.ಎನ್. ಮೇಯರ್ಸ್ ಎಂಬ ವಿದ್ವಾಂಸರ ಪರಿಚಯವಾಗಿ ಮಾನವಶಾಸ್ತ್ರದಲ್ಲಿ ಒಲವು ಬೆಲೆಯಿತು. ತನ್ನ ಇಡೀ ಜೀವನವನ್ನು ಇಂಗ್ಲೆಂಡಿನ ಹೊರಗೆ ಮಾನವಶಾಸ್ತ್ರ ಅಧ್ಯಯನದಲ್ಲಿ ಕಳೆದ. ಅಂಡಮಾನ್ ದ್ವೀಪಗಳು (1906-1908), ಪಶ್ಚಿಮ ಆಸ್ಟ್ರೇಲಿಯ (1910-25)- ಈ ಭಾಗಗಳಲ್ಲಿ ವ್ಯಾಪಕ ಕ್ಷೇತ್ರಕಾರ್ಯ ಹಾಗೂ ಸಂಶೋಧನೆ ಕೈಗೊಂಡ. ಈತ ಮಾನವ ಶಾಸ್ತ್ರದ ಪ್ರಾಧ್ಯಾಪಕನಾಗಿ ಕೇಪ್ ಟವನ್ (1920-25), ಸಿಡ್ನಿ (1925-31), ಷಿಕಾಗೊ (1931-37) , ಆಕ್ಸ್‍ಫರ್ಡ್‍ಗಳಲ್ಲಿ (1937-46) ಸೇವೆ ಸಲ್ಲಿಸಿದ. ಇವನು ಕೆಲಸ ಮಾಡಿದ ಕಡೆಗಳಲ್ಲೆಲ್ಲ ಮಾನವಶಾಸ್ತ್ರದ ಬೋಧನೆ ಹಾಗೂ ಸಂಶೋಧನೆಗೆ ಉತ್ತಮ ವಿಭಾಗ ರೂಪಿಸಿದ. ಆಕ್ಸ್‍ಫರ್ಡ್‍ನಿಂದ ನಿವೃತ್ತನಾದ ಮೇಲೆ ಅಲೆಕ್ಸಾಂಡ್ರಿಯಾದ ಫರೂಕಿ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ ವಿಜ್ಞಾನಗಳ ಪ್ರಾಧ್ಯಾಪಕನೂ ಸಾಮಾಜಿಕ ಅಧ್ಯಯನ ಸಂಸ್ಥೆಯ ನಿರ್ದೇಶಕನೂ ಆಗಿದ್ದ (1947-49). ಅನಂತರ ದಕ್ಷಿಣ ಆಫ್ರಿಕದ ರೋಡ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಸೇವೆಸಲ್ಲಿಸಿದ (1951-54). ಇಲ್ಲಿರುವಾಗ ಸ್ಕೂಲ್ ಆಫ್ ಆಫ್ರಿಕನ್ ಲೈಫ್ ಅಂಡ್ ಲಾಂಗ್ವೇಜ್ ಎಂಬ ಸಂಸ್ಥೆಯನ್ನು ಆರಂಭಿಸಿದ. ಸಿಡ್ನಿಯಲ್ಲಿರುವಾಗ ಆಸ್ಟ್ರೇಲಿಯನ್ ನ್ಯಾಷನಲ್ ರಿಸರ್ಚ್ ಕೌನ್ಸಿಲ್‍ನ ಸಹಯೋಗದೊಡನೆ `ಓಸಿಯಾನಿಯ’ ಎಂಬ ಸಂಶೋಧನ ಪತ್ರಿಕೆಯನ್ನು ಆರಂಭಿಸಿದ.

ಈತ ಮಾನವಶಾಸ್ತ್ರಕ್ಕೆ ಸಂಬಂಧಿಸಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾನೆ. ಅಂಡಮಾನ್ ಐಲೆಂಡರ್ಸ್ (1922), ಸೋಷಿಯಲ್ ಆರ್ಗನೈನೇಷನ್ ಆಫ್ ಆಸ್ಟ್ರೇಲಿಯನ್ ಟ್ರೈಬ್ಸ್ (1931), ಸ್ಟ್ರಕ್ಚರ್ ಅಂಡ್ ಫಂಕ್ಷನ್ ಇನ್ ಪ್ರಿಮಿಟಿವ್ ಸೊಸೈಟಿ (1952), ಎ ನ್ಯಾಚುರಲ್ ಸೈನ್ಸ್ ಆಫ್ ಸೊಸೈಟಿ (1957), ಮೆಥಡ್ ಇನ್ ಸೋಷಿಯಲ್ ಸಂತ್ರೊಪಾಲಜಿ (1958)-ಇವು ಇವನ ಮುಖ್ಯ ಕೃತಿಗಳು.

ಈತ ಉತ್ತಮ ಭಾಷಣಕಾರನಾಗಿದ್ದ ; ಅತ್ಯುತ್ತಮ ಬೋಧಕನೆಂದೂ ಹೆಸರು ಗಳಿಸಿದ್ದ. ಈತನಿಗೆ ಅನೇಕ ಶೈಕ್ಷಣಿಕ ಪ್ರಶಸ್ತಿ. ಪುರಸ್ಕಾರಗಳು ಲಭ್ಯವಾಗಿದ್ದುವು. ಈತ ಆಮ್‍ಸ್ಟ್‍ರ್ಡಮ್ ರಾಯಲ್ ಅಕಾಡಮಿ ಆಫ್ ಸೈನ್ಸ್‍ನ ಸದಸ್ಯನೂ ನ್ಯೂಯಾರ್ಕ ಅಕೆಡಮಿ ಆಫ್ ಸೈನ್ಸ್‍ನ ಗೌರವ ಸದಸ್ಯನೂ ಸಾಮಾಜಿಕ ಮಾನವ ಶಾಸ್ತ್ರಜ್ಞರ ಬ್ರಿಟಿಷ್ ಸಂಘದ ಅಧ್ಯಕ್ಷನೂ ರಾಯಲ್ ಆಂತ್ರೊಪಾಲಜಿಕಲ್ ಸಂಸ್ಥೆಯ ಅಧ್ಯಕ್ಷನೂ ಆಗಿದ್ದ. ಇವನಿಗೆ 1938 ರಲ್ಲಿ ರಿವರ್ಸ್ ಸ್ಮಾರಕ ಪದಕವನ್ನು 1951 ರಲ್ಲಿ ಹಕ್ಸ್ಲಿ ಸ್ಮಾರಕ ಪದಕವನ್ನೂ ನೀಡಿ ಗೌರವಿಸಲಾಯಿತು. ಈತ ಲಂಡನನ್ನಿನಲ್ಲಿ 1955 ಅಕ್ಟೋಬರ್ 24 ರಂದು ನಿಧನ ಹೊಂದಿದ.

(ಪಿ.ಎನ್.ಎಚ್.; ಎ.ಸಿ.ಎಲ್.)