ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ರೇಬಿಸ್

ವಿಕಿಸೋರ್ಸ್ದಿಂದ

ರೇಬಿಸ್ ಕೆಲವೊಂದು ಪ್ರಾಣಿಗಳಲ್ಲಿ, ಮುಖ್ಯವಾಗಿ ನಾಯಿ, ಬೆಕ್ಕು, ತೋಳಗಳಲ್ಲಿ ಕಂಡುಬರುವ ಒಂದು ಬಗೆಯ ವೈರಸ್‍ಕ್ರಿಮಿಯಿಂದ ಉಂಟಾಗುವ ರೋಗ. ಹುಚ್ಚುನಾಯಿ ರೋಗ ಎಂದೂ ಹೇಳವುದುಂಟು. ಮನುಷ್ಯರಿಗೂ ವ್ಯಾಪಿಸುತ್ತದೆ. ಇದು ಹರಡುವುದು ಪ್ರಾಣಿಗಳ ಜೊಲ್ಲಿನ ಸೋಂಕಿನಿಂದ. ರೋಗಪೀಡಿತ ಪ್ರಾಣಿ ಮನುಷ್ಯನನ್ನು ಕಡಿದಾಗ ಅದರ ಜೊಲ್ಲಿನಲ್ಲಿರಬಹುದಾದ ವೈರಸ್ ಗಾಯದ ಮೂಲಕ ಆತನ ದೇಹವನ್ನು ಪ್ರವೇಶಿಸುತ್ತವೆ. ನಾಯಿ ಬೆಕ್ಕುಗಳಲ್ಲಿ ಮಾತ್ರವಲ್ಲ ಹುಲಿ, ಚಿರತೆ, ಕಿರುಬ, ಕೋತಿ, ಮುಂಗಸಿ, ಒಂಟೆ, ಕುದುರೆ, ಹೇಸರಗತ್ತೆ, ಇಲಿ ಮುಂತಾದ ಪ್ರಾಣಿಗಳಲ್ಲೂ ಈ ವೈರಸಿನ ಸೋಂಕು ಇರುತ್ತದೆ. ಹೀಗೆ ದೇಹ ಹೊಕ್ಕ ವೈರಸ್ ಪಕ್ವಸ್ಥಿತಿಗೆ ಬರಲು 5-7 ದಿವಸಗಳಾಗುತ್ತವೆ. ರೋಗಪೀಡಿತರಲ್ಲಿ 10 ದಿವಸಗಳಿಂದ 2 ವರ್ಷಗಳತನಕವೂ (ಸಾಮಾನ್ಯವಾಗಿ 3-7 ವಾರಗಳಲ್ಲಿ) ಈ ವೈರಸುಗಳಿದ್ದು ಇದ್ದು ಪಕ್ವಗೊಂಡು ರೋಗವನ್ನು ಉಲ್ಬಣಗೊಳಿಸುತ್ತವೆ. ಕ್ರಿಮಿಗಳು ನರಗಳ ಮೂಲಕ ಮಿದುಳು ಸೇರಿ ಅಲ್ಲಿ ವೃದ್ಧಿಹೊಂದುತ್ತವೆ. ಬಳಿಕ ಅಲ್ಲಿಂದ ಬಹಿರ್ವಾಹಿ ನರಗಳ ಮೂಲಕ ಲಾಲಾಗ್ರಂಥಿಗಳನ್ನು ಸೇರುತ್ತವೆ.

ರೋಗಲಕ್ಷಣಗಳು: ಪ್ರಾಣಿ ಕಡಿದ 1-2 ತಿಂಗಳುಗಳಲ್ಲಿ ಚಿಹ್ನೆಗಳು ಮೂಡುತ್ತವೆ. ಹುಚ್ಚುನಾಯಿ ಕಡಿತ ಅತಿ ಅಪಾಯಕಾರಿ. ಇದರ ಸೋಂಕಿನಿಂದ ರೋಗಪೀಡಿತ ಮನುಷ್ಯರಲ್ಲಿ ಇಲ್ಲವೆ ಪ್ರಾಣಿಗಳಲ್ಲಿ ಕಂಡುಬರುವ ಮುಖ್ಯ ಲP್ಪ್ಷಣಗಳಿವು; ಕಡಿದ ಜಾಗದಲ್ಲಿ ನೋವು ಮತ್ತು ನರಗಳ ಅದಿರಿಕೆ, ನೀರು ಕುಡಿಯಲು ಪ್ರಯತ್ನಿಸಿದಾಗ ಗಂಟಲ ನಾಳದಲ್ಲಿ ನೋವು ಮತ್ತು ಮಾಂಸಖಂಡಗಳ ಸಂಕೋಚನ. ಇದರಿಂದ ರೋಗಿಯಲ್ಲಿ ಜಲಭಯ ಮತ್ತು ವಾಯುಭಯ ಕಂಡುಬರುತ್ತವೆ. ಚಿತ್ತಚಾಂಚಲ್ಯ, ಹದಗೆಟ್ಟ ವರ್ತನೆ, ಅಸ್ಥಿರತೆ ಮುಂತಾದವು ಬಾಧಿಸತೊಡ ಗುತ್ತವೆ. ಈ ಲಕ್ಷಣಗಳೊಡನೆ ಅಪಸ್ಮಾರ ವ್ಯಾಧಿಯೂ ಬರಬಹುದು. ಕತ್ತಿನ ಹಿಂಭಾಗದಲ್ಲಿ ಊತ ಕಾಣಿಸಿಕೊಳ್ಳುವುದರಿಂದ ವ್ಯಾಧಿಬಲು ತ್ವರೆಯಿಂದ ಉಲ್ಬಣಿಸುತ್ತದೆ. ಹೆಚ್ಚು ಗಟ್ಟಿ ಮತ್ತು ಅಂಟಂಟಾದ ಜೊಲ್ಲು ಉತ್ಪತ್ತಿಯಾಗುತ್ತದೆ.

ರೇಬಿಸ್ ರೋಗಕ್ಕೆ ಈಡಾದವರ ಲಕ್ಷಣಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಕಡಿದ ಪ್ರಾಣಿಯ ಆರೋಗ್ಯದ ಬಗ್ಗೆಯೂ ಅತ್ಯಂತ ಎಚ್ಚರ ವಹಿಸಬೇಕಾಗುತ್ತದೆ. ಅದು ಸತ್ತಿರಲಿ ಅಥವಾ ಬದುಕಿರಲಿ ಅದರಲ್ಲಿ ರೇಬಿಸ್ ವೈರಸುಗಳು ನೆಲೆಗೊಂಡಿವೆಯೇ ಎಂಬುದನ್ನು ಪರೀಕ್ಷಿಸಬೇಕು. ಈ ಪ್ರಾಣಿಗಳ ಮಿದುಳನ್ನು ಪ್ರತಿದೀಪ್ತಿರೋಧವಸ್ತು ತಂತ್ರಕ್ಕೆ (ಫ್ಲೂರೋಸೆಂಟ್ ಅ್ಯಂಟಿಬಾಡಿ ಟೆಕ್ನೀಕ್) ಈಡುಮಾಡುವುದರಿಂದ ವ್ಯಾಧಿ ಪರೀಕ್ಷೆಯನ್ನು ನಡೆಸಬಹುದು.

ರೋಗ ತಡೆಗಟ್ಟುವಿಕೆ: ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು ಮುಂತಾದವಕ್ಕೆ ಅವು ಈ ರೋಗಕ್ಕೆ ಬಲಿಯಾಗದಂತೆ ನಿರ್ದಿಷ್ಟ ಅವಧಿಗಳಲ್ಲಿ ಪ್ರತಿರೋಧದ ಚುಚ್ಚುಮದ್ದು ಕೊಡಿಸಿ ರಕ್ಷಿಸುವುದಲ್ಲದೆ ಅವು ಮನುಷ್ಯನನ್ನು ಕಡಿದು ಗಾಯ ಮಾಡದಂತೆಯೂ ನೋಡಿಕೊಳ್ಳ ಬೇಕು. ಅಕಸ್ಮಾತ್ತಾಗಿ ಕಡಿದಾಗ ಆ ವ್ಯಕ್ತಿ ಒಡನೆ ಒದಗಿಸಬೇಕಾದ ರಕ್ಷಣೆ ಕ್ರಮಗಳಿವು:

1. ಪ್ರಾಣಿ ಕಡಿದ ಅಥವಾ ಪರಚಿದ ಎಡೆಗಳಲ್ಲಿರುವ ಕಲ್ಮಷಗಳನ್ನು ಚೆನ್ನಾಗಿ ತೊಳೆದು ಶುಚಿಗೊಳಿಸಬೇಕು. ತೊಳೆದ ಗಾಯದ ಸುತ್ತ ಕಾರ್ಬಾಲಿಕ್ ಆಮ್ಲ ಹಚ್ಚಿ ಅನಂತರ ಅಬ್ಸೊಲ್ಯೂಟ್ ಸ್ಪಿರಿಟ್‍ನಿಂದ ಹೆಚ್ಚಿನ ಕಾರ್ಬಾಲಿಕ್ ಆಮ್ಲವನ್ನು ಲೇಪಿಸಬೇಕು. ಈ ಆಮ್ಲದ ಬದಲಾಗಿ ಅಯೋಡಿನ್‍ನ ಉಪಯೋಗ ಹೆಚ್ಚು ಉಪಯುಕ್ತವೆನಿಸಿದೆ. ರೇಬಿಸ್‍ನ ನಿರೋಧಕ ರಕ್ತಲಸಿಕೆಯನ್ನು (ಅ್ಯಂಟಿಸೀರಮ್) ಕೊಡಬೇಕು. ಜೊತೆಗೆ ಕುದುರೆ ರಕ್ತಲಸಿಕೆಯನ್ನೂ ಕೊಡಬೇಕು. ಪ್ರಾಣಿಗಳಿಂದ ಉಂಟಾದ ಗಾಯಗಳನ್ನು ಹೊಲಿಗೆ ಹಾಕಿ ಮುಚ್ಚಬಾರದು.

2. ಕಡಿದ ನಾಯಿ, ಬೆಕ್ಕು ಮುಂತಾದ ಪ್ರಾಣಿಗಳನ್ನು ಬಂಧಿಸಿ ಪಶುವೈದ್ಯರಿಂದ ಪರೀಕ್ಷೆ ಮಾಡಿಸಬೇಕು. ಅವನ್ನು 7-10 ದಿವಸ ಕಾಲ ಚೆನ್ನಾಗಿ ಅವಲೋಕಿಸಬೇಕು. ತೋಳ, ನರಿ ಮುಂತಾದ ಕ್ರೂರ ಪ್ರಾಣಿಗಳಾಗಿದ್ದರೆ ಅವನ್ನು ಕೊಂದು ಮಿದುಳನ್ನು ರೇಬಿಸ್ ವೈರಸ್ ಪರೀಕ್ಷಣೆಗೆ ಒಳಪಡಿಸಬೇಕು. ಸಾಕು ಪ್ರಾಣಿಯಾಗಿದ್ದರೆ ಅದನ್ನು 10 ದಿವಸಕಾಲ ತಪಾಸಣೆ ಮಾಡಬೇಕು. ಅಷ್ಟರಲ್ಲಿ ಅದು ಸತ್ತರೆ ರೋಗಿ ಪೂರ್ಣಾವಧಿ ಚುಚ್ಚುಮದ್ದು ತೆಗೆದುಕೊಳ್ಳಲೇಬೇಕು.

(ಎಸ್.ಎಚ್.ಎಚ್.;ಎಸ್.ಕೆ.ಎಚ್.)