ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲೈಮ

ವಿಕಿಸೋರ್ಸ್ದಿಂದ

ಅಮೆರಿಕ ಸಂಯುಕ್ತ ಸಂಸ್ಥಾನದ ಓಹಿಯೊ ರಾಜ್ಯದ ಅಲೆನ್ ಕೌಂಟಿಯ ಆಡಳಿತ ಕೇಂದ್ರ ನಗರ. ದೊಡ್ಡ ಉದ್ಯಮ ಕೇಂದ್ರವಾಗಿ ಬೆಳೆದಿದೆ. ಒಟ್ಟಾವ ನದಿ ದಡದ ಮೇಲಿರುವ ಈ ನಗರ ತೈಲೋತ್ಪಾದ ನೆಗೆ (1890-1900) ಪ್ರಸಿದ್ಧವಾಗಿತ್ತು. ಈಗ ಇದರ ತೈಲ ಬಾವಿಗಳು ಬರಿದಾಗಿ ತೈಲ ಕೊಳವೆಗಳ ಮುಖ್ಯ ಕೇಂದ್ರವಾಗಿ, ತೈಲ ಸಂಸ್ಕರಣ ಕೇಂದ್ರವಾಗಿ ಪ್ರಸಿದ್ಧವಾಗಿದೆ. ಈ ನಗರ ಚುಟ್ಟಾ ತಯಾರಿಕೆಯಲ್ಲಿಯೂ ಮತ್ತು ವಿಮಾನದ ಹಾಗೂ ಇತರೆ ಸ್ವಯಂಚಾಲಿತ ಯಂತ್ರಗಳ ಎಂಜಿನ್ನುಗಳು, ವಿದ್ಯುತ್ ಮೋಟಾರುಗಳು, ವಿವಿಧ ಯಂತ್ರೋಪಕರಣಗಳು, ಕ್ರೇನ್‍ಗಳು, ಬಸ್ಸು ಮತ್ತು ಟ್ರಕ್ಕುಗಳ ಉಕ್ಕಿನ ಕವಚಗಳನ್ನು ತಯಾರಿಸುವುದರಲ್ಲಿಯೂ ಪ್ರಸಿದ್ಧವಾಗಿದೆ. ಹತ್ತನೆಯ ಶತಮಾನದಿಂದಲೇ ಈ ನಗರ ತೋಟಗಾರಿಕೆಯ ವಸ್ತುಗಳನ್ನು, ಬೆಳೆಗಳನ್ನು ಸಂಸ್ಕರಿಸಿ ಪೇಟೆಗೆ ಕಳುಹಿಸುವುದರಲ್ಲಿ ಹೆಸರು ಪಡೆದಿತ್ತು. 1831ರಲ್ಲಿ ಸ್ಥಾಪನೆಯಾದ ಈ ಸ್ಥಳವನ್ನು 1842ರಲ್ಲಿ ನಗರವೆಂದು ಪರಿಗಣಿಸಲಾಯಿತು. ಆಧುನಿಕ ನಗರದ ಎಲ್ಲಾ ಬಗೆಯ ಸೌಕರ್ಯಗಳನ್ನು ಇಂದು ಈ ನಗರ ಹೊಂದಿದೆ. ಓಹಿಯೊ ರಾಜ್ಯದ ವಿಶ್ವವಿದ್ಯಾಲಯದ ಶಾಖೆಯನ್ನು ಹೊಂದಿರುವ ಈ ನಗರದಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲವಿದೆ. ಈ ನಗರದ ಹೆಸರು ಪೆರು ನಗರದ ಲೀಮ ಹೆಸರಿನ ಹಾಗೆ ಇದ್ದು ಇದನ್ನು ಹ್ಯಾಟಿನಲ್ಲಿ ಹಾಕಿದ ಚೀಟಿಗಳಲ್ಲಿ ಒಂದನ್ನು ಲಾಟರಿಯಂತೆ ಎತ್ತಿ ಅದರಂತೆ ಇಡಲಾಯಿತಂತೆ.