ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲ್ಯಾಂಗ್ಟನ್, ಸ್ಟೀಫನ್

ವಿಕಿಸೋರ್ಸ್ದಿಂದ

ಮಧ್ಯಯುಗದಲ್ಲಿದ್ದ ಸುಪ್ರಸಿದ್ಧ ಚರಿತ್ರಕಾರ, ಕಾನೂನು ಪಂಡಿತ, ಕವಿ ಮತ್ತು ಧರ್ಮಬೋಧಕ. ಈತ ಇಂಗ್ಲೆಂಡ್ ದೇಶದವನಾಗಿದ್ದು, ಪ್ಯಾರಿಸ್‍ನಗರದಲ್ಲಿ ತತ್ವಶಾಸ್ತ್ರ ಪದವಿಪಡೆದು, ಆಗ ಪೋಪ್‍ರಾಗಿದ್ದ ಮೂರನೆಯ ಇನ್ನೋಸೆಂಟ್‍ನ ಸಲಹೆಯ ಮೇರೆಗೆ ರೋಮ್ ನಗರದಲ್ಲಿ ಕಾರ್ಡಿನಲ್ ಪದವಿಯನ್ನು ಪಡೆದ. ಮೊದ ಮೊದಲು ಇವನು ಫ್ರಾನ್ಸಿನ ದೊರೆಯಾಗಿದ್ದ ಫಿಲಿಪ್ ಅಗಸ್ಟಸ್ ಮತ್ತು ಇಂಗ್ಲೆಂಡಿನ ದೊರೆಯಾಗಿದ್ದ ಜಾನ್‍ನೊಡನೆ ಸ್ನೇಹದಿಂದಿದ್ದ. ಇವನ ಹಾಗೂ ಜಾನ್ ದೊರೆ ನಡುವೆ ಉಂಟಾದ ಭಿನ್ನಾಭಿಪ್ರಾಯ ದಿಂದಾಗಿ ಆರ್ಚ್ ಬಿಷಪ್ ಪದವಿಗೆ ಈತನನ್ನು ಚುನಾಯಿಸಿದಾಗ ದೊರೆ ವಿರೋಧಿಸಿದ. ಲ್ಯಾಂಗ್ಟನ್ ಧರ್ಮದ ಮೇಲೆ ಅನೇಕ ಗ್ರಂಥಗಳನ್ನು ಬರೆದಿದ್ದಾನೆ. ಮೊದಲನೆಯ ರಿಚರ್ಡ್‍ನ ಚರಿತ್ರೆ, ಕ್ಯಾಂಟರ್‍ಬರಿಯ ಅರ್ಚ್‍ಬಿಷಪ್‍ರ ಪರಿಚಯಾತ್ಮಕ ಚರಿತ್ರೆಗಳನ್ನು ಬರೆದಿದ್ದಾನೆ. ಮೇರಿಯ ಸಂಬಂಧದ ಧರ್ಮೋಪದೇಶ ಎಂಬ ಗ್ರಂಥ, ಲ್ಯಾಟಿನ್ ಮತ್ತು ಫ್ರೆಂಚ್ ಭಾಷೆಗಳೆರಡರಲ್ಲೂ ಇದೆ. ಇದು ಪದ್ಯದಲ್ಲಿದೆ. ಲಂಡನ್ನಿನ ಬ್ರಿಟಿಷ್ ವಸ್ತುಸಂಗ್ರಹಾಲಯದಲ್ಲಿ ಇದರ ಒಂದು ಪ್ರತಿಯನ್ನು ಕಾದಿರಿಸಲಾಗಿದೆ. ಈತ ಪ್ರಥಮ ಬಾರಿಗೆ ಫ್ರೆಂಚ್ ಭಾಷೆಯಲ್ಲಿ ಹಕ್ಕುಬಾಧ್ಯತೆಗಳ ಶಾಸನವನ್ನು ಬರೆದ (ಜನವರಿ 1215). 1228ರಲ್ಲಿ ನಿಧನ ಹೊಂದಿದ.

(ಎ.ಎಮ್.ಆರ್;ಎಚ್.ಆರ್.)