ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲ್ಯಾಂಗ್‍ಮ್ಯೂರ್, ಇರ್ವಿಂಗ್

ವಿಕಿಸೋರ್ಸ್ದಿಂದ

1881-1957. ಅಮೆರಿಕದ ರಸಾಯನವಿಜ್ಞಾನಿ. ಕೊಲಂಬಿಯ ವಿಶ್ವವಿದ್ಯಾಲಯದಿಂದ ಲೋಹ ಎಂಜಿನಿಯರಿಂಗ್ ಪದವಿ (1903) ಮತ್ತು ಜರ್ಮನಿಯ ಗಾಟಿಂಗೆನ್ ವಿಶ್ವವಿದ್ಯಾಲಯದಿಂದ ರಸಾಯನವಿಜ್ಞಾನದಲ್ಲಿ ಪಿ.ಎಚ್.ಡಿ. ಪದವಿ (1906) ಪಡೆದ. ಜರ್ಮನಿಯಲ್ಲಿದ್ದಾಗ ನನ್ಸ್ರ್ಟ್ (1864-1941, ನೋಡಿ) ಎಂಬ ಭೌತರಸಾಯನವಿಜ್ಞಾನಿಯ ಶಿಷ್ಯ ಹಾಗೂ ಸಂಶೋಧನ ಸಹಾಯಕನಾಗಿ ಕೆಲಸ ಮಾಡಿದ. ಸ್ವದೇಶಕ್ಕೆ ಮರಳಿದ ಬಳಿಕ ಕೆಲಕಾಲ ಸ್ಟೀವನ್ಸ್ ತಾಂತ್ರಿಕ ಸಂಸ್ಥೆಯಲ್ಲಿ ಅಧ್ಯಾಪಕನಾಗಿದ್ದು ನ್ಯೂಯಾರ್ಕ್‍ನ ಪ್ರಸಿದ್ಧ ಜನರಲ್ ಎಲೆಕ್ಟ್ರಿಕಲ್ ಕಂಪನಿಯಲ್ಲಿ (1909) ಕೆಲಸ ಹಿಡಿದ. 1950ರಲ್ಲಿ ನಿವೃತ್ತನಾಗುವ ತನಕ ಅದೇ ಕಂಪನಿಯಲ್ಲಿದ್ದು ಅದರ ಸರ್ವತೋಮುಖ ಬೆಳೆವಣಿಗೆಗೆ ಕಾರಣನಾದ. ವಿದ್ಯುತ್‍ಬಲ್ಬ್‍ನ ಆಯುಷ್ಯಾಭಿವೃದ್ಧಿಯ ಹೊಣೆಯನ್ನು ಈತನಿಗೆ ವಹಿಸಲಾಯಿತು. ಅಂದಿನ ಬಲ್ಬುಗಳಲ್ಲಿಯ ನಿರ್ವಾತದ ದೆಸೆಯಿಂದ ಟಂಗ್‍ಸ್ಟನ್ ತಂತುಗಳಲ್ಲಿದ್ದ ಪರಮಾಣುಗಳು ಬಿಳಿಗಾವಿನಲ್ಲಿ ಆವಿಯಾಗಿ ತಂತುಗಳು ತೆಳುವಾಗುತ್ತ ಹೋಗಿ ಕ್ರಮೇಣ ಪುಡಿಯಾಗಿ ಉದುರಿ ಹೋಗುತ್ತಿದ್ದುವು. ಸಂಪೂರ್ಣ ನಿರ್ವಾತ ಸ್ಥಿತಿ ಎಂಬುದು ಕಾಲ್ಪನಿಕವಷ್ಟೆ. ಬಲ್ಬ್‍ನಲ್ಲಿ ಲೇಶಾಂಶವಾಯು ಉಳಿದೇ ಇರುವುದರಿಂದ ಟಂಗ್‍ಸ್ಟನ್ ಅದರಿಂದ ಉತ್ಕರ್ಷಿತವಾಗಿ ಹೀಗಾಗುವುದೆಂದು ಕಂಡು ಕೊಂಡ. ಆದ್ದರಿಂದ ವಿದ್ಯು ತ್‍ಬಲ್ಬ್‍ನಲ್ಲಿ ಟಂಗ್ ಸ್ಟನ್ ಜೊತೆ ವರ್ತಿಸದ ನೈಟ್ರೊಜನ್ ಅಥವಾ ಆರ್ಗಾನ್‍ನಂಥ ಜಡಾನಿಲಗಳನ್ನು ತುಂಬುವ ತಂತ್ರವನ್ನು ಈತ ರೂಪಿಸಿದ. ತತ್ಫಲವಾಗಿ ಬಲ್ಬಿನ ಆಯುಷ್ಯವರ್ಧಿಸಿತು. ಇದರಿಂದ ಉತ್ತೇಜಿತನಾದ ಈತ ಕಾದ ಲೋಹದ ಮೇಲೆ ಬೇರೆ ಬೇರೆ ಅನಿಲಗಳು ಹೇಗೆ ನಿಕ್ಷೇಪಿಸುತ್ತವೆ ಎಂಬುದರ ತನಿಖೆಗೆ ತೊಡಗಿದ. ಇದಕ್ಕೂ ಕಂಪನಿಯ ವಿದ್ಯುತ್‍ಬಲ್ಬ್ ಉದ್ಯಮಕ್ಕೂ ಯಾವ ಸಂಬಂಧವೂ ಇರಲಿಲ್ಲ. ಆದರೂ ಈತನ ಶೋಧದಿಂದ ಕಂಪನಿಗಾದ ಅಪಾರ ಗಳಿಕೆಯ ದೃಷ್ಟಿಯಿಂದ ಅವನ ಮನಸ್ವೀ ಸಂಶೋಧನೆಗಳಿಗೆ ಕಂಪನಿ ಸಂಪೂರ್ಣ ಸ್ವಾತಂತ್ರ್ಯ ನೀಡಿತು. ಪರಮಾಣವಿಕ ಹೈಡ್ರೊಜನ್ನನ್ನು ಮೊದಲು ತಯಾರಿಸಿದಾತ ಇವನೇ. ಎರಡು ಟಂಗ್‍ಸ್ಟನ್ ಎಲೆಕ್ಟ್ರೋಡ್‍ಗಳ ನಡುವೆ ಪ್ರಬಲವಾದ ವಿದ್ಯುತ್ ಚಾಪವನ್ನು ಹೊರಡಿಸಿ ಅದರ ಮೂಲಕ ಸಾಮಾನ್ಯ ಒತ್ತಡದಲ್ಲಿರುವ ಹೈಡ್ರೊಜನ್ನನ್ನು ನುಗ್ಗಿಸಿದಾಗ ಚಾಪದಿಂದ ಹೊರಬಿದ್ದ ಅನಿಲದಲ್ಲಿ ಸುಮಾರು 10% ಪರಮಾಣವಿಕ ಹೈಡ್ರೊಜನ್ ಇರುವುದು ಕಂಡು ಬಂದಿತು. ಈ ಕ್ರಿಯೆಯಲ್ಲಿ ಅಪಾರ ಉಷ್ಣವ್ಯಯ ವಾಗುತ್ತದೆ. ಆದ್ದರಿಂದ ವಿದ್ಯುಚ್ಚಾಪದಿಂದ ಉಷ್ಣ ಹೀರಿಕೊಂಡು ಹೈಡ್ರೊಜನ್ ಇರುವ ಅನಿಲ ಯಾವುದಾದರೂ ಲೋಹವನ್ನು ತಾಕಿದಾಗ, ಅದರ ಮೈಮೇಲೆ ಪರಮಾಣುಗಳು ಒಂದುಗೂಡಿ ಅಣುರೂಪ ತಾಳುತ್ತವೆ. ಆಗ ಹಿಂದೆ ಹೀರಿಕೊಂಡಿದ್ದ ಉಷ್ಣವನ್ನು ಹೊರಗೆಡವುತ್ತವೆ. ಇದರಿಂದ ಲೋಹ ತತ್‍ಕ್ಷಣ ದ್ರವಿಸುವುದು. ಪ್ಲಾಟಿನಮ್, ಟಂಗ್‍ಸ್ಟನ್, ಟ್ಯಾಂಟಲಮ್ ಮೊದಲಾದ ಲೋಹಗಳನ್ನು ಹೀಗೆ ದ್ರವೀಕರಿಸಿ ಬೆಸೆಯಬಹುದು. ಪರಮಾಣವಿಕ ಹೈಡ್ರೊಜನ್ ಜ್ವಾಲೆಯ ತಾಪ ಸು. 600° ಸೆ ಇದ್ದು ಸೂರ್ಯನ ಮೇಲ್ಮೈತಾಪ ಸೃಷ್ಟಿಯಾದಂತಾಯಿತು. ಕಾಸಿದಾಗ ಲೋಹದ ಸುತ್ತ ಅಪಕರ್ಷಕ ವಾತಾವರಣವಿರುವುದರಿಂದ ಅದು ಉತ್ಕರ್ಷಿತ ವಾಗುವುದಿಲ್ಲ. ಇದು ಒಂದು ವಿಶಿಷ್ಟ ಅನುಕೂಲ. ಈ ಸಂಶೋಧನೆ ಯಿಂದ ಕಂಪನಿಗೂ ಲಾಭವಾಯಿತು. ಉಚ್ಚನಿರ್ವಾತ ಪಾದರಸದ ಪಂಪ್ ಮತ್ತು ನಿರ್ವಾತ ನಳಿಗೆಗಳ ನಿರ್ಮಾಪಕನೂ ಈತನೇ. ಮುಂದೆ ಈ ಉಪಜ್ಞೆ (ಇನ್‍ವೆನ್ಶನ್) ಬಾನುಲಿ ಪ್ರಸಾರಕ್ಕೆ ನೆರವಾಯಿತು. ಘನಪದಾರ್ಥದ ಮೇಲ್ಮೈಯಲ್ಲಿ ಅಧಿಶೋಷಿತ ವಾಗುವ ಅನಿಲದ ಪದರ ಅಣುಗಾತ್ರಕ್ಕಿಂತ ದಪ್ಪವಲ್ಲ. ನೀರಿಗೆ ಸ್ವಲ್ಪ ಎಣ್ಣೆ ಹಾಕಿದರೆ ಆ ಎಣ್ಣೆ ನೀರಿನ ಮೇಲೆ ಹರಡುತ್ತದೆ. ಇದು ಕೂಡ ಏಕಾಣವಿಕ ಪದರ. ಎಣ್ಣೆಗಳೆಲ್ಲವೂ ಮೇದಾಮ್ಲಗಳ ಎಸ್ಟರುಗಳು, ಸರಪಣಿ ರಚನೆಯುಳ್ಳವು. -COOR ಪುಂಜ ಒಂದು ಕೊನೆಯಲ್ಲಿದೆ. ಇದು ನೀರಿನಿಂದ ಆಕರ್ಷಿಸಲ್ಪ ಡುವುದು. ಹೈಡ್ರೊಕಾರ್ಬನ್ ಸರಣಿ ನೀರಿನ ಮೇಲೆ ನಿಂತು ಹರಡಿಕೊಳ್ಳುವುದೇ ಏಕಾಣವಿಕ ಪದರಕ್ಕೆ ಕಾರಣ. ಲೋಹದ ಮೈಮೆಲೆ ಅಪರ್ಯಾಪ್ತ ಪರಮಾಣುಗಳು ಅಲ್ಲಲ್ಲಿ ಉಪಸ್ಥಿತವಾಗಿರುತ್ತವೆ. ಹತ್ತಿರ ಬಂದ ಅನಿಲಾಣುಗಳನ್ನು ಸೆರೆಹಿಡಿದು ತಮ್ಮ ವೇಲೆನ್ಸಿಯನ್ನು ತೃಪ್ತಿಪಡಿಸಿಕೊಳುತ್ತವೆ. ಇವುಗಳಿಗೆ ಕ್ರಿಯಾಕೇಂದ್ರ ಗಳು ಎಂದು ಹೆಸರು. ಇಂಥ ಅಧಿಶೋಷಣೆಗೆ ರಾಸಾಯನಿಕ ಬಂಧ ಏರ್ಪಡುವುದು ಕಾರಣ. ಪ್ಲಾಟಿನಮ್‍ನಂಥ ಕ್ರಿಯಾವರ್ಧಕಗಳ ಕಾರ್ಯಾಚರಣೆ ಸಹ ಇದೇ ರೀತಿಯದು. ಈ ಪ್ರ್ರಾಥಮಿಕ ಪದರಗಳ ಮೇಲೆ ಹಲವಾರು ಪದರಗಳು ವ್ಯಾಂಡೆರ್‍ವಾಲ್ಸ್ ಬಲಗಳ ನೆರವಿನಿಂದ ಪೇರಿಕೊಳ್ಳುತ್ತ ಹೋಗುವುವು. ಸ್ಥಿರ ತಾಪದಲ್ಲಿ ಒತ್ತಡ ಹೆಚ್ಚಿದಂತೆಲ್ಲ ಅಧಿಶೋಷಿತ ಅನಿಲದ ಪರಿಮಾಣ ಹೆಚ್ಚುವುದೆಂದು ಈತ ಗಣಿತ ರೀತ್ಯ ತೋರಿಸಿದ. ಈ ಗಣಿತ ವ್ಯಾಖ್ಯೆ ಲ್ಯಾಂಗ್‍ಮ್ಯೂರ್‍ನ ಅಧಿಶೋಷಣ ಸಮತಾಪಿ ಎಂದು ಪ್ರಸಿದ್ಧ. ಪದಾರ್ಥಗಳ ಮೇಲ್ಮೈಯಲ್ಲಿ ನಡೆಯುವ ಈ ವಿದ್ಯಮಾನಗಳ ಅಧ್ಯಯನಕ್ಕಾಗಿ ಇವನಿಗೆ 1932ನೆಯ ಸಾಲಿನ ರಸಾಯನವಿಜ್ಞಾನದ ನೊಬೆಲ್ ಪಾರಿತೋಷಿಕ ನೀಡಲಾಯಿತು. ಕೃತಕ ಮಳೆ ತರಿಸುವ ತಂತ್ರದ ಪ್ರವರ್ತಕನೂ ಇವನೇ. ಆಗ ಈ ಪ್ರಯೋಗ ಅಷ್ಟು ಯಶಸ್ವಿಯಾಗಲಿಲ್ಲ. ಈಗ ಅದು ಸುಧಾರಿಸಿದೆ.

(ಎಚ್.ಜಿ.ಎಸ್.)