ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲ್ಯಾಂಡೊ, ಲೆವ್ ಡಾವಿಡೊವಿಚ್

ವಿಕಿಸೋರ್ಸ್ದಿಂದ

1908-68. ಸೋವಿಯತ್ ಭೌತವಿಜ್ಞಾನಿ. ತಂದೆ ಎಂಜಿನಿಯರ್, ತಾಯಿ ವೈದ್ಯೆ. ಬಾಕು ವಿಶ್ವವಿದ್ಯಾಲಯದಲ್ಲಿ ಓದಿ ಲೆನಿನ್‍ಗ್ರಾಡ್ ವಿಶ್ವವಿದ್ಯಾಲಯಕ್ಕೆ ದಾಖಲಾಗಿ ಪಿಎಚ್.ಡಿ. ಪದವಿಗಳಿಸಿದ (1927). ಖಾರ್ಕೊವ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡ. ವಿದೇಶಗಳಿಗೆ ಪಯಣಿಸಿ ಅಂದಿನ ಘಟಾನುಘಟಿ ಭೌತವಿಜ್ಞಾನಿ ಮ್ಯಾಕ್ಸ್ ಬಾರ್ನ್ (1901-76) ಅವರ ಉಪನ್ಯಾಸಗಳಿಗೆ ಹಾಜರಾದ. ತರುವಾಯ ಕೆಲವು ವರ್ಷ ಕೂಪನ್ ಹೇಗನ್ನಿನ್ನಲ್ಲಿ ನೀಲ್ಸ್ ಬೋರ್ (1885-1962) ಜೊತೆ ಸಂಶೋಧನೆಗೈದರು. ಅಂದು ಕೂಪನ್‍ಹೇಗನ್ ಸೈದ್ಧಾಂತಿಕ ಭೌತವಿಜ್ಞಾನದ ಕಾಶಿ ಎನಿಸಿಕೊಂಡಿತ್ತು. ಮುಂದಕ್ಕೆ ಕೆಲಕಾಲ ಕೇಂಬ್ರಿಜ್ಜಿನಲ್ಲಿ ಅರ್ನೆಸ್ಟ್ ರುದರ್ಫರ್ಡ್ (1871-1937)ನ ಶಿಷ್ಯನೂ ಆಗಿದ್ದ.

ಕಬ್ಬಿಣದಂಥ ವಿಶಿಷ್ಟ ಪದಾರ್ಥಗಳ ಕೆಲವೇ ಪುಟ್ಟ ವಲಯಗಳಲ್ಲಿ ಎಲ್ಲ ಪರಮಾಣವಿಕ ಕಾಂತಗಳೂ ನಿರ್ದಿಷ್ಟ ದಿಶೆಯತ್ತ ವಿನ್ಯಾಸಗೊಂಡಿರುವುದುಂಟು. ಇವೇ ಪ್ರಬಲತಮ ಕಾಂತತ್ವದ ಒಂದು ಬಗೆ ಎನ್ನಿಸಿರುವ ಫೆರೊಕಾಂತತ್ವದ ಮೂಲಗಳು. ಈತ ಇವುಗಳ ಗಣಿತೀಯ ಅಧ್ಯಯನವನ್ನು 1935ರಲ್ಲಿ ಆರಂಭಿಸಿದ. ಮುಂದೆ 1937ರಲ್ಲಿ ಇವನನ್ನು ಮಾಸ್ಕೊದಲ್ಲಿಯ ಇನ್‍ಸ್ಟಿಟ್ಯೂಟ್ ಫಾರ್ ಫಿಸಿಕಲ್ ಪ್ರಾಬ್ಲೆಮ್ಸ್ ಎಂಬ ಸಂಸ್ಥೆ ತನ್ನ ಒಂದು ವಿಭಾಗದ ಮುಖ್ಯಸ್ಥನಾಗಿ ನೇಮಿಸಿತು. ಈ ಸಂಸ್ಥೆಯಲ್ಲಿ ಹಿರಿಯ ಭೌತವಿಜ್ಞಾನಿ ಪೀಟರ್ ಕಪಿತ್ಸಾ (1894-1984) ಎಂಬವ ನಿಮ್ನತಾಪ ವಿದ್ಯಮಾನಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದ (ನೋಡಿ-ಅತಿಶೀತಶಾಸ್ತ್ರ). ಸಹಜವಾಗಿ ಈತನ ಆಸಕ್ತಿ ಈ ಕ್ಷೇತ್ರದತ್ತವೂ ಹೊರಳಿತು. ರಷ್ಯ ದೇಶದ ಸರ್ವಾಧಿಕಾರಿ ಜೊಸೆಫ್ ಸ್ಟಾಲಿನ್ (1879-1953) ಎಂಬಾತನ ಆಳ್ವಿಕೆಯಲ್ಲಿ ಇವನ ಮೇಲೆ ಜರ್ಮನಿಯ ಬೇಹುಗಾರ ಎಂಬ ಮಿಥ್ಯಾರೋಪ ಹೊರಿಸಿ ಇವನನ್ನು ದಸ್ತಗಿರಿ ಮಾಡಲಾಯಿತು. ಕಪಿತ್ಸಾ ವೈಯಕ್ತಿಕವಾಗಿ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಇವನನ್ನು ಬಂಧಮುಕ್ತಗೊಳಿಸಿದರು.

ಹೀಲಿಯಮ್ IIರ ಗುಣಗಳನ್ನು ಈತ ಕ್ವಾಂಟಮ್ ಬಲವಿಜ್ಞಾನ ಮಾರ್ಗದಲ್ಲಿ ಸೈದ್ಧಾಂತಿಕವಾಗಿ ಅಭ್ಯಸಿಸಿದ (1941). ಮುಂದೆ 1947ರಲ್ಲಿ ಇದನ್ನು ತುಸು ಮಾರ್ಪಡಿಸಿದ. 1950ರ ದಶಕದಲ್ಲಿ ಇವನು ಹೀಲಿಯಮ್-3ರ (ಹೀಲಿಯಮ್‍ನ ವಿರಳ ಸಮಸ್ಥಾನಿ) ಸೈದ್ಧಾಂತಿಕ ಅಧ್ಯಯನ ಕೈಗೊಂಡು ಅತಿ ನಿಮ್ನತಾಪಗಳಲ್ಲಿ ಇದು ಪ್ರದರ್ಶಿಸುವ ತೀರ ವಿಚಿತ್ರ ಗುಣಗಳನ್ನು ಮುನ್ನುಡಿದ. ಇವೆಲ್ಲ ಸಾಧನೆಗಳನ್ನೂ ಗಮನಿಸಿ ಇವನಿಗೆ 1962ರ ಭೌತವಿಜ್ಞಾನದ ನೊಬೆಲ್ ಪಾರಿತೋಷಿಕ ಪ್ರದಾನಿಸಲಾಯಿತು.

1962 ಜನವರಿ 1ರಂದು ಇವನ ಜೀವನದಲ್ಲೊಂದು ಘೋರ ದುರ್ದಿನ. ಮಾಸ್ಕೊ ಸಮೀಪ ಅಂದು ಸಂಭವಿಸಿದ ವಾಹನಾಪಘಾತದಲ್ಲಿ ಇವನು ಮೃತರಾಗದೇ ಉಳಿದದ್ದು ಆಶ್ಚರ್ಯ: ಹನ್ನೊಂದು ಮೂಳೆಗಳು ಮುರಿದಿದ್ದುವು, ತಲೆಬುರುಡೆ ಬಿರುಕುಬಿಟ್ಟಿತ್ತು. ಮುಂದಿನ ಎರಡು ವರ್ಷ ಸಾವು-ಬದುಕು ನಡುವಿನ ಬಿರುಸು ಹೋರಾಟ. ಅಕ್ಟೋಬರ್ 1964ರಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಂಡ. ಹಿಂದೆ ಬಿಟ್ಟಿದ್ದ ಸಂಶೋಧನೆಯನ್ನು ಮತ್ತೆ ಕೈಗೊಂಡ. ಆದರೆ ಮೊದಲಿನ ಹುರುಪು ಮತ್ತು ಚಿಂತನಪ್ರಭೆ ಮರಳಲಿಲ್ಲ. 1968 ಎಪ್ರಿಲ್ 1ರಂದು ನಿಧನನಾದ.

(ಎಸ್‍ಎ.ಎಚ್.)