ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲ್ಯಾಂಬ್, ಚಾರ್ಲ್ಸ್

ವಿಕಿಸೋರ್ಸ್ದಿಂದ

1775-1834. ಇಂಗ್ಲಿಷ್ ಪ್ರಬಂಧಕಾರ ಹಾಗೂ ವಿಮರ್ಶಕ. ಬಡಕುಟುಂಬದ ಮೂವರು ಮಕ್ಕಳಲ್ಲಿ ಕೊನೆಯವನಾಗಿ ಲಂಡನ್ನಿನಲ್ಲಿ ಜನಿಸಿದ. ಕ್ರೈಸ್ಟ್‍ಸ್ ಆಸ್ಪತ್ರೆಯಲ್ಲಿ ಕೆಲಕಾಲ ವಿದ್ಯಾಭ್ಯಾಸ ಮಾಡಿದ ಈತ ಅಲ್ಲಿ ಕವಿ ಸ್ಯಾಮ್ಯುಯಲ್ ಟೇಲರ್ ಕೋಲ್‍ರಿಡ್ಜನ ಸಹಪಾಠಿ ಹಾಗೂ ಸ್ನೇಹಿತನಾಗಿದ್ದ. ಈತನ ಅಕ್ಕ ಮೇರಿಲ್ಯಾಂಬ್ (1768-1847) ಇವನಿಗಿಂತ ಹನ್ನೊಂದು ವರ್ಷ ದೊಡ್ಡವಳು. ಆಗಾಗ ಮನೋವಿಕಲತೆಗೆ ಗುರಿಯಾಗುತ್ತಿದ್ದ ಈಕೆ ತನ್ನ ತಾಯಿಯನ್ನೇ ಕೊಂದ ದುರಂತ ಪ್ರಕರಣದಿಂದ ಈತ ಅವಿವಾಹಿತನಾಗಿ ಉಳಿದು ಅಕ್ಕನ ಆರೈಕೆಗೆ ಜೀವನವನ್ನು ಮುಡಿಪಾಗಿಡಲು ತೀರ್ಮಾನಿಸಿದ. ಮೇರಿಯಲ್ಲದೆ ವೃದ್ಧ ತಂದೆ ಮತ್ತು ಹಾಸಿಗೆ ಹಿಡಿದ ಚಿಕ್ಕಮ್ಮ ಇವರ ಪೋಷಣೆ ಕೂಡ ಈತನನ ಮೇಲೆ ಬಿತ್ತು. ಈತ 1792ರಲ್ಲಿ ಈಸ್ಟ್ ಇಂಡಿಯ ಕಂಪನಿಯ ಗುಮಾಸ್ತನಾಗಿ ಸೇರಿ ಮೂವತ್ತ ಮೂರು ವರ್ಷಗಳ ಕಾಲ ದುಡಿದು ತನ್ನ 50ನೆಯ ವಯಸ್ಸಿನಲ್ಲಿ ನಿವೃತ್ತನಾದ. ಇವನೂ ಮೇರಿಯೂ ಜೊತೆಯಾಗಿ ಕೆಲಸಮಾಡಿ ಮಕ್ಕಳಿಗಾಗಿ ಮೂರು ಪುಸ್ತಕಗಳನ್ನು ಬರೆದಿದ್ದಾರೆ-ಟೇಲ್ಸ್ ಫ್ರಮ್ ಷೇಕ್ಸ್‍ಪಿಯರ್ (1807), ಮಿಸ್ ಲೀಸೆಸ್ಟರ್ಸ್ ಸ್ಕೂಲ್ (1807), ಪೊಯಿಟ್ರಿ ಫಾರ್ ಚಿಲ್ಡ್ರನ್ (1809). ಇವುಗಳಲ್ಲಿ ಮೊದಲನೆಯ ಕೃತಿ ಷೇಕ್ಸ್‍ಪಿಯರ್ ನಾಟಕಗಳ ಕಥೆಗಳನ್ನು ಗದ್ಯದಲ್ಲಿ ಪುನರ್ ನಿರೂಪಿಸಿರುವುದಾಗಿದೆ.

ಈತ ಕೆಲವು ಪದ್ಯಗಳನ್ನೂ ನಾಟಕಗಳನ್ನೂ ಬರೆದಿರುವನಾದರೂ ಮುಖ್ಯವಾಗಿ ಪ್ರಬಂಧ ಕಾರನಾಗಿ ಮತ್ತು ವಿಮರ್ಶಕನಾಗಿ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ಧನಾಗಿದ್ದಾನೆ. ಎಸ್ಸೇಸ್ ಆಫ್ ಈಲ್ಯ ಎಂಬ ಪ್ರಬಂಧ ಸಂಕಲನ ಈತನ ಸುಪ್ರಸಿದ್ಧ ಕೃತಿ. ಈತ 1820-25ರ ತನಕ ದಿ ಲಂಡನ್ ಮ್ಯಾಗ್‍ಜೈನ್ ಪತ್ರಿಕೆಗೆ ಬರೆದ ಪ್ರಬಂಧಗಳು ಅನಂತರ ಪುಸ್ತಕ ರೂಪದಲ್ಲಿ ಪ್ರಕಟಗೊಂಡವು. ಮೊದಲಿಗೆ ಈತ ತನಗೆ ಪರಿಚಿತನಾಗಿದ್ದ ಇಟಾಲಿಯನ್ ಗುಮಾಸ್ತೆಯೊಬ್ಬನ ಹೆಸರನ್ನು ಬಳಸಿಕೊಂಡು ಪ್ರಬಂಧಗಳನ್ನು ರಚಿಸತೊಡಗಿದ. 1820ರ ಆಗಸ್ಟ್‍ನಲ್ಲಿ ಸೌತ್‍ಸಿ ಹೌಸ್‍ನ ನೆನಪುಗಳು ಎಂಬ ಹೆಸರಿನ ಪ್ರಬಂಧ ಮೊದಲು ಈಲ್ಯನ ಹೆಸರಿನಲ್ಲಿ ಪ್ರಕಟ ವಾಯಿತು. ಇದರ ಜನಪ್ರಿಯತೆಯಿಂದಾಗಿ ಈತ ಇದೇ ಹೆಸರನ್ನು ಮುಂದೆ ಉಳಿಸಿ ಕೊಂಡ. ಇವನ ಪ್ರಬಂಧಗಳ ಮೊದಲನೆಯ ಸಂಪುಟ 1823ರಲ್ಲೂ ಎರಡನೆಯದು 1833ರಲ್ಲೂ ಪ್ರಕಟವಾದುವು. ಈತನ ವ್ಯಕ್ತಿತ್ವದಲ್ಲಿ ಹಾದು ಜೀವನ ಪ್ರದರ್ಶಿಸುವ ಸಪ್ತವರ್ಣ ರೇಖೆ ಈ ಸಂಕಲನಗಳು. ಈತ ಇಲ್ಲಿ ತನ್ನ ವ್ಯಕ್ತಿತ್ವವನ್ನೇ ನಿಸ್ಸಂಕೋಚವಾಗಿ ಪ್ರದರ್ಶಿಸಿದ್ದಾನೆ. ಆದರೆ ಸ್ವಲ್ಪವೂ ಆಡಂಬರ ಆಷಾಢಭೂತಿತ್ವ, ಮೆಚ್ಚಿಕೆಯ ಬಯಕೆಗಳಿಲ್ಲದ ಈ ಪ್ರದರ್ಶನ ಗೆಳೆಯನ ನಿಸ್ಸಂಕೋಚ ಸಂಭಾಷಣೆಯಂತೆ ಹೃದಯವನ್ನು ತುಂಬುತ್ತದೆ. ಜೀವನದಲ್ಲಿ ಅನೇಕ ವಿಧದಲ್ಲಿ ಕಹಿಯನ್ನುಂಡ ಈತನ ಪ್ರಬಂಧಗಳಲ್ಲಿ ರೋಷ ಕಹಿಗಳ ಸೂಚನೆಯೇ ಇಲ್ಲದಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಇವನ ಪ್ರಬಂಧಗಳಲ್ಲಿ ನಾವು ಕಾಣುವ ಬ್ರಜಿಟ್ ಇವನ ಪ್ರೀತಿಯ ಅಕ್ಕ ಮೇರಿ. ಕ್ರೈಸ್ಟ್‍ಸ್ ಚರ್ಚ್, ಓಲ್ಡ್‍ಚೈನ್ ಮುಂತಾದ ಪ್ರಬಂಧಗಳಲ್ಲಿ ಈತ ತನ್ನ ಜೀವನಸ್ಮೃತಿಗಳನ್ನು ನೀಡುತ್ತಾನೆ. ಹಳೆಯ ಮತ್ತು ಹೊಸ ಶಾಲಾ ಉಪಾಧ್ಯಾಯ, ಆಧುನಿಕ ನಯವಿನಯ ಮುಂತಾದ ಕೃತಿಗಳಲ್ಲಿಯ ಪರಿಜ್ಞಾನ, ಕಿವಿಗಳು, ಸುಟ್ಟ ಹಂದಿಯನ್ನು ಕುರಿತ ವಿದ್ವತ್ಪೂರ್ಣ ಪ್ರಬಂಧ-ಇಂಥ ಕೃತಿಗಳಲ್ಲಿಯ ಕಲ್ಪನಾಲಹರಿ, ಕನಸಿನ ಮಕ್ಕಳು-ಈ ಬಗೆಯ ಕೃತಿಗಳ ಸೂಕ್ಷ್ಮ ವಿಷಾದ-ಇವೆಲ್ಲದರ ಹಿಂದಿರುವುದು ಇವನ ಶ್ರೀಮಂತ ವ್ಯಕ್ತಿತ್ವ. ಇವನ ಹಾಸ್ಯ ಗಂಭೀರವಾದ ಆಲೋಚನೆಯ ಉಡುಪಾಗುವುದುಂಟು. ಈತ ತನ್ನನ್ನೇ ತಾನು ಹಾಸ್ಯ ಮಾಡಿಕೊಳ್ಳಬಲ್ಲ; ತನ್ನ ಪ್ರಬಂಧಗಳಲ್ಲಿ ಸತ್ಯವಾದ ವಿಷಯಗಳನ್ನೂ ಕಲ್ಪಿಸಿಕೊಂಡ ಅಂಶಗಳನ್ನೂ ಧಾರಾಳವಾಗಿ ಬೆರೆಸುತ್ತಾನೆ. ಇವನ ಪ್ರಬಂಧಗಳು ಭಾವಗೀತೆಗಳಂತೆ ನಮ್ಮನ್ನು ಬೇರೊಂದು ಪ್ರಪಂಚಕ್ಕೆ ಒಯ್ಯುತ್ತವೆ. ಇವನ ಗದ್ಯಕ್ಕೆ ವೈಭವ ವಾಗ್ಮಿತೆಗಳಿಲ್ಲ. ಪದಗಳ ಆಯ್ಕೆ, ಇತರರಿಂದ ಉದ್ಧರಿಸಿದ ಭಾಗಗಳ ಬಳಕೆ, ವಾಕ್ಯ ರಚನೆಗಳು ಕೆಲವೊಮ್ಮೆ ವಿಚಿತ್ರವಾಗಿ ಕಾಣಬಹುದು; ಆದರೆ ಹಾಸ್ಯ- ವಿವೇಕ ಅನುಕಂಪಗಳು ಬೆರೆತ ವ್ಯಕ್ತಿತ್ವಕ್ಕೆ ಸಹಜವಾದ ಶೈಲಿ ಇದು. ಹದಿನೇಳನೆಯ ಶತಮಾನದ ಲೇಖಕರ, ಮುಖ್ಯವಾಗಿ ಥಾಮಸ್ ಬ್ರೌನ್‍ನ ಪ್ರಭಾವ ಇವನ ಶೈಲಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಭಾವಗೀತೆ ಗಳಿಗೆ ಬಲು ಹತ್ತಿರವಾದ ಈ ಪ್ರಬಂಧಗಳಿಂದಾಗಿ ಈತ ಲಘು ಪ್ರಬಂಧಕಾರರ ಅರಸನೆಂಬ ಖ್ಯಾತಿಗೆ ಪಾತ್ರನಾಗಿದ್ದಾನೆ.

ಈತನ ವಿಮರ್ಶಾe್ಞÁನ ವಿಶಾಲವಾದುದೇನೂ ಅಲ್ಲ. ಇತರ ಭಾಷಾ ಸಾಹಿತ್ಯದ ಪರಿಚಯವೂ ಈತನಿಗೆ ಅಷ್ಟಾಗಿರಲಿಲ್ಲ. ಈತನ ಮನಸ್ಸು ಚಂಚಲ; ಯಾವ ಸಿದ್ಧಾಂತಕ್ಕೂ ಸಿಗದು. ಈತನ ಅಭಿಪ್ರಾಯಗಳು ಅಸ್ಪಷ್ಟ-ಅವನ್ನು ವ್ಯಕ್ತಪಡಿಸುವ ರೀತಿಯೂ ಅಷ್ಟೇ. ಕಾವ್ಯದಲ್ಲಿ ಅಲ್ಲಲ್ಲಿ ಚದುರಿರುವ ಸತ್ಯದ ತುಣುಕುಗಳನ್ನು ಆಯುವುದರಲ್ಲೇ ಇವನಿಗೆ ತೃಪ್ತಿ. ಈತನಿಗೆ ಲೇಖನದ ವಸ್ತುವಿಗಿಂತ ಶೈಲಿಯಲ್ಲಿ ಹೆಚ್ಚು ಆಸಕ್ತಿ; ಪೂರ್ಣನೋಟಕ್ಕಿಂತ ಇಣುಕು ನೋಟವೇ ಪ್ರಿಯ. ಈತ ಯಾವಾಗಲೂ ಯಾವಕೃತಿಯ ವಸ್ತುವನ್ನಾಗಲೀ, ವಿನ್ಯಾಸವನ್ನಾಗಲೀ ಚರ್ಚಿಸುವುದಿಲ್ಲ ಎಂಬ ಟೀಕೆಗಳಿಗೊಳಗಾಗಿದ್ದ. ಷೇಕ್ಸ್‍ಪಿಯರ್ ಕಾಲದ ಇಂಗ್ಲಿಷ್ ನಾಟಕಕಾರರ ಕೃತಿಗಳಿಂದ ಆಯ್ದ ಭಾಗಗಳು (ಸ್ಪೆಸಿಮನ್ಸ್ ಆಫ್ ಇಂಗ್ಲಿಷ್ ಡ್ರಮ್ಯಾಟಿಕ್ ಪೊಯೆಟ್ಸ್, ಹು ಲಿವ್ಡ್ ಎಬೌಟ್ ದಿ ಟೈಮ್ ಆಫ್ ಷೇಕ್ಸ್‍ಪಿಯರ್, 1808) ಎಂಬ ಸಂಕಲನದಲ್ಲಿ ಕೃತಿಗಳನ್ನು ವಿರ್ಮಶಿಸುವಾಗ ಓದುಗರ ಮನೋಭಾವಕ್ಕೆ ತಕ್ಕಂತೆ ಅಲ್ಲಲ್ಲಿ ಕವಿಯ ವಿಷಯದಲ್ಲಿ ಆಸಕ್ತಿ ಕೆರಳಿಸುವಂಥ ನಾಟಕಗಳ ಒಂದೊಂದು ತುಣುಕನ್ನು ಸದಭಿರುಚಿಯಿಂದ ಆರಿಸಿ, ಅವುಗಳ ಸೌಂದರ್ಯವನ್ನು ಎತ್ತಿ ತೋರಿಸು ವಂಥ ಸ್ವಾರಸ್ಯಕರ ಟಿಪ್ಪಣಿಯನ್ನು ಎರಡೇ ಮಾತಿನಲ್ಲಿ ಹೇಳಿದ್ದಾನೆ. ಈ ಟಿಪ್ಪಣಿಗಳು ಉತ್ಸಾಹದ ಪ್ರತೀಕಗಳು, ಆಶ್ಚರ್ಯಸೂಚಕ ಚಿಹ್ನೆಗಳು ಮಾತ್ರ. ಷೇಕ್ಸ್‍ಪಿಯರ್‍ನ ದುರಂತ ನಾಟಕಗಳು (ಆನ್ ದಿ ಟ್ರ್ಯಾಜಿಡೀಸ್ ಆಫ್ ಷೇಕ್ಸ್‍ಪಿಯರ್) ಎಂಬ ಪ್ರಬಂಧದಲ್ಲಿ ಈತ ನಾಟಕದ ಪಾತ್ರಗಳಲ್ಲಿ ಹೆಚ್ಚು ಆಸಕ್ತಿಯನ್ನು ವ್ಯಕ್ತಪಡಿಸುತ್ತಾನೆ. ನಾಟಕಗಳನ್ನು ನೋಡುವುದಕ್ಕಿಂತ ಓದುವುದೇ ಹಿತವಾಗಿರುತ್ತದೆ ಎಂಬುದು ಈತನ ಅಭಿಮತ. ಇವನಿಗೆ 17ನೆಯ ಶತಮಾನದ ಲೇಖಕರಾದ ಫುಲ್ಲರ್, ಬರ್ಟನ್, ಬ್ರೌನ್‍ರ ಬಗ್ಗೆ ವಿಶೇಷ ಆಸಕ್ತಿ. ಮೊಗವಾಡ ಧರಿಸಿದ ನಾಟಕಗಳು, ಆದರ್ಶ ಗ್ರಾಮಜೀವನದ ಚಿತ್ರಣವನ್ನು ಒಲ್ಲದೆ ನಿಜಜೀವನವನ್ನು ಚಿತ್ರಿಸುವ ಲೇಖಕರನ್ನು ಇವನು ಮೆಚ್ಚಿದ. ರೆಸ್ಟೊರೇಷನ್ ಕಾಲದ ಸುಖಾಂತ ನಾಟಕಗಳನ್ನು ಕುರಿತ ಪ್ರಬಂಧ ವಿವಾದಾಸ್ಪದವಾದರೂ ಅಲ್ಲಿ ಸ್ಪಷ್ಟವಾದ ವೈಚಾರಿಕತೆ ಇದೆ. ಆ ನಾಟಕಗಳನ್ನು ಅನೀತಿಯುತ ವೆಂದು ತೆಗಳುವವರು, ಕೃತಕ ಪರಿಸರವನ್ನು ಚಿತ್ರಿಸುವ ಆ ತೆರನಾದ ನಾಟಕಗಳನ್ನು ನೀತಿಯ ಚರ್ಚೆಗೆ ಒಳಪಡಿಸದೆ ಕೇವಲ, ಎಂದೋ ಅಳಿದುಹೋದ ಸಮಾಜದ ಕಲಾತ್ಮಕ ಚಿತ್ರಣವೆಂದಷ್ಟೇ ಪರಿಗಣಿಸ ಬೇಕೆನ್ನುವುದು ಇವನ ಅಭಿಮತ. ಸಂಪೂರ್ಣವಾಗಿ ಇವನ ಅಭಿಪ್ರಾಯವನ್ನು ಒಪ್ಪದವರೂ ಮೆಚ್ಚಿಕೊಳ್ಳುವ ಹಲವಾರು ಹೇಳಿಕೆ ಈ ಪ್ರಬಂಧದಲ್ಲಿದೆ.

ಸಂಕುಚಿತವಾದ ವಿಚಾರಪರಿಮಿತಿ ಪಡೆದಿದ್ದ ಈತ ಹಲವು ವೇಳೆ ವಿಮರ್ಶೆಯಲ್ಲಿ ತಪ್ಪು ಮಾಡುತ್ತಿದ್ದ. ರಾಬರ್ಟ್‍ಸದೆಯ ಬಗ್ಗೆ ಅನುಚಿತ ಅಭಿಮಾನ, ಗಯಟೆಕವಿಯ ಫೌಸ್ಟ್ ನಾಟಕದ ಬಗ್ಗೆ ತಿರಸ್ಕಾರ, ಷೆಲ್ಲಿಯ ಬಗ್ಗೆ ಹೀನಾಯ, ವರ್ಡ್ಸ್ ವರ್ತ್ ನ ಕಥಾನಕ ಭಾವಗೀತೆಗಳ ಬಗ್ಗೆ ಅನುಚಿತ ಟೀಕೆ ಮಾಡಿ ವರ್ಡ್ಸ್ ವರ್ತ್ ಹಾಗೂ ಕೋಲ್‍ರಿಜ್ ಕವಿಗಳ ಕೋಪಕ್ಕೆ ಪಾತ್ರನಾಗಿದ್ದ. ಕಾವ್ಯದ ರಸಭರಿತ ಭಾಗಗಳನ್ನು ಆಸ್ವಾದಿಸಿ, ತನ್ನ ಉತ್ಸಾಹವನ್ನು ಓದುಗರಿಗೆ ತಿಳಿಸುವುದೇ ಈತನ ವಿಮರ್ಶೆಯ ಮೂಲೋದ್ದೇಶವಾಗಿತ್ತು. ಈತ ವಿಮರ್ಶಾ ತತ್ತ್ವಗಳ ಪ್ರತಿಪಾದಕನಲ್ಲ. ತನಗೆ ಇಷ್ಟವಾದುದನ್ನು ಅರಸುವಾಗ ಅದು ಜನರು ಮರೆತ ಅಪೂರ್ವ ಕೃತಿಯಾಗಿದ್ದರೆ, ಅದರ ದೂಳನ್ನು ಕೊಡವಿ ಅದರ ಬಗ್ಗೆ ಆಸ್ಥೆಯಿಂದ ಮಾತನಾಡಿ, ಇತರರಲ್ಲೂ ಆ ಆಸ್ಥೆಯನ್ನು ಮೂಡಿಸುತ್ತಿದ್ದ.

(ಎಲ್.ಎಸ್.ಎಸ್.)