ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲ್ಯಾಕ್ಟಿಕ್ ಆಮ್ಲ

ವಿಕಿಸೋರ್ಸ್ದಿಂದ

ಆದ್ರ್ರತಾಸೂಕ್ಷ್ಮತೆಯುಳ್ಳ ಹೈಡ್ರಾಕ್ಸಿ ಆಮ್ಲ (2-ಹೈಡ್ರಾಕ್ಸಿ ಪ್ರೋಪಿಯಾನಿಕ್ ಅ್ಯಸಿಡ್). ರಾಸಾಯನಿಕ ಸೂತ್ರ CH3, CHOH, COOH. ಇದು ಪ್ರಕಾಶೀಯವಾಗಿ ಸಮಾಂಗತೆಯಿಂದಿರುವ (ಆಪ್ಟಿಕಲಿ ಐಸೊಮೆರಿಕ್) ಮೂರು ರೂಪಗಳಲ್ಲಿ ದೊರೆಯುತ್ತದೆ : L ರೂಪ (ರಕ್ತ ಮತ್ತು ಸ್ನಾಯು ಅಂಗಾಂಶಗಳಲ್ಲಿ - ಗ್ಲೂಕೋಸ್ ಮತ್ತು ಗೈಕೊಜನುಗಳ ಉಪಾಪಚಯೋತ್ಪನ್ನುವಾಗಿ); D ರೂಪ (ಸುಕ್ರೋಸನ್ನು ಹುದುಗಿಸುವುದರಿಂದ ದೊರೆಯುವಂಥದು) ಮತ್ತು DL ರೂಪ (ಆಹಾರದಲ್ಲಿರುವ ರೆಸಿಮಿಕ್ ಮಿಶ್ರಣ ರೂಪ). ಈ ಮೂರೂ ರೂಪದ ಆಮ್ಲಗಳು ನೀರಿನಲ್ಲಿ ಲೀನವಾಗುತ್ತವೆ. ಲ್ಯಾಕ್ಟಿಕ್ ಆಮ್ಲ ಪ್ರಕೃತಿಯಲ್ಲಿ ವ್ಯಾಪಕವಾಗಿ ವಿತರಣೆಗೊಂಡಿದೆ. ಒಡೆದುಹೋದ ಹಾಲಿನ ಮೂಲ ಆಮ್ಲ ಘಟಕವಿದು.

ಲ್ಯಾಕ್ಟೋಸ್ ಅಥವಾ ಹಾಲುಸಕ್ಕರೆ ಲ್ಯಾಕ್ಟಿಕ್ ಬ್ಯಾಸಿಲೈ ಎಂಬ ಬ್ಯಾಕ್ಟೀರಿಯದಿಂದ ಲ್ಯಾಕ್ಟಿಟ್ ಆಮ್ಲವಾಗಿ ವಿಭಜನೆ ಹೊಂದುತ್ತದೆ.

ಲ್ಯಾಕ್ಟಿಕ್ ಆಮ್ಲವನ್ನು ಮೊಲಾಸಸ್(ಕಾಕಂಬಿ), ಸ್ಟಾರ್ಚ್ ಹೈಡ್ರೊಲಿ ಸೇಟುಗಳು ಅಥವಾ ಹಾಲೊಡುಕು (ಹ್ವೇ) ಮುಂತಾದ ಕಾರ್ಬೊಹೈಡ್ರೇ ಟುಗಳನ್ನು ನಿಯಂತ್ರಿತ ಹುದುಗುವಿಕೆಗೆ ಈಡುಮಾಡುವುದುರಿಂದ ಮತ್ತು ಅದರ ಕ್ಯಾಲ್ಸಿಯಮ್ ಲವಣದ ರೂಪದಲ್ಲಿ ಬೇರ್ಪಡಿಸುವುದರಿಂದ ಪಡೆಯುತ್ತಾರೆ.

ಲ್ಯಾಕ್ಟಿಕ್ ಆಮ್ಲ ವರ್ಣರಹಿತವಾದದ್ದು. ಘನರೂಪದ ಆಮ್ಲ ಕಡಿಮೆ ತಾಪದಲ್ಲಿ (18°C) ದ್ರವಿಸುತ್ತದೆ. ಸಾಧಾರಣ ಒತ್ತಡದಲ್ಲಿ ಇದನ್ನು ಕಾಸಿದಾಗ ವಿಭಜನೆಹೊಂದುತ್ತದೆ. ಇದನ್ನು ನೀರು, ಆಲ್ಕೊಹಾಲ್ ಮತ್ತು ಈತರುಗಳೊಂದಿಗೆ ಮಿಶ್ರಮಾಡಬಹುದು. ಹೀಗಾದಾಗ ಅದ್ರಾವ್ಯ ಕ್ಯಾಲ್ಸಿಯಮ್ ಮತ್ತು ಜ಼ಿಂಕ್ ಲವಣಗಳು ಉಂಟಾಗುತ್ತವೆ. ಲ್ಯಾಕ್ಟಿಕ್ ಆಮ್ಲ ಮತ್ತು ಅದರ ಲವಣಗಳನ್ನು ಹೆಚ್ಚಾಗಿ ಕೈಗಾರಿಕೆಯಲ್ಲಿ ಉಪಯೋಗಿಸುತ್ತಾರೆ. ಆಂಟಿಮನಿ ಲ್ಯಾಕ್ಟೇಟನ್ನು ಉಣ್ಣೆಗೆ ಬಣ್ಣ ನೀಡುವಲ್ಲಿ ಮತ್ತು ಕ್ಯಾಲಿಕೊ ಮುದ್ರಣದಲ್ಲಿ ಬಳಸುತ್ತಾರೆ. ಚರ್ಮವನ್ನು ಹದಗೊಳಿಸುವುದು, ಆಹಾರ ಮತ್ತು ಪಾನೀಯಗಳ ತಯಾರಿಕೆ, ಕ್ಯಾಲ್ಸಿಯಮ್ ಲವಣದ ರೂಪದಲ್ಲಿ ಕ್ಯಾಲ್ಸಿಯಮ್ ಚಿಕಿತ್ಸೆ ಮುಂತಾದೆಡೆಗಳಲ್ಲಿ ಲ್ಯಾಕ್ಟಿಕ್ ಆಮ್ಲದ ಬಳಕೆ ಉಂಟು. ಲ್ಯಾಕ್ಟಿಕ್ ಆಮ್ಲಗಳ ಎಸ್ಟರುಗಳನ್ನು ಮೆರುಗೆಣ್ಣೆಗಳ ದ್ರಾವಕಗಳಾಗಿ ಬಳಸುತ್ತಾರೆ.

(ಬಿ.ಸಿ.ಎಸ್.)