ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲ್ಯಾನ್ಸ್ ಡೌನ್, ಲಾರ್ಡ್

ವಿಕಿಸೋರ್ಸ್ದಿಂದ

1845-1927. ಭಾರತದ ಪ್ರಸಿದ್ಧ ವೈಸ್‍ರಾಯ್‍ಗಳಲ್ಲಿ ಒಬ್ಬ (1888-94). ಹೆನ್ರಿ ಚಾಲ್ರ್ಸ್‍ಕೀತ್ ಫಿಟ್ಜ್ ಮಾರೈಸ್ ಮಾಕ್ರ್ವಿಸ್ ಲ್ಯಾನ್ಸ್‍ಡೌನ್ ಎಂಬುದು ಇವನ ಪೂರ್ಣ ಹೆಸರು. ಈತ 1845 ಜನವರಿ 14ರಂದು ಜನಿಸಿದ. ಈತನ ತಂದೆ ನಾಲ್ಕನೆಯ ಹೆನ್ರಿ ಮತ್ತು ತಾಯಿ ಎಮಿಲಿ ಮಾರ್ಸಿನೈರನ್. ಇವರು ಐರಿಸ್ ಪಂಗಡಕ್ಕೆ ಸೇರಿದ್ದು, ಕೆರ್ರಿಯಲ್ಲಿ ಸಾಕಷ್ಟು ಆಸ್ತಿಯನ್ನು ಹೊಂದಿದ್ದರು. ಇವರ ಪೂರ್ವಜರು ಇಂಗ್ಲೆಂಡಿನ ರಾಜಕೀಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಲ್ಯಾನ್ಸ್‍ಡೌನ್ ಈಟನ್ ಕಾಲೇಜು ಮತ್ತು ಆಕ್ಸ್‍ಫರ್ಡ್‍ಗಳಲ್ಲಿ ವಿದ್ಯಾಭ್ಯಾಸ ಮಾಡಿದ. ತನ್ನ 21ನೆಯ ವಯಸ್ಸಿನಲ್ಲಿ ತಂದೆಯ ಉತ್ತರಾಧಿಕಾರಿಯಾಗಿ ನಿಯುಕ್ತನಾಗಿ 24ನೆಯ ವಯಸ್ಸಿನಲ್ಲಿ ಮೌಡ್ ಇವಿಲಿನ್ ಹ್ಯಾಮಿಲ್ಟ್‍ಳನ್ನು ವಿವಾಹವಾದ.

ಈತ ಬ್ರಿಟನ್ನಿನ ಮೇಲ್ಮನೆಯಾದ ಹೌಸ್ ಆಫ್ ಲಾಡ್ರ್ಸ್‍ಗೆ ಲಿಬರಲ್ ಪಕ್ಷದಿಂದ ಆಯ್ಕೆಯಾದ (1866). ಪ್ರಧಾನಮಂತ್ರಿ ವಿಲಿಯಂ ಗ್ಲಾಡ್‍ಸ್ಟನ್‍ನ ಸರ್ಕಾರದಲ್ಲಿ ಖಜಾನೆಯ ಮುಖ್ಯಸ್ಥನಾಗಿ (1869-72) ಹಾಗೂ ಯುದ್ಧ ಇಲಾಖೆ ಯಲ್ಲಿ ಅಧೀನ ಕಾರ್ಯದ ರ್ಶಿಯಾಗಿ (1872-74), ಅನಂತರ ಕೆಲವು ಕಾಲ ಇಂಡಿಯ ಆಫೀಸ್‍ನಲ್ಲಿ ಸೇವೆ ಸಲ್ಲಿಸಿ, ಪ್ರಧಾನ ಮಂತ್ರಿ ಗ್ಲಾಡ್‍ಸ್ಟನ್‍ನ್ನು ವಿರೋಧಿಸಿ ಅಧಿಕಾರದಿಂದ ಕೆಳಗಿಳಿದ.

ಈತ ಕೆನಡ ದೇಶದ ಗೌರ್ನರ್ ಜನರಲ್ ಆಗಿ ನೇಮಕಗೊಂಡ (1883). ಈತನ ಐದು ವರ್ಷದ ಆಳಿಕೆಯಲ್ಲಿ ಕೆನಡದ ವಾಯವ್ಯ ಪ್ರಾಂತದಲ್ಲಿ ಲೂಯಿಸ್ ರೀಲ್‍ನ ಹೋರಾಟವನ್ನು ಎದುರಿಸಬೇಕಾಯಿತು. ಅನಂತರದ ವರ್ಷಗಳ ಆಡಳಿತದಲ್ಲಿ ಸಫಲತೆಯನ್ನು ಕಂಡು ಕೆನಡ ಪೆಸಿಫಿಕ್ ರೈಲ್ವೆಯ ಕೆಲಸವನ್ನು ಪೂರ್ಣಗೊಳಿಸಲು ಚಾಲನೆ ನೀಡಿದ. ಕೆನಡ ದೇಶ ಅಮೆರಿಕ ಸಂಯುಕ್ತ ಸಂಸ್ಥಾನಗಳೊಂದಿಗೆ ಬಹುದಿನಗಳಿಂದ ಹೊಂದಿದ್ದ ನ್ಯೂ ಪೌಂಡ್‍ಲೆಂಡಿನ ಮೀನುಗಾರಿಕೆಯ ಬಗೆಗಿನ ಭಿನ್ನಾಭಿಪ್ರಾಯವನ್ನು ತನ್ನ ರಾಜಕೀಯ ಮುತ್ಸದ್ಧಿತನದಿಂದ ಬಗೆಹರಿಸಿದ. ಕೆನಡದ ಪಶ್ಚಿಮ ಭಾಗವನ್ನು ರೈಲಿನ ಮೂಲಕವೇ ಸಂಚರಿಸಿದ ಮೊದಲ ಗೌರ್ನರ್ ಜನರಲ್ ಎಂಬ ಹೆಗ್ಗಳಿಕೆ ಇವನದು.

ಭಾರತದ ವೈಸ್‍ರಾಯ್ ಆಗಿ ನೇಮಕಗೊಂಡ (1888-94). ಈತ ತನ್ನ ಆಳಿಕೆಯ ಅವಧಿಯಲ್ಲಿ ಭಾರತದಲ್ಲಿ ಇಂಗ್ಲಿಷ್ ಸಾಮ್ರಾಜ್ಯದ ಗಡಿ ವಿಸ್ತರಣೆಯ ಜೊತೆಗೆ ಇಂಗ್ಲಿಷ್ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸಿದ. ಭಾರತದ ಈಶಾನ್ಯ ಭಾಗದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಪ್ರಾಬಲ್ಯವನ್ನು ವಿಸ್ತರಿಸಲು ಪ್ರಯತ್ನಿಸಿದ. ಇವನದು ಎಚ್ಚರಿಕೆ ನೀತಿಯ ಆಡಳಿತವಾಗಿತ್ತು. ಆಪ್ಘಾನಿಸ್ತಾನದೊಂದಿಗೆ ದುರಾಂಡ್ ಒಪ್ಪಂದವನ್ನು ಮಾಡಿಕೊಂಡ. ಮಣಿಪುರದ ಉತ್ತರಾಧಿಕಾರತ್ವದ ಪ್ರಶ್ನೆ, ಕಾಶ್ಮೀರದ ಸಮಸ್ಯೆ ಮುಂತಾದುವು ಇವನ ಆಳಿಕೆಯಲ್ಲಿ ಕಂಡುಬಂದ ಸಮಸ್ಯೆಗಳು. ಅಲ್ಲದೆ ಭಾರತೀಯ ರೂಪಾಯಿ ಅಪಮೌಲ್ಯದ ಸಮಸ್ಯೆಯನ್ನು ಬಗೆಹರಿಸಿದ್ದು, ಭಾರತೀಯ ರಾಜರುಗಳು ಸೈನ್ಯದ ತುಕಡಿಯನ್ನು ಹೊಂದುವ ವ್ಯವಸ್ಥೆಯನ್ನು ಜಾರಿಗೆ ತಂದದ್ದು ಇವನ ಸಾಧನೆ.

ಭಾರತದಿಂದ ಹಿಂದಿರುಗಿದ ಈತ (1894) ಮರು ವರ್ಷ ಲಾರ್ಡ್ ಸ್ಯಾಲಿಸ್‍ಬರಿ ಇಂಗ್ಲೆಂಡಿನ ಪ್ರಧಾನ ಮಂತ್ರಿಯಾದಾಗ ಯುದ್ಧ ಕಾರ್ಯದರ್ಶಿಯಾಗಿ ಮಂತ್ರಿಮಂಡಲವನ್ನು ಸೇರಿದ. ದಕ್ಷಿಣ ಆಫ್ರಿಕ ದಲ್ಲಿನ ಬೋಯರ್ ಯುದ್ಧದ ಸಂದರ್ಭದಲ್ಲಿ ಇಂಗ್ಲಿಷ್ ಸೈನ್ಯದ ಹಿನ್ನಡೆಗೆ ತೀವ್ರವಾದ ಸಾರ್ವತ್ರಿಕ ಟೀಕೆಯನ್ನು ಎದುರಿಸಬೇಕಾಯಿತು. ವಿದೇಶಾಂಗ ಕಾರ್ಯದರ್ಶಿ ಯಾಗಿ ನೇಮಕಗೊಂಡ (1900). ಆಂಗ್ಲೋ-ಜಪಾನ್ ಒಪ್ಪಂದದ ಸಂದರ್ಭದಲ್ಲಿ ಇವನ ಪಾತ್ರ ಗಣನೀಯವಾಗಿತ್ತು (1902). ಆಂಗ್ಲೋ-ಫ್ರೆಂಚ್ ಎನ್‍ಟಿಟಿ ಒಪ್ಪಂದವನ್ನು ಮಾಡಿಕೊಂಡ (1904). ಸಾರ್ವತ್ರಿಕ ಚುನಾವಣೆ ನಡೆದು ಲಿಬರಲ್ ಪಕ್ಷ ಜಯಶೀಲವಾದಾಗ ಕನ್ಸರ್‍ವೇಟಿವ್ ಪಕ್ಷದ ನಾಯಕನಾಗಿ ಮೇಲ್ಮನೆಯನ್ನು ಪ್ರವೇಶಿಸಿದ (1906). ಯುದ್ಧಕಾಲದ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ಖಾತೆ ರಹಿತ ಮಂತ್ರಿಯಾಗಿ ಸೇರ್ಪಡೆಯಾದ (1916). ಒಂದನೆಯ ಮಹಾಯುದ್ಧದಲ್ಲಿ ತನ್ನ ಮಗನನ್ನು ಕಳೆದುಕೊಂಡು ಮಾನಸಿಕವಾಗಿ ಕುಗ್ಗಿದ. ಅನಂತರ ಸಕ್ರಿಯ ರಾಜಕಾರಣದಿಂದ ನಿವೃತ್ತನಾದ (1918).

ಔದಾರ್ಯ, ಮಿತ್ರತ್ವ ಭಾವನೆ, ಎಲ್ಲರಿಗೂ ಹೊಂದಿಕೆಯಾಗುವಂತಹ ಗುಣಗಳಿಂದ ಈತ ಜನಪ್ರಿಯನಾಗಿದ್ದ. ವಿನಯಶೀಲ, ಅತ್ಯಾಕರ್ಷಕ ವ್ಯಕ್ತಿಯಾಗಿದ್ದ ಈತ ಯಾವುದೇ ಅಧಿಕಾರ ವ್ಯಾಮೋಹವಿರದೆ ತನಗೆ ವಹಿಸಿದ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದ. ಒಳ್ಳೆಯ ವಿದ್ವಾಂಸ, ಸಮರ್ಥ ವಾಗ್ಮಿ, ಆಡಳಿತಗಾರ, ರಾಜಕೀಯ ಮುತ್ಸದ್ದಿ, ಪ್ರಾಮಾಣಿಕ, ಶ್ರೀಮಂತ ವರ್ಗಕ್ಕೆ ಸೇರಿದ ಸುಸಂಸ್ಕೃತ ಎಂಬ ಪ್ರಶಂಸೆಗೆ ಪಾತ್ರನಾಗಿದ್ದ. ಇವನ ನೆನಪಿಗಾಗಿ 1892ರಲ್ಲಿ ಮೈಸೂರಿನಲ್ಲಿ ಲ್ಯಾನ್ಸ್‍ಡೌನ್ ಕಟ್ಟಡವನ್ನು ನಿರ್ಮಿಸಲಾಯಿತು. ಈತ 1927 ಜೂನ್ 3ರಂದು ನಿಧನನಾದ.

(ಎನ್.ಎಮ್‍ಎಸ್;ಆರ್‍ಕೆ.)