ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಲ್ಯಾಲಿ, ಥಾಮಸ್ ಆರ್ಥರ್

ವಿಕಿಸೋರ್ಸ್ದಿಂದ

1702-66. ಫ್ರೆಂಚರ ದಳಪತಿ ಹಾಗೂ ಫ್ರೆಂಚ್ ಗವರ್ನರ್. ಇವನ ಪೂರ್ಣಹೆಸರು ಕೌಂಟ್ ಡಿ ಲ್ಯಾಲಿ. ಇವನು 1721ರಲ್ಲಿ ಫ್ರೆಂಚ್ ಸೈನ್ಯ ಸೇರಿ ಆಸ್ಟ್ರಿಯ ವಿರುದ್ಧ ನಡೆದ ಯುದ್ಧಗಳಲ್ಲಿ ಭಾಗವಹಿಸಿದ. ಅನಂತರ ‘ಮಾರ್ಷಲ್’ ಪದವಿ ಪಡೆದ(1756-63). ಭಾರತದಲ್ಲಿದ್ದ ಫ್ರೆಂಚ್ ಗವರ್ನರ್ ಡೂಪ್ಲೆ ಸ್ವದೇಶಕ್ಕೆ ಮರಳಿದ ಮೇಲೆ ಕರ್ನಾಟಕದಲ್ಲಿ ಇಂಗ್ಲಿಷರಿಗೂ ಫ್ರೆಂಚರಿಗೂ ನಾಲ್ಕು ವರ್ಷಗಳ ಕಾಲ ವಿರಾಮ ದೊರಕಿತು. ಯುರೋಪಿನಲ್ಲಿ ‘ಸಪ್ತವಾರ್ಷಿಕ’ ಯುದ್ಧ ಆರಂಭವಾದುದರಿಂದ ದಕ್ಷಿಣ ಭಾರತದಲ್ಲಿದ್ದ ಫ್ರೆಂಚರಿಗೆ ಇಂಗ್ಲಿಷರ ವಸಾಹತುಗಳ ಮೇಲೆ ಆಕ್ರಮಣ ಮಾಡಲು ಒಳ್ಳೆಯ ಅವಕಾಶ ದೊರಕಿತು. ಈ ಗುರಿ ಮುಟ್ಟುವುದಕ್ಕಾಗಿ ‘ಜಾಕೊಬೈಟ್’ ದಂಗೆಯಲ್ಲಿ (1745-46) ಪ್ರಸಿದ್ಧನಾಗಿದ್ದ ಇವನನ್ನು ಫ್ರೆಂಚ್ ಸರ್ಕಾರ ಭಾರತಕ್ಕೆ ಕಳುಹಿಸಿಕೊಟ್ಟಿತು(1758). ಇವನು ನಿಯಮಿತ ಕಾಲಕ್ಕೆ ಸರಿಯಾಗಿ ಬಾರದಿದ್ದುದರಿಂದ ಇಂಗ್ಲಿಷರು ಕಲ್ಕತ್ತದ ಮೇಲೆ ದಾಳಿಮಾಡಿ ತಮ್ಮ ಅಧೀನಕ್ಕೆ ತೆಗೆದುಕೊಂಡರು. ಆದರೂ ಇವನು ಫೋರ್ಟ್‍ಸೆಂಟ್ ಡೇವಿಡ್‍ನನ್ನು ತನ್ನ ವಶಕ್ಕೆ ತೆಗೆದುಕೊಂಡ. ಇದೇ ಇವನ ಮಹತ್ಸಾಧನೆಯಾಯಿತು. ಇವನು ಶೂರನೂ ಪ್ರಾಮಾಣಿಕನೂ ಆಗಿದ್ದ. ಆದರೆ ಇವನು ಇನ್ನೊಬ್ಬರ ಸಲಹೆಯನ್ನು ಕೇಳುತ್ತಿರಲಿಲ್ಲ; ತಾನು ಮಾಡುವುದೇ ಸರಿ ಎನ್ನುವ ಮನೋಭಾವದವನು. ಇವನು ಪಾಂಡಿಚೇರಿ ಗವರ್ನರ್ ಆಗಿದ್ದಾಗ ಸೈನ್ಯಕ್ಕೆ ಸಂಬಳವನ್ನು ಕೊಡಲಾಗ ದಂತಹ ಆರ್ಥಿಕ ಮುಗ್ಗಟ್ಟು ಒದಗಿತ್ತು. ಫ್ರೆಂಚರಲ್ಲಿದ್ದ 56 ಲಕ್ಷ ರೂಪಾಯಿಯ ಪತ್ರದ ಹಣವನ್ನು ವಸೂಲಿ ಮಾಡುವುದಕ್ಕೋಸ್ಕರ ಇವನು ತಂಜಾವೂರು ರಾಜನ ಮೇಲೆ ಯುದ್ಧಮಾಡಿ ಸೋತ. ಇದರಿಂದ ಫ್ರೆಂಚರ ಕೀರ್ತಿಗೆ ಧಕ್ಕೆಯಾಯಿತು. ಏಪ್ರಿಲ್ ಮತ್ತು ಆಗಸ್ಟ್ ತಿಂಗಳುಗಳಲ್ಲಿ ನಡೆದ ಎರಡು ಕದನಗಳಲ್ಲಿ ಇಂಗ್ಲಿಷರ ವಿರುದ್ಧ ಹೋರಾಡಿದ ಡಿ.ಏಕ್ ಎಂಬ ಫ್ರೆಂಚ್ ನೌಕಾಧಿಪತಿ ಇವನ ಇಷ್ಟಕ್ಕೆ ವಿರುದ್ಧವಾಗಿ ಭಾರತವನ್ನು ಬಿಟ್ಟು ಐಲ್ಸ್ ಆಫ್ ಫ್ರಾನ್ಸ್ ಮತ್ತು ಬೋರ್‍ಬೋನ್‍ಗೆ ಹೊರಟುಹೋದ.

1758 ಡಿಸೆಂಬರ್‍ನಲ್ಲಿ ಫ್ರೆಂಚರು ಮದರಾಸು ಆಕ್ರಮಣ ಪ್ರಾರಂಭಿಸಿದ್ದರಾದರೂ ಸಮುದ್ರದ ಹವಾಗುಣ ಪ್ರತಿಕೂಲವಾಗಿದ್ದುದರ ಮುಂದುವರಿಯಲಿಲ್ಲ. ಈ ಸಂದರ್ಭದಲ್ಲಿ ಇಂಗ್ಲಿಷರು ಫ್ರೆಂಚರ ಮೇಲೆ ದಾಳಿ ನಡೆಸಿದಾಗ, ಇವನು ತನ್ನನ್ನು ರಕ್ಷಿಸಿಕೊಳ್ಳುವುದೇ ಕಷ್ಟವಾಯಿತು. ಇವನ ಸಿಪಾಯಿಗಳಲ್ಲಿ ಒಮ್ಮತವಿರಲಿಲ್ಲ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು; ಅಧಿಕಾರಿಗಳ ಬೆಂಬಲವಿರಲಿಲ್ಲ. ಇಂತಹ ಸಂಕಷ್ಟದಲ್ಲಿ ಫ್ರೆಂಚ್ ನೌಕಾಧಿಕಾರಿಯಾಗಿ ಡಿ.ಏಕ್ ಕೋರಮಂಡಲತೀರಕ್ಕೆ ವಾಪಸ್ಸುಬಂದು 1759 ಸೆಪ್ಟೆಂಬರ್ ಪೋಕಾಕ್ ಎಂಬ ಇಂಗ್ಲಿಷ್ ಸೈನ್ಯಾಧಿಕಾರಿ ವಿರುದ್ಧ ಮೂರನೆಯ ಬಾರಿ ಹೋರಾಟ ನಡೆಸಿದ. ತನ್ನ ನೌಕಪಡೆ ಬಲವಾಗಿದ್ದರೂ ಇಂಗ್ಲಿಷರಿಗೆ ಸೋತು ಪಾಂಡಿಚೇರಿಯನ್ನು ತ್ಯಜಿಸಿ ಐಲ್ಸ್‍ಗೆ ಹಿಂದಿರುಗಿದ(ಅಕ್ಟೋಬರ್). ಇವನು ಸುಮಾರು ಎರಡು ವರ್ಷಗಳ ಕಾಲ ಇಂಗ್ಲಿಷರನ್ನು ವಿರೋಧಿಸಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದ. ವಾಂಡಿವಾಷ್ ಎಂಬಲ್ಲಿ ನಡೆದ ಯುದ್ಧದಲ್ಲಿ(1760 ಜನವರಿ) ಬ್ರಿಟಿಷ್ ಸೈನ್ಯಾಧಿಕಾರಿ ಐರ್‍ಕೂಟ್, ಬುಸ್ಸಿಯನ್ನು ಸೆರೆಹಿಡಿದ. ಲ್ಯಾಲಿ ಪಾಂಡಿಚೇರಿಗೆ ಓಡಿಹೋದ. ಇಂಗ್ಲಿಷರು ಪಾಂಡಿಚೇರಿಗೆ ಮುತ್ತಿಗೆಹಾಕಿ ಇವನನ್ನು ಸೆರೆಹಿಡಿದರು (1761 ಜನವರಿ 16). ಯುದ್ಧಖೈದಿಯಾಗಿ ಇವನನ್ನು ಇಂಗ್ಲೆಂಡಿಗೆ ಕರೆದೊಯ್ಯಲಾಯಿತು. ಅಲ್ಲಿಂದ ಬಿಡುಗಡೆಹೊಂದಿ ಇವನು ಫ್ರಾನ್ಸ್‍ಗೆ ಬಂದ. ಇವನ ವಿರುದ್ಧ ಅನೇಕ ಆರೋಪಗಳನ್ನು ಹೊರಿಸಿ ಸುಮಾರು ಎರಡು ವರ್ಷಗಳ ವಿಚಾರಣೆ ನಡೆಸಿ ಅನಂತರ ಇವನಿಗೆ 1766 ಮೇ 9ರಂದು ಮರಣದಂಡನೆ ವಿಧಿಸಿ ಗಲ್ಲಿಗೇರಿಸಲಾಯಿತು.

(ಕೆ.ವಿ.ಎಸ್‍ಯು.)