ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಂದೇ ಮಾತರಂ
ವಂದೇ ಮಾತರಂ ಭಾರತದ ರಾಷ್ಟ್ರೀಯ ಹಾಡು (ನ್ಯಾಶನಲ್ ಸಾಂಗ್). ಬಂಕಿಮಚಂದ್ರ ಚಟರ್ಜಿ (1838-94) ಇದನ್ನು 1876ರಲ್ಲಿ ರಚಿಸಿದರು. ಇದು ಅವರ ಪ್ರಸಿದ್ಧ `ಆನಂದಮಠ ಕಾದಂಬರಿಯಲ್ಲಿ ಮೊದಲು ಪ್ರಕಟವಾಯಿತು (1882). ಈ ಕಾದಂಬರಿಯನ್ನು ಬಿ.ವೆಂಕಟಾಚಾರ್ಯರು ಕನ್ನಡಕ್ಕೆ ಅನುವಾದಿಸಿದ್ದಾರೆ (1899). ಇದು ಭಾರತ ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ರಾಷ್ಟ್ರೀಯ ಪ್ರಜ್ಞೆ ಬೆಳೆಸಲು ಪ್ರೇರಕವಾಯಿತು. ಈ ಗೀತೆಯನ್ನು ರವೀಂದ್ರನಾಥ ಠಾಕೂರ್ ಕಾಂಗ್ರೆಸ್ ಅಧಿವೇಶನದಲ್ಲಿ ಸುಶ್ರಾವ್ಯವಾಗಿ ಹಾಡಿದರು (1896). ವಂದೇ ಮಾತರಂ ಎಂಬುದು ಬಂಗಾಲದ ವಿಭಜನೆಯ (1905) ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಘೋಷವಾಕ್ಯವಾಯಿತು. 1950 ಜನವರಿ 24ರಂದು ಈ ಗೀತೆಯನ್ನು ರಾಷ್ಟ್ರೀಯ ಹಾಡೆಂದು ಸಂಸತ್ತು ಘೋಷಿಸಿತು. ಈ ಹಾಡಿಗೆ ರಾಷ್ಟ್ರಗೀತೆಯ ಸ್ಥಾನಮಾನಗಳನ್ನು ನೀಡಲಾಗಿದೆ. ಈ ಹಾಡಿನ ಪೂರ್ಣಪಾಠ ಹೀಗಿದೆ:
ವಂದೇ ಮಾತರಂ
ಸುಜಲಾಂ, ಸುಫಲಾಂ, ಮಲಯಜ ಶೀತಲಾಂ
ಸಸ್ಯಶಾಮಲಾಂ ಮಾತರಂ!
ಶುಭ್ರಜ್ಯೋತ್ಸ್ನಾ ಪುಲಕಿತಯಾಮಿನೀಂ
ಫುಲ್ಲಕುಸುಮಿತ ದ್ರುಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿನೀಂ
ಸುಖದಾಂ ವರದಾಂ ಮಾತರಂ!
ಈ ಹಾಡನ್ನು ಅರವಿಂದ ಘೋಷರು ಇಂಗ್ಲೀಷಿಗೆ ಅನುವಾದಿಸಿದ್ದಾರೆ. ಇದಕ್ಕೆ ಸ್ವರಸಂಯೋಜನೆಯನ್ನೂ ಬಂಕಿಮಚಂದ್ರ ಚಟರ್ಜಿಯವರೇ ಮಾಡಿದುದ್ದು ಒಂದು ವಿಶೇಷ. (ಐ.ಬಿ.ಪಿ.)