ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವತ್ಸನಾಭಿ

ವಿಕಿಸೋರ್ಸ್ ಇಂದ
Jump to navigation Jump to search

ವತ್ಸನಾಭಿ - ರೆನನ್‍ಕ್ಯುಲೇಸೀ ಕುಟುಂಬಕ್ಕೆ ಸೇರಿರುವ ಅಕೋನಿಟಮ್ ಫೆರಾಕ್ಸ್ ಎಂಬ ಶಾಸ್ತೀಯ ಹೆಸರಿನ ಬಹುವಾರ್ಷಿಕ ಸಸ್ಯ. ಸಣ್ಣ ಪೆÇದೆಯಂತೆ ಬೆಳೆಯುತ್ತದೆ. ಎಲೆಗೆ ದುಂಡು ಅಥವಾ ಮೊಟ್ಟೆಯಾಕಾರವಿದೆ. ಹೂಗೊಂಚಲು ಕೊಂಬೆ ತುದಿಯಲ್ಲಿರುವುದು. ಇದರ ಉದ್ದ 15-30 ಸೆಂಮೀ. ಹಣ್ಣುಗಳನ್ನು ಫಾಲಿಕಲ್ ಎನ್ನುತ್ತಾರೆ. ಹೂವಿನ ಹಿಂಭಾಗ ದಲ್ಲಿಯ ದಳ ದೋಣಿ ಅಥವಾ ಶಿರಸ್ತ್ರಾಣದ ಆಕಾರವನ್ನು ಹೋಲುತ್ತದೆ. ಅದರ ಪಕ್ಕದ ದಳಗಳಿಂದ ಮಕರಂದ ಸ್ರವಿಸುತ್ತದೆ. ಹೂಗಳ ಬಣ್ಣ ನೀಲಿ. ಬಂಬಲ್ ನೊಣಗಳು ಶಿರಸ್ತ್ರಾಣಾಕಾರದ ದಳವನ್ನು ತೂತುಮಾಡಿ ಮಧುವನ್ನು ಹೀರುತ್ತವೆ. ಗಾಳಿ ತೂರಿದಾಗ ಮಾತ್ರ ಬೀಜಗಳು ಸಿಡಿಯುವುದಕ್ಕೆ ಅವುಗಳಿಂದ ಹೊರಹೊಮ್ಮುವ ಸಂವೇದಕ ಗುಣವೇ ಕಾರಣ. ಸಸ್ಯದ ಎಲ್ಲü ಭಾಗಗಳೂ ವಿಷಯುಕ್ತ. ಬೇರುಗಳಲ್ಲಿ ಆಹಾರ ಶೇಖರವಾಗುತ್ತದೆ. ಇದರ ಜೊತೆಗೆ ಅಕೊನಿಟನ್ ಎಂಬ ಅಲ್ಕಲಾಯ್ಡ್ ಸಹಉಂಟು. ಉತ್ತರ ಹಿಮಾಲಯದ ನೇಪಾಲ ಮತ್ತು ಕಾಶ್ಮೀರದಲ್ಲಿ ಇದು ಸಹಜ ಬೆಳೆ. ಇದನ್ನು ಇಂಡಿಯನ್ ಅಕೋನೆಟ್ ಎಂದು ಕೂಡ ಹೇಳುವುದುಂಟು.

ಉಪಯೋಗ: ಬೇರಿನಿಂದ ತಯಾರಿಸಿದ ಮುಲಾಮನ್ನು ನರ ಅಥವಾ ಅಂಗಾಂಶ ನೋವುಗಳಿಗೆ ಲೇಪಿಸಲು ಬಳಸುತ್ತಾರೆ. ಜ್ವರ ಮತ್ತು ಕೆಮ್ಮು ಔಷಧಿಗಳ ತಯಾರಿಕೆಯಲ್ಲಿ ಉಪಯೋಗವಿದೆ. ಭಾರತೀಯ ಔಷಧಿಶಾಸ್ತ್ರ ಪ್ರಕಾರ ಬೇರುಗಳನ್ನು ಹಸುವಿನ ಹಾಲು ಅಥವಾ ಗಂಜಲದಲ್ಲಿ ನೆನೆಹಾಕಿದಾಗ ದೊರೆಯುವ ಘಟಕ ಖಿನ್ನತೆಯನ್ನು ಹೋಗಲಾಡಿಸುತ್ತದೆ.

(ಟಿ.ಎಮ್.ಆರ್.)