ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಯರ್ಸ್ಟ್ರಾಸ್, ಕಾರ್ಲ್ ತಿಯೊಡೊರ್ ವಿಲ್ಹೆಲ್ಮ್‌

ವಿಕಿಸೋರ್ಸ್ದಿಂದ

ವಯರ್‍ಸ್ಟ್ರಾಸ್, ಕಾರ್ಲ್ ತಿಯೊಡೊರ್ ವಿಲ್‍ಹೆಲ್ಮ್ 1815-97. ಜರ್ಮನ್ ಗಣಿತವಿದ. ಗಣಿತೋಪಾಧ್ಯಾಯ ವೃತ್ತಿಯಿಂದ ತೊಡಗಿ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕನಾದ (1856), ಮುಂದೆ ಗಣಿತ ಪ್ರಾಧ್ಯಾಪಕತ್ವಕ್ಕೆ ಬಡ್ತಿ ಕೂಡ ಪಡೆದ (1864). ಈತ ವಿಶ್ಲೇಷಣ ಗಣಿತವಿಭಾಗದಲ್ಲಿ ಮೂಲಭೂತ ಸಂಶೋಧನೆ ಮಾಡಿದ. ಮಿಶ್ರ ಚರದ ವಿಶ್ಲೇಷಕ ಫಲನಗಳನ್ನು (ಅನಲಿಟಿಕ್ ಫಂಕ್ಷನ್ಸ್ ಆಫ್ ಎ ಕಾಂಪ್ಲೆಕ್ಸ್ ವೇರಿಯೆಬಲ್) ಘಾತಶ್ರೇಣಿಯ (ಪವರ್ ಸೀರಿಸ್) ಮೂಲಕ ವೃದ್ಧಿಸಿದ. ಮುಖ್ಯವಾಗಿ ನೈಜಸಂಖ್ಯಾವ್ಯವಸ್ಥೆಯ ಅವಿಚ್ಛಿನ್ನತೆ, ನೈಜ ಮತ್ತು ಮಿಶ್ರ-ಚರ ಸಿದ್ಧಾಂತ, ಅಬೆಲಿಯನ್ ಮತ್ತು ಎಲ್ಲಿಪ್ಟಿಕ್ ಫಲನಗಳು ಮತ್ತು ವ್ಯತ್ಯಯನಗಳ ಕಲನಶಾಸ್ತ್ರ (ಕ್ಯಾಲ್ಕುಲಸ್ ಆಫ್ ವೇರಿಯೆಶನ್ಸ್) ಇವುಗಳ ಲ್ಲಿಯ ಚಿಂತನೆಗಳಿಗೆ ತನ್ನ ಕೊಡುಗೆಗಳನ್ನು ಸಲ್ಲಿಸಿದ್ದಾನೆ ಎಂದೇ ಈತನನ್ನು ಸುವಿಖ್ಯಾತ ವಿಶ್ಲೇಷಣತಜ್ಞ ಎಂದು ಪರಿಗಣಿಸಲಾಗಿದೆ. ಗಣಿತದಲ್ಲಿ ನಿಖರ ಮತ್ತು ತಾರ್ಕಿಕ ಸಾಧನೆಯ ಆವಶ್ಯಕತೆಯನ್ನು ಈತ ಬೇಗನೆ ಮನಗಂಡ. ಗಣಿತದ ಅಂಕಗಣಿತೀಕರಣ (ಅರಿತ್ಮೆಟೈಸೇಶನ್) ಎಂದು ಫೆಲಿಕ್ಸ್ ಕ್ಲೈನ್ (1849-1925) ಹೆಸರಿಸಿರುವ ಈ ಬೆಳೆವಣಿಗೆಯ ಮೂಲಪುರುಷ ವಯರ್‍ಸ್ಟ್ರಾಸ್ ಎಂದು ಪರಿಗಣಿಸಲಾಗಿದೆ. ಅಪರಿಮೇಯ ಸಂಖ್ಯೆಗಳನ್ನು ಕುರಿತ ಈತನ ಸಿದ್ಧಾಂತ ಈ ಸಂಖ್ಯೆಗಳ ಆಧುನಿಕ ಸಿದ್ಧಾಂತದಲ್ಲಿ ಬಲು ಮುಖ್ಯ ಪಾತ್ರ ಪಡೆದಿದೆ. *