ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಾಯುರೇಚಕ

ವಿಕಿಸೋರ್ಸ್ದಿಂದ

ವಾಯುರೇಚಕ ವಾಯುಸಂಮರ್ದ ತತ್ತ್ವವನ್ನು ಆಧರಿಸಿ ಕೆಲಸ ಮಾಡುವ ರೇಚಕಗಳ ಪೈಕಿ ಒಂದು (ಏರ್ ಪಂಪ್). ಅಲ್ಪಸಂಮರ್ದ ಪ್ರದೇಶದಿಂದ ಅಧಿಕ ಸಂಮರ್ದ ಪ್ರದೇಶಕ್ಕೆ ವಾಯುವನ್ನು ಸ್ಥಳಾಂತರಿಸಲು ಇದನ್ನು ಬಳಸುವುದಿದೆ. ವಾಯುರೇಚಕದಲ್ಲಿ ಮೂರು ಪ್ರಕಾರಗಳಿವೆ: 1. ವಾಯುಚೋಷಕ (ಸಕ್ಷನ್ ಪಂಪ್). ಇದರಿಂದ ಪಾತ್ರೆಯೊಳಗಿನ ವಾಯುವನ್ನು ಹೊರಗೆ ಹಾಕಿ ಅಲ್ಲಿಯ ಸಂಮರ್ದ ಕಡಿಮೆ ಮಾಡುವುದು ಸಾಧ್ಯ. 2. ವಾಯುಸಂಪೀಡಕ (ಕಂಪ್ರೆಷನ್ ಪಂಪ್). ಇದರಿಂದ ಪಾತ್ರೆಯೊಳಗಡೆಗೆ ಹೊರಗಿನ ವಾಯುವನ್ನು ನೂಕಿ ಅಲ್ಲಿಯ ಸಂಮರ್ದ ಹೆಚ್ಚಿಸಬಹುದು. 3. ಬ್ಲೋಯರ್ ಪಂಪ್ ಇದರಿಂದ ಸಂವೃತ ಪ್ರದೇಶದಲ್ಲಿಯ ವಾಯುವನ್ನು ವೇಗದಿಂದ ಬೇರೆ ಯಾವುದೇ ದಿಕ್ಕಿನಲ್ಲಾದರೂ ದೂಡಬಹುದು. ಮೂರು ಪ್ರಕಾರದ ರೇಚಕಗಳಿದ್ದರೂ ವಾಯುಚೋಷಕವನ್ನೇ ಸಾಮಾನ್ಯವಾಗಿ ವಾಯುರೇಚಕ ಎಂದು ಕರೆಯುವುದು ರೂಢಿ. ಚಿತ್ರದಲ್ಲಿ ತೋರಿಸಿದೆ. (ಎಮ್.ಎಸ್.ಕೆ.)