ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಿಶ್ವೇಶ್ವರಯ್ಯ, ಮೋಕ್ಷಗುಂಡಂ
ವಿಶ್ವೇಶ್ವರಯ್ಯ, ಮೋಕ್ಷಗುಂಡಂ 1860-1962. ಖ್ಯಾತ ಎಂಜಿನಿಯರ್; ದಕ್ಷ ಆಡಳಿತಗಾರ ಮತ್ತು ನಿಷ್ಕಾಮಕರ್ಮಿ; ದೇಶಭಕ್ತ. ಶಿಸ್ತು ಮತ್ತು ದಕ್ಷತೆಗೆ ಮತ್ತೊಂದು ಹೆಸರಂತಿದ್ದ ಇವರು ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿ 1860 ಆಗಸ್ಟ್ 27ರಂದು ಜನಿಸಿದರು. ಪಂಡಿತ ಶ್ರೀನಿವಾಸಶಾಸ್ತ್ರೀ ಇವರ ತಂದೆ, ತಾಯಿ ವೆಂಕಟಲಕ್ಷ್ಮಮ್ಮ. ವಿಶ್ವೇಶ್ವರಯ್ಯನವರಿಗೆ 15 ವರ್ಷವಾಗಿದ್ದಾಗ ತಂದೆ ತೀರಿಕೊಂಡರು. ಇವರು ಚಿಕ್ಕಬಳ್ಳಾಪುರದ ಮಾಧ್ಯಮಿಕ ಶಾಲೆಯಲ್ಲಿ ಲೋಯರ್ ಸೆಕೆಂಡರಿ ಮುಗಿಸಿದ ಮೇಲೆ ಸೋದರಮಾವ ಎಚ್.ರಾಮಯ್ಯನವರ ಜೊತೆ ಬೆಂಗಳೂರಿಗೆ ಬಂದು 1875ರಲ್ಲಿ ವೆಸ್ಲಿಯನ್ ಮಿಷನ್ ಪ್ರೌಢಶಾಲೆಗೆ ಸೇರಿದರು. ಇವರು ಸೆಂಟ್ರಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ಅಂದಿನ ಮಹಾರಾಜರ ಮಂತ್ರಿಗಳಾಗಿದ್ದ ಮುದ್ದಯ್ಯನವರ ಮಕ್ಕಳಿಗೆ ಪಾಠ ಹೇಳುತ್ತಿದ್ದರು. ಆ ರೀತಿ ಪಾಠ ಹೇಳಿಸಿಕೊಂಡ ನಂಜಪ್ಪನವರು ಮುಂದೆ ರಾಜ್ಯದ ಸೀನಿಯರ್ ಸರ್ಜನ್ ಆಗಿ ಹೆಸರು ಪಡೆದರು. ವಿಶ್ವೇಶ್ವರಯ್ಯನವರು 1881ರಲ್ಲಿ ಬಿ.ಎ. ಪರೀಕ್ಷೆಯನ್ನು ಉನ್ನತ ಶ್ರೇಣಿಯಲ್ಲಿ ಪಾಸುಮಾಡಿದರು. ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಚಾಲ್ರ್ಸ್ ವಾಟರ್ಸ್ ಅವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದ ಇವರಿಗೆ ಪ್ರಿನ್ಸಿಪಾಲರು ವೆಬ್‍ಸ್ಟರ್ ನಿಘಂಟನ್ನು ಬಹುಮಾನವಾಗಿ ಕೊಟ್ಟರು. ಎಂಜಿನಿಯರಿಂಗ್ ಓದಲು ಅವರೇ ಪ್ರೋತ್ಸಾಹಿಸಿ ಆಗಿನ ಮೈಸೂರು ರಾಜ್ಯದ ದಿವಾನರಾಗಿದ್ದ ರಂಗಾಚಾರ್ಲು ಅವರಿಗೆ ಪತ್ರ ಬರೆದು ಸರ್ಕಾರದ ವಿದ್ಯಾರ್ಥಿವೇತನ ದೊರಕುವಂತೆ ಮಾಡಿದರು. ವಿಶ್ವೇಶ್ವರಯ್ಯನವರು ಪುಣೆಯ ಸೈನ್ಸ್ ಕಾಲೇಜನ್ನು ಸೇರಿ ತಮ್ಮ 23ನೆಯ ವಯಸ್ಸಿನಲ್ಲಿ ಎಲ್.ಸಿ.ಇ. ಮತ್ತು ಇ.ಸಿ.ಇ.ಎಲ್. ಎಂಜಿನಿಯರಿಂಗ್ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಪಾಸುಮಾಡಿ ಮುಂಬಯಿ ಪ್ರಾಂತ್ಯಕ್ಕೇ ಪ್ರಥಮ ಸ್ಥಾನ ಗಳಿಸಿದರು (1883).
ಇವರು 1884ರ ಮಾರ್ಚ್‍ನಿಂದ ಮುಂಬಯಿ ಸರ್ಕಾರದಲ್ಲಿ ಅಸಿಸ್ಟೆಂಟ್ ಎಂಜಿನಿಯರ್ ಆಗಿ ತಮ್ಮ ವೃತ್ತಿ ಜೀವನವನ್ನಾರಂಭಿಸಿದರು. ಇವರು ಧೂಲಿಯ ನಗರಕ್ಕೆ ನೀರು ಸರಬರಾಜು ಮಾಡುವ ಯೋಜನೆ ತಯಾರಿಸುತ್ತಿದ್ದಾಗ 1887 ಡಿಸೆಂಬರ್ 27ರಂದು ಮುಂಬಯಿಯಲ್ಲಿ ಮೈಸೂರು ಮಹಾರಾಜರನ್ನು ಕಂಡು ಮಾತುಕತೆ ನಡೆಸಿದರು. ಸೂರತ್ ಜಿಲ್ಲೆಯಲ್ಲಿ ಒಂದು ವರ್ಷ ಕೆಲಸ ಮಾಡಿದ ಮೇಲೆ 1889ರಲ್ಲಿ ಪುಣೆಗೆ ವರ್ಗವಾಗಿ ಬಂದರು. ಪಂಜ್ರಾ ನದಿಯಿಂದ ದತಾರಿ ಹಳ್ಳಿಗೆ ಸೈಫನ್ ಕೊಳವೆ ಹಾಕಿ ನೀರು ಒದಗಿಸುವ ಕೆಲಸಮಾಡಿ ಒಳ್ಳೆಯ ಹೆಸರು ಗಳಿಸಿದರು. ಕೆಲಸಕ್ಕೆ ಸೇರಿದ 20 ತಿಂಗಳಲ್ಲೇ ತಮ್ಮ ದಕ್ಷತೆಯಿಂದಾಗಿ ಮೊದಲ ದರ್ಜೆಯ ಎಂಜಿನಿಯರ್ ಆದರು. ಸಿಂಧ್ ವಿಭಾಗಕ್ಕೆ ಸೇರಿದ ಸಕ್ಕೂರಿಗೆ ಕುಡಿಯುವ ನೀರನ್ನು ಸಿಂಧೂ ನದಿಯಿಂದ ಒದಗಿಸಬೇಕಾಗಿ ಬಂತು. ನದಿಯ ಬಗ್ಗಡ ನೀರನ್ನು ಶುದ್ಧಮಾಡಲು ಆಗತಕ್ಕ ಅಪಾರ ವೆಚ್ಚವನ್ನು ತಗ್ಗಿಸುವ ಸಲುವಾಗಿ ನದಿ ದಡಗಳಲ್ಲಿ ದೊಡ್ಡ ಬಾವಿಗಳನ್ನು ತೋಡಿಸಿ ಅಲ್ಲಿಂದ ಶುದ್ಧ ನೀರನ್ನು ಪೂರೈಸಿದರು. ಇದರಿಂದಲೂ ಇವರಿಗೆ ಒಳ್ಳೆಯ ಹೆಸರು ಬಂತು. ಹಾಗೆಯೇ ಇವರು ತಪತಿ ನದಿಯಿಂದ ಸೂರತ್ತಿಗೆ ನೀರೊದಗಿಸುವ ಕಾರ್ಯವನ್ನು ಮಾಡಿ ಮುಗಿಸಿದರು.
ಈ ಸಮಯದಲ್ಲೇ ಇವರು ಸ್ವಯಂಚಾಲಿತ ತೂಬಿನ ಬಾಗಿಲುಗಳನ್ನು ನಿರ್ಮಿಸಿ ಪ್ರಥಮವಾಗಿ ಪುಣೆಯ ಸಮೀಪದಲ್ಲಿರುವ ಖಡಕವಾಸಲಾದ ಫೈಪ್ ಜಲಾಶಯದ ಕೋಡಿಯಲ್ಲಿ ಸ್ಥಾಪಿಸಿದರು. ಮುಂದೆ ಇದೇ ಮಾದರಿಯ ಕವಾಟಗಳನ್ನು ಗ್ವಾಲಿಯರ್‍ನ ಟಿಗ್ರಾ ಅಣೆಕಟ್ಟು ಮತ್ತು ಕೃಷ್ಣರಾಜಸಾಗರ ಅಣೆಕಟ್ಟಿ ನಲ್ಲಿ ಉಪಯೋಗಿಸ ಲಾಯಿತು. 1904ರಲ್ಲಿ ಸಿಂಧ್ ಒಳಗೊಂಡ ಮುಂಬಯಿ ಪ್ರಾಂತಕ್ಕೆ ಸ್ಯಾನಿಟರಿ ಎಂಜಿನಿ ಯರಾಗಿ ನೇಮಿತ ರಾದರು. ಆ ಹುದ್ದೆಗೆ ಬಂದ ಭಾರತೀಯರಲ್ಲಿ ಇವರೇ ಮೊದಲಿಗರು. ಅದುವರೆಗೂ ಆ ಹುದ್ದೆ ಬ್ರಿಟಿಷರಿಗೆ ಮಾತ್ರ ಮೀಸಲಾಗಿತ್ತು. ಇದೇ ಕಾಲ ದಲ್ಲಿ ಲಂಡನ್ನಿನ ಸಿವಿಲ್ ಎಂಜಿನಿಯರ್ಸ್ ಸಂಸ್ಥೆಗೆ ಸದಸ್ಯರಾಗಿ ಆಯ್ಕೆಯಾದರು. ಸಿಮ್ಲಾದಲ್ಲಿ ನಡೆದ ಅಖಿಲ ಭಾರತ ನೀರಾವರಿ ಎಂಜಿನಿಯರುಗಳ ಸಮ್ಮೇಳನದಲ್ಲಿ ತಮ್ಮ ನಾಲ್ಕು ಪ್ರೌಢ ಪ್ರಬಂಧಗಳನ್ನು ಓದಿದರು. ಮುಂಬಯಿ ವಿಶ್ವವಿದ್ಯಾಲಯದ ನಿಯಮಾವಳಿ ರೂಪಿಸುವ ಮಂಡಳಿಗೆ ಸರ್ಕಾರ ಇವರನ್ನು ಸದಸ್ಯರನ್ನಾಗಿ ನೇಮಿಸಿತು. ಗೋಪಾಲಕೃಷ್ಣ ಗೋಖಲೆಯವರು ಪುಣೆಯ ಪುರಸಭಾ ಸದಸ್ಯರಾಗಿದ್ದ ಕಾಲದಲ್ಲಿ ಇವರು ಆ ನಗರದ ಒಳಚರಂಡಿ ವ್ಯವಸ್ಥೆಯನ್ನು ರೂಪಿಸಿಕೊಟ್ಟರು. 1906ರಲ್ಲಿ ವಿಶ್ವೇಶ್ವರಯ್ಯನವರು ಏಡನ್‍ಗೆ ಹೋಗಿ ಆ ನಗರಕ್ಕೆ ಕುಡಿಯುವ ನೀರಿನ ಮತ್ತು ಒಳಚರಂಡಿ ವ್ಯವಸ್ಥೆ ಕೆಲಸಗಳನ್ನು ಪೂರೈಸಿ ಒಳ್ಳೆಯ ಹೆಸರು ಗಳಿಸಿದರು. ಸರ್ಕಾರ ಇವರ ಕಾರ್ಯದಕ್ಷತೆಗೆ ಮೆಚ್ಚಿ ಕೈಸರ್-ಇ-ಹಿಂದ್ ಪ್ರಶಸ್ತಿ ನೀಡಿ ಗೌರವಿಸಿತು. ಕೊಲ್ಲಾಪುರದ ಮಹಾರಾಜರ ಕೋರಿಕೆಯಂತೆ ಅಲ್ಲಿಯ ಕೆರೆ ದುರಸ್ತಿ ಮಾಡಿಸಿ ನೀರು ಸರಬರಾಜನ್ನು ವ್ಯವಸ್ಥೆಗೊಳಿಸಿದ ಕೀರ್ತಿ ಇವರದು.
ವಿದೇಶಗಳಲ್ಲಿ ಆಗಿರುವ ಪ್ರಗತಿಯನ್ನು ನೋಡಿ, ಹೊಸದನ್ನು ಕಲಿತು ತಮ್ಮ ದೇಶಕ್ಕೆ ಎಷ್ಟು ಸಾಧ್ಯವೋ ಅಷ್ಟನ್ನು ರೂಪಿಸಿ ರೂಢಿಸಬೇಕೆಂಬ ಉದ್ದೇಶದಿಂದ ಇವರು 1898ರಲ್ಲಿ ಜಪಾನಿಗೆ ಹೋಗಿ ಅಲ್ಲಿ ಅನೇಕ ಕಾರ್ಖಾನೆಗಳನ್ನು ನೋಡಿ ಬಂದರು. ಮುಂಬಯಿ ಸರ್ಕಾರದ ನೌಕರಿಯಿಂದ ನಿವೃತ್ತರಾಗುವ ಮೊದಲು ರಜೆ ಪಡೆದು ಯುರೋಪ್, ಅಮೆರಿಕ ಪ್ರವಾಸ ಮಾಡಿದರು. ಇಟಲಿಯ ಮಿಲಾನ್ ನಗರದ ಒಳಚರಂಡಿ ವ್ಯವಸ್ಥೆ ಅರಿಯಲು ಅಲ್ಲಿಯ ಚರಂಡಿಯ ಒಳಗೇ ಇಳಿದು ನಡೆದರಂತೆ. ಹಾಗೆಯೇ ಜರ್ಮನಿಯ ಡಾಸೆಲ್‍ಡಾರ್ಫ್, ಲಂಡನ್, ಪ್ಯಾರಿಸ್‍ನ ವ್ಯವಸ್ಥೆಗಳನ್ನು ಅಭ್ಯಸಿಸಿದರು. ಡೆನ್ಮಾರ್ಕ್, ಸ್ವೀಡನ್, ಹಾಲೆಂಡ್, ಕೆನಡ, ಲೆನಿನ್‍ಗ್ರಾಡ್ (ಆಗಿನ ಸೇಂಟ್ ಪೀಟರ್ಸ್ ಬರ್ಗ್) ಮತ್ತು ಮಾಸ್ಕೊ ನಗರಗಳಿಗೆ ಭೇಟಿಕೊಟ್ಟು ಅಲ್ಲಿಯ ಪ್ರಗತಿಯನ್ನೆಲ್ಲ ಕಣ್ಣಾರೆ ಕಂಡುಬಂದರು. ಡೆಟ್ರಾಯಿಟ್‍ನ ಫೋರ್ಡ್ ಮೋಟರು ಕಂಪನಿಯ ಕೆಲಸಕಾರ್ಯಗಳನ್ನು ಅಭ್ಯಾಸಮಾಡಲು ಅಲ್ಲೇ 2 ತಿಂಗಳು ಉಳಿದರು. ನ್ಯೂಯಾರ್ಕ್ ನಗರಕ್ಕೆ ನೀರೊದಗಿಸುವ ಗ್ರೋಟನ್ ಅಣೆಕಟ್ಟನ್ನೂ ನೋಡಿ ಬಂದರು. ಪುಣೆ, ಹೈದರಾಬಾದು, ಧೂಲಿಯಾ, ಏಡನ್, ಇಂದೂರ್ ಮತ್ತು ಮೈಸೂರು ನಗರಗಳ ಒಳಚರಂಡಿ ವ್ಯವಸ್ಥೆ ಇವರ ಸೂಚನೆ ಮತ್ತು ಸಲಹೆಯ ಮೇಲೆಯೇ ರೂಪಿಸಲಾಯಿತು.
ಹೈದರಾಬಾದು ಮತ್ತು ಸುತ್ತಲ ಹಳ್ಳಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದ್ದ ಮೂಸಿ ಮತ್ತು ಇಯಾಸಿ ನದಿಗಳ ಪ್ರವಾಹವನ್ನು ನಿಯಂತ್ರಿಸಲು ಹೈದರಾಬಾದಿನ ನಿಜಾಮರು ಇವರನ್ನು ಕರೆಸಿಕೊಂಡರು. 15-4-1909ರಲ್ಲಿ ಹೈದರಾಬಾದಿಗೆ ಹೋಗಿ ಸ್ಥಳಪರೀಕ್ಷೆ ನಡೆಸಿ 1909 ಅಕ್ಟೋಬರಿನಲ್ಲಿ ತಮ್ಮ ವರದಿ ಸಲ್ಲಿಸಿದರು. ಹಾಗೆಯೇ 1909 ನವೆಂಬರ್‍ನಲ್ಲಿ ಹೈದರಾಬಾದು ನಗರ ಮತ್ತು ಒಳಚರಂಡಿ ವ್ಯವಸ್ಥೆಯ ವರದಿ ಸಲ್ಲಿಸಿದರು. ಇವರ ಸಲಹೆಯಂತೆ ಮೂಸಿ ನದಿಗೆ ಅಡ್ಡಗಟ್ಟೆ ಹಾಕಿ ಉಸ್ಮಾನ್ ಸಾಗರವನ್ನೂ ಇಯಾಸಿ ನದಿಗೆ ಕಟ್ಟೆ ಕಟ್ಟಿ ಹಿಮಾಯತ್ ಸಾಗರವನ್ನೂ ಕಟ್ಟಲಾಯಿತು. ಇದರಿಂದ ಹೈದರಾಬಾದು ನಗರವನ್ನು ಪ್ರವಾಹಗಳಿಂದ ರಕ್ಷಿಸಿದುದಲ್ಲದೆ ಸುಂದರವಾಗಿಡಲು ಮತ್ತು ಸುತ್ತಲ ಪ್ರದೇಶದ ಜಲಾಭಾವ ನೀಗಲು ಕಾರಣವಾಯಿತು.
ಮುಂಬಯಿ ಸರ್ಕಾರಕ್ಕೆ 23 ವರ್ಷ ಸೇವೆ ಸಲ್ಲಿಸಿ 1907ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು. 1909ರ ನವೆಂಬರ್ 15ರಂದು ಮೈಸೂರು ರಾಜ್ಯದ ಪ್ರಧಾನ ಎಂಜಿನಿಯರ್ ಆಗಿ ಅಧಿಕಾರ ಸ್ವೀಕರಿಸಿದರು. ಮಾದರಿ ರಾಜ್ಯದ ನಿರ್ಮಾಣಕ್ಕಾಗಿ ಇವರು ರಾಜ್ಯದ ಪರಿಸ್ಥಿತಿಯನ್ನೆಲ್ಲ ಅಧ್ಯಯನ ಮಾಡಿ ಎಲ್ಲಿ ಹೊಸ ಕೈಗಾರಿಕೆಯನ್ನು ಸ್ಥಾಪನೆ ಮಾಡಬಹುದು, ಜಲಾಶಯಗಳನ್ನು ನಿರ್ಮಿಸಬಹುದು ಎಂಬುದನ್ನು ಪರಿಶೀಲಿಸಿದರು. ಜೊತೆಗೆ, ರೈಲ್ವೆ ಕಾರ್ಯದರ್ಶಿಯಾಗಿಯೂ ಇದ್ದ ಇವರು ಹೊಸ ರೈಲು ಮಾರ್ಗಗಳ ಒಂದು ಯೋಜನೆಯನ್ನು ಸರ್ಕಾರದ ಮುಂದಿಟ್ಟರು. ಇವರ ಶ್ರಮದಿಂದ ಬೀರೂರು-ಶಿವಮೊಗ್ಗ, ಮೈಸೂರು-ನಂಜನಗೂಡು, ಬೆಂಗಳೂರು-ಮೈಸೂರು ರೈಲ್ವೆಗಳ ಆಡಳಿತವನ್ನು ಮೈಸೂರು ಸರ್ಕಾರಕ್ಕೆ ವರ್ಗಾಯಿಸಲಾಯಿತು.
ಇವರು 1912ರಲ್ಲಿ ದಿವಾನ ಪದವಿಯನ್ನು ಒಪ್ಪಿಕೊಂಡರು. ಈ ಮೊದಲೇ 1911ರಲ್ಲಿ ಕೃಷ್ಣರಾಜಸಾಗರದ ನಿರ್ಮಾಣ ಪ್ರಾರಂಭವಾಗಿತ್ತು. ಈ ಕೆಲಸ 1931ರಲ್ಲಿ ಪೂರ್ಣವಾಯಿತು. ಇದೇ ವರ್ಷದಲ್ಲಿ ಮೈಸೂರು ಬ್ಯಾಂಕನ್ನು ಸ್ಥಾಪಿಸಿದರು. 1913ರಲ್ಲಿ ಮೈಸೂರು ಅರಸರಿಗೂ ಬ್ರಿಟಿಷರಿಗೂ ಹೊಸ ಒಪ್ಪಂದವಾಯಿತು. ದಿವಾನರಾಗಿದ್ದ ಇವರ ಸಮಯೋಚಿತ ಚತುರತೆಯಿಂದಾಗಿ ಮೈಸೂರು ಮಹಾರಾಜರಿಗೆ ರಾಜ್ಯದ ಒಳಾಡಳಿತದಲ್ಲಿ ಹೆಚ್ಚು ಸ್ವಾತಂತ್ರ್ಯ ಸಿಕ್ಕಿತು. 1914ರಲ್ಲಿ ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸ್ಕೂಲ್ ಸ್ಥಾಪಿತವಾಯಿತು. ಮೈಸೂರಿನ ಶಿಕ್ಷಣಕ್ಷೇತ್ರದಲ್ಲಿ ಕ್ರಾಂತಿಯನ್ನುಂಟುಮಾಡಿದ ಇವರು 1916 ಜುಲೈ 22ರಂದು ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆಗೂ ಕಾರಣರಾದರು.
ಇದೇ ಕಾಲದಲ್ಲಿ ಸರ್ಕಾರಿ ಸಾಬೂನು ಕಾರ್ಖಾನೆ, ಗಂಧದ ಎಣ್ಣೆ ಕಾರ್ಖಾನೆಗಳನ್ನು ಪ್ರಾರಂಭಿಸಲಾಯಿತು. ಈ ಬಗೆಯಲ್ಲಿ ಇವರು ಮೈಸೂರು ರಾಜ್ಯದ ಮುಖ್ಯ ಎಂಜಿನಿಯರ್ ಮತ್ತು ದಿವಾನರಾಗಿದ್ದ ಕಾಲದಲ್ಲಿ ರಾಜ್ಯದ ಸರ್ವತೋಮುಖ ಬೆಳೆವಣಿಗೆಯಾಗಿ ಮಾದರಿ ಮೈಸೂರು ಎನಿಸಿಕೊಂಡಿತು. ಇವರು 1918 ಡಿಸೆಂಬರ್ 9ರಂದು ದಿವಾನ ಪದವಿಗೆ ರಾಜೀನಾಮೆ ಇತ್ತು ದೇಶಪರ್ಯಟನೆಗೆ ಹೊರಟರು. ಹಿಂದಿರುಗಿ ಬಂದಾಗ ಇವರೇ ಸ್ಥಾಪಿಸಿದ್ದ ಭದ್ರಾವತಿ ಕಬ್ಬಿಣ ಕಾರ್ಖಾನೆ (ಇಂದು ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ) ಅಧೋಗತಿಗೆ ಇಳಿದಿರುವುದು ತಿಳಿದುಬಂದು, ಮಹಾರಾಜರ ಬೇಡಿಕೆಯಂತೆ 6 ವರ್ಷಕಾಲ ಕಾರ್ಯನಿವಾರ್ಹಕ ಸಮಿತಿ ಅಧ್ಯಕ್ಷರಾಗಿದ್ದು ಕಾರ್ಖಾನೆಯನ್ನು ಅಭಿವೃದ್ಧಿಪಡಿಸಿದರು. ಇದಕ್ಕಾಗಿ ಇವರಿಗೆ ಕೊಟ್ಟ ಸುಮಾರು 2 ಲಕ್ಷ ಗೌರವಧನವನ್ನು ದಾನ ಮಾಡಿದರು. ಇದರಿಂದ 1943 ಆಗಸ್ಟ್‍ನಲ್ಲಿ ಬೆಂಗಳೂರಿನಲ್ಲಿ ಜಯಚಾಮರಾಜೇಂದ್ರ ತಾಂತ್ರಿಕ ಶಾಲೆ ಅಸ್ತಿತ್ವಕ್ಕೆ ಬಂತು. ಇವರು 1949ರಲ್ಲಿ ಗ್ರಾಮ ಔದ್ಯೋಗೀಕರಣದ ಯೋಜನೆ ಸಿದ್ಧಪಡಿಸಿ ಅದನ್ನು ಭಾರತ ಸರ್ಕಾರಕ್ಕೆ ಒಪ್ಪಿಸಿದರು. ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಸ್ಥಾಪನೆಯಿಂದಲೂ ಆಡಳಿತ ಸಮಿತಿಯ ಸದಸ್ಯರಾಗಿದ್ದು ಆಮೇಲೆ ಅಧ್ಯಕ್ಷರೂ ಆಗಿದ್ದ ಇವರು 1947ರಲ್ಲಿ ತಾವಾಗಿಯೇ ನಿವೃತ್ತರಾದರು. ಟಾಟಾ ಕಬ್ಬಿಣ ಮತ್ತು ಉಕ್ಕಿನ ಕಂಪನಿಯಲ್ಲಿ 1927ರಿಂದ 28 ವರ್ಷಕಾಲ ಕಂಪನಿಯ ನಿರ್ದೇಶಕರಾ ಗಿದ್ದರು. ತುಂಗಭದ್ರಾ ಜಲಾಶಯದ ನಿರ್ಮಾಣದಲ್ಲೂ ಇವರ ಅಮೂಲ್ಯ ಸಲಹೆ ಪಡೆಯಲಾಯಿತು. ದೇಶರಕ್ಷಣೆಯ ಭೂ-ಜಲ-ವಾಯುಪಡೆಗಳಿಗೆ ಅಗತ್ಯವಾದ ಶಸ್ತ್ರಾಸ್ತ್ರಗಳು ಇಲ್ಲಿಯೇ ತಯಾರಾಗಬೇಕು, ದೇಶ ಸರ್ವವಿಧದಲ್ಲೂ ಸ್ವಾವಲಂಬಿಯಾಗಬೇಕು ಎಂಬುದೇ ಇವರ ಬಯಕೆಯಾಗಿ ಭದ್ರಾವತಿ ಕಬ್ಬಿಣ ಕಾರ್ಖಾನೆ ಮತ್ತು ವಿಮಾನ ಕಾರ್ಖಾನೆ ಅಸ್ತಿತ್ವಕ್ಕೆ ಬಂದವು. ಒಟ್ಟಿನಲ್ಲಿ ಇವರ ಜೀವನ ಚರಿತ್ರೆಯೆಂದರೆ ಕರ್ನಾಟಕ ರಾಜ್ಯದ ಮತ್ತು ಭಾರತದ ಕೈಗಾರಿಕಾ ಪ್ರಗತಿಯ ಇತಿಹಾಸವನ್ನೋದಿ ದಂತೆ. ಇವರ ಸಲಹೆ, ಸಹಕಾರ ಮತ್ತು ಉತ್ತೇಜನದಿಂದ ಇಂದು ಅನೇಕ ಕೈಗಾರಿಕೆಗಳೂ ಕಾರ್ಖಾನೆಗಳೂ ಉಳಿದು ಬೆಳೆದು ಬಂದಿವೆ.
ಇವರು ಗಾಂಧೀಜಿ, ಗೋಖಲೆಯಂತಹ ಮಹನೀಯರ ಸ್ನೇಹ ಸಂಪಾದಿಸಿದ್ದರು. ಪ್ರಪಂಚಾದ್ಯಂತ ಇವರಿಗೆ ಅನೇಕ ವಿಶ್ವವಿದ್ಯಾನಿಲಯ ಗಳು ಗೌರವ ಡಾಕ್ಟೊರೇಟ್ ಪದವಿ ಇತ್ತು ಸನ್ಮಾನಿಸಿದ್ದವು. ಅವುಗಳಲ್ಲಿ ಇವರೇ ಸ್ಥಾಪಿಸಿದ ಮೈಸೂರು ವಿಶ್ವವಿದ್ಯಾನಿಲಯವೂ ಒಂದು. 1911ರಲ್ಲಿ ಸಿ.ಐ.ಇ. ಬಿರುದನ್ನೂ 1915ರಲ್ಲಿ ಕೆ.ಸಿ.ಐ.ಇ. ಬಿರುದನ್ನೂ ಕೊಟ್ಟು ಬ್ರಿಟಿಷ್ ಸರ್ಕಾರ ಇವರನ್ನು ಗೌರವಿಸಿತು. 1955ರಲ್ಲಿ ಬಂಗಾಲದ ರಾಯಲ್ ಏಷ್ಯಾಟಿಕ್ ಸೊಸೈಟಿ ದುರ್ಗಾ ಪ್ರಸಾದ್ ಖೈತಾನ್ ಸುವರ್ಣ ಪದಕವನ್ನು ಕೊಟ್ಟು ಗೌರವಿಸಿತು. ಅದೇ ವರ್ಷ ಭಾರತರತ್ನ ಪ್ರಶಸ್ತಿಯನ್ನು ನೀಡಿ ಭಾರತ ಸರ್ಕಾರ ಇವರನ್ನು ಗೌರವಿಸಿತು. 1960 ಸೆಪ್ಟೆಂಬರ್ 15ರಂದು ಭಾರತಾದ್ಯಂತ ಇವರ ಶತಮಾನೋತ್ಸವವನ್ನು ಆಚರಿಸಿ ಇವರಿಗೆ ಗೌರವ ಸಮರ್ಪಿಸಲಾಯಿತು.
ಅತ್ಯಂತ ದಕ್ಷ, ವಿಚಕ್ಷಣ, ತೀಕ್ಷ್ಣಮತಿಯಾದ ಇವರು ತಮ್ಮ ಇಡೀ ಜೀವಮಾನವನ್ನೇ ಶಿಸ್ತಿಗೆ ಒಳಪಡಿಸಿದ್ದು, ಎಂದೂ ನೀತಿ-ನಿಯಮಗಳನ್ನು ತಪ್ಪುತ್ತಿರಲಿಲ್ಲ. ಇವರು 1962 ಏಪ್ರಿಲ್ 14ರಂದು ಬೆಂಗಳೂರಿನಲ್ಲಿ ನಿಧನರಾದರು. ಇವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇವರ ಹುಟ್ಟೂರು ಮುದ್ದೇನಹಳ್ಳಿಯಲ್ಲಿ ನಡೆಯಿತು. ಈಗ ಮುದ್ದೇನಹಳ್ಳಿಯಲ್ಲಿ ಇವರ ಹೆಸರಿನಲ್ಲಿ ಶಾಲಾ-ಕಾಲೇಜು ಮತ್ತು ಗ್ರಂಥಭಂಡಾರಗಳನ್ನೂ ವಸ್ತುಸಂಗ್ರಹಾಲಯವನ್ನೂ ಆರಂಭಿಸಲಾಗಿದೆ.
ಇವರು ದಕ್ಷ ಆಡಳಿತಗಾರರೂ ಕಾರ್ಯಕರ್ತರೂ ಆಗಿದ್ದಂತೆಯೇ ಎಂಜಿನಿಯರಿಂಗ್ ವಿಷಯಗಳನ್ನು ಕುರಿತಂತೆ ಒಳ್ಳೆಯ ಬರೆಹಗಾರರೂ ಆಗಿದ್ದರು. ಇವರು ಅನೇಕ ಗ್ರಂಥಗಳನ್ನು ಬರೆದಿದ್ದಾರೆ. ಅವು ಹೆಚ್ಚಾಗಿ ಇಂಗ್ಲಿಷ್ ಭಾಷೆಯಲ್ಲಿವೆ. ಕನ್‍ಸ್ಟ್ರಕ್ಟಿಂಗ್ ಇಂಡಿಯ (1920). ರೂರಲ್ ಇಂಡಸ್ಟ್ರಿಯಲೈಸೇಷನ್ ಇನ್ ಇಂಡಿಯ (1911), ಅನ್‍ಎಂಪ್ಲಾಯ್ ಮೆಂಟ್ ಇನ್ ಇಂಡಿಯ; ಇಟ್ಸ್ ಕಾಸಸ್ ಅಂಡ್ ಕ್ಯೂರ್ (1932), ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯ (1934). ನೇಷನ್ ಬಿಲ್ಡಿಂಗ್: ಎ ಫೈವ್ ಇಯರ್ ಪ್ಲಾನ್ ಫಾರ್ ದಿ ಪ್ರಾವಿನ್‍ಸಸ್ (1937), ಡಿಸ್ಟ್ರಿಕ್ಟ್ ಡೆವಲಪ್‍ಮೆಂಟ್ ಸ್ಕೀಮ್ (1939), ಪಾಸ್ಪರಿಟಿ ಥ್ರೂ ಇಂಡಸ್ಟ್ರಿ (1942), ವಿಲೇಜ್ ಇಂಡಸ್ಟ್ರಿಯಲೈಸೇಷನ್ (1945). ಮೆಮೊೈರ್ಸ್ ಆಫ್ ಮೈ ವಕಿರ್ಂಗ್ ಲೈಫ್ (1951), ಎ ಬ್ರೀಫ್ ಮೆಮೊೈರ್ ಆಫ್ ಮೈ ಕಂಪ್ಲೀಟ್ ವಕಿರ್ಂಗ್ ಲೈಫ್ (1959)-ಇವು ಇವರ ಮುಖ್ಯ ಕೃತಿಗಳು. ಇವುಗಳಲ್ಲದೆ ಇವರೇ ಅಧ್ಯಕ್ಷರಾಗಿ, ಸದಸ್ಯರಾಗಿ ಸರ್ಕಾರದ ಮತ್ತು ಖಾಸಗಿ ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಯೋಜನೆಗಳ ವರದಿಗಳನ್ನು ತಯಾರಿಸಿ ಪ್ರಕಟಿಸಿದ್ದಾರೆ.
ಇವರ ಜೀವನ ಮತ್ತು ಸಾಧನೆಗಳನ್ನು ಕುರಿತಂತೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಅನೇಕ ಗ್ರಂಥಗಳು ಪ್ರಕಟವಾಗಿವೆ. ಅವುಗಳಲ್ಲಿ ಸಿದ್ಧವನಹಳ್ಳಿ ಕೃಷ್ಣಶರ್ಮರ ಕುಲದೀಪಕರು (1942), ವಿ.ಎಸ್. ನಾರಾಯಣರಾವ್ ಅವರ ಮೋಕ್ಷಗುಂಡಂ ವಿಶ್ವೇಶ್ವರಯ್ಯ (1952), ವಿಶ್ವರತ್ನ (1969), ತಿ.ತಾ. ಶರ್ಮರ ಮೋಕ್ಷಗುಂಡಂ ವಿಶ್ವೇಶ್ವರಯ್ಯ (1960), ಎಸ್.ವಿ. ಪರಮೇಶ್ವರಭಟ್ಟರಿಂದ ಸಂಪಾದಿತವಾದ ಭಾಗ್ಯಶಿಲ್ಪಿ (1968), ಯಂತ್ರಶ್ರೀ ಸರ್ ಎಂ. ವಿ. ಜೀವನದ ಆತ್ಮೀಯ ಕಥನಗಳು (1969), ವಿಶ್ವೇಶ್ವರಯ್ಯನವರ ಶತಮಾನೋತ್ಸವ ಸಂದರ್ಭದಲ್ಲಿ ಪ್ರಕಟವಾದ ಎಂ.ವಿ. ಜನ್ಮದಿನೋತ್ಸವ ವಿಶೇಷ ಸಂಚಿಕೆ (1960), ವಿಶ್ವೇಶ್ವರಯ್ಯ ನ್ಯಾಷನಲ್ ಮೆಮೋರಿಯಲ್ ಟ್ರಸ್ಟ್ ಸವನೀರ್ (1972) ಮೊದಲಾದವುಗಳನ್ನು ಹೆಸರಿಸಬಹುದು. ಇವರ ವಂಶಾವಳಿ ವಿವರಗಳನ್ನು ಕುರಿತಂತೆ ಟಿ.ವಿ. ವೆಂಕಟಾಚಲಶಾಸ್ತ್ರೀಯವರು ಭಾರತರತ್ನ ಸರ್ ಎಮ್. ವಿಶ್ವೇಶ್ವರಯ್ಯನವರ ಪೂರ್ವಜರು ಕೃತಿ ಪ್ರಕಟಿಸಿದ್ದಾರೆ(2004). (ವಿ.ಎಸ್.ಎನ್.)
*