ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವಿಷ್ಣು

ವಿಕಿಸೋರ್ಸ್ದಿಂದ

ವಿಷ್ಣು ತ್ರಿಮೂರ್ತಿಗಳಲ್ಲೊಬ್ಬ. ವೈಷ್ಣವ ಪಂಥದ ಆರಾಧ್ಯದೈವ. ವಿಶ್ವರಕ್ಷಕ, ವಿಶ್ವದ ಚೈತನ್ಯ ಹಾಗೂ ಸಕಲ ಜೀವರಾಶಿಗಳನ್ನು ತನ್ನ ಶಕ್ತಿಯಿಂದ ನಿಯಂತ್ರಿಸುವವ ಎಂದು ಈತನನ್ನು ಪುರಾಣಗಳು ವರ್ಣಿಸುತ್ತವೆ. ವೈಕುಂಠ ಈತನ ವಾಸಸ್ಥಾನ. ಮಹಾಲಕ್ಷ್ಮಿ ಈತನ ಹೆಂಡತಿ. ಗಂಗಾದೇವಿ ಮತ್ತು ಸರಸ್ವತಿ ವಿಷ್ಣುವಿನ ಹೆಂಡತಿಯರೆಂದು ದೇವೀಭಾಗವತದಲ್ಲಿ ಹೇಳಿದೆ. ಭೂಲೋಕದಲ್ಲಿ ಪಾಪದ ಕೊಡ ತುಂಬಿದಾಗ ವಿಷ್ಣು ಅವತಾರಗಳನ್ನು ತಳೆದು ಪಾಪಕ್ಕೆ ಕಾರಣರಾದವರನ್ನು ಶಿಕ್ಷಿಸಿ, ಜನರನ್ನು ಸಂರಕ್ಷಿಸುವನೆಂಬ ನಂಬಿಕೆಯಿದೆ. ಕಷ್ಟದಲ್ಲಿರುವ ಭಕ್ತರನ್ನು ಕಾಪಾಡಿ ಮುಕ್ತಿ ನೀಡುವ ಈತ ಜನಸಾಮಾನ್ಯರಿಗೆ ಸ್ಪಂದಿಸುವ ದೇವನಾಗಿ ಕಂಡುಬರುತ್ತಾನೆ. ವಿಷ್ಣು ಅವತಾರಗಳನ್ನು ತಾಳಿದಾಗಲ್ಲೆಲ್ಲಾ ಲಕ್ಷ್ಮಿಯೂ ಅವತಾರಗಳನ್ನು ತಳೆದು ಈತನ ಪತ್ನಿಯಾಗಿ ಜನರನ್ನು ರಕ್ಷಿಸುವ ಕಾರ್ಯದಲ್ಲಿ ನೆರವಾಗುತ್ತಾ ಬರುವಳೆಂಬ ನಂಬಿಕೆಯಿದೆ.

ಈತನ ಜನನಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳಿವೆ. ಈತ ಕಶ್ಯಪ ಮತ್ತು ಅದಿತಿಯ ಹನ್ನೆರಡು ಮಕ್ಕಳಲ್ಲಿ ಒಬ್ಬ ಎಂಬುದಾಗಿ ವಿಷ್ಣು ಪುರಾಣದಲ್ಲಿದೆ. ಆದರೆ ಸೃಷ್ಟಿಯ ಆದಿಯಲ್ಲಿ ಶಿವನ ವಾಮಾಂಗದಿಂದ ಜನಿಸಿದ ಎಂಬ ಪುರಾಣವೂ ಇದೆ. ಮತ್ತೊಂದು ಪುರಾಣದ ಪ್ರಕಾರ ನೂರ ಇಪ್ಪತ್ತು ಬ್ರಹ್ಮವರ್ಷಗಳ ತನಕ ಬ್ರಹ್ಮಾಂಡ ಶೂನ್ಯವಾಗಿತ್ತು. ಅಂಥ ಅನಂತ ಮೌನದಲ್ಲಿ ವಿಷ್ಣು ನೀರಿನ ಮೇಲೆ ಆಲದ ಎಲೆಯ ಮೇಲೆ ಮಲಗಿರುವವನಂತೆ ಕಂಡುಬರುವನು, ಇದೇ ಯುಗದ ಆರಂಭವೆನ್ನಲಾಗಿದೆ. ನೀರಿನ ಮೇಲೆ ಮಲಗಿರುವುದರಿಂದ ನಾರಾಯಣ ಎಂಬ ಹೆಸರಾಗಿದೆ.

ವಿಷ್ಣು ಎಂದರೆ ಎಲ್ಲೆಲ್ಲೂ ವ್ಯಾಪಿಸಿಕೊಂಡಿರುವವನು ಎಂದರ್ಥ. ಈತನ ಹೊಕ್ಕಳಿನಲ್ಲಿ ಬೆಳೆದ ಕಮಲದ ದಂಟಿನಿಂದ ಬ್ರಹ್ಮ ಹುಟ್ಟಿದ. ಈತನ ಕುರಿತು ತಪಸ್ಸು ಮಾಡುತ್ತ ಸ್ತುತಿಸಿದ ಪ್ರಯುಕ್ತ ಬ್ರಹ್ಮನಿಗೆ ಸೃಷ್ಟಿಶಕ್ತಿಯನ್ನು ಅನುಗ್ರಹಿಸಿದ. ವಿಷ್ಣುವಿನ ಜೀವಿತಾವಧಿಯಲ್ಲಿ ಇಬ್ಬರು ಬ್ರಹ್ಮರು ಆಗಿಹೋಗುವರೆಂದು ಪುರಾಣಗಳು ತಿಳಿಸುತ್ತವೆ. ಬ್ರಹ್ಮನ ಎರಡು ಅವಧಿ ವಿಷ್ಣುವಿನ ಒಂದು ಅವಧಿಯಾಗುತ್ತದೆ.

ವೇದಕಾಲದ ಅನಂತರದಲ್ಲಿ ವಿಷ್ಣುವಿನೊಂದಿಗೆ ಅನೇಕ ದೇವತೆಗಳ ವಿಶೇಷಗಳು ಒಟ್ಟು ಗೂಡಿಕೊಂಡಿದ್ದು, ಅವುಗಳ ಗುಣಗಳು ವಿಷ್ಣು ವಿನೊಂದಿಗೆ ಲೀನವಾಗಿವೆ. ಹೀಗಾಗಿ ಈತನನ್ನು ಸ್ವಯಂಭು-ತಾನೇ ಹುಟ್ಟಿದವ; ಅನಂತ-ಕೊನೆಯಿಲ್ಲದವ; ಯಜ್ಞೇಶ್ವರ-ಯಜ್ಞಗಳ ಒಡೆಯ; ಹರಿ-ಆತ್ಮಗಳನ್ನು ವೈಕುಂಠಕ್ಕೆ ಕರೆದೊಯ್ಯುವವ; ಮುಕುಂದ-ಮುಕ್ತಿ ನೀಡುವವ; ಮಾಧವ-ಜೇನಿನಿಂದ ಕೂಡಿದವ; ಕೇಶವ-ಸೂರ್ಯರಶ್ಮಿ ಗಳನ್ನು ಕೂದಲನ್ನಾಗಿ ಪಡೆದವ-ಹೀಗೆ ವಿವಿಧ ಶಕ್ತಿಗಳ ಸಂಯೋಗದ ರೂಪು ವಿಷ್ಣುವೆಂದು ವರ್ಣನೆಗಳಲ್ಲಿ ಕಂಡುಬರುತ್ತದೆ.

ಪ್ರಪಂಚದಲ್ಲಿ ಅನ್ಯಾಯ ಅಕ್ರಮಗಳು ಹೆಚ್ಚಾದಾಗ ಈತ ಅನೇಕ ಅವತಾರಗಳನ್ನೆತ್ತಿ ಅನ್ಯಾಯವನ್ನು ಹೊರದೂಡಿ ನ್ಯಾಯ ಸ್ಥಾಪಿಸುವವ. ಈತ ದಶಾವತಾರಗಳನ್ನು ತಳೆದದ್ದು ದುಷ್ಟರನ್ನು ಶಿಕ್ಷಿಸಲು-ಎಂದು ವಿಷ್ಣುಪುರಾಣ ತಿಳಿಸುತ್ತದೆ.

(ನೋಡಿ- ದಶಾವತಾರಗಳು) 

ವಿಷ್ಣು ಜನರನ್ನು ರಕ್ಷಿಸುವ ದೇವನಾದರೂ ಕೆಲವು ಶಾಪಗಳಿಗೆ ಒಳಗಾಗಿರುವುದನ್ನು ಪುರಾಣಗಳು ತಿಳಿಸುತ್ತವೆ. ಒಮ್ಮೆ ವಿಷ್ಣು ಮಹಾಲಕ್ಷ್ಮಿಯ ಮುಖವನ್ನು ನೋಡುತ್ತಾ ಕಾರಣವಿಲ್ಲದೆ ನಗಲಾರಂಭಿಸಿದ. ಇದನ್ನು ಕಂಡು ಲಕ್ಷ್ಮಿ ತನ್ನ ಬಗ್ಗೆತಮಾಷೆ ಮಾಡುತ್ತಿರುವನೆಂದು ಬಗೆದು ನಿನ್ನ ದೇಹದಿಂದ ತಲೆ ಬೇರ್ಪಡಲಿ ಎಂದು ಶಪಿಸಿದಳು. ಇದೇ ಸಂದರ್ಭದಲ್ಲಿ ಹಯಗ್ರೀವ ಎಂಬ ಅಸುರ ಒಂದು ಸಾವಿರ ವರ್ಷಕಾಲ ತಪಸ್ಸು ಮಾಡಿ ಅನೇಕ ವರಗಳ ಜೊತೆಗೆ ಕುದುರೆ ತಲೆಯುಳ್ಳ ಮಾನವನಿಂದ ಮಾತ್ರ ಸಾವೆಂದು ಮತ್ತೊಂದು ವರವನ್ನು ಪಡೆದುಕೊಂಡಿದ್ದ. ಹೀಗೆ ಅದ್ಭುತ ಶಕ್ತಿಯನ್ನು ಪಡೆದ ಹಯಗ್ರೀವ ದೇವಲೋಕಕ್ಕೆ ಮುತ್ತಿಗೆ ಹಾಕಿದ. ಲಕ್ಷ್ಮಿಯ ಶಾಪದಂತೆ ವಿಷ್ಣು ತನ್ನ ತಲೆಯನ್ನು ಕಳೆದುಕೊಂಡ. ಆಗ ವಿಶ್ವಕರ್ಮ ಕುದುರೆ ತಲೆಯನ್ನು ವಿಷ್ಣುವಿನ ದೇಹಕ್ಕೆ ಜೋಡಿಸಿದ. ಲಕ್ಷ್ಮಿಯ ಶಾಪದಿಂದ ವಿಷ್ಣು ಹಯಗ್ರೀವ ಅಸುರನನ್ನು ಕೊಲ್ಲಲು ಸಾಧ್ಯವಾಯಿತು.

ದೇವಾಸುರರ ನಡುವೆ ಆಗಾಗ ನಡೆಯುತ್ತಿದ್ದ ಯುದ್ಧಗಳಲ್ಲಿ ಒಮ್ಮೆ ಅಸುರರಿಗೆ ಸೋಲುಂಟಾಯಿತು. ಆಗ ಅಸುರರು ಭೃಗುಮುನಿಯ ಹೆಂಡತಿಯಾದ ಪ್ರಲೋಮಳ ಬಳಿಗೆ ಹೋಗಿ ರಕ್ಷಣೆ ಬೇಡಿದರು. ಈಕೆ ದೇವತೆಗಳನ್ನು ನಾಶ ಮಾಡಲು ತಪಸ್ಸನ್ನಾರಂಭಿಸಿದಳು. ಇದನ್ನು ತಿಳಿದ ವಿಷ್ಣು ತನ್ನ ಸುದರ್ಶನ ಚಕ್ರವನ್ನು ಪ್ರಯೋಗಿಸಿ ಆಕೆಯನ್ನು ಕೊಂದ. ಇದರಿಂದ ಭೃಗು ಮುನಿ ಕೋಪಗೊಂಡು, ಮಾನವ ಜನ್ಮಪಡೆದು ಹೆಂಡತಿಯನ್ನು ಅಗಲಿ ವಿರಹ ವೇದನೆಯನ್ನು ಅನುಭವಿಸೆಂದು ವಿಷ್ಣುವಿಗೆ ಶಾಪ ನೀಡಿದ. ಈ ಶಾಪವೇ ರಾಮಾವತಾರಕ್ಕೆ ಕಾರಣ. ಹೀಗೆ ವಿಷ್ಣು ಹಲವು ಶಾಪಗಳನ್ನು ಪಡೆದು ದೇವತೆಗಳ ರಕ್ಷಣೆಗೆ ಕಾರಣನಾದ ಕಥೆಗಳು ಹಲವಾರಿವೆ.

ವಿಷ್ಣುವಿನ ಆಯುಧ ಸುದರ್ಶನ ಚಕ್ರ. ಇದರ ಉಗಮದ ಬಗ್ಗೆ ಎರಡು ರೀತಿಯ ಕಥೆಗಳಿವೆ. ಕಾರ್ತೀಕ ಶುಕ್ಲ ಚರ್ತುದಶಿಯ ದಿನ ವಿಷ್ಣು ಕಾಶೀಕ್ಷೇತ್ರವನ್ನು ಸೇರಿ, ಸಾವಿರ ಕಮಲಗಳಿಂದ ಶಿವನನ್ನು ಪೂಜಿಸುತ್ತಿರು ವಾಗ, ಶಿವ ಆ ಕಮಲಗಳಲ್ಲಿ ಒಂದನ್ನು ಅದೃಶ್ಯಮಾಡಿದ. ವಿಷ್ಣುಕಡಿಮೆ ಯಾದ ಕಮಲ ಪುಷ್ಪದ ಬದಲಿಗೆ ತನ್ನ ಕಣ್ಣಿನಿಂದಲೇ ಶಿವನನ್ನು ಪೂಜಿಸಲು, ಶಿವ ಒಲಿದು, ತಾನು ಜಲಂಧರನೆಂಬ ದೈತ್ಯನನ್ನು ಕೊಂದ ಆಯುಧವನ್ನು ವಿಷ್ಣುವಿಗೆ ನೀಡಿದ. ಮತ್ತೊಂದು ಕಥೆಯ ಪ್ರಕಾರ ದೇವಬಡಗಿ ಸಾಣೆ ಹಿಡಿಯುವಾಗ ಬಿದ್ದ ಚಿಕ್ಕ ಚಿಕ್ಕ ಚೂರುಗಳನ್ನು ಸೇರಿಸಿ ಸುದರ್ಶನ ಚಕ್ರ ರಚಿಸಿ, ಅದನ್ನು ದ್ವಾದಶಾದಿತ್ಯರಲ್ಲಿ ಒಬ್ಬನಾದ ವಿಷ್ಣುವಿಗೆ ನೀಡಿದ. ವಿಷ್ಣು ಇದನ್ನು ದುಷ್ಟರನ್ನು ಶಿಕ್ಷಿಸಲು ಬಳಸಿದ. ಸುದರ್ಶನ ಚಕ್ರಕ್ಕೆ ವಜ್ರನಾಭ ಎಂಬ ಇನ್ನೊಂದು ಹೆಸರಿದೆ. ಈ ಚಕ್ರಕ್ಕೆ ಮಧ್ಯೆ ರಂಧ್ರವಿದ್ದು ಇದರ ಮಧ್ಯದಿಂದ ಸಾವಿರ ತೋಳುಗಳು ಹರಡಿಕೊಂಡಿವೆ. ಇದರ ಹೊರಭಾಗ ಚೂಪಾಗಿದೆ.

ವಿಷ್ಣುವಿನ ಎದೆಯ ಮೇಲಿರುವ ಚಿಹ್ನೆಗೆ ಶ್ರೀವತ್ಸ ಎಂದು ಹೆಸರಿದೆ. ಈತನ ಬಳಿ ಇರುವ ಶಂಖದ ಹೆಸರು ಪಾಂಚಜನ್ಯ. ಇದನ್ನು ಸ್ಪರ್ಶಿಸುವ ಮೂಲಕವೇ ಅಪಾರ ಬುದ್ಧಿವಂತಿಕೆ ದೊರೆಯುವುದೆಂಬ ನಂಬಿಕೆ ಇದೆ. ಸಾರಂಗ ಈತನ ಧನುಸ್ಸು. ಇದಕ್ಕೆ ವೈಷ್ಣವ ಚಾಪ ಎಂಬ ಹೆಸರೂ ಇದೆ. ವೈಜಯಂತಿ ಈತನ ಕಂಠಾಭರಣ. ಐದು ಆಭರಣಗಳನ್ನು ಒಟ್ಟುಗೂಡಿಸಿ ಮಾಡಿರುವ ಈ ಹಾರಕ್ಕೆ ವನಮಾಲಾ ಎಂಬ ಹೆಸರಿದೆ. ವಿಷ್ಣುವಿನ ವಾಹನ ಗರುಡ.

ಋಗ್ವೇದದಲ್ಲಿ ವಿಷ್ಣುವಿನ ಪ್ರಸ್ತಾಪ ಕೆಲವು ಕಡೆಯಲ್ಲಿದೆ. ಆದರೆ ಇಲ್ಲಿ ಇಂದ್ರನಿಗೆ ಹೆಚ್ಚಿನ ಪ್ರಾಮುಖ್ಯವಿರುವುದು ಕಂಡುಬರುತ್ತದೆ. ಇಲ್ಲಿ ವಿಷ್ಣು ಇಂದ್ರನ ಕಿರಿಯ ಸೋದರ ಸ್ಥಾನ ಪಡೆದಿದ್ದಾನೆ. ಹೀಗಾಗಿ ವಿಷ್ಣು ಸಹಸ್ರನಾಮಗಳಲ್ಲಿ ಉಪೇಂದ್ರ, ಇಂದ್ರಾವರಜ ಮುಂತಾದ ಹೆಸರುಗಳು ಸೇರಿವೆ. ಮಹಾಭಾರತದಲ್ಲಿ ಭೀಷ್ಮ ವಿಷ್ಣುಶಕ್ತಿಯ ವಿವರ ನೀಡುತ್ತಾನೆ.

  *