ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವೀಣೆ ವೆಂಕಟಸುಬ್ಬಯ್ಯ
ವೀಣೆ ವೆಂಕಟಸುಬ್ಬಯ್ಯ 1899-1961. ಖ್ಯಾತ ವೈಣಿಕರು. ಆಸ್ಥಾನವಿದ್ವಾಂಸರಾಗಿದ್ದು ಪ್ರಸಿದ್ಧ ವೈಣಿಕರಾಗಿದ್ದ ವೀಣೆ ಶಾಮಣ್ಣನವರ ಮೊಮ್ಮಕ್ಕಳಾದ ಇವರು ಈ ಪೀಳಿಗೆಯ ಸಂಗೀತಗಾರರಲ್ಲಿ ಕೊನೆಯ ವರು. ಜನಿಸಿದ್ದು ಮೈಸೂರಿನಲ್ಲಿ. ವೀಣಾ ವಿದ್ವಾನ್ ರಾಮಣ್ಣ ಇವರ ತಂದೆ. ವೀಣೆ ಶಿಕ್ಷಣವನ್ನು ತಮ್ಮ ತಾತ ಶಾಮಣ್ಣ, ಚಿಕ್ಕಪ್ಪ ಸುಬ್ರಹ್ಮಣ್ಯ ಅಯ್ಯರ್ ಹಾಗೂ ವೀಣೆ ಶೇಷಣ್ಣನವರ ಬಳಿ ಪಡೆದರು. ಜ್ಯೋತಿಷಶಾಸ್ತ್ರದಲ್ಲೂ ಸಾಕಷ್ಟು ಪ್ರೌಢಿಮೆ ಗಳಿಸಿಕೊಂಡರು. ತಮ್ಮ ವಿದ್ಯಾಪ್ರೌಢಿಮೆಯಿಂದ ರಾಜಮನೆತನದವರ ಮೆಚ್ಚುಗೆಗೆ ಪಾತ್ರರಾಗಿ ಆಸ್ಥಾನವಿದ್ವಾಂಸರಾದರು. ಅನಂತರ ಮೈಸೂರಿನ ಕುರುಡರ, ಮೂಗರ ಶಾಲೆಯಲ್ಲಿ ಫಿಡಲ್ ಉಪಾಧ್ಯಾಯರಾಗಿಯೂ ಕೆಲವು ವರ್ಷಗಳ ಕಾಲ ತುಮಕೂರಿನ ಎಂಪ್ರೆಸ್ ಬಾಲಕಿಯರ ಪ್ರೌಢಶಾಲೆಯಲ್ಲೂ ಅನಂತರ ಮೈಸೂರು ಮಹಾರಾಣಿ ಟ್ರೈನಿಂಗ್ ಕಾಲೇಜು ಮತ್ತು ಮಹಾರಾಣಿ ಪ್ರೌಢಶಾಲೆಯಲ್ಲೂ ಸಂಗೀತ ಮತ್ತು ವೀಣಾ ಉಪಾಧ್ಯಾಯರಾಗಿ ಹಲವು ವರ್ಷಗಳ ಕಾಲ ಸೇವೆಸಲ್ಲಿಸಿದರು. ಸರಳಜೀವಿಗಳೂ ಉದಾರಸ್ವಭಾವದ ವರೂ ಆಗಿದ್ದ ಇವರು 1961ರಲ್ಲಿ ನಿಧನರಾದರು. (ಎ.ಆರ್.ಕೆ.)
*