ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವುಲ್ಫ್ರಮೈಟ್

ವಿಕಿಸೋರ್ಸ್ದಿಂದ

ವುಲ್ಫ್ರಮೈಟ್ ಒಂದೇ ದಿಕ್ಕಿನಲ್ಲಿ ಬಾಗಿರುವ, ಅಶ್ರಗರೂಪದ, ಎಸಳುಗಳ ಆಕಾರದ ಹರಳಿನಂತಿದ್ದು, ಕೆಲವು ವೇಳೆ ವಿಶಾಲವಾಗಿಯೂ ಗಟ್ಟಿಯಾಗಿಯೂ ಇರುವ, ಕಂದು ಇಲ್ಲವೆ ಬೂದು ಬಣ್ಣದ ಅದುರು. ಕಾಠಿಣ್ಯಾಂಕ 5-5.5; ಸಾಪೇಕ್ಷ ಸಾಂದ್ರತೆ 7-7.5. ಸರಿಸುಮಾರು ಲೋಹ ದಂತೆಯೇ ಹೊಳಪುಳ್ಳದ್ದು; ಅಪಾರದರ್ಶಕ. ಕೆಲವು ಸಂದರ್ಭಗಳಲ್ಲಿ ಕಾಂತತ್ವ ಗುಣಗಳನ್ನು ಪ್ರದರ್ಶಿಸುವುದೂ ಉಂಟು. ಟೂಬ್ಯಾಕೊ ಜ್ಯಾಕ್, ವುಲ್ಫ್ರ್ಯಾಮ್, ವುಲ್ಫ್ರಮೈನ್ ಎಂಬ ಹೆಸರುಗಳೂ ಇವೆ. ತೋಳ ಕುರಿಯನ್ನು ಕಬಳಿಸುವ ತೆರನಂತೆ ಇದು ತವರವನ್ನು ತಿನ್ನುವುದರಿಂದ, ಸಮರ್ಥ ಸೇನಾಪತಿಯೂ ದಕ್ಷ ಆಡಳಿತಗಾರನೂ ಆಗಿದ್ದ ಅಗ್ರಿಕೋಲ (ಕ್ರಿ.ಪೂ. ಸು. 37-ಕ್ರಿ.ಶ. 93) ಇದನ್ನು ಲೂಪಿ ಸ್ಪೂಮ (ಅಂದರೆ ವುಲ್ಫ್ರ್ಯಾಮ್) ಎಂದು ತನ್ನ ಗ್ರಂಥದಲ್ಲಿ ಪ್ರಸ್ತಾವಿಸಿದ್ದ (1546). ಇದು ತವರದ ಸಂಯುಕ್ತವೆಂದೇ 1750ರ ತನಕವೂ ತಿಳಿಯಲಾಗಿತ್ತು. ಸ್ವೀಡನ್ನಿನ ರಸಾಯನವಿಜ್ಞಾನಿ ಕಾರ್ಲ್ ವಿಲ್‍ಹೆಲ್ಮ್ ಷೀಲೆ (1742-86) ಷೀಲೈಟನ್ನು ಪರೀಕ್ಷಿಸಿ (1781) ವುಲ್ಫ್ರಮೈಟ್ ಎಂಬುದು ಬೇರೆ ಅದುರು ಎಂಬುದಾಗಿ ತಿಳಿಸಿದ. ಟಂಗ್‍ಸ್ಟನ್ ಲೋಹದ ಮುಖ್ಯ ಅದುರಾದ ಇದು ಕಬ್ಬಿಣ ಟಂಗ್‍ಸ್ಟೇಟ್ ಈeWಔ4 ಮತ್ತು ಮ್ಯಾಂಗನೀಸ್ ಟಂಗ್‍ಸ್ಟೇಟ್ ಒಟಿWಔ4ಗಳ ಸಮಾನಾಕೃತಿಯ ಮಿಶ್ರಣ. ಶುದ್ಧ ಕಬ್ಬಿಣ ಟಂಗ್‍ಸ್ಟೇಟನ್ನು ಫರ್ಬರೈಟ್ ಎಂದೂ ಮ್ಯಾಂಗನೀಸ್ ಟಂಗ್‍ಸ್ಟೇಟನ್ನು ಹ್ಯೂಬ್ನರ್ನೈಟ್ ಎಂದೂ ಕರೆಯುತ್ತಾರೆ. 80% ಭಾಗಕ್ಕಿಂತಲೂ ಕಡಿಮೆ ಇಲ್ಲದ 20% ಭಾಗಕ್ಕಿಂತಲೂ ಹೆಚ್ಚಿರದ ಒಟಿWಔ4ಅದುರಿಗೆ ಹ್ಯೂಬ್ನರ್ನೈಟ್ ಎಂದು ಹೆಸರಿಸಿರುವುದು ಯುಕ್ತ ಎಂದು ವಿಜ್ಞಾನಿಗಳ ಭಾವನೆ. ಕಬ್ಬಿಣ ಮತ್ತು ಮ್ಯಾಂಗನೀಸ್ ಪರಮಾಣುತೂಕಗಳು ಹೆಚ್ಚು ಕಡಿಮೆ ಒಂದೇ ಆಗಿರುವುದರಿಂದ ಅದುರುಗಳಲ್ಲಿ ಟಂಗ್‍ಸ್ಟನ್ ಟ್ರೈಆಕ್ಸೈಡಿನ (Wಔ3) ಸೇಕಡಾ ಭಾಗದಲ್ಲಿ ಹೆಚ್ಚು ವ್ಯತ್ಯಾಸವಿಲ್ಲ (76%). ಇರುವ ವ್ಯತ್ಯಾಸ ಕೂಡ ವಾಣಿಜ್ಯ ದೃಷ್ಟಿಯಿಂದ ಅಷ್ಟೇನೂ ಮಹತ್ತ್ವದ್ದಲ್ಲ. ಈ ಕಾರಣದಿಂದ ವುಲ್ಫ್ರಮೈಟನ್ನು ಕಬ್ಬಿಣ, ಮ್ಯಾಂಗನೀಸ್‍ಗಳ ನಡುವೆ ಬರುವ ಸಂಮಿಶ್ರಣ ಎಂದು ಭಾವಿಸಲಾಗಿದೆ. ಅಣುಸೂತ್ರ (ಈe,ಒಟಿ)Wಔ4.

ವುಲ್ಫ್ರಮೈಟ್ ಸಾಮಾನ್ಯವಾಗಿ ತವರಲೋಹದ ಅದುರುರೇಖೆಗಳಲ್ಲೂ ಎಳೆಯಿರುವ ಅದುರು ಕಲ್ಲುಗಳಲ್ಲೂ ಬೆಣಚುಕಲ್ಲುಗಳಿರುವ ನಿಕ್ಷೇಪಗಳ ಸುತ್ತುಮುತ್ತಲ ಪ್ರದೇಶಗಳಲ್ಲೂ ಪ್ರಸರಿಸಿರುತ್ತದೆ. ಕಾರ್ನಿವಾಲ್, ವಾಯವ್ಯ ಸ್ಪೇನ್, ಉತ್ತರ ಪೋರ್ಚುಗಲ್, ಸ್ಯಾಕ್ಸೋನಿ, ದಕ್ಷಿಣ ಬರ್ಮ, ಮಲಯ ಪರ್ಯಾಯದ್ವೀಪ ಮತ್ತು ಆಸ್ಟ್ರೇಲಿಯದ ಕ್ವೀನ್ಸ್‍ಲೆಂಡ್ ಹಾಗೂ ಟಾಸ್ಮೇನಿಯಗಳಲ್ಲಿ ಈ ತೆರನ ನಿಕ್ಷೇಪಗಳಿವೆ. ಸಲ್ಫೈಡ್ ಅದುರುಗಳಾದ ಪಿರೈಟ್, ಚಾಲ್ಕೊಪಿರೈಟ್, ಆರ್ಸಿನೋಪಿರೈಟ್, ಬಿಸ್ಮತ್‍ನೈಟ್, ಕ್ಯಾಸ್ಸಿಟರೈಟ್, ಮಾಲಿಬ್ಡನೈಟ್ ಮತ್ತು ಹೆಮಟೈಟ್, ಮ್ಯಾಗ್ನಟೈಟ್, ಟಾವ್ರಮಲಿನ್ ಮತ್ತು ಅಪಟೈಟ್‍ಗಳೊಡಗೂಡಿ ಸಿರಗಳ ರೂಪದಲ್ಲಿ ಇರುತ್ತದೆ. ಮೆಕ್ಕಲು (ಪ್ಲೇಸರ್) ನಿಕ್ಷೇಪಗಳಲ್ಲೂ ದೊರೆಯುವುದುಂಟು. ಷೀಲೈಟ್‍ನಲ್ಲೂ ಇದು ಲಭ್ಯ. ವುಲ್ಫ್ರಮೈಟನ್ನು ಹೋಲುವ ಫರ್ಬರೈಟ್ ಅದುರು ಸ್ಪೇನ್ ಮತ್ತು ಕಾಲರಾಡೋದ ಬಾಲ್ಡರ್ ಪ್ರದೇಶದಲ್ಲಿಯೂ ಹಿಬ್ನರೈಟ್ ಅದುರು ನಿಕ್ಷೇಪಗಳು ಪೆರು, ಕಪ್ಪುಬೆಟ್ಟಗಳು, ದಕ್ಷಿಣ ಡಕೋಟ, ಕಾಲರಾಡೋ, ನೆವಾಡ ಮತ್ತು ಲೆಮ್ಹಿ ಪ್ರದೇಶ, ಇಡಾಹೋ ರಾಜ್ಯಗಳಲ್ಲಿಯೂ ಇವೆ. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ವುಲ್ಫ್ರಮೈಟಿನ ಪ್ರಮುಖ ಉತ್ಪಾದನಾ ಕೇಂದ್ರ ಕಾಲರಾಡೋವಿನ ಬಾಲ್ಡರ್ ಪ್ರದೇಶದಲ್ಲಿದೆ. ವುಲ್ಫ್ರಮೈಟ್‍ನ ಉತ್ಪಾದನೆಯಲ್ಲಿ ಚೀನ ಪ್ರಪಂಚದಲ್ಲೇ ಪ್ರಥಮಸ್ಥಾನ ಪಡೆದಿದೆ. ಭಾರತದ ನಾಗಪುರದ ಬಳಿ ಆರ್ಗಾಗಾಮ್, ದೇಗನಾ, ಮರಾಠವಾಡ, ಬಂಗಾಲದ ಹeóÁರಿಬಾಗ್ ಪ್ರದೇಶಗಳಲ್ಲಿ ವುಲ್ಫ್ರಮೈಟ್ ನಿಕ್ಷೇಪಗಳಿವೆ.

ವುಲ್ಫ್ರಮೈಟನ್ನು ಆಮ್ಲಗಳಲ್ಲಿ ವಿಲೀನಿಸುವುದು ಕಷ್ಟಸಾಧ್ಯ. ಅಧಿಕ ಪ್ರಮಾಣದಲ್ಲಿ ಕಬ್ಬಿಣವಿರುವ ವುಲ್ಫ್ರಮೈಟ್ ಸುಲಭವಾಗಿ ವಿಲೀನಗೊಂಡು ಕಾಂತತ್ವ ಪಡೆದು ಪದರ ರೂಪುಗೊಳ್ಳುತ್ತದೆ. ಅದುರಿನ ಪುಡಿಯನ್ನು ಇದ್ದಲು ಮತ್ತು ಸೋಡಿಯಮ್ ಕಾರ್ಬೊನೇಟುಗಳೊಡನೆ ವಿಲೀನಿಸಿ ಅನಂತರ ಲಭ್ಯವಾಗುವ ಶೇಷವಸ್ತುವನ್ನು ಹೈಡ್ರೊಕ್ಲೋರಿಕ್ ಆಮ್ಲ ಮತ್ತು ತವರದ ಚೂರುಗಳೊಡನೆ ಕಾಸಿದರೆ ಪ್ರಷ್ಯನ್ ನೀಲಿಬಣ್ಣ ಬರುತ್ತದೆ. ಇದರಿಂದ ವುಲ್ಫ್ರಮೈಟಿನಲ್ಲಿ ಟಂಗ್‍ಸ್ಟನ್ನಿನ ಇರವನ್ನು ಪತ್ತೆಮಾಡಬಹುದು. ವುಲ್ಫ್ರಮೈಟನ್ನು ವಿಶೇಷವಾಗಿ ಟಂಗ್‍ಸ್ಟನ್‍ಲೋಹ, ಉಕ್ಕುಗಳು ಮತ್ತು ಕಬ್ಬಿಣರಹಿತ ಲೋಹಮಿಶ್ರಣಗಳು, ಟಂಗ್‍ಸ್ಟನ್ ಕಾರ್ಬೈಡ್ ಮತ್ತು ಟಂಗ್‍ಸ್ಟನ್ ರಾಸಾಯನಿಕಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. (ಪಿ.ಜಿ.ಆರ್.)

  *