ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವೆಂಕಟಪ್ಪನಾಯಕ 2
ವೆಂಕಟಪ್ಪನಾಯಕ 2
ಕೆಳದಿ ರಾಜಮನೆತನದ ಅರಸು (ಸು. 1582-1629). ಇವನನ್ನು ಹಿರಿಯ ವೆಂಕಟಪ್ಪನಾಯಕ ಎಂದೂ ಕರೆಯುವುದುಂಟು. ಅಣ್ಣನಾದ ರಾಮರಾಜಯ್ಯನ ಅನಂತರ ಪಟ್ಟಕ್ಕೆ ಬಂದ ಈತ ವಿಜಯನಗರ ಸಾಮಂತತ್ವವನ್ನು ಕೇಳದೆ, ಪೂರ್ಣವಾಗಿ ಸ್ವತಂತ್ರನಾಗಿ ಆಳಲಾರಂಭಿಸಿದನಲ್ಲದೆ, ತನ್ನ ರಾಜ್ಯವನ್ನು ಎಲ್ಲ ಕಡೆಗಳಿಗೂ ವಿಸ್ತರಿಸಿದ. ಕೆಳದಿಯ ಪ್ರಭಾವವನ್ನು ಮುರಿಯಲು ಬಂದ ಬಿಜಾಪುರದ ದಂಡನಾಯಕ ಮಂಜೂಲಷಾನನ್ನು ಇವನು ಹಿಮ್ಮೆಟ್ಟಿಸಿದನಲ್ಲದೆ, ಇನ್ನೊಮ್ಮೆ ದಂಡೆತ್ತಿ ಬಂದಿದ್ದ ಬಿಜಾಪುರದ ಸೇನಾನಿ ಷೇರ್‍ವುಲ್ ಮುಲ್ಕ್‍ನನ್ನು ಸೋಲಿಸಿದ. ಆದಿಲ್‍ಷಾನ ಸಾಮಂತತ್ವವನ್ನು ಒಪ್ಪಿದ್ದ ಮೆಣಸಿನ ರಾಣಿ ಎನಿಸಿದ್ದ ಗೇರುಸೊಪ್ಪೆಯ ಭೈರಾದೇವಿಯನ್ನೂ ಸೋಲಿಸಿ ಸೆರೆಹಿಡಿದ. ಪಶ್ಚಿಮ ಕರಾವಳಿಯಲ್ಲಿ ಹಲಕೆಲವು ಸಣ್ಣಪುಟ್ಟ ಪಾಳೆಯಗಾರರು ಇವನ ಅಧೀನರಾದರು. ಇವನ ರಾಜ್ಯ ಮಲಬಾರಿನ ಗಡಿಯವರೆಗೂ ಹಬ್ಬಿತ್ತು. ಇವನ ಕಾಲದಲ್ಲಿ 1623ರಲ್ಲಿ ಇಕ್ಕೇರಿಗೆ ಭೇಟಿ ಕೊಟ್ಟಿದ್ದ ಇಟಲಿಯ ಪೀಟರ್ ಡೆಲ್ಲಾವೆಲ್ಲೊ ಎಂಬುವವನು ರಾಜಕುಮಾರ ವೆಂಕಟಪ್ಪನಾಯಕ ವಿದ್ಯಾನಗರ ಮಹಾರಾಜನ ಮಂತ್ರಿಗಳ ಕೈಕೆಳಗಿನವನಾಗಿ ಕೆಲ ಸಮಯವಿದ್ದ. ಆದರೆ ಮಹಾರಾಜನ ಪತನಾನಂತರ ಸ್ವತಂತ್ರ ಸಾರ್ವಭೌಮನಾದ. ಅವನು ಸ್ವತಃ ಒಳ್ಳೆಯ ಸೈನಿಕನಾದುದರಿಂದ ಆ ರಾಜ್ಯವನ್ನು ಮತ್ತಷ್ಟು ವಿಸ್ತರಿಸಿದ ಎಂದು ಬರೆದಿದ್ದಾನೆ. ತಮ್ಮ ಪ್ರಭಾವವನ್ನು ಪಶ್ಚಿಮ ಕರಾವಳಿ ಪ್ರದೇಶದಲ್ಲಿ ವಿಸ್ತರಿಸಲು ಯತ್ನಿಸುತ್ತಿದ್ದ ಪೋರ್ಚುಗೀಸರನ್ನು ವೆಂಕಟಪ್ಪನಾಯಕ ಎದುರಿಸಿದ್ದರಿಂದ ಅವರು ಈ ಪ್ರದೇಶದಲ್ಲಿ ತಮ್ಮ ಪ್ರಭಾವ ಮತ್ತು ಗೌರವಗಳನ್ನು ಕಳೆದುಕೊಂಡರು. ಅವರ ವ್ಯಾಪಾರಕ್ಕೆ ಧಕ್ಕೆ ಬಂದಿತು. ಪಶ್ಚಿಮ ತೀರದ ಅವರ ಅಕ್ಕಿ ಮತ್ತು ಮೆಣಸಿನ ವ್ಯಾಪಾರ ಪೂರ್ತಿಯಾಗಿ ವೆಂಕಟಪ್ಪನಾಯಕನ ವಶವಾಯಿತು. ವೆಂಕಟಪ್ಪನಾಯಕನ ಈ ಧೋರಣೆಯಿಂದ ಮುಂದಿನ ರಾಜರಿಗೆ ಸಹಾಯವಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮಗೊಂಡಿತು. ಮುಂದೆ ಸಂಧಾನಕ್ಕಾಗಿ ಪೋರ್ಚುಗೀಸರು ಇವನ ಆಸ್ಥಾನಕ್ಕೆ ರಾಯಭಾರಿ ಗಳನ್ನು ಕಳುಹಿಸಿ ಸ್ನೇಹ ಸಂಪಾದಿಸಲು ಯತ್ನಿಸಿದರು.
ವೆಂಕಟಪ್ಪ ತನ್ನ ಆಳಿಕೆಯ ಕಾಲದಲ್ಲಿ ಹನುಮನಾಯಕನನ್ನು ಸೋಲಿಸಿ ಶಿವಮೊಗ್ಗ, ಗಾಜನೂರು ಮತ್ತು ಲಕ್ಕವಳ್ಳಿ ಪ್ರದೇಶಗಳನ್ನು ಆಕ್ರಮಿಸಿದನಲ್ಲದೆ, ದಾನಿವಾಸ, ಕುಂಬೇಸಿ, ಯುಳವಂದೂರು, ಹೆಬ್ಬೆ, ಮಂಡಗದ್ದೆ, ಕರಬೂರು, ಸಾಲನಾಡು ಮುಂತಾದೆಡೆಗಳ ಶತ್ರುಪಾಳೆಯ ಗಾರರನ್ನು ಸೋಲಿಸಿ ತನ್ನ ರಾಜ್ಯದ ರಕ್ಷಣೆಗೆ ಹೆಬ್ಬೆ, ಸಾಗರ, ಕೊಂಡೂರು, ಮಲಕಾಡು, ಹೊಳೆಬೈಲೂರು, ಬಾರಕೂರು, ನಗರಿ ಮತ್ತು ಪರಿಯಾಳಗಳಲ್ಲಿ ಕೋಟೆಗಳನ್ನು ಕಟ್ಟಿಸಿದ. ಈತ ಹೊಸಂಗಡಿ, ಹೊನ್ನಕಂಬಳಿ, ಕೆದರಿ, ಬಗ್ಗವಾಡಿ, ಕಲ್ಲೂರು-ಇಲ್ಲಿಯ ಪಾಳೆಯಗಾರರನ್ನು ಸೋಲಿಸಿ ಕೊಂಡೂರು ಕೋಟೆ, ಕಲಿದುರ್ಗ ಮುಂತಾದ ಕೋಟೆಗಳನ್ನು ವಶಪಡಿಸಿಕೊಂಡ.
ಇವನು ಮೆಣಸಿನ ವ್ಯಾಪಾರದಲ್ಲಿ ಲಾಭಪಡೆಯಲು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಜೊತೆಯಲ್ಲೂ ಸಂಧಾನ ನಡೆಸಿದ್ದ. ವೆಂಕಟಪ್ಪ ನಾಯಕ ಧರ್ಮ ಮತ್ತು ಪ್ರಜಾಕ್ಷೇಮದಲ್ಲಿ ಹೆಚ್ಚು ಆಸಕ್ತಿ ತೋರಿಸಿದ. ಹಲವಾರು ಹೊಸ ಅಗ್ರಹಾರಗಳನ್ನು ಸ್ಥಾಪಿಸಿದ. ಇಕ್ಕೇರಿಯ ಶಿಖರೇಶ್ವರ, ವಿಶ್ವೇಶ್ವರ, ಲಕ್ಷ್ಮೀನಾರಾಯಣ, ಮೈಲಾರ, ಬಾಣಾವರದ ಗಣಪತಿ ಮುಂತಾದ ದೇವಾಲಯಗಳನ್ನು ನಿರ್ಮಿಸಿ ಅವುಗಳಿಗೆ ದತ್ತಿದಾನಗಳನ್ನು ಒದಗಿಸಿದ. ಹಿಂದು ಪರಂಪರೆಗೆ ಅನುಗುಣವಾದ ಧಾರ್ಮಿಕ ಸಹಿಷ್ಣುತೆಯನ್ನು ಅನುಸರಿಸಿದ. ಭುವನಗಿರಿ ದುರ್ಗದಲ್ಲಿ ಇವನು ಮುಸಲ್ಮಾನರ ಮಸೀದಿಗೆ ದತ್ತಿ ಕೊಟ್ಟುದುದು ಇದಕ್ಕೊಂದು ಉದಾಹರಣೆ. ಶೃಂಗೇರಿಯ ಅಭಿವನ ನೃಸಿಂಹಭಾರತಿ ಸ್ವಾಮಿಗಳಿಗೆ ಅಲ್ಲಿ ಮಠವೊಂದನ್ನು ಕಟ್ಟಿಸಿಕೊಟ್ಟ. ಹಲವು ವೀರಶೈವ ಮಠಗಳಿಗೂ ದತ್ತಿಗಳನ್ನು ಬಿಟ್ಟ. ಇದಲ್ಲದೆ ಕಾವ್ಯ, ನಾಟಕ, ಧರ್ಮಶಾಸ್ತ್ರ ಮತ್ತು ಇತರ ವಿಷಯಗಳ ಸಾಹಿತ್ಯ ಕೃತಿಗಳ ರಚನೆಗೆ ಪ್ರೋತ್ಸಾಹ ಕೊಟ್ಟ. ತಿರುಮಲಭಟ್ಟನ ಕನ್ನಡ ಶಿವಗೀತಾ, ಸಂಸ್ಕøತದ ಶಿವಾಷ್ಟಪದಿ, ರಂಗನಾಥ ದೀಕ್ಷಿತನ ತಂತ್ರಸಾರದ ವ್ಯಾಖ್ಯೆ, ಅಶ್ವಪಂಡಿತನ ಮಾನಪ್ರಿಯ ಎಂಬ ಅಶ್ವಶಾಸ್ತ್ರ ಗ್ರಂಥ, ಭಟ್ಟೋಜ ದೀಕ್ಷಿತನ ತತ್ತ್ವಕೌಸ್ತುಭ ಮುಂತಾದ ಕೃತಿಗಳು ಇವನ ಕಾಲದಲ್ಲಿ ರಚನೆಗೊಂಡವು.
ವೆಂಕಟಪ್ಪನಾಯಕನಿಗೆ ಅಭಿನವ ವೀರಮಾಂಬ ಮತ್ತು ಭದ್ರಮ್ಮ ಎಂಬ ಹೆಂಡತಿಯರೂ ಹಿರಿಯಮ್ಮ ಮತ್ತು ಭದ್ರಪ್ಪ ಎಂಬ ಮಕ್ಕಳೂ ಇದ್ದರು. ಭದ್ರಪ್ಪ, ವೆಂಕಟಪ್ಪನಿಗಿಂತ ಮುಂಚೆಯೇ ನಿಧನನಾದ. ವೆಂಕಟಪ್ಪನ ದೀರ್ಘಕಾಲದ ಆಳಿಕೆ 1629ರಲ್ಲಿ ಕೊನೆಗೊಂಡಿತು. ಅನಂತರ ರಾಜ್ಯಾಡಳಿತದಲ್ಲಿ ಇವನ ಜೊತೆ ಸಹಕರಿಸುತ್ತಿದ್ದ ಇವನ ಮೊಮ್ಮಗ ವೀರಭದ್ರ ನಾಯಕ ಪಟ್ಟಕ್ಕೆ ಬಂದ.
*
(ಕೆ.ಎಸ್.ಎಸ್.)