ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವೆಲ್ಲೆಸ್ಲಿ
ವೆಲ್ಲೆಸ್ಲಿ ಭಾರತದ ಪ್ರಸಿದ್ಧ ಗವರ್ನರ್ ಜನರಲ್ (1798-1805). ಇವನ ಪೂರ್ಣ ಹೆಸರು ರಿಚರ್ಡ್ ಕೊಲ್ ವೆಲ್ಲೆಸ್ಲಿ. ಇವನು ಅರ್ಲ್ ಆಫ್ ಮಾರ್ನಿಂಗ್‍ಟನ್ ಖಜಾನೆ ಮುಖ್ಯಸ್ಥನಾಗಿ, ಬೋರ್ಡ್ ಆಫ್ ಕಂಟ್ರೋಲ್‍ನ ಕಮಿಷನರಾಗಿ ಕೆಲಸ ಮಾಡಿದ. ಇವನು ಗವರ್ನರ್ ಜನರಲ್ ಪದವಿಗೆ ಬಂದಾಗ ಇವನಿಗೆ ಕೇವಲ 37ವರ್ಷ. ಗ್ರೀಕ್, ಲ್ಯಾಟಿನ್ ಗ್ರಂಥಗಳನ್ನು ಓದಿದ ವಿದ್ವಾಂಸನೂ ಇಂಗ್ಲಿಷ್ ಭಾಷೆಯಲ್ಲಿ ಪಂಡಿತನೂ ಆಗಿದ್ದ. ಉತ್ಸಾಹಿ, ಮೃದು ಸ್ವಭಾವದವನು. ಪ್ರತಿಭಾಶಾಲಿ ಮತ್ತು ಧೀರೋದಾತ್ತ ವ್ಯಕ್ತಿ. ಕ್ಲೈವ್, ವಾರನ್ ಹೇಸ್ಟಿಂಗ್ಸ್ ಮತ್ತು ಡಾಲ್‍ಹೌಸಿ ಇವನಿಗೆ ಸರಿಸಮಾನರಾಗಿ ನಿಲ್ಲುವಂಥವರಾದರೂ ಸಾಧನೆಗ ಳಲ್ಲಿ ಇವನು ಅವರೆಲ್ಲರನ್ನೂ ಮೀರಿಸಿದವನು. ಭಾರತದಲ್ಲಿ ಬ್ರಿಟಿಷ್ ಪ್ರಭುತ್ವದ ಬೆಳೆವಣಿಗೆಯಲ್ಲಿ ಇವನ ಕಾಲವನ್ನು ಪರ್ವಕಾಲವೆಂದು ಪರಿಗಣಿಸಲಾಗಿದೆ. ಇವನು ಗವರ್ನರ್ ಜನರಲ್ ಆಗಿ ಭಾರತಕ್ಕೆ ಬಂದಾಗ ಭಾರತ ಮತ್ತು ಯುರೋಪಿನಲ್ಲಿ ರಾಜಕೀಯ ಬದಲಾವಣೆಗಳು ಕಂಡುಬಂದವು. ಕಂಪೆನಿಯ ತಾಟಸ್ಥ್ಯ ನೀತಿಯ ಸಮಯದಲ್ಲಿ ಇವನು ದಿಟ್ಟ ಹೆಜ್ಜೆಯನ್ನಿಟ್ಟು ಬ್ರಿಟಿಷ್ ರಾಜ್ಯವನ್ನು ಒಳಗಿನ ಮತ್ತು ಹೊರಗಿನ ಶತ್ರುಗಳಿಂದ ರಕ್ಷಿಸಿದ. ಭಾರತದಲ್ಲಿ ಬೆಳೆಯುತ್ತಿದ್ದ ಫ್ರೆಂಚ್ ವಿಪತ್ತಿನ ಹಾವಳಿಯನ್ನು ಗಮನಿಸಿದ್ದ. ಈತ ಅದನ್ನು ದಮನಗೊಳಿಸುವ ಗುರಿ ಹೊಂದಿ, ಅದರಲ್ಲಿ ಯಶಸ್ವಿಯಾದ. ಇವನು ತನ್ನ ಕಾರ್ಯನೀತಿಯನ್ನು ಕಾರ್ಯರೂಪಕ್ಕೆ ತರುವಲ್ಲಿ ಎರಡು ಮುಖ್ಯಮಾರ್ಗಗಳನ್ನು ಕಂಡುಕೊಂಡ. ಯುದ್ಧ ಮತ್ತು ಸಾಮೋಪಾಯ. ಸನ್ನಿವೇಶಗಳನ್ನು ಅನುಸರಿಸಿ ಈ ಎರಡು ಮಾರ್ಗಗಳನ್ನು ಅಸ್ತ್ರಗಳ ರೀತಿಯಲ್ಲಿ ಬ್ರಿಟಿಷ್ ಸ್ಥಾನಮಾನಗಳಿಗೆ ಪ್ರಯೋಜನವಾಗುವಂತೆ ಉಪಯೋಗಿಸಿದ. ಇವನ ಸಾಮೋಪಾಯದ ಮುಖ್ಯ ರೀತಿ ಸೇನಾಸಹಾಯ ಮೈತ್ರಿ (ಸಹಾಯಕ ಸೈನ್ಯ ಪದ್ಧತಿ). ಇದರಿಂದಾಗಿ ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆಯಾಯಿತು. ಇವನು ಮೈಸೂರು ಸಂಸ್ಥಾನದ ಪ್ರಧಾನ ಶಕ್ತಿಯಾಗಿದ್ದ ಟಿಪ್ಪುವನ್ನು ಸೋಲಿಸಿದ(1799). ಮೈಸೂರು ಯುದ್ಧದ ಪರಿಣಾಮವಾಗಿ ಇವನು ದಕ್ಷಿಣ ಭಾರತದ ಯಜಮಾನನಾದ. ತನ್ನ ಸರ್ವಾಧಿಕಾರವನ್ನು ಇಸ್ಲಾಂ ರಾಜ್ಯಗಳಾದ ಹೈದರಾಬಾದ್ ಮತ್ತು ಅಯೋಧ್ಯೆಯ ಮೇಲೆ ಸ್ಥಾಪಿಸಿದ. ತಂಜಾವೂರು, ಸೂರತ್ ಮತ್ತು ಮೈಸೂರಿನ ಆಡಳಿತಾಧಿಕಾರವನ್ನು ವಹಿಸಿಕೊಂಡ. ಮರಾಠರ ಮುಖ್ಯ ಕೇಂದ್ರವನ್ನು ಭೇದಿಸಿ, ಪೇಶ್ವೆಯನ್ನು ಬ್ರಿಟಿಷರ ಕೈಗೊಂಬೆ ಮಾಡಿಕೊಂಡ. ದೆಹಲಿಯ ಸಿಂಧಿಯನನ್ನು ಹಾಗೂ ಅವನ ಸಿಬ್ಬಂದಿಯನ್ನು ಸುಲಿಗೆ ಮಾಡಿದ. ಇಂಗ್ಲಿಷರು ಇತರರಿಗಿಂತ ಭಾರತವನ್ನು ಚೆನ್ನಾಗಿ ಆಳಬಲ್ಲರೆಂದೂ ಆ ರೀತಿ ಆಳಲು ಅವರಿಗೆ ಸಂಪೂರ್ಣ ಹಕ್ಕಿದೆಯೆಂದೂ ಹೇಳಲಾರಂಭಿಸಿದ. ಭಾರತ ದೇಶವನ್ನು ಸಂಪತ್ಸಮೃದ್ಧ ದೇಶವನ್ನಾಗಿ ಪರಿವರ್ತಿಸಲು ಶಾಂತಿ ಸ್ಥಾಪನೆ ಆವಶ್ಯಕವೆಂದೂ ಇಂಗ್ಲಿಷರನ್ನು ಬಿಟ್ಟರೆ ಮತ್ತಾರೂ ಈ ದೇಶದಲ್ಲಿ ಶಾಂತಿ, ಶಿಸ್ತನ್ನು ಸ್ಥಾಪಿಸಿ ಅವುಗಳನ್ನು ಪಾಲಿಸಿಕೊಂಡು ಬರಲಾರರೆಂದೂ ಈತ ನಂಬಿದ್ದ. ಆದುದರಿಂದ ಈತ ದೆಹಲಿಯ ಚಕ್ರವರ್ತಿಯನ್ನು ಭಾರತದ ಸಾರ್ವಭೌಮನೆಂದು ಅಂಗೀಕರಿಸಲಿಲ್ಲ. ಪ್ರತಿಯಾಗಿ ಈಸ್ಟ್ ಇಂಡಿಯ ಕಂಪನಿ ನಿಜವಾದ ಸಾರ್ವಭೌಮ ಪದವಿಯಲ್ಲಿದೆಯೆಂದು ಭಾವಿಸಿ, ಅದನ್ನು ಕೈಸರ್-ಎ-ಹಿಂದ್ ಎಂಬುದಾಗಿ ಘೋಷಿಸಿದ. ಇವನ ಸಾಧನೆ ಮೆಚ್ಚಿದ ಬ್ರಿಟಿಷ್ ಸರ್ಕಾರ ಮಾರ್ಕಿರ್ ಆಫ್ ವೆಲ್ಲೆಸ್ಲಿ ಎಂಬ ಬಿರುದನ್ನು ನೀಡಿತು. ಇವನು ಬ್ರಿಟಿಷ್ ಸಾಮ್ರಾಜ್ಯವನ್ನು ಬಹುಬೇಗ ವಿಸ್ತರಿಸುತ್ತಾ ಬಂದುದರಿಂದ ಸರ್ಕಾರದ ವೆಚ್ಚ ಹೆಚ್ಚುವುದಕ್ಕೆ ಕಾರಣವಾ ಯಿತು. ಆದರೆ ಕಂಪನಿ ಸರ್ಕಾರಕ್ಕೆ ಬೇಕಾಗಿದ್ದುದು ದೊಡ್ಡ ಸಾಮ್ರಾಜ್ಯ ಸಂಪಾದನೆಯಲ್ಲ; ಲಾಭಕರ ವ್ಯಾಪಾರವಾಗಿತ್ತು. ಈತ ಇಂಗ್ಲೆಂಡಿ ನಿಂದ ತಜ್ಞರನ್ನು ಬರಮಾಡಿಕೊಂಡು ಆಡಳಿತಾಧಿಕಾರಿಗಳಿಗೆ ತರಬೇತಿ ನೀಡಲು ಪೋರ್ಟ್ ವಿಲಿಯಂ ಕಾಲೇಜನ್ನು ಸ್ಥಾಪಿಸಿದ. ಕೆಲವೊಮ್ಮೆ ಈತ ಜಗಳಗಂಟಿಯಾಗಿ ವರ್ತಿಸುತ್ತಿದ್ದ. ಈ ಬಗೆಯ ಧೋರಣೆಗಳಿಂದ ಕಸಿವಿಸಿಗೊಂಡ ಇಂಗ್ಲೆಂಡ್ ಇವನನ್ನು ಭಾರತದಿಂದ ವಾಪಸ್ ಕರೆಸಿ ಕೊಂಡಿತು. (ಕೆ.ಆರ್.ಬಿ.)
*