ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವೈಭಾಷಿಕರು
ವೈಭಾಷಿಕರು ಬೌದ್ಧಧರ್ಮದ ಅಭಿಧರ್ಮಮಹಾವಿಭಾಷಾಶಾಸ್ತ್ರವನ್ನು ಸಿದ್ಧಪಡಿಸಿದ ಸರ್ವಾಸ್ತಿವಾದಿಗಳು; ದಾರ್ಶನಿಕರು. ಕಾಶ್ಮೀರದಲ್ಲೇ ನೆಲೆಸಿದವರನ್ನು ಕಾಶ್ಮೀರ ವೈಭಾಷಿಕರೆಂದೂ ಕಾಶ್ಮೀರದ ಹೊರಗೆ ನೆಲೆಸಿದವರನ್ನು (ಸೌತ್ರಾಂತಿಕರು) ಬಹಿರ್ದೇಶಕ-ಸರ್ವಾಸ್ತಿವಾದಿಗಳು ಅಥವಾ ಅಪರಾಂತಕಸರ್ವಾಸ್ತಿವಾದಿಗಳು ಎಂದೂ ಕರೆಯಲಾಗುತ್ತದೆ. ಬುದ್ಧ ತೀರಿಕೊಂಡ ಮುನ್ನೂರು ವರ್ಷಗಳ ಅನಂತರ ಕಾತ್ಯಾಯನೀಪುತ್ರ ಸ್ಥವಿರ ಅಭಿಧರ್ಮಕ್ಕೆ ವ್ಯಾಖ್ಯಾನ ರೂಪವಾಗಿ 15,076 ಶ್ಲೋಕಗಳ ಜ್ಞಾನಪ್ರಸ್ಥಾನಶಾಸ್ತ್ರವನ್ನು ನಿರ್ಮಿಸಿದನಂತೆ. ಈ ಸಂಸ್ಕøತ ಗ್ರಂಥ ಇಂದು ಉಪಲಬ್ಧವಿಲ್ಲ. ಆದರೆ ಇದರ ಚೀನೀ ಅನುವಾದಗಳೆರಡು (ಒಂದು ಯುವಾನ್‍ಚಾಂಗ್ ಅನುವಾದಮಾಡಿದ್ದು) ಉಳಿದಿವೆ. ಎರಡನೆಯ ಶತಮಾನದ ಸುಮಾರಿಗೆ ಕನಿಷ್ಕನ ಕಾಲದಲ್ಲಿ 500 ಮಂದಿ ಸ್ಥವಿರರು ಅಶ್ವಘೋಷನ ನೆರವನ್ನು ಪಡೆದು ಪಾಶ್ರ್ವನೆಂಬ ಹಿರಿಯ ಸ್ಥವಿರನ ನೇತೃತ್ವದಲ್ಲಿ ಈ ಜ್ಞಾನಪ್ರಸ್ಥಾನ ಶಾಸ್ತ್ರಕ್ಕೆ ಟೀಕೆಯಂತೆ ಅಭಿಧರ್ಮಮಹಾ ವಿಭಾಷಾಶಾಸ್ತ್ರವನ್ನು ಸಿದ್ಧಪಡಿಸಿದರು. ಇದರ ಸಂಸ್ಕøತಮೂಲವೂ ಇಂದು ಉಪಲಬ್ಧವಿಲ್ಲ; ಯುವಾನ್‍ಚಾಂಗ್‍ನ ಅನುವಾದ ಉಪಲಬ್ಧವಿದೆ. ವೈಭಾಷಿಕರಲ್ಲಿ ಧರ್ಮತ್ತಾತ, ವಸುಮಿತ್ರ, ಬುದ್ಧದೇವ, ಘೋಷಕ ಸಂಘಭದ್ರ ಮುಂತಾದವರು ಪ್ರಸಿದ್ಧ ದಾರ್ಶನಿಕರು. ಧರ್ಮತ್ತಾತ ಕನಿಷ್ಕನ ಕಾಲದಲ್ಲೇ ಇದ್ದ. ನಾಲ್ಕನೆಯ ಶತಮಾನದಲ್ಲಿದ್ದ ವಸುಬಂಧು ಆರುನೂರು ಕಾರಿಕೆಗಳಲ್ಲಿ ಅಭಿಧರ್ಮಕೋಶವೆಂಬ ಮಹಾಗ್ರಂಥವನ್ನು ಸಿದ್ಧಪಡಿಸಿದ. ಇವನು ಸೌತ್ರಾಂತಿಕನೆಂದು ಪ್ರಸಿದ್ಧನಾದರೂ ಇದು ಕಾಶ್ಮೀರವೈಭಾಷಿಕರ ನಿಲುವಿನಲ್ಲೇ ರಚಿತವಾದ ಗ್ರಂಥ. ತನ್ನ ಅಭಿಧರ್ಮ ಕಾರಿಕೆಗಳಿಗೆ ತಾನೇ ವ್ಯಾಖ್ಯೆ ಬರೆದಿದ್ದಾನೆ. ಈ ಗ್ರಂಥವನ್ನು ಚೀನದೇಶಕ್ಕೆ ಕೊಂಡೊಯ್ದ. ಇದಕ್ಕೆ ಯಶೋಮಿತ್ರನ ಸ್ಫುಟಾರ್ಥವೆಂಬ ವ್ಯಾಖ್ಯಾನವಿದೆ. ಇದು ವೈಭಾಷಿಕ-ಸರ್ವಾಸ್ತಿವಾದಿಗಳ ಗ್ರಂಥವಾದರೂ ಎಲ್ಲ ಬೌದ್ಧಮತದ ವರಿಗೂ ಪವಿತ್ರ ಗ್ರಂಥ. ಕಾಶ್ಮೀರದ ಸಂಘಭದ್ರನೆಂಬ ವೈಭಾಷಿಕ ವಸುಬಂಧುವಿನ ಸಮಸಾಮಯಿಕನಾಗಿದ್ದ. ಆತ ಕೋಶಕಾರಿಕಾಶಾಸ್ತ್ರ ಎಂಬ ಗ್ರಂಥವನ್ನು 25,000 ಶ್ಲೋಕಗಳಲ್ಲಿ ಬರೆದ. ಇದನ್ನು ವಸುಬಂಧು ನ್ಯಾಯಾನುಸಾರಶಾಸ್ತ್ರ ಎಂದು ಕರೆದು ಗೌರವಿಸಿದನಂತೆ. ವೈಭಾಷಿಕರು ಸರ್ವಾಸ್ತಿವಾದಿಗಳಾಗಿದ್ದು, ಎಲ್ಲವೂ ಎಲ್ಲಕಾಲಗಳಲ್ಲಿಯೂ ಇವೆ ಎಂಬುದೇ ಇವರ ಮುಖ್ಯಪ್ರಮೇಯ. ಇಷ್ಟಲ್ಲದೆ ಇವರು ಸ್ವಭಾವವಾದಿ ಗಳು. ಪಂಚಸ್ಕಂಧಗಳು, ದ್ವಾದಶಾಯತನಗಳು, ಆಯತನ-ವಿಜ್ಞಾನ ಪದ್ಧತಿಯಿಂದ ಅಷ್ಟಾದಶ ಧಾತುಗಳು ಇವೆಲ್ಲವನ್ನೂ ಒಟ್ಟುಗೂಡಿಸಿ ವೈಭಾಷಿಕರು ದ್ರವ್ಯಸತ್ತಾ ಎಂದು ಪರಿಗ್ರಹಿಸಿದರು. ಇದಕ್ಕೆ ಚ್ಯುತಿಯಿಲ್ಲ, ಯಾವ ಕಾರಣದಿಂದಲೂ ಅಭಾವ ಬಾರದು. ಪೃಥ್ವಿ, ಆಪ್, ತೇಜ, ವಾಯು ಇವೇ ನಾಲ್ಕು ಮಹಾಭೂತಗಳು; ಇವುಗಳ ಧರ್ಮ ಕ್ರಮವಾಗಿ ಸ್ಥೈರ್ಯ, ಸಂಪಿಂಡತಿ, ಉಷ್ಣ, ಚಲನ; ಮತ್ತು ಇವುಗಳ ಕ್ರಿಯೆ ದೃತಿ, ಸಂಗ್ರಹ, ಪಾಕ್ತಿ, ಹ್ಯಾಹನ. ಮಹಾಭೂತಗಳಿಂದ ಬಾಹ್ಯರೂಪ ನಿಷ್ಪನ್ನವಾಗುತ್ತದೆ. ಈ ರೂಪದಲ್ಲಿ ಇಂದ್ರಿಯಗಳು ರೂಪ, ಶಬ್ದ, ಗಂಧ, ರಸ, ಸ್ಪರ್ಶಗಳೆಂಬ ವಿಷಯಗ್ರಹಿಗಳು. ಈ ಐದು ಇಂದ್ರಿಯಗಳ ಸಮಷ್ಟಿವ್ಯಾಪಾರದಿಂದ ವಿಷಯಿಯು (ಉಪಲಬ್ಧಾ ಅಥವಾ ವಿಜ್ಞಾನ) ಉಂಟಾಗುತ್ತದೆ. ಚಕ್ಷು, ಶ್ರೋತ್ರ, ಘ್ರಾಣ, ಜಿಹ್ವಾ, ಕಾಯ ಮತ್ತು ಮನೋ ಹೀಗೆ ಆರು ವಿಜ್ಞಾನಗಳನ್ನು ವೈಭಾಷಿಕರು ಒಪ್ಪುತ್ತಾರೆ (ವಿಜ್ಞಾನವಾದಿಗಳಂತೆ ಇನ್ನೆರಡು ವಿಜ್ಞಾನಗಳನ್ನು, ಎಂದರೆ ಆಭಾಸಮ ನೋವಿಜ್ಞಾನ ಮತ್ತು ಆಲಯವಿಜ್ಞಾನಗಳನ್ನು ಇವರು ಒಪ್ಪುವುದಿಲ್ಲ). ವಿಜ್ಞಾನ ಅಥವಾ ಚಿತ್ತದ ಕ್ರಿಯೆಯನ್ನು ಸ್ವಭಾವನಿರ್ದೇಶ, ಪ್ರಯೋಗನಿ ರ್ದೇಶ, ಅನುಸ್ಮøತಿ ನಿರ್ದೇಶ ಎಂದು ಮೂರು ಭಾಗಗಳಾಗಿ ವಿಭಜಿಸುತ್ತಾರೆ. ಇಂದ್ರಿಯ ವಿಜ್ಞಾನಗಳಿಗೆ ಸ್ವಭಾವನಿರ್ದೇಶನ ಮಾಡುವ ಸಾಮಥ್ರ್ಯವಷ್ಟೆ. ಆದರೆ ಆರನೆಯ ಮನೋವಿಜ್ಞಾನಕ್ಕೆ ಮೂರು ನಿರ್ದೇಶನ ಶಕ್ತಿಗಳುಂಟು. ಚಿತ್ತವನ್ನು ದ್ರವ್ಯಸತ್ತಾತ್ಮಕವಾದುದೆಂದು ನಂಬಿ ಚೈತ್ತಧರ್ಮಗಳನ್ನೂ ವೈಭಾಷಿಕರು ಅಂಗೀಕರಿಸುತ್ತಾರೆ. ನಲವತ್ತಾರು ಬಗೆಯ ಚೈತ್ತಧರ್ಮಗಳನ್ನು ಮಹಾಭೂಮಿಕ, ಕುಶಲ ಮಹಾಭೂಮಿಕ, ಕ್ಲೇಶ ಮಹಾಭೂಮಿಕ, ಅಕುಶಲ ಮಹಾಭೂಮಿಕ, ಉಪಕ್ಲೇಶಮಹಾಭೂಮಿಕ ಮತ್ತು ಅನಿಯತ ಭೂಮಿಕ ಧರ್ಮಗಳೆಂದು ಆರು ಬಗೆಗಳಾಗಿ ವಿಂಗಡಿಸುತ್ತಾರೆ. ಆಲಂಬನವಿಲ್ಲದೆ ಉತ್ಪತ್ತಿಯಿಲ್ಲ. ಅತೀತ ಮತ್ತು ಅನಾಗತ ಎಂಬುದು ಇದ್ದರೆ ಮಾತ್ರವೇ ವಿಜ್ಞಾನ ಸಾಲಂಬವಾಗುವುದು. ರೂಪವು ಬಾಹ್ಯವಾದರೆ ವಿಜ್ಞಾನ ಆಂತರಿಕ. ಎರಡೂ ಅನ್ಯೋನ್ಯಾಶ್ರಯ ಸಂಬಂಧದಲ್ಲಿದ್ದರೂ ಸ್ವತಂತ್ರ ದ್ರವ್ಯಗಳು. ಎರಡೂ ಪ್ರತೀತ್ಯ ಸಮುತ್ಪಾದದ ಕ್ರಮದಲ್ಲೇ ನಿಷ್ಪನ್ನವಾಗುವುವು. ವೈಭಾಷಿಕ ಮತವನ್ನು ಕಟುವಾಗಿ ಖಂಡಿಸಿದ ಶಂಕರಾಚಾರ್ಯರೂ ಇದನ್ನು ಗ್ರಹಿಸಿದ್ದಾರೆ. (ಎಸ್.ಕೆ.ಆರ್.)
*