ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶಂಭುಶರ್ಮ, ಕಡವ
ಶಂಭುಶರ್ಮ, ಕಡವ
1895-1965. ಉಭಯ ಭಾಷಾ ಪಂಡಿತರೂ ಆಯುರ್ವೇದ ಶಾಸ್ತ್ರಜ್ಞರೂ ಸಮಾಜಸುಧಾರಕರೂ ಗ್ರಂಥಕರ್ತೃಗಳೂ ಆಗಿ ಖ್ಯಾತರಾಗಿದ್ದ ಒಬ್ಬ ಕನ್ನಡಿಗರು. ದಕ್ಷಿಣ ಕನ್ನಡ ಜಿಲ್ಲೆಯ ಕಡವ ಎಂಬ ಗ್ರಾಮದಲ್ಲಿ 1895ರಲ್ಲಿ ಜನಿಸಿದರು. ಇವರ ತಂದೆ ಕೃಷ್ಣಭಟ್ಟ, ತಾಯಿ ಗುಣವತಿ. ಆರಂಭದಲ್ಲಿ ಕಡವಕ್ಕೆ ಸಮೀಪದ ಪ್ರಾಥಮಿಕ ಶಾಲೆಯಲ್ಲಿ ಇವರ ವಿದ್ಯಾಭ್ಯಾಸ ನಡೆಯಿತು. ಜೊತೆ ಜೊತೆಯಲ್ಲೇ ಇವರಿಗೆ ಸಂಸ್ಕøತದ ಅಧ್ಯಯನವೂ ನಡೆಯಿತು. ಕಡವಕ್ಕೆ ಬಲು ಸಮೀಪದಲ್ಲಿದ್ದ ಮಿತ್ತೂರು ರಾಮಜೋಯ್ಸರು ಇವರಿಗೆ ಸಂಸ್ಕøತ ಹೇಳಿಕೊಟ್ಟ ಗುರುಗಳು. ಉಡುಪಿ, ಚೆನ್ನಪುರಿ, ಪುಣೆ, ತಂಜಾವೂರುಗಳಲ್ಲಿ ಇವರು ಸಂಸ್ಕøತ ವಿದ್ಯಾಭ್ಯಾಸ ನಡೆಸಿ ಆಖೈರಾಗಿ ಮದರಾಸಿನ ಮೈಲಾಪುರ ಕಾಲೇಜಿನಲ್ಲಿ ಓದಿದರು. ಅಲ್ಲಿ ಸಂಸ್ಕøತ, ಸಾಹಿತ್ಯ, ತರ್ಕ, ಮೀಮಾಂಸೆ ಮೊದಲಾದವನ್ನು ಕಲಿತು, ಪರೀಕ್ಷೆಗಳಲ್ಲಿ ಗೆದ್ದು, ಅದ್ವೈತವೇದಾಂತಶಿರೋಮಣಿ ಎಂಬ ಬಿರುದನ್ನು ಪಡೆದರು. ಷಡ್‍ದರ್ಶನ, ಗದ್ಯ, ಮಹಾಕಾವ್ಯ, ಅಲಂಕಾರ ಮುಂತಾದ ಶಾಸ್ತ್ರಗಳಲ್ಲಿ ನಿಷ್ಣಾತರೆಂದು ಖ್ಯಾತರಾಗಿದ್ದ ಇವರ ಯೋಗ್ಯತೆಯನ್ನು ಮೆಚ್ಚಿದ ಮದರಾಸು ಸರ್ಕಾರ ಮದರಾಸು ಓರಿಯೆಂಟಲ್ ಲೈಬ್ರರಿಯ ಪರಿಶೋಧನಾ ವಿಭಾಗದಲ್ಲಿ ಇವರಿಗೆ ಒಂದು ಹುದ್ದೆ ಕೊಟ್ಟಿತು. ಮೂರು ವರ್ಷಕಾಲ ಮದರಾಸಿನಲ್ಲಿದ್ದು ಹೆಂಡತಿ ಸತ್ತ ಮೇಲೆ ಹಿಂತಿರುಗಿ ಹುಟ್ಟೂರಿಗೆ ಬಂದು ನೆಲಸಿದರು. ಅನಂತರ ಪುತ್ತೂರಿನ ಜಿಲ್ಲಾ ಬೋರ್ಡು ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾದರು(1923). ಅನಂತರ ಎರಡು ಮೂರು ವರ್ಷಗಳಲ್ಲೇ ಇವರು ಸಿದ್ಧರಸ ವೈದ್ಯಶಾಲಾ ಎಂಬ ಹೆಸರಿನ ಆಯುರ್ವೇದಿಯ ಔಷಧಿಗಳನ್ನು ತಯಾರಿಸುವ ಮತ್ತು ಪ್ರಯೋಗಿಸುವ ವೈದ್ಯಶಾಲೆಯನ್ನು ಆರಂಭಿಸಿ 80ಕ್ಕೂ ಹೆಚ್ಚಿನ ಅದರ ಶಾಖೆಗಳನ್ನು ಕೊಡುಗು ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತೆರೆದು ಬಹು ಯಶಸ್ವಿಯಾಗಿ ನಡೆಸಿದರು. ಜೊತೆಯಲ್ಲಿಯೇ ವಿಷವೈದ್ಯ ಚಿಕಿತ್ಸೆ ಬಗ್ಗೆಯೂ ಪರಿಶ್ರಮ ವಹಿಸಿ ವಿಷಸರ್ಪಗಳನ್ನೂ ಪರಿಶೋಧನೆ ಸಹಿಸಲು ಬೇಕಾದ ಆಡುಗಳನ್ನೂ ಸಾಕಿದರು. ಆಯುರ್ವೇದ ಶಾಲೆಗಳು ನಡೆಯುತ್ತಿದ್ದಾಗಲೇ (1934-39) 13 ಕೈಮಗ್ಗಗಳನ್ನು ನಡೆಸಿ ಖಾದಿಬಟ್ಟೆ ತಯಾರಿಸಿ ಮಾರಾಟ ನಡೆಸಿದರು. ಆ ಸಂದರ್ಭ ಒಂದು ಲಾರಿ ಅಪಘಾತದಿಂದ ಇವರು ತಮ್ಮ ಬಲಗಾಲು ಮುರಿದುಕೊಂಡರು. 1962ರ ಸುಮಾರಿಗೆ ಉಡುಪಿಯಲ್ಲಿ ಜರುಗಿದ ಆನೆಕಾಲು ರೋಗನಿವಾರಣಾ ಗೋಷ್ಠಿಗೆ ಹೋದ ಶರ್ಮರು ಆನೆಕಾಲುರೋಗ ಕುರಿತು ಆಯುರ್ವೇದೀಯ ರೀತಿಯ ಪರಿಶೋಧನೆ ನಡೆಸಿ, ನಿವಾರಣಾ ಔಷಧವನ್ನು ಕಂಡುಹಿಡಿದು ಪರಿಶೋಧನ ಮಂಡಳಿಗೆ ಒಪ್ಪಿಸಿದರು.
ಗಾಂಧಿಯವರ ನಿರ್ಮಾಣಕಾರ್ಯದಲ್ಲಿ ಪೂರ್ಣ ನಂಬಿಕೆಯುಳ್ಳವರಾಗಿದ್ದ ಇವರು ಜನಸೇವೆ, ದೇಶಸೇವೆ, ವ್ಯವಹಾರಗಳಲ್ಲಿ ನ್ಯಾಯ ಧರ್ಮಗಳ ಮಾರ್ಗದರ್ಶನವನ್ನು ಮಾತ್ರ ಮುಖ್ಯ ಗುರಿಯಾಗಿಟ್ಟುಕೊಂಡು ಅನೇಕ ಉದ್ಯಮಗಳನ್ನು ನಡೆಸಿದರು.
ಇವರು ಅನೇಕ ಸಾಹಿತ್ಯ ಕೃತಿಗಳನ್ನು ಬರೆದಿದ್ದಾರೆ. ಅಶ್ವಘೋಷಕೃತ ಸೌಂದರನಂದ (ಇದರ ಹಸ್ತಪ್ರತಿಗೆ ಮದರಾಸು ಸರ್ಕಾರ 500 ರೂಪಾಯಿ ಬಹುಮಾನ ನೀಡಿದೆ), ಅಮರೌಘ ಶಾಸನಂ, ಯೋಗಬೀಜಂ ಮತ್ತು ಗೋರಕ್ಷ ಸಹಸ್ರನಾಮ, ಗೋರಕ್ಷನಾಥ ಕೃತ ಗೋರಕ್ಷಪದ್ಧತಿ, ಗೋರಕ್ಷನಾಥ ಕೃತ ಅಮರಾಲೋಕ ಕಾವ್ಯ, ಕದಲೀಕ್ಷೇತ್ರಮಾಹತ್ಮ್ಯ (ಸಂಸ್ಕøತ ಮೂಲ), ನವನಾಥ ಕಥಾ ಮತ್ತು ಚರ್ಪಟನಾಥ ಶತಕಂ, ಸರಿದಂತರ ಕ್ಷೇತ್ರ ಮಹಾತ್ಮ್ಯ - ಇವು ಸಂಸ್ಕøತದಿಂದ ಕನ್ನಡಕ್ಕೆ ಅನುವಾದಗೊಂಡ ಅವರ ಪ್ರಮುಖ ಕೃತಿಗಳು. ರಘವಂಶಕಾವ್ಯ, ನಾಗನಂದ, ಹರ್ಷಕವಿಯ ಸಂಸ್ಕøತ ಮೂಲದ ಕದಲೀ ಯೋಗರಾಜ ಚರಿತಂ, ಶ್ರೀಮದ್ಭಗವದ್ಗೀತೆ (ವೃತ್ತಾನುವೃತ್ತವಾಗಿ ಕನ್ನಡಕ್ಕೆ ಭಾಷಾಂತರಿಸಲ್ಪಟ್ಟಿದೆ) - ಇವು ಹಸ್ತಪ್ರತಿ ರೂಪದಲ್ಲಿರುವ ಕನ್ನಡ ಭಾಷಾಂತರಗಳು. ಶ್ರೀಗಾಂಧಿ ನಿರ್ವಾಣಂ (ಸಂಸ್ಕøತದಲ್ಲಿ ಮೊದಲು ಬರೆದು ತಾವೇ ಕನ್ನಡಕ್ಕೆ ಭಾಷಾಂತರಿಸಿದ್ದು), ಗೋರಕ್ಷಾ ಸ್ತೋತ್ರಂ(ಸಂಸ್ಕøತ ಭಾಷೆಯಲ್ಲಿದೆ, ಸ್ವಂತಕೃತಿ), ಡಿವಿಜಿ ಅವರ ಮಂಕುತಿಮ್ಮನ ಕಗ್ಗ, ಗಾಂಧಿ ಶತಕಂ (ಕನ್ನಡ ಪದ್ಯಕಾವ್ಯ), ಪರಶುರಾಮ ವಿಜಯಂ (ಕನ್ನಡ ಚಂಪೂವಿನಲ್ಲಿ, ಕನ್ನಡ ಮೂಲದಿಂದ ಸಂಸ್ಕøತಕ್ಕೆ ಭಾಷಾಂತರಗೊಂಡು ಮಾಸಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ), ತುಲಸೀದಾಸ ರಾಮಾಯಣ (ಕನ್ನಡ ಭಾಷಾಂತರ) ಇವು ಇವರ ಇತರ ಕೃತಿಗಳು. (ಎ.ಪಿ.ಎಸ್.ಯು.)