ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶಿವಮಾರ 1
ಗೋಚರ
ಶಿವಮಾರ 1
ತಲಕಾಡು ಗಂಗವಂಶದ ರಾಜ (ಸು. 679-725). ಈತ ಮುಷ್ಕರನ ಪುತ್ರ ಹಾಗೂ ಭೂವಿಕ್ರಮನ ತಮ್ಮ. ನವಕಾಮನೆಂದೂ ಹೆಸರಿದ್ದ ಈತನಿಗೆ ಶಿಷ್ಟಪ್ರಿಯ, ಅವನಿಮಹೇಂದ್ರ, ಸ್ಥಿರವಿನೀತ ಇತ್ಯಾದಿ ಬಿರುದುಗಳಿದ್ದುವು. ಭೂವಿಕ್ರಮನಿಗೆ ಪ್ರಾಯಃ ಮಕ್ಕಳಿಲ್ಲದಿರಲು ಈತ ಪಟ್ಟಕ್ಕೆ ಬಂದನೆಂದು ತೋರುತ್ತದೆ. ಕೊಂಗಲನಾಡು, ತೊ¾õÉನಾಡು ಮತ್ತು ಮಲೆನಾಡುಗಳನ್ನು ಆಳುತ್ತಿದ್ದ ಎ¾õÉಗಂಗ, ಅಲ್ಲದೆ ಪಲ್ಲವೇಲರಸ, ತುಪ್ಪೂರಾಲರಸ, ಜಯ ಮತ್ತು ವೃದ್ಧ ಎಂಬವರು ಇವನ ಅಧೀನದಲ್ಲಿದ್ದರು. ಕೊನೆಯ ಇಬ್ಬರು ಪಲ್ಲವ ಯುವರಾಜನೊಬ್ಬನ ಮಕ್ಕಳು. ಇವನ ಸಮಕಾಲೀನನಾದ ಚಳುಕ್ಯ ವಿಜಯಾದಿತ್ಯನ ಶಾಸನಗಳಲ್ಲಿ ಗಂಗರು ಇವನ ಅಧೀನರೆಂದು ಹೇಳಿಕೊಂಡಿದ್ದರೂ ಗಂಗಶಾಸನಗಳಲ್ಲಿ ಈ ಅಂಶದ ಪ್ರಸ್ತಾಪವಿಲ್ಲ. ಪ್ರಾಯಃ ಈ ಕಾಲದಲ್ಲಿ ಗಂಗ ಮತ್ತು ಚಳುಕ್ಯ ರಾಜರಲ್ಲಿ ಸ್ನೇಹಸಂಬಂಧವಿದ್ದಂತೆ ತೋರುತ್ತದೆ. ಶಿವಮಾರನ ಮರಣಾನಂತರ ಇವನ ಮೊಮ್ಮಗ ಶ್ರೀಪುರುಷ ರಾಜ್ಯವಾಳಲಾರಂಭಿಸಿದ. ಶಿವಮಾರನಿಗೆ ಒಬ್ಬ ಮಗನಿದ್ದು ಅವನು ತಂದೆಗಿಂತ ಮೊದಲೇ ಗತಿಸಿರಬೇಕೆಂದು ಊಹಿಸಲಾಗಿದೆ. (ಎಸ್.ಎಸ್.ಜೆ.ಎ.)