ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶುದ್ಧೋದನ, ಎಂ ಜೆ
ಶುದ್ಧೋದನ, ಎಂ ಜೆ (1914-2002) ಮೈಸೂರಿನಲ್ಲಿ ಶುದ್ಧೋದನ ಎಂ.ಜೆ.ಅವರು 2.2.1914ರಲ್ಲಿ ಜನಿಸಿದರು. ಇವರ ತಂದೆ ಎಂ.ಎಸ್.ಜಗದೀಶನ್ ಆ ವೇಳೆಗೆ ಮದ್ರಾಸ್‍ನ (ಚೆನ್ನೈ) ಕಲಾಶಾಲೆಯಲ್ಲಿ ಚಿತ್ರಕಲಾ ಡಿಪ್ಲೋಮಾ ಮಾಡಿ ಮೈಸೂರಿನ ಸರ್ಕಾರಿ ತರಬೇತಿ ಕಾಲೇಜಿನಲ್ಲಿ ಹಿರಿಯ ಕಲಾ ನಿರ್ದೇಶಕರಾಗಿದ್ದರು. ಮೊದಲಿಗೆ ತಂದೆಯಿಂದ ನಂತರ ಮೈಸೂರಿನ ಚಾಮರಾಜೇಂದ್ರ ಕಲಾಶಾಲೆಯಲ್ಲಿ ಟಂಕಸಾಲೆ, ಯಾಲವತ್ತಿ, ಕೇಶವಯ್ಯ ಮೊದಲಾದವರ ಬಳಿ ಚಿತ್ರಕಲಾಭ್ಯಾಸ ಮಾಡಿದರು. ಕಲಾಶಾಲೆಗೆ ಸೇರುವ ಪೂರ್ವದಲ್ಲಿಯೇ ಚಿತ್ರಕಲೆಯಲ್ಲಿ ಸಾಕಷ್ಟು ಪರಿಣತಿ ಪಡೆದಿದ್ದರಿಂದ ಒಮ್ಮೆಲೇ ಮೂರನೇ ತರಗತಿಯಿಂದಲೇ ಅಭ್ಯಸಿಸಿ ಡಿಪ್ಲೊಮ ಪದವಿ ಪಡೆದಿದ್ದಲ್ಲದೆ ಚೆನ್ನೈ ಕಲಾ ಶಾಲೆಯಿಂದಲೂ ಕಲಾಡಿಪ್ಲೊಮಾ ಪದವಿ ಪಡೆದರು(1938) ಮೊದಲಿಗೆ ಮೈಸೂರಿನ ಪ್ರಾಚ್ಯವಸ್ತು ಸಂಶೋಧನಾಲಯದಲ್ಲಿ ನಾಲ್ಕುವರ್ಷ (1940-44) ಕಲಾವಿದರಾಗಿದ್ದು, ಎಂ.ಎ.ಶ್ರೀನಿವಾಸ್ ಅವರ ನೆರವಿನಿಂದ ಚನ್ನಪಟ್ಟಣದ ಕರಕುಶಲ ಕೈಗಾರಿಕಾ ಶಾಲೆಯಲ್ಲಿ 1959ರವರೆಗೆ ನಿರ್ದೇಶಕರಾಗಿದ್ದು ನಂತರ ಮೈಸೂರಿನ ಚಾಮರಾಜೇಂದ್ರ ವೃತ್ತಿಶಿಕ್ಷಣ ಶಾಲೆಯಲ್ಲಿ `ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಆಫ್ ಆರ್ಟ್ ಹುದ್ದೆಯಲ್ಲಿದ್ದು ತದನಂತರ ವೈಸ್ ಪ್ರಿನ್ಸಿಪಾಲ್ ಆಗಿದ್ದು 13 ವರ್ಷಗಳ ಸೇವೆಸಲ್ಲಿಸಿ ನಿವೃತ್ತರಾದರು. (ನಿವೃತ್ತರಾದ ಬಳಿಕವೂ ಒಂದು ವರ್ಷ ಹೆಚ್ಚಿನ ಸೇವೆಯನ್ನು ಸರ್ಕಾರ ಮುಂದುವರಿಸಿತು.)
ಶುದ್ಧೋದನರು ಚನ್ನಪಟ್ಟಣದಲ್ಲಿದ್ದಾಗ ಆಟಿಕೆಗಳಿಗೆ ಹೊಸರೂಪ ನೀಡಿ ಜನಪ್ರಿಯತೆಗಳಿಸುವಂತೆ ಮಾಡಿದರು. ಮೈಸೂರಿನ ಶಾಲೆಯಲ್ಲಿ ದಕ್ಷ ಅಧಿಕಾರಿಗಳೆಂದು ಹೆಸರು ಪಡೆದಿದ್ದು ಕಲಾಕೃತಿ ರಚನೆಯಲ್ಲಿಯೂ ತೊಡಗಿದ್ದರು. ತೈಲ ವರ್ಣದಲ್ಲಿ ದೊಡ್ಡ ಅಳತೆಯ (ಸುಮಾರು 20 ( 25 ಚದರಡಿ ವಿಸ್ತಾರದ) ಪ್ರಕೃತಿ ಹಾಗೂ ಪ್ರಾಣಿಗಳ ದೃಶ್ಯ ರಚನೆ ಇವರ ವೈಶಿಷ್ಟ್ಯವಾಗಿದ್ದಿತು. ಅಂದಿಗೆ ಆ ದೊಡ್ಡ ಪ್ರಮಾಣದಲ್ಲಿ ತೈಲ ವರ್ಣದಲ್ಲಿ ಭೂ ದೃಶ್ಯ ರಚಿಸುತ್ತಿದ್ದವರು ವಿರಳ. 1958ರಲ್ಲಿ ದೆಹಲಿಯ ರಾಷ್ಟ್ರಪತಿ ಭವನದ `ಮೈಸೂರು ರೂಮ್ ಅನ್ನು ಕಲಾತ್ಮಕವಾಗಿ ಸಿದ್ಧಪಡಿಸಲು ಆಹ್ವಾನಿತರಾಗಿದ್ದು `ಜೋಗ್ ಜಲಪಾತ, `ಮೈಸೂರು ಅರಮನೆ, ನಂದಿಬೆಟ್ಟ ಇತ್ಯಾದಿ ಚಿತ್ರಿಸಿದ್ದಲ್ಲದೆ ರಾಜ್ಯದ ರಾಜಭವನಕ್ಕೂ ಕೃತಿಗಳನ್ನು ನೀಡಿದ್ದರು. ಕುಮಾರಕೃಪ ಅತಿಥಿಗೃಹ, ವಿಧಾನಸೌಧ, ಕಾಫಿ ಮಂಡಳಿಗಳಲ್ಲೂ ಶ್ರೀಯುತರ ಕೃತಿಗಳನ್ನು ಕಾಣಬಹುದು. ಕಲಾಕೃತಿಗಳಲ್ಲಿ ಬಾದಾಮಿಯ ಕೋಟೆ, ಮಾನಸಗಂಗೋತ್ರಿಯಲ್ಲಿ ಸೂರ್ಯೋದಯ, ಬಿಜಾಪುರದ ಕೋಟೆ ಖೆಡ್ಡ, ನಾಗರಹೊಳೆಯ ದೃಶ್ಯಗಳು, ಆಗುಂಬೆ, ಶ್ರವಣಬೆಳಗೊಳ ಶೃಂಗೇರಿ, ಬಿಳಿಗಿರಿ ರಂಗನಬೆಟ್ಟ, ಶ್ರೀರಂಗಪಟ್ಟಣ, ಸೋಮನಾಥಪುರ, ಬೇಲೂರು, ಹಳೇಬೀಡು ಇತ್ಯಾದಿ ಹಳೆಯ ಮೈಸೂರು ಪ್ರದೇಶದ ನೂರಾರು ಭೂದೃಶ್ಯ, ದೇವಾಲಯಗಳ ದೃಶ್ಯ, ವನ್ಯ ಜೀವಿಗಳನ್ನು ಚಿತ್ರಿಸಿದ್ದಾರೆ.
ಕಲಾವಿದ ಕೇಶವಯ್ಯರವರಲ್ಲಿ ಭಾವಚಿತ್ರ ರಚನೆ ಕಲಿತಿದ್ದು, ವಿಧಾನಸೌಧದ ಅಸೆಂಬ್ಲಿ ಹಾಲ್‍ನಲ್ಲಿ ಗಾಂಧೀಜಿಯವರ ಪೂರ್ಣ ಪ್ರಮಾಣದ ಚಿತ್ರ, ಗಲ್ಫ್ ರಾಷ್ಟ್ರದ ಇಂಡಿಯನ್ ಶಾಲೆಯಲ್ಲಿ ಸುಲ್ತಾನ್ ಆಫ್ ಓಮನ್ ಚಿತ್ರವೂ ಸೇರಿದಂತೆ, ಸ್ವಹಸ್ತಾಕ್ಷರದಿಂದ ಕೂಡಿರುವ ಪ್ರಧಾನಿ ಇಂದಿರಾಗಾಂಧಿ, ಜವಾಹರಲಾಲ್‍ನೆಹರು, ಲಾಲ್‍ಬಹದ್ದೂರ್ ಶಾಸ್ತ್ರಿ, ಕುವೆಂಪು ಹಾಗೂ ವಿಶ್ವೇಶ್ವರಯ್ಯ ಮುಂತಾದವರ ಭಾವಚಿತ್ರಗಳನ್ನು ಕಾಣಬಹುದು. ಕಲೆಯಲ್ಲಿ ಅಂದಿಗೆ ಆಧುನಿಕ ಮನೋಭಾವಗಳನ್ನು ಅಭಿವ್ಯಕ್ತಿಸಿರುವುದು ಶುದ್ಧೋದನರ ಪ್ರಗತಿಪರ ದೃಷ್ಟಿಗೆ ದ್ಯೋತಕವಾಗಿದೆ. ಇವುಗಳಲ್ಲೂ ಪ್ರಕೃತಿ ದೃಶ್ಯ, ಅವುಗಳ ಅಳಿವಿನ ಬಗ್ಗೆ ಸೂಕ್ಷ್ಮವಾಗಿಯೇ ಪ್ರತಿಕ್ರಯಿಸಿದ್ದಾರೆ. `ಮೂಕಸಾಕ್ಷಿ ಪ್ರೀಚಿಂಗ್ ಫಾರ್‍ರೈಡ್ (ಬೃಹತ್ ಆನೆಯ ಮೇಲೆ ಪುಟ್ಟ ಹಕ್ಕಿ) ಬದುಕಿಗಾಗಿ ಹೋರಾಟ (ಸ್ಟ್ರಗಲ್ ಫಾರ್ ಎಗ್ಸಿಸ್‍ಟೆನ್ಸ್-ಡಾರ್ವಿನ್‍ವಾದದ ವಿಡಂಬನೆ) `ಬೆಂಜಮಿನ್ ರಾಣಿಯ ದಿವ್ಯದ ಪ್ರೇರಣೆ ಸ್ಮಶಾನದಲ್ಲಿ ಸರ್ವರೂ ಸಮಾನರು `ವ್ಯರ್ಥವಾದ ಕಾಲ (ಟೈಮ್ ಲಾಸ್ಟ್) ಅವರ ಒಂದು ಶಿಲ್ಪ ಕಲಾಕೃತಿ. ಗಾಂಧೀಜಿಯವರ ಮೂರು ಕೋತಿಗಳ ಸಂದೇಶವನ್ನು ಒಟ್ಟಾಗಿಸಿ ಒಂದೇ ರೂಪನೀಡಿದ್ದು ಕುವೆಂಪು ಅವರು ಅದಕ್ಕೆ `ಪೂರ್ಣಪ್ರಜ್ಞ ಎಂದು ನಾಮಕರಣ ಮಾಡಿದ್ದರು. `ವೃಕ್ಷ(ಟ್ರೀ) ಎಂಬುದು ಬೃಹದ್ ಆಲದ ಮರದ ಮೇಲೆ ಅಣುಬಾಂಬಿನಿಂದ ಉಂಟಾಗುವಂತಹ ವಿಶಾಲ ಧೂಮ ಮಂಡಲದ ಚಿತ್ರಣವಿದ್ದು ಪರಸ್ಪರ ವೈರುಧ್ಯವನ್ನು ಸಾಂಕೇತಿಸುವಂತಿವೆ.
ಶುದ್ಧೋದನ ಅವರು 1939ರಿಂದಲೇ ಆರಂಭಿಸಿ ಹತ್ತಕ್ಕೂ ಹೆಚ್ಚು ಏಕವ್ಯಕ್ತಿ ಪ್ರದರ್ಶನವನ್ನು ನೀಡಿದ್ದರು. 1992ರಲ್ಲಿ ಬೆಂಗಳೂರಿನ ವೆಂಕಟಪ್ಪ ಚಿತ್ರ ಶಾಲೆಯಲ್ಲಿ ಕೊನೆಯ ಏಕವ್ಯಕ್ತಿ ಪ್ರದರ್ಶನ ಏರ್ಪಡಿಸಿದ್ದರು. ದಸರಾ ಪ್ರದರ್ಶನದಲ್ಲಿ 1936ರಿಂದ 43ರ ಅವಧಿಯಲ್ಲಿ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದು ಮೂರು ಚಿನ್ನದ ಪದಕ ಏಳು ಬೆಳ್ಳಿಯ ಪದಕಗಳಲ್ಲದೆ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದರು. ಕೊಡೈಕೆನಾಲ್, ಕೋಲ್ಕತ್ತಾದ ಪ್ರದರ್ಶನಗಳಲ್ಲೂ ಬಹುಮಾನ ಲಭಿಸಿತ್ತು. 1971ರಲ್ಲಿ ಕರ್ನಾಟಕ ರಾಜ್ಯ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, 1994ರಲ್ಲಿ `ಎಂ.ಟಿ.ವಿ. ಆಚಾರ್ಯ ಪ್ರಶಸ್ತಿ, 1996ರಲ್ಲಿ ರಾಮ್‍ಸನ್ ಕಲಾಪ್ರತಿಷ್ಠಾನದ ಕಲಾಸಮ್ಮಾನ್. ಪ್ರಶಸ್ತಿ, 1997ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪ್ರತಿಷ್ಠಿತ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ 1999ರಲ್ಲಿ ಲಭ್ಯವಾಗಿತ್ತು. ಶುದ್ಧೋದನ 28.9.2002 ರಂದು ಮೈಸೂರಿನಲ್ಲಿ ನಿಧನರಾದರು. (ಎ.ಎಲ್.ನರಸಿಂಹನ್)