ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶೂನ್ಯಸಂಪಾದನೆ

ವಿಕಿಸೋರ್ಸ್ದಿಂದ

ಶೂನ್ಯಸಂಪಾದನೆ ವೀರಶೈವ ತತ್ತ್ವ ನಿರೂಪಣೆಯಲ್ಲಿನ ಧಾರ್ಮಿಕ ಪರಿಭಾಷೆ. ವೀರಶೈವ ಪರಿಭಾಷೆಯಲ್ಲಿ ಶೂನ್ಯ ವೆಂದರೆ ಪರಿಪೂರ್ಣತೆ, ಪರಾತ್ಪರವಸ್ತು. ಅದನ್ನು ಸಂಪಾದಿಸಿಕೊಳ್ಳುವುದೆಂದರೆ ಸಾಧಕನು ಪರಾತ್ಪರ ವಸ್ತುವಿನ ಸ್ವರೂಪನಾಗುವುದು, ಪರಿಪೂರ್ಣನಾಗುವುದು ಎಂದರ್ಥ. ಸಾಧನೆಗೆ ಸಾಧಕವಾದುದು ಶಿವಾನುಭವ. ಶಿವತ್ವದ ಬಗೆಗಿನ ಹಂಬಲವೇ ಶಿವಾನುಭವ. ಶಿವಾನುಭವಿಗೆ ಜಾತಿ-ಲಿಂಗ-ವರ್ಗಗಳೆಂಬ ಭೇದವಿಲ್ಲ. ಸಾಧಕನಾದ ಪ್ರತಿಯೊಬ್ಬನೂ ಚಲಿಸುವ ಜೀವಂತ ಅನುಭವ ಮಂಟಪ. ದೇಹವೆಂಬುದು ಶಿವಾನುಭವಕ್ಕೆ ಹಾತೊರೆಯುವ ಕ್ರಿಯಾಶೀಲ ಅನುಭವ ಮಂಟಪ. ವೀರಶೈವರ ಶಿವಾನುಭವಗೋಷ್ಠಿ, ಅನುಭವ ಮಂಟಪ ಇಂತಹವುಗಳಿಗೆ ಇರುವ ಅರ್ಥ ಇದೇ ಆಗಿದೆ. ವಿದ್ವಾಂಸರು ಹೇಳುವಂತೆ ಆತ್ಮಜಿಜ್ಞಾಸುಗಳ ಅಧ್ಯಾತ್ಮ ಅನುಭವದ ಸಂಸತ್ತೇ ಅನುಭವಮಂಟಪ. ಶೂನ್ಯದ ಸಾಧನೆಗೆ ಸಾಧನವಾಗುವ ಬದುಕಿನ ಎಲ್ಲ ರಂಗಗಳ ಆವಶ್ಯಕ ವಿಚಾರ, ಅನುಭವಗಳನ್ನು, ಬಸವಾದಿ ಶಿವಶರಣರ ಮಹತ್ತರ ಅನುಭವಗಳ ಶಿವಾದ್ವೈತ ವಚನಗಳನ್ನು ಸಂವಾದ ಶೈಲಿಯಲ್ಲಿ ವಿನ್ಯಾಸಗೊಳಿಸಿ ಶಿವಗಣಪ್ರಸಾದಿ ಮಹಾದೇವಯ್ಯ ಶೂನ್ಯಸಂಪಾದನೆ ಎಂಬ ಶೀರ್ಷಿಕೆಯಲ್ಲಿ ಕೃತಿಯನ್ನು ರಚಿಸಿದ್ದಾನೆ. ಇವನ ಕೃತಿಯ ಅಂತಿಮ ಉದ್ದೇಶವೂ ಸಾಧಕನ ಆಧ್ಯಾತ್ಮಿಕ ಸಿದ್ಧಿಯೇ ಆಗಿದೆ.

*