ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶ್ಯಾಮಲಾ ಜಾಗೀರ್ದಾರ್
ಶ್ಯಾಮಲಾ ಜಾಗೀರ್‍ದಾರ್ 1941 -. ಕನ್ನಡ ಕವಿತೆಗಳಿಗೆ ರಾಗ ಸಂಯೋಜನೆ ಮಾಡುವಾಗ ಎಲ್ಲ ಭಾಷೆಗಳ ವೈಶಿಷ್ಟ್ಯವನ್ನು ಕೂಡಿಸಿಕೊಂಡವರು. ಸುಗಮಸಂಗೀತಕ್ಕೆ ಹೊಸ ಆಯಾಮ ನೀಡಿದವರು.
ಮೂಲತಃ ಗುಲ್ಬರ್ಗದವರಾದ ಶ್ಯಾಮಲಾ ಜಾಗೀರ್‍ದಾರ್ ಹುಟ್ಟಿದ್ದು (5-4-1941) ಮೈಸೂರಿನಲ್ಲಿ. ಗುಲ್ಬರ್ಗಾದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಎಸ್.ಎಸ್.ಎಲ್.ಸಿ. ಪೂರೈಸಿದ್ದು ಬೆಂಗಳೂರಿನಲ್ಲಿ. ತಂದೆ ಗೋಪಾಲಾಚಾರ್ ಜಾಗೀರ್‍ದಾರ್ ಅಂದಿನ ಹೈದರಾಬಾದ್ ಸಂಸ್ಥಾನದ ನಿಜಾಮರ ಕುಟುಂಬದ ಕಾನೂನು ಸಲಹೆಗಾರರು. ನಿಜಾಮರ ಕುಟುಂಬದಲ್ಲಿ ಆಗಾಗ್ಗೆ ನಡೆಯುತ್ತಿದ್ದ ಸಂಗೀತಗೋಷ್ಠಿಗಳಿಗೆ ಏಳು ವರ್ಷದ ಮಗಳನ್ನು ತಂದೆ ಕರೆದೊಯ್ಯುತ್ತಿದ್ದರು. ಅಲ್ಲಿ ಕೇಳಿದ್ದನ್ನು ಶ್ಯಾಮಲೆ ಮನೆಗೆ ಬಂದೊಡನೆ ಹಾಡುತ್ತಿದ್ದನ್ನು ಕಂಡ ತಂದೆಯವರು ತಡಮಾಡದೆ ಹೈದರಾಬಾದಿನ ಖ್ಯಾತ ಸಂಗೀತಗಾರ ಅವಧೂತ್‍ಬುವಾ ಅವರಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಲಿಯುವ ವ್ಯವಸ್ಥೆ ಮಾಡಿದರು. ನಂತರ ರಾಮಚಂದ್ರ ಜೋಶಿಯವರಿಂದಲೂ ಸಂಗೀತ ಶಿಕ್ಷಣವಾಯಿತು. ತಾಯಿ ಕೃಷ್ಣಮ್ಮ, ಚಿಕ್ಕಪ್ಪ ರಂಗರಾವ್ ಅವರ ಪ್ರೋತ್ಸಾಹದ ನೆರಳಿನಲ್ಲಿ ಶ್ಯಾಮಲಾರ ಬೆಳವಣಿಗೆ ನಿರಾಯಾಸವಾಗಿ ಸಾಗಿತು. 1954ರಲ್ಲಿ ಶ್ಯಾಮಲ ಅವರು ಬೆಂಗಳೂರಿಗೆ ಬಂದು ನೆಲೆಸಿದರು. ಶಾಸ್ತ್ರೀಯ ಸಂಗೀತವನ್ನು ಶ್ರದ್ಧೆಯಿಂದ ಕಲಿತ ಶ್ಯಾಮಲಾ ಅವರು ಮೈಗೂಡಿಸಿಕೊಂಡಿದ್ದು ಸುಗಮಸಂಗೀತವನ್ನು. ಮಾತೃಭಾಷೆ ಮರಾಠಿ. ಶ್ಯಾಮಲಾ ಅವರಿಗೆ ಮರಾಠಿ ಅಭಂಗಗಳು, ಮರಾಠಿ ಮತ್ತು ಹಿಂದಿ ಚಿತ್ರಗೀತೆಗಳು ಕಂಠಸ್ಥವಾಗಿದ್ದವು. ಇವುಗಳ ಜೊತೆಗೆ ಕನ್ನಡ ಭಾವಗೀತೆ, ಭಕ್ತಿಗೀತೆ, ದೇಶಭಕ್ತಿಗೀತೆ, ವಚನ, ಜಾನಪದಗೀತೆ, ದಾಸರಪದ, ಷರೀಫರ ತತ್ವಪದ ಹೀಗೆ ಸುಗಮಸಂಗೀತದ ಮರ ಟಿಸಿಲೊಡೆದು ಚಿಗುರಿತು. ಮುರಗೋಡ ದಾಸರಿಂದ ಆರಂಭಗೊಂಡ ಪ್ರಥಮ ಪಾಠದ ಫಲ ಶ್ಯಾಮಲ ಅವರಿಗೆ ಅಕ್ಷಯವಾಯಿತು.
ಶ್ಯಾಮಲಾ ಅವರು ಭಾವಗೀತಾ ಗಾಯನವನ್ನು 1960ರಿಂದ ಪ್ರಾರಂಭಿಸಿದರು. ಗಾಯನ ಕಾರ್ಯಕ್ರಮ ಕೇಳಲು ಜನ ಊರಿಂದೂರಿಗೆ ಗಾಡಿ ಕಟ್ಟಿಸಿಕೊಂಡು ಬಂದು ಜಮಾಯಿಸುತ್ತಿದ್ದರು. ಆಗೆಲ್ಲಾ ಬಸ್ಸುಗಳ ಅನುಕೂಲವಿರುತ್ತಿರಲಿಲ್ಲ. ಎತ್ತಿನಗಾಡಿಯ ಪ್ರಯಾಣ ಸರ್ವೇಸಾಮಾನ್ಯವಾಗಿತ್ತು. ಶ್ಯಾಮಲಾ ಹಾಡುವಾಗ ಕೇಳುಗರಿಗೂ ಅವರಿಗೂ ಒಂದು ರೀತಿಯ ಆತ್ಮೀಯತೆ ಬೆಳೆಯುತ್ತಿತ್ತು. ಪ್ರತಿಯೊಂದು ಹಾಡಿಗೂ ಒನ್ಸ್‍ಮೋರ್ ಎನ್ನುವ ಬೇಡಿಕೆ ಬೇರೆ. ಶ್ಯಾಮಲಾ ಪ್ರತಿಯೊಂದು ಕಾರ್ಯಕ್ರಮದಲ್ಲೂ ಹೊಸ ಹೊಸ ಆಯಾಮಗಳನ್ನು ಪಡೆಯುತ್ತಾ ಹೋದರು. ಜಾತ್ರೆಯಲ್ಲಿ ತೇರು ಹರಿದಂತೆ ಅವರ ಸಂಗೀತದ ಕಲಿಕೆ ಮುಂದೆ ಮುಂದೆ ಸಾಗಿ ಆಕರ್ಷಣೀಯವಾಯಿತು. ಬರಿಯ ಎರಡೇ ಪಕ್ಕವಾದ್ಯಗಳ ಸಹಕಾರದಲ್ಲಿ ಗಾನಗೊಷ್ಠಿ ನಡೆಸುತ್ತಿದ್ದರು. ಅಲ್ಲಿ ವಾದ್ಯಗೋಷ್ಠಿಗೆ ಅವಕಾಶವಿರುತ್ತಿರಲಿಲ್ಲ. ಗಾಯನದಿಂದಲೇ ಗೆಲ್ಲಬೇಕಾದಂತಹ ಕಾರ್ಯಕ್ರಮಗಳಲ್ಲಿ ಶ್ಯಾಮಲ ತಮ್ಮ ಸುಮಧುರ ಕಂಠದ ಇಂಪಿನಿಂದ, ಗಾಯನ ಸಾಮಥ್ರ್ಯದ ಮನೋಧರ್ಮದಿಂದ ಜನಮನವನ್ನು ಗೆದ್ದುಕೊಂಡರು. ಗಾಯನ ಮುಗಿದೊಡನೆಯೇ ಒನ್ಸ್‍ಮೋರ್ ಎಂದು ಕೇಳುಗರ ಆಗ್ರಹಕ್ಕೆ ಮತ್ತೆ ಅದೇ ಹಾಡನ್ನು ಹಾಗೆಯೇ ಹಾಡಬೇಕಾಗಿತ್ತು. ಅದು ಅವರಿಗೆ ಅಗ್ನಿಪರೀಕ್ಷೆಯಂತೆ ನಾದಪರೀಕ್ಷೆಯಾಗಿತ್ತು. ಶ್ಯಾಮಲಾ ಪ್ರೇಕ್ಷಕರ ಇಂಥಾ ನಿಷ್ಠುರ ಮಾನದಂಡಕ್ಕೆ ತಮ್ಮನ್ನು ಒಡ್ಡಿಕೊಳ್ಳುತ್ತಾ ಸಂಗೀತಕಲೆಯಲ್ಲಿ ಪುಟವಿಟ್ಟ ಚಿನ್ನದಂತಾದರು. ಶ್ಯಾಮಲ ಜಾಗೀರ್‍ದಾರ್ ಅವರು ಹಾಡಿದ `ಕಲ್ಲಿನಲಿ ಕೆತ್ತಿದನು, `ರಂಗನಾಥನ ಪಾದವ ತೊಳೆಯೆ ಕಾವೇರಿ ಬಂದಳು, `ಆನೆ ಬಂದಿತಮ್ಮಾ, `ಮೈಸೂರು ಸುತ್ತ ಸಾಲು ತೆಂಗಿನಮರ - ಮುಂತಾದ ನೂರಾರು ಗೀತೆಗಳು ಶ್ಯಾಮಲಾ ಅವರ ಧ್ವನಿಯಲ್ಲಿ ಮೂಡಿ ಚೆಂದವಾದವು.
ಶ್ಯಾಮಲಾ ಹಾಡುವ ಕಾಲದಲ್ಲಿ ಅವರೊಂದಿಗೆ ಹೆಚ್.ಆರ್.ಲೀಲಾವತಿ, ಅನಸೂಯ, ಸಿ.ಕೆ. ತಾರಾ, ಎಂ.ಪ್ರಭಾಕರ್ ಹಾಡುತ್ತಿದ್ದರು. ಕಾಳಿಂಗರಾಯರು ಎಲ್ಲರಿಗಿಂತ ಹಿರಿಯತನದಲಿ ಆಗಲೇ ಪ್ರಸಿದ್ಧರಾಗಿದ್ದರು. ಮೈಸೂರು ಅನಂತಸ್ವಾಮಿಯವರು ಇನ್ನೂ ಹೆಸರು ಮಾಡಿರಲಿಲ್ಲ. ಜನರು ಎಲ್ಲಾ ಕಾಲದಲ್ಲೂ ಸಂಗೀತವನ್ನು ಕೇಳುತ್ತಿದ್ದರು. ಯಾವ ಉತ್ಸವಗಳ ಕಾರಣವೂ ಸಂಗೀತ ಕಾರ್ಯಕ್ರಮಗಳಿಗೆ ಬೇಕಿರಲಿಲ್ಲ. ಶ್ಯಾಮಲಾ ಜಾಗೀರ್‍ದಾರ್ ಅವರು ಕಾರ್ಯಕ್ರಮದಲ್ಲಿ ಹಾಡುವಾಗೆಲ್ಲಾ ಭಾವತಲ್ಲೀನರಾಗಿ ಹಾಡುತ್ತಿದ್ದರು. 60ರ ದಶಕದ ಆದಿಯಲ್ಲಿ ಪದ್ಮಚರಣ್ ಮತ್ತು ಕಾಳಿಂಗರಾವ್ ಅವರ ಸಂಗೀತ ಸಂಯೋಜನೆಗಳು ಆಕಾಶವಾಣಿಯಲ್ಲಿ ವಿಶೇಷವಾಗಿ ಬಿತ್ತರಗೊಳ್ಳುತ್ತಿದ್ದವು. ಪಿ.ಕಾಳಿಂಗರಾವ್ ಸ್ವತಃ ರಾಗಸಂಯೋಜಿಸಿ ತಮ್ಮ ವಿಶಿಷ್ಟ ಶೈಲಿಯಲ್ಲಿ ಹಾಡುತ್ತಿದ್ದರು. ಸುಗಮಸಮಗೀತವನ್ನು ಕಲಿಸುವ ಗುರುಗಳಾಗಲಿ, ಶಾಲೆಗಳಾಗಲಿ ಇರದಿದ್ದ ಆ ಕಾಲದಲಿ ಪಿ.ಕಾಳಿಂಗರಾವ್ ಅವರನ್ನು ತಮ್ಮ ಮಾನಸಿಕ ಗುರುವಾಗಿ ಶ್ಯಾಮಲ ಸ್ವೀಕರಿಸಿದರು. ಸುಗಮಸಂಗೀತ ಕ್ಷೇತ್ರದಲ್ಲಿ ಏನಾದರೂ ಮಾಡಬೇಕೆನ್ನುವ ಹುಡುಕಾಟ ಹಂಬಲಗಳಲ್ಲಿ ಶ್ಯಾಮಲ ಸುಗಮಸಂಗೀತದ ವಿವಿಧ ಪ್ರಕಾರಗಳನ್ನು ತಾರತಮ್ಯವಿಲ್ಲದೆ ಬಳಸಿಕೊಂಡರು. ಎಲ್ಲಾ ಭಾಷೆಗಳ ವೈಶಿಷ್ಟ್ಯತೆಯನ್ನು ಕನ್ನಡ ಕವಿತೆಗೆ ರಾಗಸಂಯೋಜನೆ ಮಾಡಬೇಕಾದಾಗ ದುಡಿಸಿಕೊಂಡರು. ಕನ್ನಡ ಕವಿತೆಗಳಿಗೆ ತಮ್ಮದೇ ವಿಶಿಷ್ಟ ಬಗೆಯ ರಾಗಸಂಯೋಜನೆಗೆ ತೊಡಗಿದರು. `ಶ್ಯಾಮಲಾ ಶೈಲಿ ಎಂದು ಸಹೃದಯರು ಗುರುತಿಸತೊಡಗಿದರು. ಇವರ ಸಂಗೀತ ಜೀವನದ ಹಾದಿಯಲ್ಲಿ ಬಾಳಸಂಗಾತಿಯಾಗಿ ಬಂದವರು (1968) ಜಿ.ಆರ್. ವಿಠ್ಠಲ. ಪತ್ನಿಯ ಸಂಗೀತದ ಹಾದಿಗೆ ಒತ್ತಾಸೆಯಾಗಿ ನಿಂತರು. ಶ್ಯಾಮಲ ಅವರ ಸಹೋದರ ಜನಾರ್ಧನ್, ಶ್ರೀನಿವಾಸ, ಕಿಶನ್ ಹಾಗೂ ಸೋದರಿ ವನಜ, ಎಲ್ಲರೂ ಶ್ಯಾಮಲ ಅವರ ಶ್ರೇಯೋಭಿವೃದ್ಧಿಗಾಗಿ, ಅವರ ಸಂಗೀತ ಜೀವನಕ್ಕೆ ಒಂದಲ್ಲ ಒಂದು ಬಗೆಯಲ್ಲಿ ಚೈತನ್ಯ ಉತ್ಸಾಹವನ್ನು ಎರೆದರು.
ಶ್ಯಾಮಲ ಅವರು ಸುಮಾರು 3500ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ದೇಶವಿದೇಶಗಳಲ್ಲಿ ನೀಡಿದ್ದಾರೆ. ನಮ್ಮ ದೇಶದ ಪ್ರಮುಖ ಗಣ್ಯರಾಗಿದ್ದ ಡಾ|| ರಾಧಾಕೃಷ್ಣನ್, ಡಾ|| ಜಾಕಿರ್‍ಹುಸೇನ್, ಪಂಡಿತ್ ಜವಾಹರಲಾಲ್ ನೆಹರು, ಲಾಲ್‍ಬಹಾದ್ದೂರ್ ಶಾಸ್ತ್ರೀ, ವಿ.ವಿ.ಗಿರಿ, ಇಂದಿರಾಗಾಂಧಿ, ಬಿ.ಡಿ. ಜತ್ತಿ, ಮೈಸೂರಿನ ಅರಸರಾದ ಜಯಚಾಮರಾಜೇಂದ್ರ ಒಡೆಯರ್, ಮುಂತಾದವರ ಸಮ್ಮುಖದಲ್ಲಿ ಸುಗಮಸಂಗೀತದ ಸುಧೆ ಹರಿಸಿದರು. ಇಂಗ್ಲೆಂಡ್, ನೇಪಾಳ, ರಷ್ಯಾ, ಸೌದಿ ಅರೇಬಿಯಾ, ಇಥಿಯೋಪಿಯಾ, ಬರ್ಮಾ ದೇಶಗಳಲ್ಲಿ ಗಣ್ಯರ ಎದುರಿನಲ್ಲಿ ಹಾಡಿ ರಂಜಿಸಿದರು. ಭಾಷೆ ಅರಿಯದಿದ್ದರೂ ಭಾವದ ವಿನಿಮಯ ನಡೆಯಿತು. ಬ್ರಿಟನ್ ಮತ್ತು ಸಿಂಗಾಪುರಗಳಿಗೆ ಆಹ್ವಾನಿತರಾಗಿ ಹೋಗಿ ಕಾರ್ಯಕ್ರಮ ನೀಡಿದರು. ವಿದೇಶಿಯರು ಕನ್ನಡದ ಕವಿತೆಗಳನ್ನು ಕಲಿಯುವಂತೆ ಉತ್ತೇಜಿಸಿದರು.
ಸುಗಮಸಂಗೀತ ಹಾಡುವಾಗ ಭಾವಗೀತೆ ಇರಲಿ, ಭಕ್ತಿಗೀತೆ ಇರಲಿ, ವಚನ ಇರಲಿ, ತತ್ವಪದ ಇರಲಿ, ಜಾನಪದ ಗೀತೆಯೇ ಇರಲಿ, ಸಾಹಿತ್ಯಕ್ಕೆ ಸಾಹಿತ್ಯದ ಭಾವಕ್ಕೆ ತಕ್ಕಂತಹ ಸ್ವರಸಂಯೋಜನೆಗೆ ಕವಿಯ ಆಶಯಕ್ಕೆ ಹೆಚ್ಚು ಮಹತ್ವಕೊಡಬೇಕು. ಸಾಹಿತ್ಯದ ಭಾವಕ್ಕೆ ಸೂಕ್ತವಾದ ವಾದ್ಯ ಬಳಸಬೇಕು ಎಂಬ ನಿಲುವನ್ನು ತಮ್ಮ ಕಾರ್ಯಕ್ರಮಗಳಲ್ಲಿ ಶ್ಯಾಮಲ ಅವರು ಪ್ರತಿಪಾದಿಸಿ ತೋರಿಸಿದರು. ಒಂದು ತಂಬೂರಿ, ವೀಣೆ, ತಬಲ, ಪಕ್ಕವಾದ್ಯದೊಂದಿಗೆ ಭಾವಗೀತಾ ಗಾಯನವನ್ನು ಅತ್ಯಂತ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿದರು. ಕವಿ ಬೇಂದ್ರೆಯವರ `ಮುಗಿಲ ಮಾರಿಗೆ ಕವಿತೆಗೆ ಅವರ ಸಮ್ಮುಖದಲ್ಲೇ ರಾಗಸಂಯೋಜನೆ ಮಾಡಿ ಹಾಡಿ `ಭೇಷ್ ಎನಿಸಿಕೊಂಡರು.
ತಮ್ಮ ಸುಮಧುರ ಕಂಠಸಿರಿಗಾಗಿ ಶ್ಯಾಮಲ ಪಡೆದ ಸನ್ಮಾನಗಳು, ಪ್ರಶಸ್ತಿಗಳು ಅಸಂಖ್ಯ. ಸಂಗೀತ ನೃತ್ಯ ಅಕಾಡೆಮಿ ನೀಡುವ ಕರ್ನಾಟಕ ಕಲಾತಿಲಕ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ (1995) ಹಾಗೂ ಸುಗಮಸಂಗೀತಕ್ಕೆ ಸರ್ಕಾರ ನೀಡುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಸಂತ ಶಿಶುನಾಳ ಪ್ರಶಸ್ತಿಗಳು (2003) ಶ್ಯಾಮಲಾರನ್ನು ಹುಡುಕಿಕೊಂಡು ಬಂದವು. (ಜಯಶ್ರೀ ಅರವಿಂದ್)